ಕಲ್ಪ ಮೀಡಿಯಾ ಹೌಸ್ | ಸೊರಬ |
ಜಿಲ್ಲೆಯ ಮತದಾರರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣ ಮಾಡಿ ಗೆಲುವು ಸಾಧಿಸುವುದು ಯಡಿಯೂರಪ್ಪ ಅವರ ಚುನಾವಣಾ ತಂತ್ರಗಾರಿಕೆಯಾಗಿದೆ. ಆದರೆ, ಈ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ದಾದಾಗಿರಿ, ಗೂಂಡಾಗಿರಿ ವಿರುದ್ಧ ತೊಡೆತಟ್ಟಿದ್ದಾರೆ. ತಮಗೆ ಗೆಲುವು ತಂದುಕೊಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳಲು ಚುನಾವಣೆಯ ದಿನ ಎಣಿಸುತ್ತಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಭಾನುವಾರ ಪಟ್ಟಣದ ಆಲೇಕಲ್ ಸಭಾ ಭವನದಲ್ಲಿ ರಾಷ್ಟ್ರ ಭಕ್ತ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಿ ಅವರು ಮಾತನಾಡಿದರು.

ಅದರಲ್ಲಿಯೂ ಶಿಕಾರಿಪುರದಲ್ಲಿ ಪ್ರತಿಯೊಂದು ಸಮುದಾಯವು ಕುಟುಂಬ ರಾಜಕಾರಣಕ್ಕೆ ಮಟ್ಟ ಹಾಕಬೇಕೆಂದು ತೊಡೆ ತಟ್ಟಿದ್ದಾರೆ. ನಿರೀಕ್ಷೆಗೂ ಮೀರಿ ತಮಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡು ಯಡಿಯೂರಪ್ಪ ಅವರಿಗೆ ಈಗಾಗಲೇ ನಡುಕ ಪ್ರಾರಂಭವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಒಂದು ಕುಟುಂಬದ ಕಪಿಮುಷ್ಠಿಯಲ್ಲಿದೆ
ಕಳೆದ 35 ವರ್ಷಗಳಿಂದ ಪಕ್ಷ ಕಟ್ಟಿದ ತಪಸ್ಸು ಇದೆ. 1 ಸ್ಥಾನದಿಂದ 3 ಸಂಖ್ಯೆಯವರೆಗೆ ವಿಧಾನಸಭಾ ಸದಸ್ಯರು ಆಯ್ಕೆಯಾಗುವಲ್ಲಿ ತಮ್ಮ ಶ್ರಮವಿದೆ. ಅಂಥ ಮಾತೃ ಪಕ್ಷ ಒಂದು ಕುಟುಂಬದ ಕಪಿಮುಷ್ಠಿಯಲ್ಲಿದೆ. ಇನ್ನು ಮುಂದೆ ಕುಟುಂಬದ ಕಪಿಮುಷ್ಠಿಯಲ್ಲಿ ಇರಲು ಬಿಡುವುದಿಲ್ಲ. ಏನೂ ಗೊತ್ತಿಲ್ಲದ, ಪಕ್ಷದ ಸಿದ್ದಾಂತ ಅರಿಯದ ಬಿ.ವೈ.ವಿಜಯೇಂದ್ರ ಅವರನ್ನು ಯಡಿಯೂರಪ್ಪ ಅವರು ಹಠ ಮಾಡಿ ಪಕ್ಷದ ಅದ್ಯಕ್ಷರನ್ನಾಗಿ ಮಾಡಿದ್ದಾರೆ. ಆತನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವವರೆಗೂ ತಾವು ಹೋರಾಟ ಬಿಡುವುದಿಲ್ಲ.
-ಕೆ.ಎಸ್. ಈಶ್ವರಪ್ಪ
Also read: ಲಕ್ಷಕ್ಕೂ ಅಧಿಕ ಮತ ಅಂತರದಿಂದ ಗೆಲುವಿನಲ್ಲಿ ಯಾವುದೇ ಅನುಮಾನವಿಲ್ಲ: ಈಶ್ವರಪ್ಪ
ಲಿಂಗಾಯತರು ತಮ್ಮ ಮಗನಿಗೆ ಬೆಂಬಲಿಸುತ್ತಾರೆ ಎಂದು ಬಿ.ಎಸ್. ಯಡಿಯೂರಪ್ಪ ಮತ್ತು ಈಡಿಗರು ಅಕ್ಕನಿಗೆ ಮತ ಚಲಾಯಿಸುತ್ತಾರೆ ಎಂದು ಮಧು ಬಂಗಾರಪ್ಪ ಇಬ್ಬರೂ ಭ್ರಮೆಯಲ್ಲಿದ್ದಾರೆ. ಆದರೆ, ಸ್ವತಃ ಲಿಂಗಾಯತರು ಮತ್ತು ಈಡಿಗರು ತಮಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ಆದ್ದರಿಂದ ತಾವು ಹಿಂದುತ್ವವಾದಿಯೇ ಹೊರತು ಜಾತಿವಾದಿಯಲ್ಲ. ಯಡಿಯೂರಪ್ಪ ಕುಟುಂಬ ಹಣದ ಆಮಿಷವೊಡ್ಡಿ ಮತ ಕೇಳಲು ಬರುತ್ತಾರೆ. ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿಯೂ ಅವರ ಅನಿಷ್ಟದ ಹಣ ಪಡೆದು ಓಟು ತಮಗೆ ನೀಡುವುದಾಗಿ ಘಂಠಾಘೋಷವಾಗಿ ಹೇಳುತ್ತಿದ್ದಾರೆ ಎಂದರು.

ಸಭೆಯಲ್ಲಿ ರಾಷ್ಟ್ರಭಕ್ತ ಬಳಗದ ಪ್ರಭಾರಕ ರಾಯ್ಕರ್, ಗೋ ಸಂರಕ್ಷಣಾ ಹೋರಾಟ ವೇದಿಕೆಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ, ಬಜರಂಗದಳದ ಅಣ್ಣಪ್ಪ ಹಿರೇಶಕುನ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷೆ ಹೇಮಾವತಿ, ಗೀತಾ, ಪ್ರಶಾಂತ್, ಕೃಷ್ಣಮೂರ್ತಿ, ಡಿ.ಸಿ. ನಾಯ್ಕ ಚಂದ್ರಗುತ್ತಿ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 












Discussion about this post