ಸೊರಬ: ಶೈಕ್ಷಣಿಕ ಸಂಸ್ಥೆಗಳಿಗೆ 24 ಗಂಟೆಗಳಲ್ಲಿ ಕುಡಿಯುವ ನೀರು ಒದಗಿಸುತ್ತೇವೆ. ಎಲ್ಲಿಯೂ ಕುಡಿಯುವ ನೀರಿನ ತೊಂದರೆ ಆಗುವಂತಿಲ್ಲ ಇತ್ಯಾದಿ ಘೋಷಣೆಗಳು ಕೇವಲ ಮಾತಿನಲ್ಲೇ ಮುಗಿದಿದ್ದು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಿಗಾ ವಹಿಸದ ಕಾರಣ, ಕುಡಿಯಲು ಯೋಗ್ಯವಲ್ಲದ ನೀರನ್ನು ತಾಲೂಕು ನಿಸರಾಣಿ ಗ್ರಾಮದಲ್ಲಿರುವ ವಿಸಂ ಪ್ರೌಢಶಾಲೆಯ ಮಕ್ಕಳು ಕುಡಿಯುವಂತಾಗಿದೆ.
ತಾಪಂ ಅಧ್ಯಕ್ಷರ ಸ್ವಗ್ರಾಮ, ಖುದ್ದು ಶಾಸಕರ ಆಪ್ತ ವರ್ಗದವರ ಸ್ವಗ್ರಾಮವಾಗಿರುವ ಇಲ್ಲಿಯೇ ಇಂತಹ ಧಾರುಣ ಸ್ಥಿತಿ ಏರ್ಪಟ್ಟಿದ್ದು, ಸುಮಾರು 500 ಮಕ್ಕಳಿರುವ ಇಲ್ಲಿನ ಈ ಶಾಲೆಯಲ್ಲಿ ಇದ್ದ ತೆರೆದ ಬಾವಿ ಒಣಗಿದ್ದು, ಕೇವಲ 1 ಇಂಚು ನೀರು ದೊರೆತಿದ್ದ ಬೋರ್‌ವೆಲ್ ಕೂಡ ಭಾಗಶಃ ದುರಸ್ಥಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಶಾಲೆಗೆ ದಾನಿಗಳು ಬ್ಯಾರೆಲ್’ಗಳ ಮೂಲಕ ನೀರು ಕೊಡುವಂತಹ ಸಂದರ್ಭ ಬಂದಿದ್ದು, ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದೆ.
ಬಿಸಿಯೂಟ ಇರುವ ಇಲ್ಲಿಗೆ ಸದ್ಯಕ್ಕೆ ಟ್ಯಾಂಕರ್ ವ್ಯವಸ್ಥೆ ಕೂಡ ಆಗಿಲ್ಲ. ಹಾಗಾಗಿ ಬಿಸಿಯೂಟ ತಯಾರಿಕೆಗೆ ತೊಂದರೆಯಾಗಿದೆ. ಪ್ರಸ್ತುತ ಪರಿಕ್ಷಾ ದಿನಗಳು ಸಮೀಪದಲ್ಲಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕವೂ ಪೋಷಕರದ್ದಾಗಿದೆ.
ಮಲೆನಾಡು ಪ್ರದೇಶವಾಗಿರುವ ಇಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕೆರೆ ಕಟ್ಟೆಗಳು ಬರಿದಾಗುತ್ತಿವೆ, ತೆರೆದ ಬಾವಿಗಳು ಒಣಗಲಾರಂಭಿಸಿವೆ. ನೀರಿಗೆ ಹಾಹಾಕಾರ ಉಂಟಾಗಿದೆ. ಸಾಲದೆಂಬಂತೆ ನೀರಿನ ನಿರ್ವಹಣೆ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ದೊರಕದ ಕಾರಣ ನೀರಿನ ಪೋಲು ಕೂಡ ಸಾಮಾನ್ಯವಾಗಿದೆ. ಲೆಕ್ಕವಿಲ್ಲದಷ್ಟು ಬೋರ್‌ವೆಲ್‌ಗಳು ಸೃಷ್ಟಿಯಾಗುತ್ತಿದ್ದು, 50-100 ಅಡಿ ವಿಸ್ತೀರ್ಣದಲ್ಲಿ ನಾಲ್ಕಾರು ಬೋರ್‌ವೆಲ್‌ಗಳ ನಿರ್ಮಾಣ ಸ್ಪರ್ಧಾತ್ಮಕವಾಗಿ, ಅವ್ಯಾಹತವಾಗಿ ಯಾವುದೇ ಕಡಿವಾಣವಿಲ್ಲದೆ. ಕೊರೆಯಲ್ಪಡುತ್ತಿವೆ. ಇನ್ನೊಂದೆಡೆ ದಿನೆದಿನೆ ಬೆಂಕಿಯ ಹಾವಳಿಯು ವಿಪರೀತವಾಗಿದ್ದು, ಅಮೂಲ್ಯ ಅರಣ್ಯ ಬರಿದಾಗುತ್ತಿದೆ.
(ವರದಿ: ಮಧುರಾಮ್, ಸೊರಬ)
Discussion about this post