ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಶೀಘ್ರದಲ್ಲಿಯೇ ಪುರಸಭೆಯಾಗಿ ಸೊರಬ ಹಾಗೂ ಪಟ್ಟಣ ಪಂಚಾಯ್ತಿಯಾಗಿ ಆನವಟ್ಟಿ ಮೇಲ್ದರ್ಜೆಗೆ ಏರಿಕೆಯಾಗಲಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಪಟ್ಟಣದ ರಂಗಮಂದಿರದಲ್ಲಿ ಶನಿವಾರ ತಾಲ್ಲೂಕು ಆಡಳಿತ, ತಾಪಂ, ಪಪಂ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ 74ನೆಯ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕು ಕಚೇರಿ ಮತ್ತು ತಾಪಂ ಕಟ್ಟಡವನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ. ಜೊತೆಗೆ ಶೀಘ್ರದಲ್ಲಿಯೇ ಆನವಟ್ಟಿ ಪಟ್ಟಣ ಪಂಚಾಯ್ತಿಯಾಗಿ ಮತ್ತು ಸೊರಬ ಪುರಸಭೆಯಾಗಿ ಮೇಲ್ದರ್ಜೆಗೆ ಏರಲಿದೆ ಎಂದರು.
ಕೊರೋನಾ ಕರಿನೆರಳಿನ ನಡುವೆಯೇ ಸ್ವಾತಂತ್ರೋತ್ಸವದ ಸಂಭ್ರಮವನ್ನು ಸರಳವಾಗಿ ಆಚರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ವಿದೇಶಿ ಶೇಕ್ ಹ್ಯಾಡ್ ಪದ್ಧತಿಗೆ ವಿರಾಮ ನೀಡಿ, ಭಾರತೀಯ ನಮಸ್ಕಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇಡೀ ದೇಶವೇ ಕೊರೋನಾ ಮಹಾ ಪಿಡುಗಿನ ವಿರುದ್ಧ ಒಂದಾಗಿ ಹೋರಾಟ ಮಾಡುತ್ತಿದೆ. ಈ ಸಂಕಷ್ಟದ ಸ್ಥಿತಿಯಲ್ಲೂ ದೇಶದ ಹೆಮ್ಮೆಯ ಸ್ವಾತಂತ್ರೊ್ಯೀತ್ಸವವನ್ನು ವಿದ್ಯಾರ್ಥಿಗಳ ಹೊರತಾಗಿ ಆಚರಿಸುವಂತಾಗಿದೆ. ಕೊರೋನಾ ಎಲ್ಲಾ ಸಾಂಪ್ರಾದಾಯಿಕ, ಸರ್ವ ಧರ್ಮಗಳ ಹಬ್ಬಹರಿದಿನಗಳ ಮೇಲೆಯೂ ಛಾಪಿಸಿದೆ ಎಂದ ಅವರು, ಕೊರೋನಾ ಆತಂಕದ ನಡುವೆಯೂ ಪರೀಕ್ಷೆಗಳನ್ನು ಎದುರಿಸಿ ಯಶಸ್ಸನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕೊರೋನಾ ವಾರಿಯರ್ಸ್‌ಗಳಿಗೆ ಅಭಿನಂದನೆಗಳು ಎಂದರು.
ರಾಜ್ಯದಲ್ಲಿ ಅಭಿವೃದ್ಧಿಯ ಮಹಾಪೂರವೇ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಿಸುವ ಮೂಲಕ ನಿಷ್ಠೆ ಮೆರೆದಿದ್ದಾರೆ. ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆಯಲ್ಲಿ ಕಾಮಗಾರಿಗಳು ಆರಂಭವಾಗಿದೆ.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಹರೀಶಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಧನ್ಯಾ ಆರ್. ಭಟ್, ಕುವೆಂಪು ವಿವಿ ನಡೆಸಿದ ಅಂತಿಮ ಬಿಎ ಪದವಿ ಪರೀಕ್ಷೆಯಲ್ಲಿ ಎಚ್‌ಇಪಿ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಯನ ಡಿ. ರಾಯ್ಕರ್, ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಪಿಡಿಒ ಕೆ. ಹೋಮೇಶಪ್ಪ, ಆರೋಗ್ಯ ಇಲಾಖೆಯ ಆನಂದಪ್ಪ ಮತ್ತು ಕೊರೋನಾ ಸೋಂಕಿನಿಂದ ಗುಣಮುಖರಾದ ತಾಲ್ಲೂಕಿನ ಪ್ರಥಮ ಮಹಿಳೆ ದೇವಮ್ಮ ಹಳೇ ಸೊರಬ ಅವರನ್ನು ಸನ್ಮಾನಿಸಲಾಯಿತು.
ತಹಶೀಲ್ದಾರ್ ನಫೀಸಾ ಬೇಗಂ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಇಒ ನಂದಿನಿ, ಸಿಪಿಐ ಮರುಳಸಿದ್ದಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಪಪಂ ಸದಸ್ಯರಾದ ಮಧುರಾಯ್ ಜಿ. ಶೇಟ್, ವೀರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ನಟರಾಜ ಉಪ್ಪಿನ, ಪ್ರೇಮಾ ಟೋಕಪ್ಪ, ಅಫ್ರೀನ್ ಮೆಹಬೂಬ್ ಬಾಷಾ, ಜಯಲಕ್ಷ್ಮೀ, ಪ್ರಭು ಮೇಸ್ತ್ರಿ ಸೇರಿದಂತೆ ಸ್ಥಳೀಯ ಜನಪ್ರನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಸೌಜನ್ಯ ಆನವಟ್ಟಿ, ಮಹೇಶ್ ಖಾರ್ವಿ ನಿರ್ವಹಿಸಿದರು.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post