ಕಲ್ಪ ಮೀಡಿಯಾ ಹೌಸ್ | ಸೊರಬ |
ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.
ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಸೇರಿದಂತೆ ಅವಕಾಶ ದೊರೆತ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ, ಎಲ್ಲಾ ಮಹಿಳೆಯರಿಗೂ ಅವಕಾಶ ದೊರೆತಿರಲಿಲ್ಲ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆ ಅನುಕೂಲವಾಗಲಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಕಿಸಿಕೊಡಬೇಕು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಅನುಕೂಲ ಪಡೆಯಬೇಕು ಎಂದು ಕರೆ ನೀಡಿದರು.
ಪುರಸಭೆ ಸದಸ್ಯ ಈರೇಶ್ ಮೇಸ್ತ್ರಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ನುಡಿದಂತೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್‍ನಲ್ಲಿನ ಶಕ್ತಿ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದೆ ಎಂದ ಅವರು, ಹಿಂದಿನ ಅವಧಿಯಲ್ಲಿ ಕ್ಷೇತ್ರದಲ್ಲಿ ಜನತೆ ಜೀತದಾಳಿನಂತೆ ಆಗಿದ್ದರು. ಇದೀಗ ಮಧು ಬಂಗಾರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದು ಎಲ್ಲರಿಗೂ ಸಂತಸ ತಂದಿದೆ. ಕ್ಷೇತ್ರದ ಜನತೆ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಕಾನುಕೇರಿ ಬಡಾವಣೆಯ ಸರ್ವೆ 113 ಭಾಗದ ಜನತೆಗೆ ವಿದ್ಯುತ್ ನಿರಪೇಕ್ಷಣ ಪತ್ರ ಸಹ ದೊರೆಯುತ್ತಿಲ್ಲ. ಕ್ಷೇತ್ರದ ಬಗರ್‍ಹುಕುಂ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
Also read: ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ತಿಳಿಸಲು ಡಿಜಿಟಲ್ ವೋಟಿಂಗ್
ತಾಪಂ ಇಒ ನಾಗರಾಜ ಅನ್ವೇಕರ್, ಪ್ರಭಾರ ಬಿಇಒ ದಯಾನಂದ ಕಲ್ಲೇರ್, ಪುರಸಭೆ ಸದಸ್ಯರಾದ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಸುಲ್ತಾನಬೇಗಂ, ಆಫ್ರೀನಾ, ಪ್ರೇಮಾ ಟೋಕಪ್ಪ, ಜಯಲಕ್ಷ್ಮಿ, ಅನ್ಸರ್ ಆಹ್ಮದ್, ಕೆಎಸ್‍ಆರ್‍ಟಿಸಿ ಕಾರ್ಮಿಕ ಕಲ್ಯಾಣಾಧಿಕಾರಿ ಬಂಗಾರಪ್ಪ ಕಟ್ಟಿಮನಿ, ಸಿಬ್ಬಂದಿ ಮೇಲ್ವಿಚಾರಕ ಎಸ್. ದೇವರಾಜ, ಕಿರಿಯ ಅಭಿಯಂತರ ಹರೀಶ್ ಕುಮಾರ್, ಸಿಬ್ಬಂದಿ ಮಹಾಂತೇಶ್, ಹನುಮರೆಡ್ಡಿ, ಕೃಷ್ಣಮೂರ್ತಿ, ಸಿಪಿಐ ಎಲ್. ರಾಜಶೇಖರ್, ಪಿಎಸ್‍ಐ ನಾಗರಾಜ, ಕಾಂಗ್ರೆಸ್ ಟೌನ್ ಅಧ್ಯಕ್ಷ ಅಬ್ದುಲ್ ರಶೀದ್ ಹಿರೇಕೌಂಶಿ, ಮುಹಮ್ಮದ್ ಸಾಜೀದ್, ಜಿ. ಕೆರಿಯಪ್ಪ, ಯು. ಫಯಾಜ್ ಆಹ್ಮದ್, ಮೆಹಬೂಬ್ ಬಾಷಾ, ಮನೋಹರ ನಡಹಳ್ಳಿ, ಡಾಕಪ್ಪ, ಮುಕ್ತಿಯಾರ್ ಬಾಷಾ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post