ಕಲ್ಪ ಮೀಡಿಯಾ ಹೌಸ್
ಸೊರಬ: ಕೊರೋನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಕ್ತ ನಿಧಿಗಳಲ್ಲಿ ರಕ್ತದ ಅಭಾವವಾಗುತ್ತಿರುವದನ್ನು ಮನಗಂಡು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್ ಹೇಳಿದರು.
ತಾಲೂಕಿನ ಆನವಟ್ಟಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಚನ್ನವೀರಪ್ಪಗೌಡ್ರು ಪಾಟೀಲ್ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ ಶಿವಮೊಗ್ಗದ ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಕಾರದೊಂದಿಗೆ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಲಸಿಕೆ ಪಡೆದ ನಂತರ ಸುಮಾರು ೨೮ ದಿನಗಳು ರಕ್ತದಾನ ಮಾಡುವಂತಿಲ್ಲ. ಲಸಿಕೆ ಪಡೆಯುವ ಮುಂಚಿತವಾಗಿ ಯುವಕರು ಹಾಗೂ ಸ್ವಯಂ ಸೇವಕರು ರಕ್ತದಾನ ಮಾಡುವುದರಿಂದ ತುರ್ತು ಸ್ಥಿತಿಯಲ್ಲಿರುವ ವ್ಯಕ್ತಿಯ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ದಾನದಲ್ಲಿಯೇ ರಕ್ತದಾನ ಶ್ರೇಷ್ಠವಾಗಿದ್ದು, ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ದಾನದಿಂದಲೇ ಪಡೆಯಬೇಕಾದ ಅನಿವಾರ್ಯತೆ ಇದೆ. ನಮ್ಮ ತಂದೆ ಚನ್ನವೀರಪ್ಪಗೌಡ್ರು ಪಾಟೀಲ್ ಅವರು ಸಮಾಜ ನೀನಗೇನು ನೀಡಿದೆ ಎಂಬುದಕ್ಕಿಂತ ಸಮಾಜಕ್ಕೆ ಕೊಡುಗೆ ನೀಡು ಎನ್ನುತ್ತಿದ್ದರು. ಅಂತೆಯೇ ಅವರ ಅಭಿಮಾನಿಗಳೆಲ್ಲಾ ಸೇರಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
ಅನೇಕ ದುಡಿದು ಬದುಕುವ ವರ್ಗಗಳು ಕರೂನಾ ತಡೆಗಟ್ಟಲು ಸರ್ಕಾರ ಕೈಗೊಂಡ ಕಠಿಣ ನಿರ್ಧಾರಗಳಿಂದ ಸಾಕಷ್ಟು ಸಮಸ್ಯೆ ಎದುರಿಸಿದರು. ಈ ಸಂದರ್ಭದಲ್ಲಿಯೂ ಸಹ ಮಡಿವಾಳರು, ಕರೂನಾ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಅನೇಕ ವರ್ಗಗಳನ್ನು ಗುರುತಿಸಿ ಅಭಿನಂದಿಸುವ ಜೊತೆಗೆ ಕಿಟ್ ವಿತರಣೆ ಕಾರ್ಯಕ್ರಮವನ್ನು ಸಹ ನಡೆಸಲಾಯಿತು ಎಂದರು. ಈ ಸಂರ್ಭದಲ್ಲಿ 58 ರಕ್ತದಾನಿಗಳು ರಕ್ತದಾನ ಮಾಡಿದರು.
ತಾಪಂ ಮಾಜಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಎವರಾನ್ ಸ್ಕೂಲ್ ಅಧ್ಯಕ್ಷ ಎಂ.ಎಸ್. ಕಾರ್ತಿಕ ಸಾಹುಕಾರ್, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಹವಾಲ್ದಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಕರುಣಾಕರ, ಪ್ರಮುಖರಾದ ಅಜಿತ್ ಕುಮಾರ್, ಸಂಜೀವ ತರಕಾರಿ, ದಯಾನಂದ, ಶಿವಪ್ಪ, ಸಚಿನ್, ಅಭಿಷೇಕ್, ಅಲ್ಲಾಭಕ್ಷಿ, ಅಕ್ರಂ ಪಾಷಾ ಸೇರಿದಂತೆ ಚನ್ನವೀರಪ್ಪಗೌಡ್ರು ಪಾಟೀಲ್ ಅಭಿಮಾನಿ ಬಳಗದವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post