ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿ ಪಡೆದ ಹಿರಿಯ ಗಾಯಕಿ ಎಸ್. ಜಾನಕಿ (88) (SJanaki) ಅವರು ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
Also read: ಟ್ರಾಫಿಕ್ ಫೈನ್ 50% ರಿಯಾಯ್ತಿ | ಶಿವಮೊಗ್ಗದಲ್ಲಿ ಸಂಗ್ರಹವಾದ ಮೊತ್ತವೆಷ್ಟು ಗೊತ್ತಾ?
ಮೈಸೂರಿನಲ್ಲಿ ವಾಸವಿದ್ದ ಎಸ್. ಜಾನಕಿ ಅವರ ಆರೋಗ್ಯವನ್ನು ನವೀನ್ ಎಂಬ ಕೇರ್‌ಟೇಕರ್ ನೋಡಿಕೊಳ್ಳುತ್ತಿದ್ದರು. ಇಂದು ಸಂಜೆ ಅವರಿಗೆ ಏಕಾಏಕಿ ಹೃದಯಾಘಾತವಾಗಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ನಿಧನರಾದರು ಎನ್ನಲಾಗಿದೆ.
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಅವರು, ಮೂರನೇ ವಯಸ್ಸಿನಲ್ಲೇ ನಾದಸ್ವರ ವಿದ್ವಾಂಸ ಶ್ರೀ ಪೈದಿಸ್ವಾಮಿ ಅವರಲ್ಲಿ ಸಂಗೀತಾಭ್ಯಾಸ ಆರಂಭಿಸಿದರು.
48,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ಎಸ್. ಜಾನಕಿ
1957ರಲ್ಲಿ ಟಿ. ಚಲಪತಿ ರಾವ್ ಸಂಗೀತ ನಿರ್ದೇಶನದ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ನಂತರ ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಹಾಡಲು ಆರಂಭಿಸಿದರು. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತಾಸಕ್ತರ ಮನಗೆದ್ದಿದ್ದಾರೆ.
ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿಯೇ ಅಲ್ಲದೆ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲೂ ತಮ್ಮ ಗಾನ ಮಧುರತೆಯನ್ನು ಹರಿಸಿದವರು.
‘ದೀಪವು ನಿನ್ನದೆ, ಗಾಳಿಯೂ ನಿನ್ನದೆ’, ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’, ‘ಯುಗ ಯುಗಾದಿ ಕಳೆದರೂ’, ‘ಹೇಳೇ ಗೆಳತಿ ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ಬಿಸಿಲಾದರೇನು ಮಳೆಯಾದರೇನು’ ಸೇರಿದಂತೆ ಅನೇಕ ಅಮರ ಕನ್ನಡ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಹಲವು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೂ ಭಾಜನರಾಗಿದ್ದಾರೆ. ಇತ್ತೀಚೆಗೆ ಭಾರತ ಸರ್ಕಾರ ನೀಡಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ದಕ್ಷಿಣ ಭಾರತೀಯ ಕಲಾವಿದರ ಕಡೆ ನಿರ್ಲಕ್ಷ್ಯವಿದೆ ಎಂದು ಹೇಳಿ ಅವರು ತಿರಸ್ಕರಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










