ಕಲ್ಪ ಮೀಡಿಯಾ ಹೌಸ್ | |
ನಾವು ಭಾರತೀಯರು `ತಮಸೋಮಾ ಜ್ಯೋತಿರ್ಗಮಯ’ ಸಂಸ್ಕೃತಿಯ ಹರಿಕಾರರು. ಕತ್ತಲೆಯನ್ನು ಕೂಡ ಕೈ ಹಿಡಿದು ಬೆಳಕಿನತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ ದಿವ್ಯ-ಭವ್ಯ ಸಂಸ್ಕೃತಿ ನಮ್ಮದು.
ಸದ್ಯ ಕಾರ್ತೀಕ ಮಾಸದ ಆದಿ ಮತ್ತು ಆಶ್ವೀಜ ಮಾಸದ ಅಂತ್ಯೆವೆಂಬೀ `ಕೂಡಲ ಸಂಗಮ’ ದಲ್ಲಿದ್ದೇವೆ ನಾವೆಲ್ಲ ಇದೀಗ ಹಬ್ಬಗಳ `ರಾಜ’ವೆಂಬ `ಕೀರ್ತಿಕೀರೀಟ’ವನ್ನು ತನ್ನ ತಲೆಯ ಮೇಲಿಸಿಸಿಕೊಂಡಿರುವ ದೀಪಾವಳಿಯ `ಶ್ರೀ ಸಾನಿಧ್ಯದಲ್ಲಿದ್ದೇವೆ.
ದೀಪಾವಳಿ ಹಬ್ಬದ ಇನ್ನೊಂದು ವಿಶೇಷತೆ ಏನೆಂದರೆ ಇದು ಬರೀ ಹಿಂದೂಗಳಿಗೆ ಮಾತ್ರ ಸೀಮಿತವಾಗಿಲ್ಲ ಹಬ್ಬವಿದು `ಹಿಂದೂ ಮೀಸಲಾತಿ’ಯಿಂದ ಹೊರಬಂದು ಜೈನ ಧರ್ಮೀಯರು ಹಾಗೂ ಸಿಖ್ ಧರ್ಮೀಯರೊಂದಿಗೆ ತನ್ನನ್ನು ಗುರುತಿಸಿಕೊಂಡಿದೆ. ಇದು ಸಕಲ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯ ಜನ್ಮದಿನ ಅಂತೆಯೇ ಅವಳ ವಿವಾಹ ವಾರ್ಷಿಕೋತ್ಸವವೂ ಹೌದು. ಈ ಪರ್ವಕಾಲದಲ್ಲೇ ಶ್ರೀಕೃಷ್ಣ ಪರಮಾತ್ಮನು ಸತ್ಯಭಾಮಾ ಸಾರಥ್ಯದಲ್ಲಿ `ಲೋಕಕಂಟಕ’ನಾದ ನರಕಾಸುರನನ್ನು ಸಂಹರಿಸುತ್ತಾನೆ. ಮತ್ತೊಂದು ಕಥಾನಕದ ಪ್ರಕಾರ ನರಕಾಸುರನ ಭೂದೇವಿಯ ಮಗ. ನಾವು ಜನ್ಮಕೊಟ್ಟ ಮಕ್ಕಳು ಸಮಾಜಘಾತುಕರು, ಲೋಕಕಂಟಕರೂ ಮತ್ತು ಉಗ್ರಗಾಮಿಗಳಾಬಾರದು ಆದರೆ ಹೆತ್ತವರು ಅವರನ್ನು ಸಹಿಸಿಕೊಳ್ಳಬಾರದು. ಅವರನ್ನು ಕೊಚ್ಚಿಹಾಕಬೇಕು. ಮಮತೆಯ ನೆಪದಲ್ಲಿ ಸಮಾಜಘಾತುಕ ಶಕ್ತಿಗಳನ್ನು ಪೋಷಿಸಿಕೊಂಡಿರಬಾರದು ಎಂಬ ಸಂದೇಶವನ್ನು ಸತ್ಯಭಾಮೆಯ `ಮಾತೃ-ಜಗತ್ತಿಗೆ’ ರವಾನಿಸಿದ್ದಾಳೆ.
ವಿಷ್ಣು `ವಾಮನಾವತಾರ’ದಲ್ಲಿ ಒಂದು ಬಲಿಯ ತಲೆಯನ್ನು ತುಳಿದು ಅವನನ್ನು `ಕೀರ್ತಿಶೇಷನನ್ನಾಗಿ’ ಮಾಡಿ `ಬಲಿದಾನ’ `ಬಲಿಪಶು’ ಎಂಬ ಪದಗಳಿಗೆ `ಹಿನ್ನಲೆ’ಯಾದ ದಿನವಿದು. ರಾಮನು ಹದಿನಾಲ್ಕು ವರ್ಷಗಳ ವನವಾಸವನ್ನು ಪೊರೈಸಿಕೊಂಡು ರಾವಣನನ್ನು ಸಂಹರಿಸಿ `ಸೀತಾಸಮೇತ’ನಾಗಿ ದೀಪಾವಳಿಯ ಪರ್ವದಿನದಂದು ಅಯೋಧ್ಯೆಗೆ ಮರಳಿ ಬರುತ್ತಾನೆ.
ಆಚರಣೆಯ ಪೌರಾಣಿಕ ಹಿನ್ನೆಲೆ :
ಆಶ್ವಯುಜ ಮಾಸದ ಕೊನೆಯಲ್ಲಿ ಮತ್ತು ಕಾರ್ತೀಕ ಮಾಸದ ಆರಂಭದಲ್ಲಿ ಹೀಗೆ ಒಟ್ಟು ಐದು ದಿನಗಳ ಅವಧಿಯ ಹಬ್ಬವಾದ ದೀಪಾವಳಿಗೆ, ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನದ ಆಚರಣೆಗೆ ಚಾಲನೆ ಸಿಗುತ್ತದೆ. ಹಬ್ಬದ ಮೊದಲ ದಿನವನ್ನು `ಧನತ್ರಯೋದಶಿ’ ಎಂದೂ ಕರೆಯಲಾಗುತ್ತದೆ.
ಹಿಮರಾಜನ 16 ವರ್ಷದ ಮಗನು ತನ್ನ ಜಾತಕದ ಪ್ರಕಾರ ಮದುವೆಯಾದ ನಾಲ್ಕೇ ದಿನಗಳಲ್ಲಿ ಹಾವು ಕಡಿತದಿಂದ ಮೃತನಾಗುವನೆಂದು ಹೇಳಲಾಗಿತ್ತು. ಮದುವೆಯ ನಾಲ್ಕನೆಯ ರಾತ್ರಿಯಂದು ಆತನ ನವವಧುವು ಅಂತಃಪುರವನ್ನೆಲ್ಲ ದೀಪ ಹಚ್ಚಿ ಬೆಳಗಿದಳು. ತನ್ನ ಒಡವೆ, ಧನ ಸಂಪತ್ತನ್ನು ರಾಶಿ ಹಾಕಿ ಪೂಜಿಸಿ ಭಗವಂತನ ಸಂಕೀರ್ತನೆಯನ್ನು ಮಾಡುತ್ತಾ ನರ್ತಿಸತೊಡಗಿದಳು. ರಾತ್ರಿಯಲ್ಲಿ ಅಲ್ಲಿಗೆ ಸರ್ಪರೂಪದಲ್ಲಿ ಬಂದು ಯಮದೇವನಿಗೆ ದೀಪದ ಝಗಮಗಿಸುವ ಬೆಳಕಿನಲ್ಲಿ ಕಣ್ಣು ಕುಕ್ಕಿದಂತಾಯಿತು. ಸರ್ಪವು ಚಿನ್ನಾಭರಣಗಳ ರಾಶಿಯ ಮೇಲೆ ಹತ್ತಿ ಕುಳಿತು, ನವವಧುವಿನ ಮಧುರ ಗೀತೆಗಳನ್ನು ಆಲಿಸುತ್ತ ಮುಂಜಾನೆ ಹೊರಟು ಹೋಯಿತು. ಹೀಗೆ ಪತ್ನಿಯು ತನ್ನ ಪತಿಯಾದ ರಾಜಕುಮಾರನ ಜೀವನನ್ನು ಕಾಪಾಡಿದ ದಿನವೆಂಬ ಹಿನ್ನೆಲೆಯಲ್ಲಿ ಈ ದಿನವನ್ನು `ಯಮದೀಪದಾನ’ ದಿನವೆಂದು ಆಚರಿಸುತ್ತಾರೆ.
ಇನ್ನೊಂದು ಉಲ್ಲೇಖದ ಪ್ರಕಾರ ಕರೋಪನಿಷತ್ತಿನ ಬಾಲಕ ನಾಯಕ `ನಚಿಕೇತ’ನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೂ ಇದೇ.
ಲಕ್ಷ್ಮೀ ಪಂಚಾಯತನ ಪೂಜೆಯನ್ನು ಅಮಾವಾಸ್ಯೆಯ ದಿನ ನಡೆಸಲಾಗುತ್ತದೆ ಲಕ್ಷ್ಮೀ ಪಂಚಾಯತನ ಪೂಜೆ ಎಂದರೆ ವಿಷ್ಣು (ಆನಂದ ಅಧಿಪತಿ), ಕುಬೇರ (ಸಂಪತ್ತಿನ ಅಧಿಪತಿ) ಇಂದ್ರ (ಸಂತೃಪ್ತಿಯ ಅಧಿಪತಿ) ಗಜೇಂದ್ರ (ಸಂಪತ್ತಿನ ವಾಹನ) ಹಾಗ ಲಕ್ಷ್ಮೀದೇವಿ (ಸರ್ವಶಕ್ತಿ ಸಂಪತ್ತಿನ ಸ್ವರೂಪಿಣಿ) ಲಕ್ಷ್ಮೀ ಐಶ್ವರ್ಯದ ಅಧಿದೇವತೆ ಮಾತ್ರವಲ್ಲ. ನಮ್ಮ ಜೀವನ ಲೌಕಿಕ, ಪಾರಮಾಥಿಕ ಗುರಿ ಸಾಧನೆಗೂ ಈಕೆಯ ಕೃಪೆ ಅತ್ಯಗತ್ಯವಾಗಿದೆ.
ದೀಪಾವಳಿಯಂದೇ ಹಸ್ತಿನಾಪುರಕ್ಕೆ ಕುಂತಿಸಮೇತವಾಗಿ ಪಾಂಡವಪುತ್ರರು ಮತ್ತು ದ್ರೌಪದಿಯು 12 ವರ್ಷಗಳ ಕಾಲದ ವನವಾಸ ಮತ್ತು 1 ವರ್ಷದ ಅಜ್ಞಾತವಾಸವನ್ನು ಪೂರೈಸಿ ಬಂದ ದಿನ.
ಇಂದ್ರನ ಕೋಪಕ್ಕೆ ತುತ್ತಾಗಿ ಕಂಗೆಟ್ಟ ಗೋಕುಲದ ಗೋಪ-ಗೋಪಿಕೆಯರನ್ನು ಕೃಷ್ಣ `ಗೋವರ್ಧನ ಗಿರಿ’ಯನ್ನು ಎತ್ತಿ ಹಿಡಿದು ಶುಭದಿನ. ಭಾರತದ ಕೀರ್ತಿಯನ್ನು `ಐತಿಹಾಸಿಕ’ ಗೊಳಿಸಿದ ರಾಜಾವಿಕ್ರಮಾದಿತ್ಯನ ಪಟ್ಟಾಭಿಷೇಕದ ದಿನವದು. ಜೈನಧರ್ಮದ 24ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಮಹಾ ನಿರ್ವಾಣಗೈದ ಪಾವನ ದಿನವದು. ದೀಪಾವಳಿಯ ಶುಭ ಘಳಿಗೆಯಲ್ಲೇ 1577ರಲ್ಲಿ ಸದ್ಯ ಅಮೃತ ಸರದಲ್ಲಿರುವ ಸುವರ್ಣ ಮಂದಿರ’ವನ್ನು ಕಟ್ಟುವುದಕ್ಕೆ `ಭೂಮಿ ಪೂಜೆ’ ಮಾಡಲಾಯಿತು. ಆರ್ಯ ಸಮಾಜದ ಸಂಸ್ಥಾಪಕರಾದ ಶ್ರೀ ದಯಾನಂದ ಸರಸ್ವತಿಯವರು `ದಿವ್ಯಜ್ಞಾನ’ವನ್ನು ಪಡೆಯುವ ಮೂಲಕ `ಮಹರ್ಷಿ ದಯಾನಂದ’ರಾದರು.
ನಮ್ಮ ಪ್ರಾಚೀನರು ಹಿಂದಿನ ಕಾಲದಲ್ಲಿ ಆರ್ಕೆಟಿಕ್ ಪ್ರದೇಶದಲ್ಲಿ ನೆಲೆ ನಿಂತಿದ್ದರಂತೆ. ಈ ಧೃವ ಪ್ರದೇಶದಲ್ಲಿ ವರ್ಷದ ಆರು ತಿಂಗಳ ಕಾಲ ಮಾತ್ರ ಬೆಳಕಿದ್ದು, ಇನ್ನುಳಿದ ಆರು ತಿಂಗಳು ಕಾಲ ಕತ್ತಲೆಯೇ ತುಂಬಿರುತ್ತದೆ.
ಸೂರ್‍ಯನು ಮೇಷ ಸಂಕ್ರಾಂತಿಯಂದು ಪ್ರಕಟವಾಗುತ್ತಾನೆ. ಹಾಗು ತುಲಾ ಸಂಕ್ರಾಂತಿಯಂದು ಮರೆಯಾಗುತ್ತಾನೆ. ಕಾರ್ತಿಕ ಚತುದರ್ಶಿಯಂದು ಆರಂಭವಾಗುವ ಅಯನವನ್ನು `ಕೌಮುದೀ’ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಅಲ್ಲಿ ನಿತ್ಯವೂ ದೀಪವನ್ನು ಬೆಳಗುತ್ತಿದ್ದರೂ ಇದನ್ನು `ನಿತ್ಯಜ್ಯೋತಿ’ ಎಂದು ಪೂಜಿಸುತ್ತಿದ್ದರು. ಹೀಗೆ ದೀಪಾವಳಿ ಆಚರಣೆ ಜಾರಿಗೆ ಬಂತು ಎಂಬ ಪ್ರತೀತಿಯೂ ಇದೆ.
ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಸಂಸ್ಕೃತಿ ಚಿಂತಕರು 9739369621 ಇ-ಮೇಲ್ : padmapranava@yahoo.com
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post