ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಾಣ್ಯೇಕಾ ಸಮಲಂಕರೋತಿ ಯಾ ಸಂಸ್ಕೃತಾ ಧಾರ್ಯತೇ ಎಂಬ ಮಾತು ಸಂಸ್ಕೃತದ ಮಹತ್ವ ಹೇಳಿದರೆ, ಅದರ ಕಾರಣದಿಂದಲೇ ಪ್ರಸಿದ್ಧರಾದ ವ್ಯಕ್ತಿಯೊಬ್ಬರನ್ನು ಪರಿಚಯಿಸದೇ ಇದ್ದರೆ ಹೇಗೆ?
ಸಂಸ್ಕೃತದ ಸೆಳೆತದಿಂದಲೇ ಜನಮಾನಸದಲ್ಲಿ ಉಳಿಯುವಂತಾದ ಇವರು ನಮಗೆ ಆದರ್ಶಪ್ರಾಯರು. ಓದಿಗೆ ಸಾಧನೆಗೆ ವಯಸ್ಸಿನ ಹಂಗಿಲ್ಲ, ಸಾಧಿಸುವ ಛಲವೊಂದಿದ್ದರೆ ಯಾವುದೂ ನಮಗೆ ಅಡ್ಡಿಯಾಗುವುದಿಲ್ಲ. ಹಾದಿಯ ಮುಳ್ಳೆಲ್ಲವೂ ಹೂವಿನಂತಾಗುತ್ತದೆ. ಅದೇ ರೀತಿಯಲ್ಲಿ ಎಲ್ಲಾ ಕಲ್ಲು ಮುಳ್ಳುಗಳನ್ನು ದಾಟಿ ನಡೆಯುವ ಹಾದಿಯನ್ನು ಹೂವಿನಂತಾಗಿಸಿದ ಮಹಿಳೆಯೊಬ್ಬರ ಕುರಿತು ನಿಮಗೆ ಹೇಳಲೇಬೇಕು. ಅವರೇ ಮನು ಚವ್ಹಾಣ್ ಇವರು ಸಂಸ್ಕೃತದ ಶಿಕ್ಷಕರಾಗಿ ಶಿವಮೊಗ್ಗದಲ್ಲಿ ಎಲ್ಲರಿಗೂ ಚಿರಪರಿಚಿತರಾದವರು.
ನಾರಾಯಣರಾವ್ ಸಾವಂತ್ ಹಾಗೂ ಅನುಸೂಯಾಬಾಯಿ ಅವರ ಮಗಳಾಗಿ ಜನಿಸಿದ ಮನು ಅವರು ಓದಿದ್ದು 10ನೇ ತರಗತಿಯವರೆಗೆ. ಕೃಷಿಕರಾದ ಜಗದೀಶ್ ರಾವ್ ಚವ್ಹಾಣ್ ಅವರನ್ನು ವಿವಾಹವಾಗಿ ಹೋಗಿದ್ದು ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಸಮೀಪದಲ್ಲಿರುವ ಕಂಚಗಾರನಹಳ್ಳಿಗೆ. ತಮಗೆ ಮಕ್ಕಳಾದ ಮೇಲೆ ಅವರ ಭವಿಷ್ಯದ ಓದಿಗಾಗಿ ಶಿವಮೊಗ್ಗ ನಗರದಲ್ಲಿ ಬಂದು ಇರುವ ನಿರ್ಧಾರ ಮಾಡಿದರು. ಜೀವನ ನಿರ್ವಹಣೆಗಾಗಿ ಅವರು ಆಯ್ದುಕೊಂಡಿದ್ದು ಅನ್ನುವುದಕ್ಕಿಂತಲೂ ಅವರಿಗೆ ಸಿಕ್ಕ ಕೆಲಸ ಶ್ರೀ ಅ. ನಾ. ವಿಜೇಂದ್ರ ರಾವ್ ಅವರ ನವದುರ್ಗ ಏಜೆನ್ಸಿ ನಲ್ಲಿ ಆಫೀಸ್ ಕಾರ್ಯನಿರ್ವಹಣೆ ಮಾಡುವುದು. ಅಲ್ಲಿ ಇವರು ವಿಜೇಂದ್ರ ಅವರ ಆ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಕಾರ್ಯಕರ್ತರನ್ನು ನೋಡಿದರು. ಅವರೆಲ್ಲ ಸಂಸ್ಕೃತದಲ್ಲಿಯೇ ಸಂಭಾಷಣೆ ಮಾಡುವುದನ್ನು ನೋಡಿ ಅವರಿಂದ ಆಕರ್ಷಿತರಾಗಿ ತಾವೂ ಸಂಸ್ಕೃತವನ್ನು ಕಲಿಯಬೇಕೆಂದುಕೊಂಡರು. ಅದರಂತೆ ಅವರ ಸಂಕಲ್ಪ ಗಟ್ಟಿಯಾಗಿತ್ತು ದಶದಿನಾತ್ಮಕ ಸಂಭಾಷಣ ಶಿಬಿರಕ್ಕೆ ಹೋಗಿ ಸಂಸ್ಕೃತ ಮಾತನಾಡಲು ಕಲಿತರು. ಅದು ಅವರಿಗೆ ಸಂತೋಷ ಕೊಟ್ಟರೂ ತೃಪ್ತಿಯಾಗಲಿಲ್ಲ. ನಂತರ ಮತ್ತೂರು ಶ್ರೀನಿಧಿಯವರೇ ಮೊದಲಾಗಿ ಅನೇಕರ ಸಹಾಯ ಪಡೆದು ಸಂಸ್ಕೃತ ಭಾರತಿಯವರು ನಡೆಸುವ ಪ್ರವೇಶ ದಿಂದ ಕೋವಿದದ ವರೆಗೆ ಪರೀಕ್ಷೆಗಳನ್ನು ತೆಗೆದುಕೊಂಡರು. ಅದರಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾದರು. ಹಾಗೆಯೇ ಬಾಲ ಕೇಂದ್ರದ ತರಬೇತಿ ಪಡೆದು ಬಾಲ ಕೇಂದ್ರವನ್ನು ಸಂಸ್ಕೃತ ಭವನದಲ್ಲಿ ಆರಂಭಿಸಿದರು. ಮೊದಲು 10 ವಿದ್ಯಾರ್ಥಿಗಳಿದ್ದ ಅವರ ಕೇಂದ್ರ ಈಗ 50ಕ್ಕೂ ಹೆಚ್ಚಿರುವುದನ್ನು ನಾವು ಕಾಣುತ್ತೇವೆ. ಇಲ್ಲಿನವರೆಗೆ ಅವರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭಗವದ್ಗೀತೆ, ಶ್ಲೋಕ, ಸುಭಾಷಿತ, ಸಂಸ್ಕೃತ ಕ್ರೀಡೆ ಇತ್ಯಾದಿಗಳನ್ನ ಕಲಿಸಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡಿದ್ದಾರೆ. ಇವುಗಳೇ ಅಲ್ಲದೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ನೀಡುವಂತಹ ವಿದ್ವತ್ ಪರೀಕ್ಷೆ ಹಾಗೂ ಡಿಪ್ಲೋಮೋಗಳಲ್ಲಿಯೂ ತೇರ್ಗಡೆ ಹೊಂದಿದ್ದಾರೆ.
ಸಂಸ್ಕೃತ ಶಿಕ್ಷಣದ ಆಸಕ್ತಿ ಮನು ಅವರನ್ನು ತರಬೇತು ದಾರರನ್ನಾಗಿಯೂ ತಯಾರು ಮಾಡಿತು. ಶಾಲಾಸು ಸಂಸ್ಕೃತ ಯೋಜನೆಯ ತರಗತಿಗಳ ತರಬೇತಿಗಾಗಿ ಮೈಸೂರಿನ ಪಾಂಡವಪುರ, ಬಿಜಾಪುರ, ಹೊನ್ನಾಳಿ ಇಲ್ಲಿಗೆ ತೆರಳಿದರೆ, ತರೀಕೆರೆ ಕಡೂರು, ಬೀರೂರು, ಸಾಗರ, ತೀರ್ಥಹಳ್ಳಿ, ಚೀಲೂರು, ಕೆ.ಆರ್ ನಗರದ 10 ಬ್ಯಾಚ್ ನವರಿಗೆ ಶಿವಮೊಗ್ಗದಲ್ಲಿಯೇ ತರಬೇತಿಯನ್ನು ಇವರು ನೀಡಿದವರಾಗಿದ್ದಾರೆ. ಸಂಸ್ಕೃತದ ಕಾರ್ಯಗಳಿಂದಲೇ ಪ್ರಸಿದ್ಧರಾದ ಇವರು ಹಿಮಾಲಯ ಚಾರಣವನ್ನು ಮಾಡಿದವರು, ರಾಜಸ್ಥಾನವನ್ನು ಸಂಸ್ಕೃತದ ಕಾರಣದಿಂದಲೇ ನೋಡಿ ಬಂದಿದ್ದಾರೆ.
ತಮ್ಮ ಸಂಸ್ಕೃತ ಶಿಕ್ಷಣ-ಪ್ರಶಿಕ್ಷಣವನ್ನು ಮಾಯಸಂದ್ರ ತುರುವೇಕೆರೆಯಲ್ಲಿ ಪಡೆದಿದ್ದೇ ಅಲ್ಲದೇ, ಸಂಸ್ಕೃತ ಭವನದಲ್ಲಿ 2015 ರಲ್ಲಿ ನಡೆದ ವಿಸ್ತಾರಕ ವರ್ಗದಲ್ಲಿ ಭಾಗವಹಿಸಿದ್ದಾರೆ. ಶಿವಮೊಗ್ಗದ ಅನೇಕ ಶಾಲೆಗಳಿಗೆ ಶಾಲಾಸು ಸಂಸ್ಕೃತ ಯೋಜನೆಯಡಿಯಲ್ಲಿ ನಗರದ ವಿವಿಧ ಶಾಲೆಯ ಮಕ್ಕಳಿಗೆ ಪಾಠವನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ. ಅದರಲ್ಲಿಯೂ ಓಪನ್ ಮೈಂಡ್ ಸ್ಕೂಲ್, ವಾಸವಿ ಸ್ಕೂಲ್,ಚಿಟ್ಟೆ ಮಾಂಟೇಸರಿ ಅಲ್ಲದೇ ವಡ್ಡಿನಕೊಪ್ಪದ ಸರ್ಕಾರಿ ಶಾಲೆಗಳಿಗೆ ತೆರಳಿ ಅಯನಂ, ಸಾರಿಣಿ ಮುಂತಾದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ಅರ್ಥೈಸಿದ್ದಾರೆ. ತಮ್ಮ ಪಾಠ ಮಾಡುವ ರೀತಿಯಿಂದಲೇ ಪ್ರಸಿದ್ಧರಾದಂತಹ ಇವರು ಎಂತಹ ಮಗುವಿಗೂ ಸಂಸ್ಕೃತದ ಆಸಕ್ತಿಯನ್ನು ಹುಟ್ಟುವಂತೆ ಮಾಡುವವರಾಗಿದ್ದಾರೆ. ಸದಾ ಸಂಸ್ಕೃತದ ಚಿಂತನೆ ಆಲೋಚನೆಯಲ್ಲಿಯೇ ತೊಡಗಿರುವಂತಹ ಇವರು ತಮ್ಮ ಪತಿ, ಮಗ, ಮಗಳು ಇವರೆಲ್ಲರಿಗೂ ಸಂಸ್ಕೃತದ ಸುಗಂಧವನ್ನು ಬೀರಿದವರಾಗಿದ್ದಾರೆ. ತಮ್ಮ ಇಡೀ ಕುಟುಂಬವನ್ನೇ ಸಂಸ್ಕೃತ ಕುಟುಂಬವನ್ನಾಗಿಸಿದ್ದಾರೆ.
ತಮ್ಮ ಸಂಸ್ಕೃತ ಕಲಿಕೆಗೆ ಮತ್ತೂರಿನ ಶ್ರೀನಿಧಿ, ಶ್ರೀ ಅ. ನಾ. ವಿಜೇಂದ್ರ, ಶ್ರೀ ಟಿ.ವಿ. ನರಸಿಂಹಮೂರ್ತಿ, ಅನಂತ ಕೃಷ್ಣ, ಡಾ. ಮೈತ್ರೇಯಿ, ಮತ್ತೂರಿನ ಗಿರೀಶ್ ಇವರು ತನಗೆ ಅಗತ್ಯ ಸಹಕಾರವನ್ನು ನೀಡಿದ್ದಾರೆ ಎಂದು ಸದಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಇವರು ಸಂಸ್ಕೃತದ ಸೇವೆಗಾಗಿ ಗಮನಿಸಿಯೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಚಂದ್ರಶೇಖರ್ ಬಾಯರ್ ನಡೆಸಿಕೊಡುವಂತಹ ಕಾರ್ಯಕ್ರಮದಲ್ಲಿ ಸನ್ಮಾನಕ್ಕೂ ಸಹ ಭಾಜನರಾಗಿದ್ದಾರೆ.
ನಿಸ್ವಾರ್ಥ ಸೇವೆಯಿಂದ ಸಂಸ್ಕೃತಕ್ಕಾಗಿ ದುಡಿಯುವಂತಹ ಮನು ಅವರು ನೀವು ಸಂಸ್ಕೃತ ಭವನಕ್ಕೆ ಹೋದರೆ ತಮ್ಮ ನಗು ಮೊಗದಿಂದಲೇ ಎಲ್ಲರನ್ನ ಮಾತನಾಡಿಸಿ, ಸಂಸ್ಕೃತದ ಸೆಳೆತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ತಾನೆಲ್ಲೇ ಇರಲಿ, ಅಲ್ಲಿ ಇರುವಂತಹ ಮಕ್ಕಳಿಗೂ ಹಿರಿಯರಿಗೂ ಒಂದೆರಡು ಸಂಸ್ಕೃತ ಪದವನ್ನಾದರೂ ಕಲಿಸಿ ಅವರಿಗೆ ಸಂಸ್ಕೃತ ರುಚಿಯನ್ನು ಹತ್ತಿಸುವಂತಹ ಶ್ರೀಮತಿ ಮನು ಅವರು ನಮ್ಮೆಲ್ಲರಿಗೂ ಸದಾ ಆದರ್ಶಪ್ರಾಯ. ಸಂಸ್ಕೃತದ ಶಿಕ್ಷಕಿಯಾಗಿ ಎಲ್ಲಾ ಮಕ್ಕಳ ಪ್ರೀತಿಯನ್ನು ಗಳಿಸಿದಂತಹ ಶ್ರೀಮತಿ ಮನು ಚವ್ಹಾಣ್ ಅವರು ತಮ್ಮ ಶ್ರದ್ಧೆಯ ಕಾಯಕದಿಂದಲೇ ಹೆಸರುವಾಸಿ. ಅವರು ನಡೆಸಿಕೊಡುವ ಭಗವದ್ಗೀತೆಯ ತರಗತಿಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಂಡಾಗ ಜೊತೆಗೆ ಬಾಲ ಕೇಂದ್ರದ ವಿದ್ಯಾರ್ಥಿಗಳ ವಾರ್ಷಿಕೋತ್ಸವವನ್ನು ಕಂಡಾಗ ನಿಜಕ್ಕೂ ಮನು ಭಗಿನಿ ಅತ್ಯಂತ ಉತ್ಕೃಷ್ಟ ಕಾರ್ಯವೆಸಗಿದ್ದಾರೆಂಬುದು ನಿಸ್ಸಂಶಯ. ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾದ ಮನು ಭಗಿನಿ ಜಿಲ್ಲಾ ಬ್ರಾಹ್ಮಣ ಸಂಘ ನಡೆಸುವ ವಸಂತ ವೇದ ಶಿಬಿರದಲ್ಲಿ ಎಲ್ಲ ಮಕ್ಕಳಿಗೂ ಆಚ್ಚು ಮೆಚ್ಚಿನ ಗುರುಮಾತೆ. ಇಷ್ಟೇ ಅಲ್ಲದೇ ಡಿಜಿಟಲ್ ಮಾಧ್ಯಮ ಬಳಸಿ ಎಲ್ಲರಿಗೂ ಸಂಸ್ಕೃತ ಕಲಿಸುವಲ್ಲಿ ಯಶಸ್ವಿಯಾದ ಇವರು ಅತ್ಯಂತ ಉತ್ಸಾಹದಿಂದ ತಾವಿರುವ ಜಾಗವನ್ನು ಸಂಸ್ಕೃತದತ್ತ ಸೆಳೆಯುವಲ್ಲಿ ನಿಸ್ಸಿಮರು. ಪಠಾಮಿ ಸಂಸ್ಕೃತಂ ನಿತ್ಯಂ ಧ್ಯಾಯಾಮಿ ಸಂಸ್ಕೃತಂ ಸದಾ ಎನ್ನುವ ಸಾಲುಗಳಿಗೆ ಅನ್ವರ್ಥವಾಗಿ ತಮ್ಮ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಮನು ಅವರಿಗೆ ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಇನ್ನಷ್ಟು ಮಕ್ಕಳು ತಮ್ಮಿಂದ ಸಂಸ್ಕೃತ ಕಲಿತು ಸಂಸ್ಕೃತ ಮಾತೆಯ ಸೇವೆ ಮಾಡುವಂತಾಗಲಿ… ಸಂಸ್ಕೃತಕ್ಕೆ ಗರಿ ಮೂಡಿಸುವಂತಾಗಲಿ ಎಂಬ ಆಶಯ ನನ್ನದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post