ಕಲ್ಪ ಮೀಡಿಯಾ ಹೌಸ್
ವಾಲ್ಮೀಕಿ ಮುನಿಯು ರಾಮಾಯಣ ಕಾವ್ಯ ಬರೆಯುವುದಕ್ಕೆ ಮುಂಚಿತವಾಗಿಯೇ ಅನ್ಯ ಸೂತರುಗಳಿಂದ ರಾಮನ ಕಥೆ ಪ್ರಚಲಿತವಾಗಿತ್ತು. ವಾಲ್ಮೀಕಿಯ ಶ್ರೀರಾಮ ವೈದಿಕ ಉಪದಿಷ್ಟವಾದ ವಿಷ್ಣುವಿನ ಅವತಾರಿಯಾಗಿದ್ದಾನೆ. ದೇವಶತುಗಳ ನಾಶ ಮತ್ತು ಧರ್ಮ ಪ್ರತಿಪಾದನೆಯೇ ಶ್ರೀರಾಮನ ಅವತಾರದ ಪ್ರಮುಖ ಪ್ರಯೋಜನ.
ವ್ಯೂಹವಾದ:
ಪೌರಾಣಿಕ ಯುಗದಲ್ಲಿ ಭಗವಂತನು ಅವತಾರಿಯಾಗಿ ಆವಿರ್ಭವಿಸುವ ಕಥಾತ್ಮತೆ ಮೂಡಿ ಬಂತು. ಇದೇ ಸಮಯದಲ್ಲಿ ವೈಷ್ಣವ ಪಾಂಚರಾತ್ರ ಪದ್ಧತಿಯು ಕ್ರೂಢೀಕೃತವಾಗಿ ಅವತಾರದ ಉಪಾಸ್ಯತೆಯು ಪ್ರತಿಪಾದಿತವಾಯಿತು. ಪಾಂಚರಾತ್ರ ಪದ್ಧತಿಯ ಅಹಿರ್ಬುಧ್ಯ ಸಂಹಿತೆಯಲ್ಲಿ ಭಗವಂತನು ತನ್ನ ಮಾಯಾರೂಪದಲ್ಲಿ ಜಗತ್ತಿನಲ್ಲಿ ಪ್ರಕಟವಾಗಿ ಧರ್ಮಸ್ಥಾಪನೆ ಪ್ರಕ್ರಿಯೆಗಾಗಿ ತನ್ನ ಪಾರ್ಶ್ವ ದರು ಹಾಗೂ ತನ್ನ ಅಸ್ತ್ರ ಶಸ್ತ್ರಗಳೊಡನೆ ಪ್ರಕಟವಾಗುವ ಮಾನ್ಯತೆಯು ವೂಹಾವತಾರವೆಂದು ಪ್ರತಿಪಾದಿತವಾಯಿತು.
ರಾಮೋತ್ತರತಾಪನೀಯ ಉಪನಿಷತ್ತಿನಲ್ಲಿ ರಾಮವ್ಯೂಹದ ವಿಶೇಷ ಪ್ರತಿಪಾದನೆ ಕಂಡು ಬರುತ್ತದೆ. ಅಲ್ಲಿ ಓಂಕಾರ ಪ್ರಣವದ ಸಿದ್ಧಾಂತಗಳನ್ನು ಕ್ರೋಢೀಕರಿಸಿ ಶ್ರೀರಾಮನ ಪರಬ್ರಹ್ಮತ್ವವನ್ನು ಪ್ರತಿಪಾದಿಸಲಾಗಿದೆ.
ಸುಮಿತ್ರಾನಂದನ ಲಕ್ಷ್ಮಣ ಪ್ರಣವದ `ಅಕಾರದಿಂದ ಉತ್ಪನ್ನನಾಗಿದ್ದಾನೆ. ಇವನು ಜಗತ್ತಿನ ಅಭಿಮಾನಿ ವಿಶ್ವವೆಂದು ಪ್ರಕೀರ್ತಿತನಾಗಿದ್ದಾನೆ. ಚರ್ತುವ್ಯೂಹದಲ್ಲಿ ಲಕ್ಷ್ಮಣನು ಸಂಕರ್ಷಣ ರೂಪದ ಅವತಾರಿ. ಉಕಾರದಿಂದ ಉತ್ಪನ್ನನಾದ ಶತುಘ್ನ ಸ್ವಪ್ನಕ್ಕೆ ಅಭಿಮಾನೀದೇವತೆಯಾಗಿ ತೇಜಸ್ ಎಂಬುದಾಗಿ ಕಥಿತನಾಗಿದ್ದಾನೆ. ಚರ್ತುವ್ಯೂಹದಲ್ಲಿ ಶತುಘ್ನನು ಪ್ರದ್ಯುಮ್ನನಾಗಿ ವಿರಾಜಿಸಿದ್ದಾನೆ. ಮಕಾರದಿಂದ ಭರತನ ಸಂಬಂಧ ಪ್ರಾದುರ್ಭೂತವಾಗಿದೆ. ಸುಷುಪ್ತಿಗೆ ಅಭಿಮಾನಿಯಾದ ಪ್ರಾಜ್ಞಾನೆಂದು ಅನಿರುದ್ಧನೆಂಬ ನಾಮಧೇಯದಿಂದ ನಿರ್ದಿಷ್ಟನಾಗಿದ್ದಾನೆ. ಪ್ರಣವದ ಚತುರ್ಥಾಂಶ ಅರ್ಧಮಾತ್ರಾರೂಪನಾಗಿ ಭಗವಾನ್ ರಾಮನೇ ಅವತರಿಸಿದ್ದಾನೆ. ಇವನೇ ಪುರುಷೋತ್ತಮ ಮತ್ತು ಬ್ರಹ್ಮಾನಂದವೇ ಇವನ ಏಕಮಾತ್ರ ಸ್ವರೂಪ. ಚರ್ತುವ್ಯೂಹದಲ್ಲಿ ಇವನು ವಾಸುದೇವನೆಂದು ಪರಿಲಕ್ಷಿತನಾಗಿದ್ದಾನೆ.
ಶ್ರೀರಾಮನ ಸಾಮಿಪ್ಯ ಮಾತ್ರದಿಂದಲೇ ಸಮಸ್ತ ಜೀವಿಗಳ ಉತ್ಪತ್ತಿ, ಪಾಲನೆ ಮತ್ತು ಸಂಹಾರಕಾರಿಣಿಯಾದ ಜಗಧಾರಿಣಿ, ವಿದೇಹನಂದಿನಿ ಸೀತೆ ನಾದಬಿಂದು ಸ್ವರೂಪಿಣಿ, ಇವಳೇ ಮೂಲ ಪ್ರಕೃತಿಯೆಂದು ಅಭಾಹಿತಳು. ಪ್ರಣವದಿಂದ ಭಿನ್ನವಾಗಿರುವ ಕಾರಣದಿಂದಾಗಿ ಬ್ರಹ್ಮಾದಿಗಳು ಸೀತೆಯನ್ನು ಪ್ರಕೃತಿ ಎಂದು ಪರಿಗಣಿಸಿದ್ದಾರೆ.
ರಾಮನಾಮ ಮಹಿಮೆ
ಶ್ರೀರಾಮ ಜಪ ಮುಗಿದ ಮೇಲೆ ಹೇಳುವ ಶ್ರೀರಾಮೋತ್ತರತಾಪಿನಿಯಲ್ಲಿ ಓಂಕಾರಾದಿ ಮೂರವರೆ ಮಾತ್ರೆಗಳನ್ನು ತಿಳಿಯಪಡಿಸಿದ್ದಾರೆ. ಅಖಿಲ ಜಗದಾಕಾರನಾದ ಆಕಾರವಾಚ್ಯ ವಿಶ್ವವೈಶ್ವಾನರಾಂಶ ಲಕ್ಷ್ಮಣ, ಸ್ವಪ್ನದಲ್ಲಿಯೂ ಅಖಿಲ ದೇಹಗಳಲ್ಲಿದ್ದ ನಾನೆಂಬ ತತ್ತ್ವರೂಪದಿಂದಿರುವ ಉಕಾರವಾಚ್ಯ ತೈಜಸಹಿರಣ್ಯ ಗರ್ಭಾಂಶ ಶತ್ರುಘ್ನ, ಸುಷುಪ್ತಿಯಲ್ಲಿ ಎಲ್ಲ ಪ್ರಪಂಚವೂ ಕಾಣದಂತಾದ ಮೇಲೆ ಅಖಿಲ ಜಗತ್ತಿನ ಬೀಜರೂಪನಾದ ಮಕಾರ ವಾಚ್ಯ ಪ್ರಾಚ್ಯ. ಪ್ರಾಜ್ಞ ಈಶ್ವರಾಂಶ ಭರತ, ಅಖಿಲ ಜೀವಿಗಳ ಮೂಲ ಶುದ್ಧ ರೂಪನಾದ ಅರ್ಧ ಮಾತ್ರೆಯ ವಾಚ್ಯ, ಕೇವಲ ಬ್ರಹ್ಮಾನಂದ ವಿಗ್ರಹನಾದವನೇ ಈ ಶ್ರೀರಾಮ. ಈತನ ಸಾನ್ನಿಧ್ಯ ಮಾತ್ರ ಇಟ್ಟುಕೊಂಡು ಜಗತ್ತಿನ ಉತ್ಪತ್ತಿ ಸ್ಥಿತಿ ಲಯಗಳನ್ನು ಮಾಡತಕ್ಕ ಮೂಲಮಾಯೆಯೇ ಶ್ರೀಸೀತೆಯ ಮುಂದೆ ಸದೋಜ್ವಲೋವಿದ್ಯಾ, ತತ್ಕಾರ್ಯಹೀನಃ ಸನ್ವಾತ್ಮ ಬಂಧ ಹರಃ ಸರ್ವದಾ ದ್ವೈತರಹಿತ ಆನಂದರೂಪಃ ಸರ್ವಾಧಿಷ್ಠಾನಃ ಸನ್ಮಾತ್ರೋ ನಿರಸ್ತಾವಿದ್ಯಾ ತಮೋ ಮೋಹೋಹಮೇವೇತಿ ಸಂಭಾವ್ಯಾಹ ಮಿತ್ಯೋಂ ತತ್ಸದ್ಯತ್ಪರಂಬ್ರಹ್ಮ ರಾಮಚಂದ್ರಶ್ಚಿದಾತ್ಮನಃ ಎಂಬೀ ಮಂತ್ರ ಬಂದಿರುವುದು.
ಶ್ರೀರಾಮ ಈ ಪರಮಮಂಗಲ, ಪರಮಪವಿತ್ರ ಆನಂದಘನರೂಪದ ಧ್ಯಾನಕ್ಕೆ ಶುದ್ಧ ಸ್ಥಳವೆಂದು ನಮ್ಮ ಶರೀರದಲ್ಲಿದ್ದ ಕಾಶೀ ಕ್ಷೇತ್ರ. ವಾರಣಾಶೀ ಎಂದರೆ ಭ್ರೂಮಧ್ಯಸ್ಥಾನ, ಇದಕ್ಕೆ ಅವಿಮುಕ್ತ ಕ್ಷೇತ್ರ ಎಂಬ ಹೆಸರು. ಇದೂ ಶ್ರೀಕಾಶಿಯ ಒಂದು ಹೆಸರೇ. ಶ್ರೀರಾಮೋತ್ತರ ತಾಪಿನಿಯಲ್ಲಿ ಅತ್ರಿಮಹರ್ಷಿಗಳು ಯಾಜ್ಞವಲ್ಕ್ಯರಿಗೇ ಕೇಳಿದ್ದುವುಂಟು. ಈ ಅನಂತ ಅವ್ಯಕ್ತ ಪರಿಪೂರ್ಣಾನಂದೈಕ ಚಿದಾತ್ಮನನ್ನು ನಾನು ಹೇಗೆ ತಾನೇ ತಿಳಿಯುವುದಪ್ಪ. ಅದಕ್ಕೆ ಯಾಜ್ಞವಲ್ಕ್ಯರು ಹೇಳಿದ್ದೇನೆಂದರೆ ಸಹೋವಾಚ ಯಾಜ್ಞವಲ್ಕ್ಯಃ ಸೋವಿಮುಕ್ತ ಉಪಾಸ್ಯಃ ಆ ಪರಮಾತ್ಮನನ್ನು ಅವಿಮುಕ್ತ (ಕಾಶೀ)ಕ್ಷೇತ್ರದಲ್ಲಿ ಉಪಾಸಿಸಬೇಕು.
ಯ ಏಷ್ಯೋನಂತೋ ವ್ಯಕ್ತ ಆತ್ಮಾವಿಮುಕ್ತೇ ಪ್ರತಿಷ್ಠಿತ ಇತಿ. ಈ ಯಾವ ಅನಂತ ಅವ್ಯಕ್ತ ಕ್ಷೇತ್ರದಲ್ಲಿರುವವನು. ಮುಂದೆ ಈ ಅವಿಮುಕ್ತಕ್ಷೇತ್ರ ಎಲ್ಲಿರುವುದೆಂದು ಕೇಳಿದಾಗ, ಜನ್ಮಜನ್ಮಾಂತರ ದೋಷಗಳನ್ನು ಹೋಗಲಾಡಿಸುವ ವರಣೆ ಎಂತಲೂ ಎಲ್ಲ ಇಂದ್ರಿಯಕೃತ ಪಾಪಗಳನ್ನು ಹೋಗಲಾಡಿಸುವ ನಾಶೀ ಎಂತಲೂ ಇರುವ ಈ ಎರಡು ಹೊಳೆಗಳ ಮಧ್ಯೆ ಇರುವುದೆಂದು ಹೇಳಿ, ಎರಡು ನ್ಯಾಸಾ ಪುಟದಿಂದ ಮೇಲಕ್ಕೆ ಹೋದ ಇಡಾಪಿಂಗಳ ನಾಡಿಗಳೇ ದೇಹದಲ್ಲಿ ವಾರಣಾನಾಶೀನದಿಗಳೆಂತಲೂ ಇವುಗಳ ಮಧ್ಯದಲ್ಲಿರುವ ಭ್ರೂಮಧ್ಯವೇ ಶ್ರೀಕಾಶಿ ಎಂತಲೂ ಈ ಜೀವ ಪರಮರ ಐಕ್ಯಗೊಳಿಸುವ ಸಂಧಿಯನ್ನೇ ಬ್ರಹ್ಮಜ್ಞಾನಿಗಳು ಉಪಾಸಿಸುವವರೆಂತಲೂ ತಿಳಿಸಿರುವರು. ಭ್ರೂಮಧ್ಯದಲ್ಲಿ ಮಾಡಿದ ಉಪಾಸನೆಯಿಂದ ಆತ್ಮಜ್ಞಾನವಾಗಿ ಉಪಾಸಕನು ಆ ಅನಂತ, ಅವ್ಯಕ್ತ ಆನಂದಘನ ಪರಮಾತ್ಮನೇ ಆಗುವನೆಂದು ಅಭಯಕೊಟ್ಟಿರುವರು. ಈ ಎಲ್ಲ ಭಾಗಗಳು ರಾಮಭಕ್ತರ ಕಂಠಪಾಠವಿರತಕ್ಕವುಗಳಾಗಿವೆ.
ಈ ಭ್ರೂಮಧ್ಯಕ್ಕೆ ಶ್ರೀಕಾಶೀ ಕ್ಷೇತ್ರ. ಎಂದು ಹೆಸರು ಇರುವಂತೆ ಇಲ್ಲಿ ಭಾಗೀರಥಿಯೇ ಇಡಾ ಎಂಬ ವಾಮ ನಾಸಾಪುಟದ ನಾಡಿ, ಯಮುನೆಯೇ ಪಿಂಗಳ ಎಂಬ ದಕ್ಷಿಣ ನಾಸಾಪುಟದ ನಾಡಿ ಮತ್ತು ಇವುಗಳ ಮಧ್ಯದಲ್ಲಿರುವ ಸರಸ್ವತಿಯೇ ಸುಷುಮ್ನಾ ನಾಡಿ ಈ ಮೂವರ ಸಂಗಮ ಇಲ್ಲಿ ಆಗಿರುವುದರಿಂದ ತ್ರಿವೇಣಿಸಂಗಮ ಇಲ್ಲಿ ಆಗಿರುವುದರಿಂದ ತ್ರಿವೇಣಿ ಸಂಗಮ ಎಂತಲೂ ಒಂದು ಹೆಸರಿದೆ. ತ್ರಿಕೂಟಾಚಲ ಎನ್ನುವುದಾಗಿಯೂ ಇದಕ್ಕೆ ಹೇಳುವರು. ಅಂತೂ ಇನ್ನೂ ಹಲವು ಹೆಸರುಗಳಿಂದ ಕರೆಯಲ್ಪಡುವ ಇದೊಂದು ದೇಹದಲ್ಲಿರುವ ಪರಮಾತ್ಮನ ವಾಸ್ತವ್ಯದ ಪುಣ್ಯಪಾವನ ಮಹಾನ್ ಕ್ಷೇತ್ರವಾಗಿರುವುದೇನ್ನುವುದೇನೋ ನಿಜ.
ತದಾಭ್ಯಾಸಾದಖಂಡ ಮಂಡಲಾಕಾರ ಜ್ಯೋತಿರ್ದೃಶ್ಯತೇ ಇಲ್ಲಿ ದೃಷ್ಟಿ ಬಲಿತರೆ ಅಖಂಡಾಕಾರ ಜ್ಯೋತಿಯ ದರ್ಶನವಾಗುವುದೆಂದು ಮಂಡಲ ಬ್ರಾಹ್ಮಣದಲ್ಲಿ ಹೇಳಿರುವುದು ಈ ಪರಮಾತ್ಮನ ಸ್ಥಳದಲ್ಲಿ ಸಹಜವಾಗಿ ಕಂಡು ಬರಬೇಕಾದ ಪರಮಾತ್ಮನ ಪ್ರಕಾಶ ಏಕೆ ತಾನೇ ಕಾಣುವುದಿಲ್ಲ ಎಂದರೆ ನಾಭಿಯ ಕೆಳಭಾಗದಲ್ಲಿ ಅಧೋಮುಖವಾಗಿದ್ದ ಕುಂಡಲಿನಿ ತನ್ನ ಪುಚ್ಛದಿಂದ ಈ ಸ್ಥಳದ ಬಾಗಿಲು ಅಡ್ಡಗಟ್ಟಿದೆ. ಅದನ್ನು ಪ್ರಾಣಾಯಾಮದ ಮುದ್ರೆಗಳ ಬಂಧಗಳ ಅಭ್ಯಾಸದಿಂದ ತೆರೆಯಬೇಕು. ಕೆಳಗಿನಿಂದ ಬ್ರಹ್ಮರಂಧ್ರದ ಬದಿಗೆ ಈ ಸಾಧನಗಳಿಂದ ಜಾಗೃತವಾಗಿ ಹೋಗಬೇಕಾದರೆ ತನ್ನಷ್ಟಕ್ಕೆ ಪುಚ್ಛದ ಅಡ್ಡಕಟ್ಟು ಬಿಟ್ಟು ಹೋಗುವುದೆಂದು ಯೋಗಶಾಸ್ತ್ರ ಉಪಾಯವನ್ನು ಹೇಳುವುದು ಶಕ್ತಿಚಾಲನೆ ಎಂದು ಕುಂಡಲನಿಯನ್ನು ಜಾಗೃತಗೊಳಿಸುವ ಒಂದು ಅಭ್ಯಾಸವಿದೆ.
ಶ್ರೀರಾಮ ಉತ್ತರತಾಪಿನಿಯು ಭ್ರೂಮಧ್ಯದಲ್ಲಿ ಪರಮಾತ್ಮನ ಧ್ಯಾನಪೂರ್ವಕ ಶ್ರೀರಾಮಮಂತ್ರಸ್ಮರಣೆ ಮಾಡುವುದರಿಂದ ಕುಂಡಲಿನಿಯ ಉತ್ಥಾನ ತಾನಾಗಿಯೇ ಆಗುವುದೆಂದು ಹೇಳುವುದು. `ಭ್ರೂವೋರ್ಮಧ್ಯಗತಾ ದೃಷ್ಟಿರ್ಮುಕ್ರಾ ಭವತಿ ಖೇಚರಿ ಭ್ರೂಮಧ್ಯ ದೃಷ್ಟಿ ಇಟ್ಟರೆ ಇದು ಖೇಚರೀ ಮುದ್ರೆ ಎನಿಸುವುದು. ಇಲ್ಲಿ ದೃಷ್ಟಿ ಇಟ್ಟರೆ ಪ್ರಕಾಶದ ಸಾಕ್ಷತ್ಕಾರವಾಗುವುದರಿಂದ ಕಾಶತ ಇತಿ ಕಾಶೀ ಎಂಬ ಹೆಸರು ಬಂದಂತೆ, ಇಲ್ಲಿ ದೃಷ್ಟಿ ಬಲಿತರೆ ಆ ಪ್ರಕಾಶದಲ್ಲಿ ಸಗುಣ ಸಾಕಾರ ಪರಮಾತ್ಮನ ದರ್ಶನ, ಸಿದ್ಧರ ದರ್ಶನಗಳಾಗಿ ಅವರಿಂದ ಆಜ್ಞೆ ಕೇಳಿದ್ದಕ್ಕೆ ಉತ್ತರ ಸಿಗುವುದರಿಂದ ಈ ಭ್ರೂಮಧ್ಯ ಸ್ಥಾನಕ್ಕೆ ಆಜ್ಞಾ ಚಕ್ರ ಎಂದು ಹೇಳುವರು. ಇಲ್ಲಿ ದ್ವಿದಳ ಕಮಲವಿದೆ.
ರಾಮ ಎಂಬ ಅಕ್ಷರಗಳು ಎರಡೇ, ಇಲ್ಲಿಯ ಧ್ಯಾನದ ಮಹತ್ತ್ವ ಅಂತೂ ಬಹಳವಾಗಿ ಹೊಗಳಿದ್ದಾರೆ. ಆನಂದೋಬ್ರಹ್ಮ ಆನಂದದ ಧ್ಯಾನವೆಂದರೆ ಬ್ರಹ್ಮರೂಪದ ಧ್ಯಾನವಾಯಿತು. ಆದರೆ ಗೊತ್ತು ಗುರಿ ಇಲ್ಲದೆ ಧ್ಯಾನ ಮಾಡುವುದು ಹೇಗೆಂದರೆ `ಶುಕ್ಲ ತೇಜೋಮಯಂ ಬ್ರಹ್ಮ ಎಂದು ಹೇಳಿ, ಆ ಬ್ರಹ್ಮಾನಂದ ಬೆಳದಿಂಗಳಿನ ಪ್ರಕಾಶದಂತಿದೆ. ಹೇಗೋ ಬೆಳದಿಂಗಳು ನೋಡಿ ಅಭ್ಯಾಸವಿರುವುದು. ಅದರಂತೆ ಆನಂದದ ಪ್ರಕಾಶವಿದೆಂದು ಆನಂತ ಪರಮಾತ್ಮನ ಧ್ಯಾನ ಮಾಡಿ ಎನ್ನುವುದಾಗಿ ಉಪನಿಷತ್ತು ತಿಳಿಸುವುದು.
`ಚಿತ್ಸ್ವರೂಪೋಹಮಿತಿ ಸದಾ ಭಾವಯನ್ಸಮ್ಯಜ್ನಮೀಲಿತಾಕ್ಷೆವಾ ಕೀಂಚಿದ್ಮುನೀಲಿತಾಕ್ಷೆವ ಅಂತರ್ದೃಷ್ಟ್ಯಾ ಭ್ರದಹರಾದುಪರಿ ಸಚ್ಚಿದಾನಂದ ತೇಜಃ ಕೂಟರೂಪಃ ಪರಬ್ರಹ್ಮಾವಲೋಕಯನ್ ತದ್ರೂಪ್ರೋಭವತಿಃ ನಾನು ಚಿದ್ರೂಪ ಎಂದರೆ ಕೇವಲ ಜ್ಞೇಯಶೂನ್ಯ ಜ್ಞಾನರೂಪನೆಂದು ಯಾವಾಗಲೂ ಭಾವಿಸುತ್ತ ಕಣ್ಣು ಪೂರ್ಣಮುಚ್ಚಿ ಅಥವಾ ಸ್ವಲ್ಪ ತೆರೆದು ಅಂತರ್ದೃಷ್ಟಿಯಿಂದ ಬೆಳದಿಂಗಳಿನ ಪ್ರಕಾಶದಂತಿರುವ ಬ್ರಹ್ಮಾನಂದ ರೂಪಿಯಾದ ಶ್ರೀರಾಮಧ್ಯಾನ ಭ್ರೂಮಧ್ಯದ ಸ್ವಲ್ಪ ಮೇಲಿನ ಬದಿಗೆ ಮಾಡಿದರೆ ಇದು ನಿರ್ಗುಣಧ್ಯಾನವಾಗುವುದು. ಈ ಪ್ರಕಾಶದಿಂದ ಎರಕವಾಗಿ ಶ್ರೀರಾಮ ಪಂಚಾಯತನದ ಆ ಪ್ರಕಾಶದಲ್ಲಿ ಧ್ಯಾನ ಮಾಡಿದರೆ ಅದು ಸಗುಣಧ್ಯಾನ ಶ್ರೀರಾಮನ ಶಾಂತ ಮುಖಾರವಿಂದದಲ್ಲಿ ಬೆಳಗುವ, ಕೃಪಾಪೂರ್ಣವಾಗಿ ಹೊರಸೂಸುವ ನಸುನೆಗೆಯಲ್ಲಿ ಪ್ರಕಟವಾಗುತ್ತಿರುವ ಆ ಅನಂತ ಆನಂದದ ನಿಶ್ಚಲ ಬೆಳದಿಂಗಳಿನ ಪ್ರಕಾಶದ ಧ್ಯಾನದಂತೆ ಮಾಡಬೇಕು. ಇದಾಯಿತು ಧ್ಯಾನದ ಕ್ರಮ.
ರಾಮತಾರಕ ಮಂತ್ರದ ಮಹತ್ವ:
ಬಹಳ ಜನ ನಾಮಕ್ಕೂ ರೂಪಕ್ಕೂ ಏನು ವ್ಯತ್ಯಾಸ ಎಂದು ಕೇಳುತ್ತಾರೆ. ರೂಪ ಕಣ್ಣಿಗೆ ಕಾಣುತ್ತೆ. ಮನಸು ಅದರಲ್ಲಿ ಲೀನವಾಗಿ ಬಿಡುವುದಿಲ್ಲ, ಬದಲಾಗಿ ತರ್ಕಕ್ಕೆ ನಿಲ್ಲುತ್ತದೆ. ವೇದಗಳ ಅರಿವು ಕೂಡ ಹಾಗೆ ಜ್ಞಾನದ ಮೂಲಕ ತರ್ಕಕ್ಕೆ ನಿಲ್ಲುತ್ತದೆ. ಆದರೆ ನಾಮ ಹಾಗಲ್ಲ, ನೇರವಾಗಿ ಮನಸ್ಸಿನೊಳಗೆ ಹೋಗುತ್ತದೆ. ಜೊತೆಗೆ ಸಕಲರಿಗೂ ನಿಲುಕುತ್ತದೆ. ಇದರ ಉಪದೇಶವನ್ನು ಸಾಧಕರಿಂದ ಪಡೆಯಬೇಕು. ನಾಮದಲ್ಲಿಯೇ ನಿಲ್ಲುವುದು ಸಾಧ್ಯವಾದರೆ ಚಿತ್ರ ನಿರ್ಮಲವಾಗುತ್ತಾ ಬರುತ್ತದೆ. ಇದನ್ನು ಎಷ್ಟು ಸಲ ಜಪಿಸಬೇಕು. ಹೇಗೆ ಮಂಗಳವನ್ನು ಮಾಡಬೇಕು ಎಂಬ ಕ್ರಮವಿಲ್ಲ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ರಾಮನಾಮವನ್ನು ಜಪಿಸಬೇಕು. ಅದು ಕಂಠದಲ್ಲಿ ನಿಲ್ಲದೆ ಮನಸ್ಸಿನೊಳಗೆ ಇಳಿಯಬೇಕು. ದೇಹದ ಕಣ ಕಣಗಳಲ್ಲೂ ಮಿಡಿಯಬೇಕು. ಆಗ ನಾಮಸಂಕೀರ್ತನೆ ಸಾರ್ಥಕವಾಗುತ್ತದೆ. ರೂಪ ಮೊದಲೇ ನಾಮ ಮೊದಲೇ ಎಂಬ ತರ್ಕವನ್ನು ಮಾಡುವವರಿದ್ದಾರೆ. ನನ್ನ ಮಟ್ಟಿಗೆ ನಾಮವೇ ಮೊದಲು. ಇಡೀ ಜಗತ್ತು ಹುಟ್ಟಿದ್ದು ನಾಮದಿಂದ, ಅದು ಓಂಕಾರ, ರಾಮನಾಮವೂ ಅದರಿಂದಲೇ ರೂಪ ತಳೆದಿದೆ. ರೂಪಕ್ಕೆ ಭೇದವಿದೆ. ನಾಮಕ್ಕೆ ಭೇದವಿಲ್ಲ, ಇದು ಎಲ್ಲಾ ಧರ್ಮದವರಿಗೂ ಎಲ್ಲಾ ಭಾಗದವರಿಗೂ ಲಭಿಸುವ ತವನಿಧಿ. ನಾಮಕ್ಕೆ ಋಷಿ ಛಂದಸ್ಸನ್ನು ಏಕೆ ಹೇಳುವುದಿಲ್ಲ. ಎಂದು ಕೇಳುವವರಿದ್ದಾರೆ. ನಾಮವು ಮಾನವ ರೂಪಿತವಲ್ಲ, ತರ್ಕಕ್ಕೆ ನಿಲುಕುವಂತಹದಲ್ಲ ; ಅನುಭವದಿಂದಲೇ ಕಂಡು ಕೊಳ್ಳಬೇಕಾದದ್ದು. (ಸಂಗ್ರಹ: ಗೊಂದಾವಲಿ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post