ಕಲ್ಪ ಮೀಡಿಯಾ ಹೌಸ್
ರಾಜ್ಯ ರಾಜಕಾರಣ ಧ್ರುವೀಕರಣದ ಹೊಸ್ತಿಲು ತುಳಿದಿದೆ. ಕೊರೋನಾ ಸಂಕಟದ ನಡುವೆ ಮೂರು ರಾಜಕೀಯ ಪಕ್ಷಗಳು ಬಡಿದಾಡುತ್ತಿರುವ ರೀತಿ ಇದಕ್ಕೆ ಸಾಕ್ಷಿ.
ಅಂದ ಹಾಗೆ ಕೊರೋನಾ ಕಾಲಘಟ್ಟದ ಸಂಕಟವನ್ನು ಎದುರಿಸಲು ಒದ್ದಾಡುತ್ತಿರುವ ಬಿಜೆಪಿ ಸರ್ಕಾರ ತನ್ನ ಇಮೇಜ್ ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದರೆ,ಬಿಜೆಪಿಯ ಸೊಂಟಕ್ಕೆ ಬಾರಿಸಲು ಇದೇ ತಕ್ಕ ಸಮಯ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ.
ಅದರಲ್ಲೂ ಮುಖ್ಯವಾಗಿ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ತಮ್ಮೆದುರು ಸೃಷ್ಟಿಯಾಗುತ್ತಿರುವ ಯಾವ ಅವಕಾಶಗಳನ್ನೂ ಬಿಡದೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದರೆ,ಸಿದ್ಧರಾಮಯ್ಯ ಅವರನ್ನು ಕಟ್ಟಿ ಹಾಕುವುದೇ ತನ್ನ ಗುರಿ ಎಂಬಂತೆ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದೆ.
ಕೊರೋನಾ ಸಮಸ್ಯೆಯನ್ನು ಎದುರಿಸುವ ವಿಷಯದಲ್ಲಿ ಯಡಿಯೂರಪ್ಪ ಸರ್ಕಾರ ಎಡವಿದ್ದು ನಿಜ.ಹಾಗಂತ ಅದನ್ನು ಸಂಪೂರ್ಣ ವೈಫಲ್ಯ ಎನ್ನಲಾಗದು. ಯಾಕೆಂದರೆ ಕೊರೋನಾ ಹೊಡೆತಕ್ಕೆ ಜಗತ್ತಿನ ಘಟಾನುಘಟಿ ರಾಷ್ಟ್ರಗಳೇ ತತ್ತರಿಸಿವೆ.ಹೀಗಿರುವಾಗ ಯಡಿಯೂರಪ್ಪ ಅವರ ಸರ್ಕಾರ ಕೊರೋನಾ ವಿರುದ್ಧ ದೊಡ್ಡ ಗೆಲುವು ಸಾಧಿಸಬೇಕಿತ್ತು ಎಂದು ನಿರೀಕ್ಷಿಸುವುದು ಕಷ್ಟ.
ಅದೇ ರೀತಿ ಕೊರೋನ ಸೋಂಕನ್ನು ಎದುರಿಸುವ ವಿಷಯದಲ್ಲಾದ ವೈಫಲ್ಯವನ್ನು ಸಹಜ ಎಂದೂ ಬಿಜೆಪಿ ಸರ್ಕಾರ ಭಾವಿಸುವುದು ತಪ್ಪು. ಯಾಕೆಂದರೆ ಇದರಿಂದ ನೋವು,ಹಾನಿ ಅನುಭವಿಸಿದವರ ಸಿಟ್ಟು ಸರ್ಕಾರದ ಹೆಗಲಿಗೇರುತ್ತದೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿರುವುದು ನಿಜ.ಮತ್ತು ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿರುವುದೂ ನಿಜ.
ಆದರೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ಕದನವನ್ನು ಜೆಡಿಎಸ್ ಸ್ವೀಕರಿಸಿರುವ ಮತ್ತು ವರ್ತಿಸುತ್ತಿರುವ ರೀತಿ ಕುತೂಹಲಕಾರಿಯಾಗಿದೆ.ಮತ್ತು ಇದೇ ಅಂಶ ಕರ್ನಾಟಕದ ರಾಜಕಾರಣ ಧ್ರುವೀಕರಣದ ಹೊಸ್ತಿಲು ತುಳಿದಿದೆ ಎಂಬುದನ್ನು ಸಾಬೀತು ಪಡಿಸುವಂತಿದೆ.
ಯಾಕೆಂದರೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಏಕಕಾಲಕ್ಕೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಟೀಕಿಸುತ್ತಾ,ಸರ್ಕಾರ ಏನು ಮಾಡಬೇಕು ಎಂಬ ಬಗ್ಗೆ ಸಲಹೆ ಕೊಡುತ್ತಾರೆ. ಮತ್ತೊಂದೆಡೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿ ಬಿದ್ದಿರುವ ಕಾಂಗ್ರೆಸ್ ಮೇಲೇ ತಿರುಗಿ ಬಿದ್ದು;ಉರಿಯುವ ಮನೆಯಲ್ಲಿ ಗಳ ಹಿರಿಯಬೇಡಿ ಎನ್ನುತ್ತಾರೆ.
ವಸ್ತುಸ್ಥಿತಿ ಎಂದರೆ ರಾಜ್ಯ ಸರ್ಕಾರ ಮಿತಿ ಮೀರಿ ತನ್ನ ಶಕ್ತಿ ಕಳೆದುಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಬಯಸುತ್ತಿದ್ದಾರೆ. ಯಾಕೆಂದರೆ ಸರ್ಕಾರದ ಶಕ್ತಿ ಹಾಗೆ ಕುಸಿದರೆ ಸಹಜವಾಗಿಯೇ ರಾಜ್ಯದ ಜನ ಕಾಂಗ್ರೆಸ್ಸೇ ಪರ್ಯಾಯ ಶಕ್ತಿ ಎಂಬ ಲೆಕ್ಕಾಚಾರಕ್ಕೆ ಬರುತ್ತಾರೆ.ಹಾಗಾದಾಗ ಮಾತ್ರ ನಾವು ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯ ಎಂಬುದು ಸಿದ್ದರಾಮಯ್ಯ ನಂಬಿಕೆ.
ಮುಂದಿನ ಚುನಾವಣೆಯ ನಂತರ ನಾವು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಬೇಕು ಎಂದರೆ ಯಾವ ಕಾರಣಕ್ಕೂ ಅತಂತ್ರ ಫಲಿತಾಂಶ ಬರಬಾರದು ಎಂದವರು ಬಯಸುತ್ತಾರೆ. ಕಳೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದಕ್ಕೆ ತಾನೇ ಕಾಂಗ್ರೆಸ್ ಪಕ್ಷ ಜೆಡಿಎಸ್ ಜತೆ ಕಾಡಿ,ಬೇಡಿ ಹೊಂದಾಣಿಕೆ ಮಾಡಿಕೊಂಡಿದ್ದು?ಅಂತಹ ದಾರುಣ ಸ್ಥಿತಿ ಪುನರಾವರ್ತನೆ ಆಗಬಾರದು ಎಂದವರು ಹಪಹಪಿಸುತ್ತಿದ್ದಾರೆ.
ಆದರೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಲೆಕ್ಕಾಚಾರ ಭಿನ್ನವಾಗಿದೆ. ಅವರಿಗೆ ಕರ್ನಾಟಕದಲ್ಲಿ ಬಿಜೆಪಿಯೇ ಆಗಲಿ,ಕಾಂಗ್ರೆಸ್ ಪಕ್ಷವೇ ಆಗಲಿ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯುವಂತೆ ಆಗಬಾರದು. ಬದಲಿಗೆ ಅತಂತ್ರ ಫಲಿತಾಂಶ ಬಂದು ಸರ್ಕಾರ ಮಾಡಬಯಸುವವರು ಜೆಡಿಎಸ್ ಸಖ್ಯಕ್ಕೆ ಹಾತೊರೆಯಬೇಕು.
ಆದರೆ ಬಿಜೆಪಿ ಸರ್ಕಾರದ ಸಧ್ಯದ ಸ್ಥಿತಿ ನೋಡಿದರೆ ಅದು ಆಕ್ಸಿಜನ್ನಿಗೆ ಕಾತರಿಸುತ್ತಿರುವ ಪೇಷಂಟಿನ ತರ ಆಗಿದೆ.
ಅದು ಕೊರೋನಾ ಎದುರಿಸುವ ವಿಷಯ ಮಾತ್ರವಲ್ಲ,ಅದರ ಆಂತರಿಕ ಸ್ಥಿತಿಯೇ ಮನೆಯೊಂದು ಮೂರು ಬಾಗಿಲು ಎಂಬಂತಾಗಿ ಹೋಗಿದೆ. ಬಿಜೆಪಿ ವರಿಷ್ಟರಿಗೀಗ ಯಡಿಯೂರಪ್ಪ ಸಾಕಾಗಿದ್ದಾರೆ.ಸಧ್ಯದ ಸಂಕಟ ಅವರನ್ನು ಕೆಲ ಕಾಲ ಉಳಿಸಬಹುದು.ಆದರೆ ಬಹುಕಾಲ ಅವರು ಮುಂದುವರಿಯಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಇದೆ.
ಈ ಸ್ಥಿತಿಯನ್ನು ಬಳಸಿಕೊಂಡು ಮುಂದಿನ ಮುಖ್ಯಮಂತ್ರಿಯಾಗಲು ಕನಿಷ್ಟ ಅರ್ಧ ಡಜನ್ ನಾಯಕರು ಸತತ ಪ್ರಯತ್ನ ನಡೆಸಿದ್ದಾರೆ. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ಪ್ರಹ್ಲಾದ ಜೋಷಿ, ಬಸವರಾಜ ಬೊಮ್ಮಾಯಿ ಈ ರೇಸಿನಲ್ಲಿದ್ದರೆ ಕಂದಾಯ ಸಚಿವ ಅಶೋಕ್ ಕೂಡಾ ಆದ್ರೆ ನೀನು,ಇಲ್ಲಾಂದ್ರೆ ನಾನು ಅಂತ ಬಸವರಾಜ ಬೊಮ್ಮಾಯಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.
ನಾಯಕತ್ವಕ್ಕಾಗಿ ನಡೆಯುತ್ತಿರುವ ಈ ಸ್ಪರ್ಧೆ ರಾಜ್ಯ ಬಿಜೆಪಿಯಲ್ಲಿ ಒಂದು ಅಯೋಮಯ ವಾತಾವರಣವನ್ನು ಸೃಷ್ಟಿಸಿದೆಯಲ್ಲದೆ ಬಿಜೆಪಿ ಕುಸಿಯುವುದು ನಿಶ್ಚಿತ ಎಂಬ ಭಾವನೆಯನ್ನು ಮೂಡಿಸಿದೆ. ಹೀಗಾಗಿ ಕಮಲ ಪಾಳೆಯದಲ್ಲೀಗ ಒಂದು ವಾದ ಕಾಣಿಸಿಕೊಂಡಿದೆ. ಅದೆಂದರೆ ಯಡಿಯೂರಪ್ಪ ಮುಂದುವರಿದರೂ ಕಷ್ಟ,ಅವರ ಜಾಗಕ್ಕೆ ಯಾರು ಬಂದರೂ ನಷ್ಟ ಎಂಬುದು.
ಇದರ ನಡುವೆ ಕಣ್ಣಿಗೆ ರಾಚುತ್ತಿರುವ ಆಡಳಿತ ವೈಫಲ್ಯವೇ ತನಗೆ ಜೀವನ್ ಟೋನ್ ಇದ್ದಂತೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ.
ಬಿಜೆಪಿಯ ಈ ವೈಫಲ್ಯದ ಜತೆ ನಾಯಕತ್ವದ ವಿಷಯ ಏಳಿಸುವ ಸುನಾಮಿ ಕಾಂಗ್ರೆಸ್ ಗೆ ಬಂಪರ್ ಕೊಡುಗೆ ನೀಡುತ್ತದೆ ಎಂದವರು ಭಾವಿಸಿದ್ದಾರೆ.
ಅಂದ ಹಾಗೆ ಬಿಜೆಪಿಯಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಕದನ ತಾರ್ಕಿಕ ಅಂತ್ಯ ತಲುಪಿದರೆ ಕೆಪಿಸಿಸಿಯ ಉನ್ನತ ಸ್ಥಾನದಲ್ಲಿ ಲಿಂಗಾಯತ ನಾಯಕ ಎಂ.ಬಿ.ಪಾಟೀಲರನ್ನು ತಂದು ಕೂರಿಸುವ ಒಳ ಲೆಕ್ಕಾಚಾರ ಅವರದು. ಯಾಕೆಂದರೆ ಸಧ್ಯದ ರಾಜಕೀಯ ಸನ್ನಿವೇಶ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಕೈ ಜೋಡಿಸುವಂತೆ ಮಾಡಬಹುದು.ಹಾಗಾದಾಗ ಒಕ್ಕಲಿಗ ಮತದಾರರು ಕಾಂಗ್ರೆಸ್ ಜತೆ ನಿಲ್ಲುವುದು ಕಷ್ಟ.
ಹೀಗೆ ಡಿ.ಕೆ.ಶಿವಕುಮಾರ್ ಅವರಿದ್ದರೂ ಒಕ್ಕಲಿಗ ಮತ ಬ್ಯಾಂಕ್ ನ ಮೇಜರ್ ಷೇರು ಕಾಂಗ್ರೆಸ್ ಗೆ ಬರುವುದಿಲ್ಲ ಎನ್ನುವುದಾದರೆ,ಒಂದು ವೋಟ್ ಬ್ಯಾಂಕನ್ನು ಸೆಳೆಯಬಲ್ಲ ಎಂ.ಬಿ.ಪಾಟೀಲರು ಕೆಪಿಸಿಸಿಯ ಉನ್ನತ ಸ್ಥಾನಕ್ಕೆ ಬರುವುದು ಒಳ್ಳೆಯದು ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರ.
ವಾಸ್ತವ ಸಂಗತಿ ಎಂದರೆ ದಿನೇಶ್ ಗುಂಡೂರಾವ್ ಅವರನ್ನು ಬದಲಿಸಲು ಕಾಂಗ್ರೆಸ್ ವರಿಷ್ಟರು ನಿರ್ಧರಿಸಿದರಲ್ಲ?ಅವತ್ತು ಭವಿಷ್ಯದ ನಾಯಕ ಯಾರಾಗಬೇಕು ಎಂಬ ಬಗ್ಗೆ ತಮ್ಮ ಕೈಲಿದ್ದ ಬ್ಲೂಪ್ರಿಂಟನ್ನು ಸಿದ್ಧರಾಮಯ್ಯ ಅವರು ವರಿಷ್ಟರಿಗೆ ನೀಡಿದ್ದರು. ಅದರ ಪ್ರಕಾರ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲರನ್ನು ಅಧ್ಯಕ್ಷ ಸ್ಥಾನಕ್ಕೆ ತಂದರೆ ಭವಿಷ್ಯದಲ್ಲಿ ನಾವು ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ಹೇಳಿದ್ದರು.
ಇವತ್ತು ಯಡಿಯೂರಪ್ಪ ಸಿಎಂ ಆಗಿದ್ದರೂ ಅವರನ್ನು ಬಹುಕಾಲ ಬಿಜೆಪಿ ಹೈಕಮಾಂಡ್ ಮುಂದುವರಿಸುವುದಿಲ್ಲ.ಹೀಗಾಗಿ ಯಡಿಯೂರಪ್ಪ ಇಳಿಯುವ ಕಾಲದಲ್ಲಿ ಕಾಂಗ್ರೆಸ್ ಸೈನ್ಯದ ಮುಂದೆ ಲಿಂಗಾಯತ ನಾಯಕರಿದ್ದರೆ ಪರಿಸ್ಥಿತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳಬಹುದು ಎಂಬುದು ಈ ಬ್ಲೂ ಪ್ರಿಂಟ್ ನಲ್ಲಿದ್ದ ವಿವರ. ಆದರೆ ಕಾಂಗ್ರೆಸ್ ವರಿಷ್ಟರು ತಮ್ಮದೇ ಲೆಕ್ಕಾಚಾರಗಳಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದರು.
ಈ ಬೆಳವಣಿಗೆ ಸಿದ್ಧರಾಮಯ್ಯ ಅವರಿಗೆ ಪಥ್ಯವಾಗಲಿಲ್ಲ.ಇವತ್ತಿಗೂ ಅದು ಪಥ್ಯವಾಗಿಲ್ಲ.ಇಂತಹ ಸಂದರ್ಭದಲ್ಲೇ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಸಾಧಿತವಾಗುವ ಸಾಧ್ಯತೆಗಳನ್ನು ಕಂಡಿರುವ ಸಿದ್ಧರಾಮಯ್ಯ ಹಳೆಯ ಬ್ಲೂ ಪ್ರಿಂಟನ್ನೇ ಪರಿಷ್ಕರಿಸಿ ವರಿಷ್ಟರಿಗೆ ಕಳಿಸಿಕೊಟ್ಟಿದ್ದಾರೆ.
ಲಿಂಗಾಯತ ಪ್ಲಸ್ ಅಹಿಂದ ಮತದಾರರನ್ನು ಕ್ರೋಢೀಕರಿಸಿಕೊಂಡರೆ ಮಾತ್ರ ಮುಂದಿನ ಚುನಾವಣೆಯಲ್ಲಿ ನಾವು ಸ್ವಯಂಬಲದ ಮೇಲೆ ಗೆಲ್ಲಲು ಸಾಧ್ಯ ಎಂಬ ಅವರ ಮಾತನ್ನು ಸಾರಾಸಗಟಾಗಿ ತಿರಸ್ಕರಿಸುವ ಸ್ಥಿತಿಯಲ್ಲಿ ಕೈ ಪಾಳೆಯದ ವರಿಷ್ಟರೂ ಇಲ್ಲ. ಅಂದ ಹಾಗೆ ಚುನಾವಣೆಗಳು ಹತ್ತಿರ ಇರುವಾಗ ಕೆಪಿಸಿಸಿ ಅಧ್ಯಕ್ಷರಾದವರು ಬದಲಾದ ನಿದರ್ಶನ ಕಣ್ಣ ಮುಂದೇ ಇದೆ.
1999 ರ ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರವಾಯಿತು ಎಂದಾಗ ಕಾಂಗ್ರೆಸ್ ವರಿಷ್ಟರು,ಆ ಜಾಗದಲ್ಲಿದ್ದ ಧರ್ಮಸಿಂಗ್ ಅವರನ್ನು ಬದಲಿಸಿ ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಅವರನ್ನು ತಂದು ಕೂರಿಸಿದ್ದರು. ಗಮನಿಸಬೇಕಾದ ಸಂಗತಿ ಎಂದರೆ ಧರ್ಮಸಿಂಗ್ ಅವರೇನೂ ದುರ್ಬಲ ಅಧ್ಯಕ್ಷರಾಗಿರಲಿಲ್ಲ.ರಾಮನಗರ,ಮೊಳಕಾಲ್ಮೂರು ಸೇರಿದಂತೆ ಅವತ್ತು ವಿವಿಧ ಕ್ಷೇತ್ರಗಳಿಗೆ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ನೋಡಿಕೊಂಡಿದ್ದರು.
ಅವತ್ತಿನ ಮಟ್ಟಿಗೆ ಈ ಉಪಚುನಾವಣೆಗಳನ್ನು ಸೆಮಿಫೈನಲ್ ಎಂದು ಬಣ್ಣಿಸಲಾಗಿತ್ತು. ಆದರೆ 1999 ರ ವಿಧಾನಸಭಾ ಚುನಾವಣೆ ಹತ್ತಿರವಾದಾಗ,ಮತ್ತು ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟದ ಹೆಸರಿನಲ್ಲಿ ಲಿಂಗಾಯತ ಶಕ್ತಿ ಒಗ್ಗೂಡಿದಾಗ ಇದಕ್ಕೆ ಪರ್ಯಾಯವಾಗಿ ಒಕ್ಕಲಿಗ ಪ್ಲಸ್ ಅಹಿಂದ ಮತಬ್ಯಾಂಕ್ ಗಳನ್ನು ಕ್ರೋಢೀಕರಿಸಲು ಕಾಂಗ್ರೆಸ್ ವರಿಷ್ಟರು ಬಯಸಿದರು.
ಧರ್ಮಸಿಂಗ್ ಅವರು ಎಸ್.ಎಂ.ಕೃಷ್ಣ ಅವರಿಗಾಗಿ ಜಾಗ ತೆರವು ಮಾಡಬೇಕಾಗಿ ಬಂದಿದ್ದಕ್ಕೆ ಇದೇ ಮುಖ್ಯ ಕಾರಣ. ಈಗ ಮತ್ತೆ ಇತಿಹಾಸ ಮರುಕಳಿಸುತ್ತಿದೆ ಎಂಬುದು ಸಿದ್ಧರಾಮಯ್ಯ ಅವರ ಮುನ್ಸೂಚನೆ.ಬಿಜೆಪಿ-ಜೆಡಿಎಸ್ ಹೆಸರಿನಲ್ಲಿ ಒಕ್ಕಲಿಗ ಮತಗಳು ಕ್ರೋಢೀಕರಣಗೊಳ್ಳುವುದು ನಿಶ್ಚಿತವಾದಾಗ ನಾವು ಲಿಂಗಾಯತ ಪ್ಲಸ್ ಅಹಿಂದ ಸೂತ್ರಕ್ಕೆ ಅಂಟಿಕೊಳ್ಳುವುದು ಅನಿವಾರ್ಯ ಎಂಬುದು ಅವರ ಲೆಕ್ಕಾಚಾರ.
ಸಿದ್ಧರಾಮಯ್ಯ ಅವರ ಈ ಲೆಕ್ಕಾಚಾರ ಗೊತ್ತಿರುವುದರಿಂದ ಬಿಜೆಪಿಯ ವರಿಷ್ಟರೂ ಜೆಡಿಎಸ್ ಜತೆಗಿನ ಸಂಬಂಧವನ್ನು ಒಳಗಿಂದೊಳಗೇ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ನಿಜ ಸಂಗತಿ ಎಂದರೆ ಹಲ ತಿಂಗಳ ಹಿಂದೆಯೇ ಬಿಜೆಪಿಯಲ್ಲಿ ಜೆಡಿಎಸ್ ಅನ್ನು ವಿಲೀನ ಮಾಡಿ.ದೊಡ್ಡ ಆಫರ್ ಗೆ ರೆಡಿಯಾಗಿ ಎಂದು ಬಿಜೆಪಿ ವರಿಷ್ಟರು ಕುಮಾರಸ್ವಾಮಿ ಅವರಿಗೆ ಹೇಳಿದ್ದರು.ಅದರನುಸಾರ ಕುಮಾರಸ್ವಾಮಿ ಕೂಡಾ ಬಿಜೆಪಿಯೊಂದಿಗೆ ವಿಲೀನವಾದರೆ ಒಳ್ಳೆಯದು ಎಂದು ಯೋಚಿಸಿದ್ದರು.
ಸಮ್ಮಿಶ್ರ ಸರ್ಕಾರ ಮಾಡಿದಾಗ ಬಿಜೆಪಿಯಿಂದ ನನಗೆ ತೊಂದರೆ ಆಗಲಿಲ್ಲ,ಆದರೆ ಕಾಂಗ್ರೆಸ್ ನಿಂದ ತೊಂದರೆ ಆಯಿತು ಎಂದು ಕುಮಾರಸ್ವಾಮಿ ಹೇಳತೊಡಗಿದ್ದೇ ಇದಕ್ಕಾಗಿ. ಆದರೆ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದರೆ ಹೇಗೆ ಐಡೆಂಟಿಟಿ ಕಳೆದುಕೊಳ್ಳುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ ನಂತರ ಯೂ ಟರ್ನ್ ಹೊಡೆದ ಕುಮಾರಸ್ವಾಮಿ,ಬೇಕಿದ್ದರೆ ಪರಸ್ಪರ ಕೈ ಜೋಡಿಸೋಣ.ಆದರೆ ವಿಲೀನ ಮಾತ್ರ ಬೇಡ ಎಂದು ಬಿಟ್ಟರು.
ಇದರ ಬೆನ್ನಲ್ಲೇ ರಾಜ್ಯ ಬಿಜೆಪಿಯ ಉಸ್ತುವಾರಿ ನೋಡಿಕೊಂಡಿರುವ ಅರುಣ್ ಸಿಂಗ್ ಕೂಡಾ ಜೆಡಿಎಸ್ ಬಗ್ಗೆ ಉಡಾಫೆಯ ಮಾತನಾಡಿ ಎಲ್ಲವೂ ನಿಂತಲ್ಲೇ ನಿಲ್ಲುವಂತೆ ಮಾಡಿಬಿಟ್ಟರು. ಆದರೆ ಯಾವಾಗ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಮಾತು ಪುನರಾವರ್ತನೆ ಆಗತೊಡಗಿತೋ?ಇದಾದ ನಂತರ ಬಿಜೆಪಿ-ಜೆಡಿಎಸ್ ಮತ್ತಷ್ಟು ಹತ್ತಿರ ಬಂದಿವೆ.
ಪರಿಸ್ಥಿತಿ ಹೀಗಿರುವುದರಿಂದ ಬಿಜೆಪಿ ಜತೆ ಕೈ ಜೋಡಿಸಲು ಇಷ್ಟವಿಲ್ಲದ ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ವಲಸೆ ಹೋಗಲು ತಯಾರಿ ಮಾಡಿಕೊಳ್ಳುತ್ತಿದ್ದರೆ,ಬಿಜೆಪಿಯ ಜತೆ ಕೈ ಜೋಡಿಸಿ ಅಧಿಕಾರದ ಮೇಲೆ ಕಣ್ಣಿಡುವುದೇ ಬೆಟರ್ರು ಎಂದು ಜೆಡಿಎಸ್ ಭಾವಿಸಿದೆ.
ಹೀಗೆ ಕೊರೋನಾ ಕಾಲಘಟ್ಟದ ಬೆಳವಣಿಗೆಗಳು ಕರ್ನಾಟಕದವರಾಜಕಾರಣವನ್ನು ಧ್ರುವೀಕರಣದ ಹೊಸ್ತಿಲಿಗೆ ತಂದು ನಿಲ್ಲಿಸಿರುವ ಬಗೆ ನಿಜಕ್ಕೂ ಕುತೂಹಲಕಾರಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post