ಕಲ್ಪ ಮೀಡಿಯಾ ಹೌಸ್
ಪತ್ರಕರ್ತರು ಎಂದರೆ ಸರ್ವತಂತ್ರ ಸ್ವತಂತ್ರರು. ಪತ್ರಿಕೆಗಳು ಸಂಪೂರ್ಣ ಸ್ವತಂತ್ರ ಎಂಬ ಕಲ್ಪನೆ ನಮ್ಮ ಜನಸಾಮಾನ್ಯರಲ್ಲಿದೆ. ಜನಸಾಮಾನ್ಯರೇಕೆ, ನಮ್ಮ ಬಿಸಿರಕ್ತ ಪ್ರಾಯದ ತರುಣ ಪತ್ರಕರ್ತರಲ್ಲೂ ಇಂಥ ಭಾವನೆ ಇದೆ.
ಪ್ರತಿವರ್ಷ ಜುಲೈ ಒಂದರಂದು ರಾಜ್ಯದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಮೊದಲಾದವುಗಳ ಕುರಿತು ಚರ್ಚೆ ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಈ ದಿನವನ್ನು ಪತ್ರಿಕಾ ದಿನವೆಂದು ಆಚರಿಸಲಾಗುತ್ತದೆ.
ಇಂದು ಪತ್ರಿಕೋದ್ಯಮವೆಂಬುದು ಕಾಲದ ಸಿತ್ಯಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡಿದೆ. ಅಷ್ಟೇ ಅಲ್ಲದೆ ಪತ್ರಿಕೋದ್ಯಮ ರೀತಿ, ಸ್ವರೂಪ ಬದಲಾಗಿದೆ. ಅದರಲ್ಲೂ ತರುಣ ಪತ್ರಕರ್ತರು ತಾವು ಏನು ಬರೆದರೂ ನಡೆಯುತ್ತದೆ. ತಾವು ಬರೆದದ್ದೇ ಪರಮ ಸತ್ಯ, ತಮ್ಮನ್ನು ಯಾರೂ ಕೇಳುವಂತಿಲ್ಲ, ತಾವು ಯಾರಿಗೂ ಉತ್ತರದಾಯಿಯಲ್ಲ ಎಂಬಂತಹ ಭಾವನೆ ಇದೆ.
ಮುದ್ರಣ ಮಾಧ್ಯಮದ ಜಾಗವನ್ನು ಬಹುಪಾಲು ಆನ್ಲೈನ್ ಪತ್ರಿಕೆಗಳು ಆಕ್ರಮಿಸಿಕೊಂಡಿವೆ. ಸಾಮಾಜಿಕ ತಾಣಗಳು ಕೂಡ ಸುದ್ದಿಗಳನ್ನು ಸೆಕೆಂಡ್ ಸೆಕೆಂಡ್ ಗೂ ಹೊತ್ತು ತರುತ್ತದೆ. ಅಷ್ಟೇ ಅಲ್ಲದೆ ಎಲೆಕ್ಟ್ರಾನಿಕ್ ಮಾಧ್ಯಮಗಳು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ಇಂದು ಸುದ್ದಿ ತಿಳಿಯಬೇಕಾದರೆ ಹಲವಾರು ಮಂದಿ ಪತ್ರಿಕೆಯನ್ನು ಹಿಡಿದುಕೊಂಡು ಕೂರುವುದಿಲ್ಲ ಕೈಯಲ್ಲಿ ಸ್ಮಾರ್ಟ್ ಫೋನ್ , ಟ್ಯಾಬ್ ಇದ್ದರೆ ಅಷ್ಟೇ ಸಾಕು ಎನ್ನುವ ಕಾಲ ಇದಾಗಿದೆ.
ಸಂಪೂರ್ಣ ಸ್ವಾತಂತ್ರ್ಯ ಎನ್ನುವುದು ಒಂದು ಆದರ್ಶ ಅದು ಎಲ್ಲಾ ಕಾಲಕ್ಕೂ ಆದರ್ಶವಾಗಿಯೇ ಉಳಿಯುವಂತಹದ್ದು. ಸಮಾಜ, ಸಮುದಾಯಗಳ ಪರಿಕಲ್ಪನೆಯ ಮೂಲಕವೇ ಒಂದಾಗುವುದು, ಒಗ್ಗೂಡಿಸುವುದು, ಸ್ವೀಕಾರ, ತ್ಯಾಗಗಳೇ ಸಮಾಜದ ಬುನಾದಿ, ಕಟ್ಟುಪಾಡುಗಳು, ಕಟ್ಟಳೆಗಳು ಇಲ್ಲದ ಸಮಾಜ ಕಟ್ಟು ಹರಿದ ಪಂಜಿನಂತೆಯೇ ಸರಿ.
ಜರ್ಮನಿ ಜಾನ್ ಗುಟೆನ್ ಬರ್ಗ್ 1440 ರಲ್ಲಿ ಎರಕಹೊಯ್ದ ಅಚ್ಚು ಮೊಳೆ ತಯಾರಿಸಿ ಪವಿತ್ರ ಗ್ರಂಥ ದಿ ಬೈಬಲ್ ಅನ್ನು ದಪ್ಪನೆಯ ಹಾಳೆಯ ಮೇಲೆ ಮುದ್ರಿಸಿದಾಗ ಅದೊಂದು ಕ್ರಾಂತಿಕಾರಕ ಆವಿಷ್ಕಾರವಾಗಿತ್ತು ಎಂದು ಹೇಳಲಾಗುವುದು.
ಇನ್ನೂ ಜರ್ಮನ್ ನ ಮತಪ್ರಚಾರ ಹರ್ಮನ್ ಫ್ರೆಡಿರಿಕ್ ಮೊಗ್ಲಿಂಗ್ ಕನ್ನಡ ಪತ್ರಿಕೋದ್ಯಮದ ಮೂಲ ಪುರುಷನೆಂದು ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಪತ್ರಿಕಾವೃತ್ತಿಯ ಪರಮಧ್ಯೆಯ ಜನತೆಯ ಸೇವೆ. ಅಷ್ಟೇ ಅಲ್ಲದೆ ಸುದ್ದಿ ಮಾಹಿತಿ ನೀಡುವುದು, ಸಾರ್ವಜನಿಕರ ವಿಚಾರಗಳು ಹಾಗೂ ಸರ್ಕಾರದ ನೀತಿ – ನಿಯಮ, ಕಾರ್ಯಕ್ರಮಗಳ ವಿಮರ್ಶೆ, ಜನಾಭಿಪ್ರಾಯ ಸಂಗ್ರಹ ರೂಪಣೆಗಳಿಗೂ ಸಮರ್ಥ ಮಾಧ್ಯಮವಾಗಿ ಸತ್ಯನಿಷ್ಠವಾಗಿ ಕೆಲಸ ಮಾಡುವುದು ಪತ್ರಿಕೆಯ ನೀತಿ. ನ್ಯಾಯ, ನಿಷ್ಪಕ್ಷಪಾತದಿಂದ ಪತ್ರಕರ್ತರು ಪಾಲಿಸಬೇಕಾದ ನೀತಿ ಇದಾಗಿದೆ.
ಡಿವಿಜಿ ಯವರು ಹೇಳುವಂತೆ ಸ್ವಾತಂತ್ರ್ಯ ಪತ್ರಕರ್ತರಿಗೆ ಮಾತ್ರ ಸಂಬಂಧಪಟ್ಟ ಹಕ್ಕಲ್ಲ. ಪತ್ರಕರ್ತರು ಸ್ವಾತಂತ್ರರಾಗಿದ್ದಾರೆ ಆದರೆ ಪ್ರಯೋಜನ ಪ್ರಜೆಗಳಿಗೆ. ಅವರು ಪರಾಧೀನರಾದರೆ ಅದರ ಬಾಧೆಯು ಪ್ರಜೆಗಳಿಗೆ ತಗುಲುವುದು. ಪತ್ರಕರ್ತರು ಸ್ವತಂತ್ರರು ಹೌದು ಸಮಾಜಕ್ಕೆ ಉತ್ತರದಾಯಿಗಳೂ ಹೌದು.
ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರನ್ನು ನಾಲ್ಕನೇ ಅಂಗ ಎಂದು ಕರೆಯಲಾಗಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಉಳಿದ ಮೂರು ಅಂಗಗಳಾಗಿವೆ. ಸುದ್ದಿ ಸಮಾಚಾರ ಪ್ರಸಾರಕ್ಕೆ ಅಭಿಪ್ರಾಯ ಮತ್ತು ವಿಚಾರಗಳ ವಿನಿಮಯಕ್ಕೆ ಹಾಗೂ ಸಾರ್ವಜನಿಕ ಮಹತ್ವದ ವಿಷಯಗಳಲ್ಲಿ ಜನಾಭಿಪ್ರಾಯ ರೂಪಿಸುವುದಕ್ಕೆ ಪತ್ರಿಕೆಗಳು ಅನಿವಾರ್ಯವಾದ ಮಾಧ್ಯಮವಾಗಿದೆ.
ಆಧುನಿಕ ಪ್ರಜಾಪ್ರಭುತ್ವದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುವುದು, ವಿಮರ್ಶಿಸುವುದು, ಟೀಕಿಸುವುದು ಹಾಗೂ ಅಗತ್ಯ ಕಂಡುಬಂದಾಗ ಮಾರ್ಗದರ್ಶನ ನೀಡುವುದು ಪತ್ರಿಕೆಗಳ ಕರ್ತವ್ಯವಾಗಿದೆ. ಹೀಗಾಗಿ ಆಧುನಿಕ ಸಮಾಜದಲ್ಲಿ ಪತ್ರಿಕೆಗಳನ್ನು ಪ್ರಜಾಸತ್ತೆಯ ಕಾವಲು ನಾಯಿ ಎಂದು ಕರೆಯಲಾಗಿದೆ. ಸಮಾಜದ ಹಿತರಕ್ಷಣೆಯ ದೃಷ್ಟಿಯಿಂದ ಪತ್ರಿಕೆಗಳು ಕೆಲಸ ಮಾಡಬೇಕಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post