ಕಲ್ಪ ಮೀಡಿಯಾ ಹೌಸ್
ಇಂದು ಅತ್ಯಂತ ಮಹತ್ವದ ದಿನ. ಹಿಡಿ ಬೆಳಕನ್ನು ಕೈಗಿತ್ತು ದಾರಿ ತೋರಿಸಿದ, ಸನ್ನಡತೆಯ ಸರಳ ಗುಟ್ಟನ್ನು ಹೇಳಿಕೊಟ್ಟ, ಮನುಷ್ಯತ್ವದ ಸಾರವನ್ನು ಎದೆಯಲ್ಲಿ ಬಿತ್ತಿದ ಗುರುವೆಂಬ ಗುರುವನ್ನು ಪ್ರೀತಿಯಿಂದ ನೆನೆಯುವ ದಿನ. ಆತನಿಗೊಂದು ಶ್ರೇಷ್ಠ ನಮನ ಸಲ್ಲಿಸುವ ದಿನ. ʼನೀನಿಲ್ಲದೆ ನಾನೆಲ್ಲಿ ಗುರುವೆʼ ಎಂದು ಮನದಲ್ಲೇ ಭಕ್ತಿಪೂರ್ವಕ ಪ್ರಣಾಮಗಳನ್ನು ಹೇಳುವ ದಿನ. ಅದೇ ಗುರುಪೂರ್ಣಿಮೆ.
ಗುರು ಶಿಷ್ಯರ ಸಂಬಂಧ ಎಂಥದ್ದು ಎಂಬುದನ್ನು ತಿಳಿಸಲು ಇಂದು ನಾವು ನಿಮಗೊಂದು ಅದ್ಭುತ ಕಥೆ ಹೇಳುತ್ತೇವೆ.
ಒಬ್ಬ ಶಿಷ್ಯ ಇರುತ್ತಾನೆ. ಜಗತ್ತಿನ ಎಲ್ಲಾ ಶಿಷ್ಯರಂತೆ ಆತನಿಗೂ ಒಂದು ಮಹದಾಸೆ ಇರುತ್ತದೆ. ನೀರಿನ ಮೇಲೆ ನಡೆಯಬೇಕು ಅನ್ನೋದೆ ಆ ಮಹದಾಸೆ. ಗುರುವಿನ ಕಾಲಿಗೆ ಬಿದ್ದು ದೀನನಾಗಿ ಬೇಡಿಕೊಳ್ಳುತ್ತಾನೆ. ʼಗುರುವೇ ನೀರಿನ ಮೇಲೆ ನಾನು ನಡೆಯಬೇಕು. ಅದಕ್ಕಾಗಿ ಯಾವುದಾದರೂ ದಿವ್ಯ ಮಂತ್ರವಿದ್ದರೆ ನನಗೆ ಹೇಳಿಕೊಡಿ.ʼ ಗುರು ನಗುತ್ತಾನೆ. ನೀರಿನ ಮೇಲೆ ನಡೆಯಲು ದಿವ್ಯಮಂತ್ರವೇ? ಗುರುವಿಗೆ ಗೊತ್ತಿತ್ತು ಶಿಷ್ಯನ ಶ್ರದ್ಧೆ, ಭಕ್ತಿ, ನಂಬಿಕೆ ಏನು ಅಂತ. ಯಾಕೆಂದ್ರೆ ಅದೇ ಗುರುವಿನ ಬಳಿ ಆ ಶಿಷ್ಯ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ. ಶಿಷ್ಯನ ಅಂತರಂಗದ ಅರಿವು ಗುರುವಿಗೆ ಆಗದೆ ಇರುತ್ತದೆಯೇ?
ಒಂದು ಎಲೆ ತೆಗೆದುಕೊಂಡು ಅದನ್ನು ಸುರುಳಿಸುರುಳಿಯಾಗಿ ಚಿಕ್ಕದಾಗುವತನಕ ಮಡಚಿ ಅದನ್ನು ಶಿಷ್ಯನ ಕೈಗಿತ್ತು ಹೇಳಿದ. ʼನೋಡು ಈ ಎಲೆಯ ಮಡಿಕೆಯ ಒಳಗಡೆ ದಿವ್ಯ ಮಂತ್ರವಿದೆ. ಅದು ರಹಸ್ಯ ಮಂತ್ರ. ಇದರ ನೆರವಿನಿಂದ ನೀನು ನೀರಿನ ಮೇಲೆ ನಡೆಯುತ್ತೀಯ. ಆದರೆ ಯಾವುದೇ ಕಾರಣಕ್ಕೂ ಈ ಸುರಳಿ ಎಲೆಯನ್ನು ಬಿಚ್ಚಿ ನೀನು ನೋಡಬಾರದುʼ. ಶಿಷ್ಯನ ಎದೆಯಲ್ಲಿ ಪರಮಾನಂದ.
ಗುರುವಿಗೆ ನಮಿಸಿ ಎದೆಯಲ್ಲಿ ಸಾವಿರ ವೋಲ್ಟೇಜ್ ಆತ್ಮವಿಶ್ವಾಸ ತುಂಬಿಕೊಂಡು ನೀರಿನ ಮೇಲೆ ನಡೆಯಲು ಹೊರಟ. ಪರಮಾಶ್ಚರ್ಯವೆನಿಸುವಂತೆ ನೀರಿನ ಮೇಲೆ ಸರಾಗವಾಗಿ ನಡೆದು ಇನ್ನೇನು ನದಿ ದಾಟಬೇಕು. ಕೈಯಲ್ಲಿ ಗುರು ಕೊಟ್ಟಿದ್ದ ಸುರುಳಿಸುರುಳಿಯಾದ ಮಡಚಿದ ಎಲೆ ನೆನಪಾಯ್ತು.
ಏನಿರಬಹುದು ಈ ಸುರುಳಿ ಎಲೆಯಲ್ಲಿ? ರಹಸ್ಯ ಮಂತ್ರ ಇದೆಯಾ? ಅಥವಾ ಗುರು ಯಾವುದಾದರೂ ಪುಡಿಯನ್ನೋ ಕಲ್ಲನ್ನೋ ಮಂತ್ರಿಸಿ ಈ ಎಲೆಯ ಸುರುಳಿಯಲ್ಲಿ ತುಂಬಿರಬಹುದಾ? ಅದರಿಂದಲೇ ನಾನು ನೀರಿನ ಮೇಲೆ ನಡೆಯುತ್ತಿದ್ದೇನಾ? ಗುರುವಿಗೆ ಎಲ್ಲಿ ಸಿಕ್ಕಿದ್ದಿರಬಹುದು ಈ ಅದ್ಭುತವಾದ ಶಕ್ತಿ? ಥಟ್ಟನೆ ನೀರಿನ ಮೇಲೆ ನಿಂತು ಪರಮ ಕುತೂಹಲದಿಂದ ಮಡಚಿದ ಎಲೆಯನ್ನು ಜೋಪಾನವಾಗಿ ತೆರೆದ. ಎಲ್ಲಿ ಒಳಗಿರುವ ಮಂತ್ರ ಶಕ್ತಿ ಹಾರಿಹೋಗುತ್ತೋ, ದಿವ್ಯ ಶಕ್ತಿಯ ಪುಡಿ ಇದ್ದರೆ ಚೆಲ್ಲಿಹೋಗುತ್ತೋ ಅನ್ನೋ ಆತಂಕ. ಭಯ. ನಿಧಾನಕ್ಕೆ ಎಲೆಯ ಒಂದೊಂದೇ ಮಡಿಕೆಯನ್ನು ಬಿಡಿಸಿದ. ಬಿಡಿಸುತ್ತಲೇ ನೀರಿನ ಮೇಲೆ ನಡೆಯುತ್ತಿದ್ದವನು ಥಟ್ಟಂತ ಮುಳುಗಿದ. ಇನ್ನೇನು ಕೊಚ್ಚಿಕೊಂಡು ಹೋಗುವುದರಲ್ಲಿದ್ದ. ಆಗ ಬಿದ್ದಿತು ಅವನ ಕಣ್ಣಿಗೆ ಗುರು ಕೊಟ್ಟಿದ್ದ ಎಲೆಯೊಳಗಿನ ರಹಸ್ಯ.
ಎಲೆಯೊಳಗೆ ಸರಳವಾಗಿ ʼನಂಬಿಕೆʼ ಅನ್ನೋ ಮೂರಕ್ಷರ ಬರೆದಿತ್ತಷ್ಟೆ.
ಶಿಷ್ಯನಿಗೆ ಗುರುವಿನ ಬಲ ಏನೆಂದು ಅರ್ಥವಾಗಿತ್ತು. ಗುರುವಿನ ಮೇಲೆ ತಾನಿಟ್ಟ ನಂಬಿಕೆ ಏನು ಎಂದು ಅರ್ಥವಾಗಿತ್ತು. ನಮ್ಮ ಬದುಕಿನಲ್ಲಿ ಯಾವುದೇ ಪವಾಡಗಳು ಜರುಗಲು ಗುರುವಿನ ಯಾವ ಮಂತ್ರ ಶಕ್ತಿಯೂ ಬೇಕಾಗಿಲ್ಲ. ಆತನ ಮೇಲೆ ನಾವಿಟ್ಟಿರುವ ಬಲವಾದ ನಂಬಿಕೆ ಅಷ್ಟೇ ಸಾಕು. ನಮ್ಮನ್ನ ದಡ ಸೇರಿಸುತ್ತದೆ.
ನಿಮಗೆಲ್ಲಾ ಗುರು ಪೂರ್ಣಿಮೆಯ ಶುಭಾಶಯಗಳು…
-ಶಬರೀಶ್ ಕಣ್ಣನ್, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post