ಕಲ್ಪ ಮೀಡಿಯಾ ಹೌಸ್
ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಸಾಧಕರನ್ನು ನೀಡಿರುವ ಕರ್ನಾಟಕದ ಹೆಮ್ಮೆಯ ಜಿಲ್ಲೆ ಕರಾವಳಿಯ ಉಡುಪಿ. ವಿವಿಧ ಕ್ಷೇತ್ರದಂತೆ ಫೋಟೋಗ್ರಫಿ ಕ್ಷೇತ್ರಕ್ಕೆ ಎಲೆಮರೆಯ ಕಾಯಿಯಂತಹ ಪ್ರತಿಭೆಯನ್ನು ಇದೇ ಜಿಲ್ಲೆಯ ನೀಡಿದ್ದು, ಅವರೇ ದಿನೇಶ್ ಸಾಲ್ಯಾನ್ ಅವರು.
ಛಾಯಾಗ್ರಹಣ (ಫೋಟೊಗ್ರಫಿ) ಎನ್ನುವುದು ಒಂದು ತಪಸ್ಸು. ಅದು ಎಲ್ಲರಿಗೂ ದಕ್ಕುವುದಿಲ್ಲ. ಅದಮ್ಯವಾದ ಉತ್ಸಾಹದ ಮೂಲಕ ಮೊಬೈಲ್ ಕ್ಯಾಮೆರಾ ಕಣ್ಣಿಗೆ ಜೀವ ತುಂಬುವ ದಿನೇಶ್ ಸಾಲ್ಯಾನ್ ಅವರೊಂದಿಗೆ ಕಲ್ಪ ಮೀಡಿಯಾ ಹೌಸ್ ಮಾತನಾಡಿದ್ದು ಅವರನ್ನು ಪರಿಚಯಿಸುವ ಪ್ರಯತ್ನ ಈ ಲೇಖನದ ಮೂಲಕ.
ದಿನೇಶ್ ಅವರು, ಉಡುಪಿ ಸಮೀಪದ ಗುಂಡ್ಮಿ-ಸಾಲಿಗ್ರಾಮ ಗ್ರಾಮದ ಆನಂದ್ ಸಾಲ್ಯಾನ್ ಮತ್ತು ಚಂದ್ರಾವತಿ ದಂಪತಿಯ ಸುಪುತ್ರ. ಎಂಎಸ್’ಡಬ್ಲ್ಯೂ (ಎಚ್’ಆರ್) ಪ್ರಸ್ತುತ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.
ಫೋಟೋಗ್ರಫಿ ಎನ್ನುವುದು ಒಂದು ಅದ್ಬುತ ಕಲೆ. ಇದು ಎಲ್ಲರಿಗೂ ಒಲಿಯುವುದಿಲ್ಲ. ಇಂತಹ ಒಂದು ಕಲೆಯನ್ನು ಕರಗತ ಮಾಡಿಕೊಂಡಿರುವ ದಿನೇಶ್ ಅವರು ತಮ್ಮ ಮೊಬೈಲ್ ಮೂಲಕವೇ ಅದ್ಬುತವಾದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಶಿವಮೊಗ್ಗ ಜಿಲ್ಲೆ ಯ ಸಾಗರದ ಬಳಿ ಇರುವ ಹೊಸಗುಂದ ದಲ್ಲಿ ಲಕ್ಷ ದೀಪೋತ್ಸವದಲ್ಲಿ ಸೆರೆಹಿಡಿದ ದೀಪಗಳ ಬಗ್ಗೆ , ಯಾಣದಲ್ಲಿರುವ ಪರ್ವತ ಶ್ರೇಣಿಯ ಬಗ್ಗೆ, ಬಣ್ಣ ಬಣ್ಣದ ಚಿಟ್ಟೆಗಳ ಬಗ್ಗೆ ಹಾಗೂ ಕಂಬಳಿ ಹುಳದ ಬಗ್ಗೆ ಹಾಗೂ ಪ್ರಕೃತಿಯ ಬಗ್ಗೆ ಹೀಗೆ ಹೇಳುತ್ತಾ ಆಗುಂಬೆ ಸೂರ್ಯಾಸ್ತದ ಬಗ್ಗೆ ಹೇಳುತ್ತಾ ಸಾಗಿತು ಮಾತು. ಇನ್ನು, ಸಿಲಿಕಾನ್ ಸಿಟಿ ಬೆಂಗಳೂರು ನಗರದ ಸಮೀಪದಲ್ಲಿ ನಿಮಗೆ ಸೂರ್ಯಾಸ್ತದ ವೈಭವ ಸವಿಯಲು ಒಂದು ಚಿಕ್ಕ ಹಳ್ಳಿ ಬಳಿ ಹೋದರೆ ಸಾಕು. ಅದನ್ನು ಸಹ ನಮ್ಮ ಮೊಬೈಲ್ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದೆ ಎಂದಾಗ ಅವರ ಕಣ್ಣಿನಲ್ಲಿ ಮಿಂಚು ಹಾದು ಹೋಗಿತ್ತು.
ಅಂದು ನಾ ನೋಡಿದ ಸೂರ್ಯಾಸ್ತದ ವೈಭವ ಮಲೆನಾಡಿನ ಆಗುಂಬೆಯಲ್ಲಿ ಆಗುವ ಪ್ರಕೃತಿ ರಮಣೀಯ ಸೂರ್ಯಾಸ್ತದ ನೆನೆಪು ತಂದಿತ್ತು. ಸೂರ್ಯಾಸ್ತದ ವೈಭವ ಸವಿಯಲು ಇಲ್ಲಿಗೆ ಬರಬೇಕು ನೀವು!
ಸಿಲಿಕಾನ್ ಸಿಟಿಯ ಹೊರ ವರ್ತುಲರಸ್ತೆಯಲ್ಲಿ ಬನಶಂಕರಿ- ಸುಮ್ಮನಹಳ್ಳಿ ಮಾರ್ಗವಾಗಿ ಸಾಗಿ ಸುಮ್ಮನಹಳ್ಳಿಯಿಂದ ಮಾಗಡಿ ಮಾರ್ಗದಲ್ಲಿ ಸಾಗಿ ಸೀಗೆಹಳ್ಳಿ ಗೇಟ್’ನಲ್ಲಿ ಇಳಿದು ಎಡಗಡೆ ಮಾರ್ಗದಲ್ಲಿ 3 ಕಿಮೀ ಕ್ರಮಿಸಿದರೆ ನಿಮಗೆ ಅಲ್ಲಿ ಸೂರ್ಯಾಸ್ತದ ವೈಭವ ಸವಿಯಲು ಒಂದು ಸುಂದರ ಪರಿಸರ!
ಪ್ರಕೃತಿಯ ಮಡಿಲಲ್ಲಿ ಭಾಸ್ಕರನ ದರ್ಶನ, ಕನ್ನಲ್ಲಿಯಲ್ಲಿ ಇರುವ ಒಂದು ವಿಶಾಲವಾದ ಮೈದಾನ, ಅಲ್ಲಿ ಒಂದು ಬೋಳುಮರ, ಅದರ ಹಿಂಭಾಗದಲ್ಲಿ ಪರ್ವತಗಳ ಸಾಲು, ಆ ಪರ್ವತಗಳ ನಡುವೆ ಮನಮೋಹಕವಾದ ಸೂರ್ಯಾಸ್ತ! ಆಗಸದಿ ರವಿ ಮರೆಯಾಗುತ್ತಾ ಬಾನಂಗಳದಲ್ಲಿ ಬಣ್ಣಬಣ್ಣದ ಚಿತ್ತಾರ! ಭಾಸ್ಕರ ದಿನದಾಟಕ್ಕೆ ವಿದಾಯ ಹೇಳಿ ಹೊರಡುತ್ತಿದ್ದರೆ ಬೋಳು ಮರದ ಹಿಂದೆ ಸುಂದರ ದೃಶ್ಯ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿಬಿಡುತ್ತದೆ. ಮಾಯನಗರಿಯ ಯಾಂತ್ರಿಕ ಬದುಕಿನಿಂದ ಬೇಸತ್ತ ಮನಸ್ಸಿಗೆ, ಪ್ರಕೃತಿಯ ಅಂಗಳದಲ್ಲಿ ಸೂರ್ಯಾಸ್ತದ ವೈಭವ ನೋಡುತ್ತಾ ನಿಂತರೆ ಮನಸ್ಸಿಗೆ ಮಹಾದಾನಂದ! ಆಗಸದ ತುಂಬಾ ಕೆಂಪು ಬಣ್ಣ ಚೆಲ್ಲಿದ ಹಾಗೆ ನಯನ ಮನೋಹರ ದೃಶ್ಯ ನೋಡುಗರನ್ನು ಅಲ್ಲಿ ಸೆರೆ ಹಿಡಿದು ನಿಲ್ಲಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post