ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಬಂಜಾರ ಜನಾಂಗದ ಸಂಸ್ಕೃತಿಯಲ್ಲಿ ಅತಿದೊಡ್ಡ ಹಬ್ಬವೆಂದರೆ ದೀಪಾವಳಿ ಇದನ್ನು ಲಂಬಾಣಿ ಭಾಷೆಯಲ್ಲಿ ಸಾಮಾನ್ಯವಾಗಿ “ದವಾಳಿ” ಎಂದು ಕರೆಯುತ್ತಾರೆ. ಲಂಬಾಣಿಗರಿಗೆ ದೀಪಾವಳಿ ಹಬ್ಬವು ವಿಶೇಷ ಹಬ್ಬವಾಗಿದೆ ಹಾಗೂ ಲಂಬಾಣಿ ಸಮುದಾಯದಲ್ಲಿ ಈ ಹಬ್ಬವನ್ನು ಸಾಂಪ್ರದಾಯಕವಾಗಿ ವಿಶಿಷ್ಟವಾಗಿ ಆಚರಿಸುತ್ತಾರೆ. ಎಲ್ಲ ಸಮುದಾಯಕ್ಕೂ ಒಂದು ಬಗೆಯಾದರೆ ಲಂಬಾಣಿ ಜನಾಂಗಕ್ಕೆ ಮಾತ್ರ ದೀಪಾವಳಿ ಮತ್ತೊಂದು ಬಗೆಯ ವಿಶೇಷ.
ಲಂಬಾಣಿ ಸಮುದಾಯದಲ್ಲಿ ದೀಪಾವಳಿ ಹಬ್ಬ ವಿಶಿಷ್ಟವಾಗಿ ಎರಡು ದಿನಗಳ ಕಾಲ ಆಚರಿಸಿದರು ಕೂಡ ಅದರ 15 ದಿನದ ಹಿಂದೆಯೇ ತಾಂಡಾಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ ಹೌದು ದೀಪಾವಳಿ ಹಬ್ಬದ ನಿಮಿತ್ತವಾಗಿ ಲಂಬಾಣಿ ಸಮುದಾಯದ ಹಿರಿಯ ಮಹಿಳೆಯರು ಮದುವೆಯಾಗದ ಯುವತಿಯರಿಗೆ ಹಾಗೂ ಚಿಕ್ಕ ಚಿಕ್ಕ ಹೆಣ್ಣು ಮಕ್ಕಳಿಗೆ ಲಂಬಾಣಿ ಯ ನೃತ್ಯವನ್ನು ಹಾಗೂ ಲಂಬಾಣಿ ಹಾಡನ್ನು ಅವರಿಗೆ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಾರೆ ಹಾಗೂ ಅವರ ವಸ್ತ್ರವಿನ್ಯಾಸದ ಮಹತ್ವವನ್ನು ತಮ್ಮ ಹೆಣ್ಣುಮಕ್ಕಳಿಗೆ ಪರಿಚಯಿಸಿ ಕೊಡುತ್ತಾರೆ. ಒಂದು ತಿಂಗಳು ಅಥವಾ ಹದಿನೈದು ದಿನಗಳ ಕಾಲ ನಿರಂತರವಾಗಿ ತಾಂಡಾಗಳ ಸೇವಾಲಾಲ್ ದೇವಾಲಯದ ಮುಂದೆ ನೃತ್ಯ ಹಾಗೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡುತ್ತಾರೆ.ಆಧುನಿಕ ಯುಗದಲ್ಲಿ ಜಾನಪದ ನೃತ್ಯ ಪ್ರಕಾರ, ಹಾಡುಗಾರಿಕೆ ಹಾಗೂ ಜಾನಪದ ಕಲೆಗಳು ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ತಮ್ಮ ಪಾರಂಪರಿಕ ಸಂಪ್ರದಾಯ ಹಾಗೂ ಕಲೆಗಳನ್ನು ಮರೆಯದೆ ಅದನ್ನು ಉಳಿಸಿಕೊಂಡು ಹೋಗುತ್ತಿರುವುದು ಹಾಗೂ ಅದನ್ನು ಮೆರೆಸುತ್ತಿರುವುದು ಸಂತೋಷದ ವಿಚಾರವಾಗಿದೆ.
ಜಗತ್ತಿನ ಜೀವನ ಶೈಲಿ ಎಷ್ಟೇ ಬದಲಾದರೂ ಲಂಬಾಣಿ ಸಮುದಾಯ ಮಾತ್ರ ತಮ್ಮ ಮೂಲ ಸಂಪ್ರದಾಯವನ್ನು ಎಂದಿಗೂ ಮರೆಯುವುದಿಲ್ಲ.

ದೀಪಾವಳಿಯ ಮೊದಲನೆಯ ದಿನ ಅಮವಾಸ್ಯೆಯ ದಿನ ಅದನ್ನು ” ಕಾಳಿ ಮಾಸ್ ” ಎಂದು ಕರೆಯುವುದರಿಂದ ಮರಿಯಮ್ಮ ದೇವಿಯ ಅವತಾರಗಳಲ್ಲಿ ಒಂದಾದ ಕಾಳಿ ದೇವಿಗೆ ಕುರಿಯನ್ನು ಬಲಿ ಕೊಡುವುದು ಪಾರಂಪರಿಕ ರೂಢಿ. ಸೂರ್ಯ ಉದಯಿಸುವದಕ್ಕಿಂತ ಮುಂಚೆ ಕುರಿಯನ್ನು ಬಲಿಕೊಟ್ಟು ಕಾಳಿ ದೇವಿಗೆ ಹಾಗೂ ಲಂಬಾಣಿ ಸಮುದಾಯವನ್ನು ರಕ್ಷಿಸುತ್ತಿರುವ ಅನೇಕ ದೈವಗಳಿಗೂ ಬಲಿಯನ್ನು ಅರ್ಪಿಸುತ್ತಾರೆ ಹಾಗೂ ಅಮಾವಾಸ್ಯೆಯ ದಿನದ ರಾತ್ರಿಯಂದು ಲಂಬಾಣಿ ಸಮುದಾಯದ ಯುವತಿಯರು ಹಾಗೂ ಬಾಲಕಿಯರು ಹಿರಿಯರು ಸಿದ್ಧಪಡಿಸಿದ ಪಾರಂಪರಿಕ ವಸ್ತ್ರಗಳನ್ನು ತೊಟ್ಟು ದೀಪಗಳನ್ನು ಹಿಡಿದುಕೊಂಡು ತಾಂಡಾದ ಎಲ್ಲಾ ಮನೆ ಮನೆಗಳಿಗೆ ಹೋಗುತ್ತಾರೆ. ಹೀಗೆ ಮನೆಗಳಿಗೆ ಹೋಗುವ ಮೊದಲು ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಹಾಗೂ ಶ್ರೀ ಮರಿಯಮ್ಮ ದೇವಿಯವರು ನೆಲೆಸಿರುವ ತಾಂಡಾದ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಹಾಗೂ ದೇವಾಲಯದ ಮುಂದೆ ‘ ವರ್ಷೆದಾಡ್ ಕೋರ್ ದವಾಳಿ ಬಾಪು ತೋನ ಮೇರಾ; ‘ ವರ್ಷೆದಾಡ್ ಕೋರ್ ದವಾಳಿ ಸೇವಾಭಾಯಾ ತೋನ ಮೇರಾ ; ವರ್ಷೆದಾಡ್ ಕೋರ್ ದವಾಳಿ ಮರಿಯಮ್ಮ ತೋನ ಮೇರಾ…..’ ಎಂದು ಲಯಬದ್ದವಾಗಿ ಹಾಡುತ್ತಾ ತಾಂಡಾವನ್ನು ಲಂಬಾಣಿ ಸಮುದಾಯವನ್ನು ತಾಂಡದ ಜನತೆಯನ್ನು ಸುಖ ಸಂಪತ್ತು ಕೊಟ್ಟು ಕಾಪಾಡು ಎಂದು ಕೇಳಿಕೊಳ್ಳುತ್ತಾರೆ. ಆನಂತರ ತಾಂಡಾದ “ನಾಯಕ್” ರವರ ಮನೆಗೆ ಹೋಗಿ ದೀಪಗಳನ್ನು ಹಿಡಿದು ಲಯಬದ್ಧವಾಗಿ ಹಾಡುತ್ತಾ ತಾಂಡಾದ “ನಾಯಕ್” ರವರ ಅಪ್ಪಣೆ ಪಡೆದು ನಂತರ ಬೇರೆ ಮನೆಗಳಿಗೆ ಹೋಗುತ್ತಾರೆ. ಬಂಜಾರ ಸಮುದಾಯ ಕನ್ಯೆಯರನ್ನು ತಮ್ಮ ಮನೆಯ ಬೆಳದಿಂಗಳು ಎಂದು ಪರಿಗಣಿಸುತ್ತಾರೆ. ಯುವತಿಯರು ಹಾಡು ಹೇಳುತ್ತಾ ಹೋಗುವಾಗ ಮನೆಯ ಹಿರಿಯರು ಅವರನ್ನು ಸ್ವಾಗತಿಸುತ್ತಾರೆ ತಡರಾತ್ರಿಯವರೆಗೂ ಮನೆಮನೆಗೂ ಹೋಗಿ ದೀಪ ಬೆಳಗಿಸುತ್ತಾರೆ ಲಂಬಾಣಿ ಭಾಷೆಯಲ್ಲಿ ಇದನ್ನು “ಮೇರಾ” ಎಂದು ಕರೆಯುತ್ತಾರೆ “ಮೇರಾ” ಎಂದರೆ ದುಃಖ ನೋವು ಸೋಲು ಅವಮಾನ ಕಷ್ಟಗಳು ಕಳೆದು ಕತ್ತಲಿನಿಂದ ಬೆಳಕಿನೆಡೆಗೆ ಬರುವ ಪ್ರಕ್ರಿಯೆಯಾಗಿದೆ
ದೀಪಾವಳಿಯ ಮೇರಾ ಹಾಡು
ವರ್ಷೆದಾಡ್ ಕೋರ್ ದವಾಳಿ
ಬಾಪು ತೋನ ಮೇರಾ,
ವರ್ಷೆದಾಡ್ ಕೋರ್ ದವಾಳಿ
ಸೇವಾಭಾಯಾ ತೋನ ಮೇರಾ,
ವರ್ಷೆದಾಡ್ ಕೋರ್ ದವಾಳಿ
ಮರಿಯಮ್ಮ ತೋನ ಮೇರಾ,
ವರ್ಷೆದಾಡ್ ಕೋರ್ ದವಾಳಿ
ಗೋರ್ ಭಾಯಿ ತೋನ ಮೇರಾ,
ವರ್ಷೆದಾಡ್ ಕೋರ್ ದವಾಳಿ
ಜಗದಂಬಾ ತೋನ ಮೇರಾ….

ದೀಪಾವಳಿಯ ಎರಡನೆಯ ದಿನ
ದೀಪಾವಳಿಯ ಎರಡನೆಯ ದಿನದಂದು ಯುವಕರು ಬೆಳಗ್ಗೆ ಬೇಗನೆ ಎದ್ದು ಮನೆಯಲ್ಲಿರುವ ಗೋವುಗಳ ಮೈಯ್ಯನ್ನು ತೊಳೆದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಗೂ ವಸ್ತ್ರಗಳನ್ನು ತಂದು ಗೋವುಗಳನ್ನು ಅಲಂಕರಿಸಿ ಪೂಜಿಸುತ್ತಾರೆ. ಹಾಗೂ ದೀಪಾವಳಿಯು ಹಿರಿಯರ ಪೂಜೆಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಹಿರಿಯರ ಹಬ್ಬ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಅಗಲಿದ ಹಿರಿಯರನ್ನು ಸ್ಮರಿಸುವುದು ಲಂಬಾಣಿ ಸಮುದಾಯದ ಪಾರಂಪರಿಕ ರೂಢಿ, ಹಿರಿಯರಿಗೆ ಧೂಪ ಸಲ್ಲಿಸುವುದು ಅತ್ಯಂತ ಮುಖ್ಯವಾದುದು, ಅಗಲಿದ ಹಿರಿಯರನ್ನು ಅಂದರೆ ಹತ್ತಾರು ತಲೆಮಾರಿನ ಅಜ್ಜ-ಅಜ್ಜಿಯನ್ನು ದೊಡ್ಡಪ್ಪ ಚಿಕ್ಕಪ್ಪ ರನ್ನು ಸ್ಮರಿಸಿ ಆಶೀರ್ವಾದ ಪಡೆಯುತ್ತಾರೆ. ಅವರು ಇಷ್ಟಪಡುತ್ತಿದ್ದ ಪದಾರ್ಥಗಳನ್ನು ತಯಾರಿಸುತ್ತಾರೆ ಹಾಗೂ ತುಪ್ಪ, ಧೂಪವನ್ನು, ಅಕ್ಕಿಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ ಪದಾರ್ಥಗಳನ್ನು ಅಡುಗೆ ಒಲೆಯ ಕೆಂಡದಲ್ಲಿ ಹಿರಿಯರಿಗೆ ಎಂದು ಸಮರ್ಪಣೆ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಲಂಬಾಣಿ ಭಾಷೆಯಲ್ಲಿ “ಧಬುಕಾರ್” ಎಂದು ಕರೆಯುತ್ತಾರೆ. ಇದು ವಂಶವೃಕ್ಷ ಆಧಾರಿತ ಪದ್ಧತಿಗೆ ಸೀಮಿತವಾಗಿದೆ.
ಯುವತಿಯರು ತಮ್ಮ ಪಾರಂಪರಿಕ ವಸ್ತ್ರವನ್ನು ತೋಡುತ್ತಾರೆ. ವಸ್ತ್ರವು ಪೆಟಿಯಾ, ಚೋಟ್ಲಾ, ಭುರಿಯ, ಘುಗರಿ, ಬಲಿಯಾ, ಸಾಂಕ್ಲಿ, ಈoಟಿ, ಇವಗಳನ್ನು ಒಳಗೊಂಡಿರುತ್ತದೆ. ಯುವತಿಯರು ಇವುಗಳನ್ನೆಲ್ಲಾ ಬಳಸಿಕೊಂಡು ಸಾಂಪ್ರದಾಯಿಕವಾಗಿ ಸಿದ್ಧವಾಗುತ್ತಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post