ಕಲ್ಪ ಮೀಡಿಯಾ ಹೌಸ್ | |
ಧರೆಗಿಳಿದ ದೇವಲೋಕದಂತೆ ಮೈಸೂರು ದಸರಾ. ಇಡೀ ಮೈಸೂರು ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ನಿಲ್ಲುವ ಪರಿ ಇದೆಯಲ್ಲ ಅತ್ಯಂತ ಮಹತ್ವದ್ದು. ಇದಕ್ಕೆ ಮತ್ತೊಂದು ಸರಿಸಾಟಿ ಇಲ್ಲ ಅದಕ್ಕೇನೆ ಇದು ಅಷ್ಟೊಂದು ವಿಖ್ಯಾತಿ. ದೇಶದ ಹಲವು ಕಡೆ ದಸರಾ ಉತ್ಸವಗಳು ನಡೆಯುತ್ತದೆ ಆದರೆ ಮೈಸೂರು ದಸರಾದ ವೈಭವವೇ ಬೇರೆ.
ಯಾರೇ ಆಗಲಿ ಈ ಕ್ಷಣಕ್ಕೂ ಮೈಸೂರು ದಸಾರ ಎಂದಾಕ್ಷಣ ಏನೋ ಒಂಥರಾ ಆನಂದ ಕಣ್ಮುಂದೆ ಅಂದದ ಚೆಂದದ ಅರಮನೆ, ಸುಂದರ ಚಿನ್ನದ ಅಂಬಾರಿ, ಮನಸೆಳೆವ ರತ್ನ ಸಿಂಹಾಸನ, ಮಹಾರಾಜರ ವೈಭೋಗಗಳೆಲ್ಲವೂ ನೆನಪುಗಳ ಮೆರವಣಿಗೆಯಾಗಿ ತೇಲಿ ಬರುತ್ತದೆ. ಇದರ ಜೊತೆಗೆ ಮೈಸೂರು ದಸರೆಯ ಜಂಬೂ ಸವಾರಿ ಮತ್ತೆ ಮತ್ತೆ ಕಣ್ಣಿಗೆ ಕಟ್ಟಿದಂತೆ ನೆನಪಿನ ಪರದೆಯಲ್ಲಿ ಹಾದು ಹೋಗುತ್ತದೆ. ಇದೇ ನೋಡಿ ಮೈಸೂರು ದಸರಾದ ವೈಶಿಷ್ಟ್ಯತೆಯಾಗಿದೆ.
ನಾಡಹಬ್ಬವೆಂದು ಕರೆಯುವ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘವಾದ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪವಾಗಿದೆ. ಹೀಗಾಗಿ ಮೈಸೂರಿನ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಈ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯುಂಟು.
ನಾಡಷ್ಟೇ ಅಲ್ಲದೆ ರಾಷ್ಟ್ರವ್ಯಾಪ್ತಿ ಅಷ್ಟೇ ಏಕೆ ವಿಶ್ವವ್ಯಾಪಿ ಜನಾಕರ್ಷಣೆ ಹೊಂದಿರುವ ಮೈಸೂರು ದಸರಾಕ್ಕೆ ಎರಡು ಭಾಗ ಉಂಟು. ಮೊದಲೆನೆಯದು ಒಂಭತ್ತು ದಿನಗಳ ‘ನವರಾತ್ರಿ’ ಯಾದರೆ ಎರಡೆನೆಯದು ಹತ್ತು ದಿನಗಳ ‘ವಿಜಯದಶಮಿ’ ಮೊದಲೆಯದು ರಾಜವಂಶಸ್ಥರ ಅರಮನೆಯೊಳಗಿನ ಸಾಂಪ್ರದಾಯಕ ವಿಧಿ-ವಿಧಾನವಾದರೆ ಎರಡೆಯದು ಸರ್ವರಿಗೂ ಮುಕ್ತವಾಗಿ ಅನಾವರಣಗೊಳ್ಳುವ ಸಾರ್ವಜನಿಕರದು. ನಮ್ಮ ಸಾಂಸ್ಕøತಿಕ-ಧಾರ್ಮಿಕ ಪರಂಪರೆಯ ಶಕ್ತಿರೂಪದ ಸಂಕೇತವಾದ ಈ ನವರಾತ್ರಿ ಉತ್ಸವ.
ಈ ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯನ್ನು ಒಂಭತ್ತು ರೂಪಗಳಲ್ಲಿ ಪೂಜಿಸಿ ಆರಾಧಿಸುತ್ತಾರೆ. ದುರ್ಗಾ ಮಾತೆಯ ಒಂಭತ್ತು ರೂಪಗಳೆಂದರೆ.
ಒಂಭತ್ತು ದಿನಗಳ ವಿಶೇಷತೆ :
ನವರಾತ್ರಿಯ ಸಮಯದಲ್ಲಿ ಒಂಭತ್ತು ದಿನಗಳ ಕಾಲ “ಗೊಂಬೆ”ಗಳನ್ನು ಕೂರಿಸುತ್ತಾರೆ. ವಿವಿಧ ಬಗೆಯ ನವರಾತ್ರಿ ವಿಶೇಷವಾದ ಗೊಂಬೆಗಳು, ಶಿವ-ಪಾರ್ವತಿ, ಚಾಮುಂಡೇಶ್ವರಿ ಸೇರಿದಂತೆ ವಿವಿಧ ದೇವರ ಗೊಂಬೆಗಳು ಮತ್ತು ಸಾಮಾನ್ಯ ಗೊಂಬೆಗಳುನ್ನು ಈ ಒಂಭತ್ತು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗುತ್ತದೆ.
ನವರಾತ್ರಿಯ ಮೊದಲನೆಯ ದಿನ ಶಕ್ತಿ ದೇವತೆಯಾದ ದುರ್ಗಾ ಮಾತೆಗೆ ಕಳಸ ಬೆಳಗುವುದರೊಂದಿಗೆ ದೀಪವನ್ನು ಬೆಳಗುತ್ತಾರೆ. ಎರಡನೆಯ ದಿನ ಲಕ್ಷ್ಮಿ ದೇವತೆಗೆ ಇಷ್ಟವಾದ ನೈವೇದ್ಯವನ್ನು ನೀಡಿ ಅಷ್ಟೋತ್ತರಗಳಿಂದ ಪೂಜಿಸಲಾಗುತ್ತದೆ. ಹಾಗೇ ತಿರುಪತಿಗೂ ಸಹ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಮೂರನೇ ದಿನ ಮಹಿಶಾಸುರ ಮರ್ದಿನಿ ಹಾಗೂ ಕಾಳಿ ಮಾತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುಲಾಗುತ್ತದೆ. ನಾಲ್ಕನೆಯ ದಿನ ಸಿಂಹವನ್ನು ವಾಹನವನ್ನಾಗಿಸಿಕೊಂಡ ಚಾಮುಂಡೇಶ್ವರಿ ದೇವಿಯನ್ನು ಪೂಜಿಸುವುದರ ಜೊತೆಗೆ ಕಾಳಿ ದೇವತೆಯ ಮಂದಿರಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.
ಕೊಲ್ಲೂರು ಮೂಕಾಂಬಿಕ, ಮೈಸೂರಿನ ಚಾಮುಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಹೋಮಗಳನ್ನು ಮಾಡಲಾಗುತ್ತದೆ. ಐದನೇ ದಿನದಲ್ಲಿ ಧೂಮ್ರಾಹ ಎಂಬ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಪಂಚರಾತ್ರೋತ್ಸವವನ್ನು ಆಚರಿಸುವ ಮೂಲಕ ಲಕ್ಷ್ಮಿ ಪೂಜೆಯನ್ನು ಮಾಡುವುದು ವಿಶೇಷವಾಗಿರುತ್ತದೆ. ಆರನೇ ದಿನದಂದು ಧನಲಕ್ಷ್ಮಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಣದಿಂದ ಮಾಡಿದ ಹಾರವನ್ನು ದೇವಿಗೆ ಹಾರ ಹಾಕುವ ಮೂಲಕ ಪೂಜಿಸಲಾಗುತ್ತದೆ. ಏಳನೆಯ ದಿನ ಶಾರದ ಪೂಜಿಯನ್ನು ಮಾಡುವುದರ ಮೂಲಕ ಶಾರದೆಯ ಕೃಪೆಗೆ ಜನರು ಪಾತ್ರರಾಗುತ್ತಾರೆ. ಈ ದಿನದುಂದು ವಿದ್ಯೆಯನ್ನು ಕರುಣಿಸುವ ಸರಸ್ವತಿ ಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ.
ಎಂಟನೆಯ ದಿನವನ್ನು ಅಷ್ಟಮಿ ಎಂದು ಕೆರಯುತ್ತಾರೆ. ದುರ್ಗಾ ದೇವಿಯನ್ನು ಪೂಜಿಸುವ ಎಂಟನೆಯ ದಿನವಾದ್ದರಿಂದ ಈ ದಿನವನ್ನು ದುರ್ಗಾಷ್ಟಮಿ ಎಂದೂ ಕರೆಯುತ್ತಾರೆ. ಹೀಗಾಗಿ ದುರ್ಗಾ ಮಾತೆಯನ್ನು ಪೂಜಿಸಲಾಗುತ್ತದೆ. ನವರಾತ್ರಿ ಒಂಭತ್ತನೆಯ ದಿನ ಆಯುಧ ಪೂಜಿ ನಡೆಯುತ್ತದೆ. ಆಯುಧಗಳ ಸಹಾಯದಿಂದ ಯುದ್ಧದಲ್ಲಿ ಜಯಿಸಲು ಸಾಧ್ಯವಾಗುತ್ತದೆ. ಹೀಗಾಗಿ ಗೆಲುವಿಗೆ ಕಾರಣವಾದ ಎಲ್ಲಾ ಬಗೆಯ ಆಯುಧಗಳನ್ನು ಆಯುಧ ಪೂಜೆಯ ಸಮಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಪ್ರಸ್ತುತವಾಗಿ ಜನರು ತಮ್ಮ ಮನೆಯಲ್ಲಿ ಬಳಸುವ ಎಲ್ಲಾ ರೀತಿಯ ಆಯುಧಗಳು, ವಾಹನಗಳು ಹೀಗೆ ತಮ್ಮ ಜೀವನಕ್ಕೆ ಅವಶ್ಯಕವಾದ ವಿವಿಧ ಬಗೆಯ ಆಯುಧಗಳು ಶಸಾಸ್ತ್ರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹತ್ತನೆಯ ದಿನವನ್ನು ವಿಜಯದಶಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ತಾಯಿ ಚಾಮುಂಡೇಶ್ವರಿಯ ದೇವರ ವಿಗ್ರಹವನ್ನು ವಿಜಯ ದಶಮಿಯ ಸಮಯದಲ್ಲಿ ಮೈಸೂರಿನಲ್ಲಿ ಅಂಬಾರಿಯಲ್ಲಿ ಇಟ್ಟು ಜಂಬೂಸವಾರಿ ನಡೆಸಲಾಗುತ್ತದೆ.
ಈಪ್ರಪಂಚದಲ್ಲಿ ಸೃಷ್ಟಿಕರ್ತ ನಿರ್ಮಿಸಿದ ಅತೀದೊಡ್ಡ ಪ್ರಾಣಿಯೆಂದರೆ ಆನೆ! ಆನೆಗಳಿಲ್ಲದೆ ದಸರಾ ಊಹಿಸಿಕೊಳ್ಳಲು ಸಾಧ್ಯವಿಲ್ಲ, ಇದಕ್ಕೆ ಹಿನ್ನಲೆಯ ಕಥೆಯು ಇದೆ. ದಸರಾ ಪ್ರಯುಕ್ತ ಈ ಗಜಪಯಣ ಮೈಸೂರಿನ ಬಳಿಯ ಶ್ರೀರಂಗಪಟ್ಟಣದಲ್ಲಿ ಆರಂಭವಾಗಿದ್ದೇ 1610ರಲ್ಲಿ ಅಂದಿನಿಂದ ಪ್ರತಿ ವರ್ಷ ಆಗಸ್ಟ್ ತಿಂಗಳು ಮಧ್ಯೆಗೆ ಶುರುವಾಗುತ್ತದೆ ಈ ಪ್ರಕ್ರಿಯೆ.
ಪ್ರತೀ ವರ್ಷ ನಾಗರಹೊಳೆಯ ಸಮೀಪ ವೀರನಹೊಹಳ್ಳಿಯಲ್ಲಿ ಈ ದಸರಾಗೆಂದೇ ಆನೆಗಳ ತರಬೇತಿ ಶುರುವಾಗುತ್ತದೆ. ಮೈಸೂರಿಗೂ ಅಲ್ಲಿಗೂ 70 ಕಿ.ಮೀ ದೂರ ಒಟ್ಟು 14 ಆನೆಗಳು ದಸರಾ ಜಂಬೂ ಸವಾರಿಗೆಂದೇ ಮೀಸಲಾಗಿದವು. ಹೀಗೆ ತಂದ ಆನೆಗಳಿಗೆ ಪೂಜೆಮಾಡಿ ಅವುಗಳ ಮಾವುತರೂ, ಕವಾಡಿಗಳೂ ಆ ಆನೆಗಳನ್ನು ಸಿಂಗರಿಸಿ ಅರಮನೆಗೆ ಲಾರಿಗಳ ಮೇಲೇರಿಸಿ ಕರೆತರುವ ಸಂಪ್ರದಾಯ ಹಾಗೆ ಬಂದು ಗಜಗಳಿಗೆ ಅರಮನೆಯ ಮಹಾದ್ವಾರದಲ್ಲಿ ಭಾರೀ ಸ್ವಾಗತ ಮಾಡಲಾಗುತ್ತದೆ.
ಮುಂದಿನ ಆರೆಂಟು ವಾರಗಳಲ್ಲಿ ನಿತ್ಯವೂ ಈ ಆನೆಗಳಿಗೆ ಪೊಗದಸ್ತಾದ ಆಹಾರ, ವಾರಕ್ಕೆರಡು ಸಲ ಮಜವಾದ ಸ್ನಾನ ಹೀಗೆ ಆನೆಗಳಿಗೆ ರಾಜೋಪಚಾರ ಮಾಡಲಾಗುತ್ತದೆ. ಆನೆಗಳು ದಸರಾದ ಸಮಯದಲ್ಲಿ 750ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿ ಜಂಬೂಸವಾರಿಮಾಡುವ ವೈಭವವನ್ನು ನೋಡುವುದಕ್ಕೆ ಎಷ್ಟು ಚಂದವಿರುತ್ತದೆ ಎಂದರೆ ಅದನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು.
ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಈ ಮೆರವಣಿಗೆಯಲ್ಲಿ ನೋಡಲು ದೇಶ, ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಬಂದಿರುತ್ತಾರೆ. ರಸ್ತೆಯ ಮೂಲೆಮೂಲೆಗಳಲ್ಲಿ ಜನಸಾಗರವೇ ಈ ಅಂಬಾರಿಯನ್ನು ನೋಡುತ್ತಿರುತ್ತದೆ. ತಾಯಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತು ತರುವ ಆನೆಗಳು ಬನ್ನಿ ಮಂಟಪದತ್ತ ಹೋಗುವ ದೃಶ್ಯ ನೋಡುಗರನ್ನು ಮನಸೂರೆಗೊಳಿಸುವಂತೆ ಮಾಡುತ್ತದೆ. ಈ ಅಂಬಾರಿಯ ಮೂಲ ಹಾಗೂ ನಡೆದು ಬಂದ ಕಥೆಯೇ ರೋಚಕ, ಅಂವಾರಿಯ ನಂಟು ಕೊಪ್ಪಳದ ಕುಮ್ಮಟದುರ್ಗಕೂ ಇದೆ. ಅಂಬಾರಿಯು 14ನೇ ಶತಮಾನದ ಪ್ರಾರಂಭದಲ್ಲಿ ಕಂಪಿಲರಾಯನ ಆಡಳಿತದ ಕುಮ್ಮಟ ದುರ್ಗದಲ್ಲಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖಗಳಿವೆ. ಒಟ್ಟಿನ್ನಲ್ಲಿ ದಸರಾ ಹಬ್ಬದಲ್ಲಿ ಅಂಬಾರಿಯನ್ನು ಹೊತ್ತ ಆನೆಗಳ ಜಂಬೂಸವಾರಿಯು ವಿಶಿಷ್ಟವಾಗಿರುತ್ತದೆ.
ತಾಯಿ ಚಾಮುಡೇಶ್ವರಿಯ ವಿಗ್ರಹ ಹೊತ್ತು ದಸರಾ ಅಂಬಾರಿ ನೋಡುವುದೇ ಎಲ್ಲಾರಿಗೂ ಕುತೂಹಲ ಅದು ರಾಜ ಬೀದಿಯಲ್ಲಿ ಗಜ ಪಡೆಯ ಮೆರವಣಿಗೆ ವಿಕ್ಷಿಸುವುದಕ್ಕಾಗಿಯೇ ಸಾವಿರಾರು ಜನ ಮೈಸೂರಿಗೆ ಆಗಮಿಸುತ್ತಾರೆ. ಸಮಸ್ತ ನಾಡಿನ ಸಾಂಸ್ಕೃತಿಕ ಸಿರಿ ಸಂಪತ್ತಿನ ಮತ್ತು ನಾಡನ್ನಾಳಿದ ರಾಜ ಪರಂಪರೆಯ ಅನಾವರಣ ಮಾಡುವುದು. ವಿಜಯದಶಮಿಯಂದು ಮಧ್ಯಾಹ್ನ ಮಹಾರಾಜರು ಅಲಂಕೃತ ಆನೆಯ ಮೇಲಿನ ಚಿನ್ನದ ಅಂಬಾರಿಯನ್ನೇರಿ ವೈಭದ ಜಂಬೂಸವಾರಿಯಲ್ಲಿ ಅಂಬಾವಿಲಾಸ ಅರಮನೆಯಿಂದ ಹೊರಟು ಬನ್ನಿಮಂಟಪ್ಪದಕ್ಕೆ ತೆರಳಿ ಬನ್ನಿಪೂಜೆ ಮಾಡಿ ಧ್ವಜ ಹಾರಿಸಿ ಸೈನಿಕರಿಂದ ವಂದನೆ ಸ್ವೀಕರಿಸಿ ನಂತರ ತಾವು ಬಂದ ರಾಜ ಮಾರ್ಗದಲ್ಲೇ ಅರಮನೆಗೆ ವಾಪಸ್ಸಾಗುವ ಈ ಜಂಬೂ ಸವಾರಿಯೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post