ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಕೆ.ಜಿ.ಎಫ್-2 KGF-2 ಸಿನಿಮಾದ ಫೇಮಸ್ ಡೈಲಾಗ್ ನ ಶೈಲಿಯಲ್ಲೇ ಹೇಳುವುದಾದರೆ “ಸಿನಿಮಾ ಸಿನಿಮಾ ಸಿನಿಮಾ ಐ ಡೋಂಟ್ ಲೈಕ್ ಇಟ್ ಐ ಅವಾಯ್ಡ್ ಬಟ್ ಸಿನಿಮಾ ಲೈಕ್ ಕೆ.ಜಿ.ಎಫ್-2 ಅಟ್ರಾಕ್ಟ್ಸ್ ಮಿ ಐ ಕಾಂಟ್ ಅವಾಯ್ಡ್” ಎಂಬಂತಾಗಿದೆ ಸತ್ತ್ವವಿಲ್ಲದ ಸಿನಿಮಾಗಳ ಹಾವಳಿಯಿಂದ ಸಿನಿಮಾ ನೋಡುವುದನ್ನೇ ನಿಲ್ಲಿಸಿ ಈಗ ಮತ್ತೆ ಕೆ.ಜಿ.ಎಫ್ ನಿಂದ ಮತ್ತೆ ಆಕರ್ಷಿತರಾಗಿರುವವರ ಕಥೆ.
ಒಂದು ವರ್ಷಕ್ಕೆ 10-20 ಸಿನಿಮಾಗಳನ್ನು ಮಾಡುವ ಬದಲು ಇಂತಹ ಒಂದೇ ಒಂದು ಸಿನಿಮಾವನ್ನು ಸಂಪೂರ್ಣ ಮನಸ್ಸಿಟ್ಟು ಮಾಡಿದ್ದರ ಪರಿಣಾಮ ಹೇಗಿರುತ್ತದೆ, ಎಂತಹ ಹವಾವನ್ನು ಎಬ್ಬಿಸುತ್ತದೆ ಎಂಬುದಕ್ಕೆ ಈ ಸಿನಿಮಾವೇ ಕೈಗನ್ನಡಿ. ಶೇ.100 ಪ್ರತಿಶತ 100ಕ್ಕೆ ಇಂತಿಷ್ಟು ಎಂದು ಹೇಳಲು ಸಾಧ್ಯವೇ ಇಲ್ಲ ಎಂಬಂತಿದೆ ಈ ಸಿನಿಮಾ, 100ಕ್ಕೆ 200, 300….. ಎಂದು ಹೇಳುವುದರ ಮೂಲಕ ಸಿನಿಮಾದ ಯಶಸ್ಸನ್ನು ಕೊಂಡಾಡಬಹುದು ಅಷ್ಟೆ!
ಸಿನಿಮಾ ಪ್ರಚಾರಕ್ಕಾಗಿ ಯಶ್ ಜೆಎನ್‌ಯು ಪ್ರತಿಭಟನೆಗೆ ಹೋಗಿರಲಿಲ್ಲ. ಲಿಬರಲ್ಸ್ ಗಳನ್ನು ಆಕರ್ಷಿಸಲು ಅವರು ಎಂದಿಗೂ ಭಾರತೀಯ ವಿರೋಧಿ, ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಲಿಲ್ಲ. ಅವರು ಕೇವಲ ಸಿನಿಮಾ ಸಂಬಂಧಿತ ವಿಷಯಗಳ ಮೇಲೆ ಮಾತ್ರ ತಮ್ಮ ಗಮನವನ್ನು ಕೇಂದ್ರೀಕರಿಸಿದರು ಮತ್ತು ಅದನ್ನು ಹಿಟ್ ಮಾಡಿದರು!
ಆದರೆ ಇದನ್ನು ಸಹಿಸದ ಅಜಯ್ ದೇವಗನ್ ಅವರಂತಹ ಬಾಲಿವುಡ್ ನಟರು ಯಾರು ಬಾಲಿವುಡ್ ಮಾತ್ರ ದೊಡ್ಡ ಯಶಸ್ಸನ್ನು ಕಾಣಬೇಕೆಂಬ ನಿಯಮವು ಶಾಶ್ವತವಾಗಿರುವುದೆಂದು ಭಾವಿಸಿದ್ದರೊ ಅವರು ತಮ್ಮ ದುಗುಡವನ್ನು ಮರೆಮಾಚಲಾಗದೆ ಭಾಷಾ ಯುದ್ಧವನ್ನು ಆರಂಭಿಸುವುದರ ಮೂಲಕ ತೋರ್ಪಡಿಸಿಕೊಂಡರು.
ಯಶಸ್ಸು, ಗುಣಮಟ್ಟ, ಸಾರ್ಥಕತೆ, ಮಹದಿಚ್ಛೆ, ಪರಿಪೂರ್ಣತೆಗಳನ್ನೇ ಗುರಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಿ ಪರಿಶ್ರಮ, ಪ್ರಾಮಾಣಿಕತೆ, ಕಲಕುಶಲತೆ, ನಿರ್ಭಯತೆಗಳೆಂಬ ಶಕ್ತಿಶಾಲಿ ಆಯುಧಗಳ ಮಹತ್ವವನ್ನು ಮತ್ತೊಮ್ಮೆ ಚಿತ್ರರಂಗಕ್ಕೆ ಪರಿಚಯಿಸಿದಂತಿದೆ ಈ ಸಿನಿಮಾ ಮೂಡಿ ಬಂದಿರುವ ಪರಿ. ಧೈರ್ಯ, ಶೌರ್ಯ, ಸಾಹಸ, ಪೌರುಷ, ತಾಕತ್ತುಗಳನ್ನೇ ಸ್ತಂಭವಾಗಿರಿಸಿಕೊಂಡು ಹೀರೋಯಿಸಂ ಅನ್ನು ಉತ್ತುಂಗ ಸ್ತರದಲ್ಲಿ ಪ್ರದರ್ಶಿಸುವ ಮೂಲಕ ನಮ್ಮ ಕನ್ನಡ ಸಿನಿಮಾ ಕೆ.ಜಿ.ಎಫ್ ನಶೆಯಲ್ಲಿ ತೇಲುತ್ತಾ ರೋಮಿಯೋ ಜ್ಯೂಲಿಯಟ್ ಸಿನಿಮಾಗಳನ್ನೇ ಮಾಡುತ್ತಿರುವ ಬಾಲಿವುಡ್ ಗೆ ತಕ್ಕ ಪಾಠ ಕಲಿಸುತ್ತಿದೆ. ನಶೆಯಿಂದ ಜಡವಾಗುತ್ತಿರುವ ಹಾಗೂ ನೆಪೊಟಿಸಂನಿಂದ ನೆಲಗಚ್ಚುತ್ತಿರುವ ಭಾರತೀಯ ಚಿತ್ರರಂಗದ ಹೆಮ್ಮೆಯಾಗಿದ್ದ ಬಾಲಿವುಡ್ ಅನ್ನು ಜಾಗೃತಗೊಳಿಸಿ ಅದರ ಇತಿಹಾಸವನ್ನು ಮನನ ಮಾಡಿಸಿ ಮರಳಿ ಕಾರ್ಯಪ್ರವೃತ್ತವಾಗಲು ಕ್ಯಾಟಲಿಸ್ಟ್ ಆಗಿ ಕೆಲಸ ಮಾಡುತ್ತಿದೆ ಎನ್ನಬಹುದು.
ಕನ್ನಡದ ಸ್ಯಾಂಡಲ್ ವುಡ್ ನ ಈ ಆಕ್ಷನ್ ಸಿನಿಮಾ ಯಾವ ಹಾಲಿವುಡ್ ಸಿನಿಮಾಗಳಿಗೂ ಕಡಿಮೆಯಲ್ಲ ಎಂಬುದನ್ನು ಸಾಕ್ಷಿ ಸಮೇತ ನಿರೂಪಿಸಿದೆ ಈ ಸಿನಿಮಾ. ಅದರಲ್ಲೂ ವಿಶೇಷವಾಗಿ ನಾಯಕ ನಟ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್, ಆಕ್ಟಿಂಗ್, ಆಟಿಟ್ಯೂಡ್ ಎಲ್ಲವೂ ಇಂದಿನ ಯಾವ ಬಾಲಿವುಡ್, ಹಾಲಿವುಡ್ ನಾಯಕ ನಟರೂ ಸಹ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲವೇನೊ ಎಂಬಂತಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ‘ಯಶ್ ಬರುವವರೆಗೆ ಮಾತ್ರ ಬೇರೆಯವರ ಹವಾ, ಬಂದ್ಮೇಲೆ ಅವರದ್ದೇ ಹವಾ’.
ಸಿನಿಮಾದುದ್ದಕ್ಕೂ ಪ್ರತೀಕ್ಷಣವೂ ವೀಕ್ಷಕರ ಗಮನವನ್ನು ಮತ್ತಷ್ಟು ತೀಕ್ಷ್ಣವಾಗಿಸುವ, ಕುತೂಹಲವನ್ನು ನಿರಂತರವಾಗಿ ಉಳಿಸಿಕೊಳ್ಳುವ ಸಾಹಸ ಕಾರ್ಯದಲ್ಲಿ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಿನಿಮಾವು ಎಷ್ಟು ಆಕ್ಷನ್ ಹಿಟ್ ಚಿತ್ರವಾಗಿದೆಯೋ ಅಷ್ಟೇ ಫ್ಯಾಮಿಲಿ ಹಿಟ್ ಚಿತ್ರವೂ ಆಗಿದೆ. ಏಕೆಂದರೆ ಆಕ್ಷನ್ ಸೀನ್ ಗಳು ಬರುವಾಗಲೂ ಚಿತ್ರ ಕಥೆಯನ್ನು ಪುಟ್ಟ ಪುಟ್ಟ ದೃಶ್ಯಗಳನ್ನು ಸೇರಿಸುವ ಮೂಲಕ ಆಕ್ಷನ್ ಪ್ರಿಯರಲ್ಲದವರೂ ಸಹ ನೆಮ್ಮದಿಯಾಗಿ ಸಿನಿಮಾ ನೋಡುವಂತೆ ಮಾಡಿದ್ದಾರೆ.
ಈ ಕಥೆಯನ್ನು ನೀವು ಒಬ್ಬ ಛಲವಾದಿ ತಾಯಿಯ ಕಥೆಯಾಗಿ ಅಥವಾ ಒಬ್ಬ ಹಠವಾದಿ ಪ್ರಾಮಾಣಿಕ ಮಗನ ಕಥೆಯಾಗಿ ಅಥವಾ ಸಮಾಜದಲ್ಲಿ ತುಳಿತಕ್ಕೊಳಗಾದ ಬಾಲಕನೋರ್ವ ಸಿಡಿದೆದ್ದು ದಕ್ಷ ನಾಯಕನಾದ ಕಥೆಯಾಗಿ ಅಥವಾ ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಹೊರ ಬಂದು ಆ ವ್ಯವಸ್ಥೆಯ ಲೋಪದೋಷಗಳ ಅನಾನುಕೂಲಗಳನ್ನು ಮೆಟ್ಟಿ ಸ್ವತಂತ್ರ ವ್ಯವಸ್ಥೆಯನ್ನು ಸೃಷ್ಟಿಸುವ ಕಥೆಯಾಗಿ ಅಥವಾ ಒಬ್ಬ ಸಮರ್ಥ ಧೀರನು ಹೇಡಿಗಳನ್ನು ಧೀರರನ್ನಾಗಿಸುವ ಬಗೆಯ ಕಥೆಯಾಗಿ ಹಾಗೂ ಇನ್ನಿತರ ಬಗೆಯಾಗಿ ವಿಶ್ಲೇಷಿಸಬಹುದು. ಸಿನಿಮಾದ ಕಥೆಯು ಆರಂಭದಿಂದ ಅಂತ್ಯದವರೆಗೂ ತೀವ್ರಗತಿಯಲ್ಲಿ ಸಾಗಿ ಒಂದು ಉತ್ತಮ ಬಗೆಯ ಚಿತ್ರರಂಗದ ಮಾರ್ಗವನ್ನು ವೃದ್ಧಿಸಿದೆ. ಕೆ.ಜಿ.ಎಫ್ ಫೀವರ್ ಎಲ್ಲೆಡೆ ಅತಿಕ್ರಮಿಸುತ್ತಿದೆ, ಸ್ಯಾಂಡಲ್ ವುಡ್ ಕಿರೀಟವು ಹಾಲಿವುಡ್ ಸಿನಿಮಾಗಳ ಸಿಂಹಾಸನದ ಮೇಲೂ ಅಧಿಪತ್ಯ ಮಾಡುತ್ತಿದೆ.
ನಮ್ಮ ಕನ್ನಡ ಸಿನಿಮಾವು ಬಾಲಿವುಡ್ ನ ದೈತ್ಯ ಸಿನಿಮಾಗಳ ದಾಖಲೆಗಳನ್ನೂ ಧೂಳಿಪಟ ಮಾಡುತ್ತಿದೆ. ಮಹಾನ್ ವ್ಯಕ್ತಿಗಳು ತಮ್ಮೆಲ್ಲಾ ಪರಿಶ್ರಮ ಹಾಕಿ, ಅಗಾಧ ಕನಸುಗಳನ್ನು ಕಟ್ಟಿಕೊಂಡು ಬೆಳೆಸಿದ ಸ್ಯಾಂಡಲ್ ವುಡ್ ನ ಹಿರಿಮೆ ಪ್ರಪಂಚದಲ್ಲೆಲ್ಲಾ ಪಸರಣೆಯಾಗಿ ಸಾರ್ಥಕತೆಯನ್ನು ಪಡೆದು ಕೊಳ್ಳುತ್ತಿರುವ ಸಮಯವಿದು. ಆದರೆ ಇಂದು ಪ್ರತಿಯೊಬ್ಬ ಕನ್ನಡದ ಅಭಿಮಾನಿಯ ಮನದಲ್ಲೂ ಅಡಕವಾಗಿರುವ ದುಗುಡವೆಂದರೆ ಪ್ರೀತಿಯ ಅಪ್ಪು ಸರ್ ಅವರ ದೇಹತ್ಯಾಗವಾಗಿರುವುದು. ಇಂತಹ ಸಂವೇದನಾ ಶೀಲ ಸಂದರ್ಭದಲ್ಲಿ ಜೇಮ್ಸ್ ಚಿತ್ರದ ನಂತರ ತೆರೆಗೆ ಬಂದ ಕೆ.ಜಿ.ಎಫ್-2 ಚಿತ್ರವು ಚಿತ್ರ ಆರಂಭವಾಗುವ ಮುನ್ನ ಅಪ್ಪು ಸರ್ ಅವರಿಗೆ ಶ್ರದ್ಧೆಯ ನಮಸ್ಕಾರಗಳನ್ನು ಸಲ್ಲಿಸಿ ಸಮರ್ಪಿಸಿರುವುದು ಹೃದಯಸ್ಪರ್ಶಿಯಾಗಿದೆ.
Also read: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನ: ಸೇಂಟ್ ಮೇರಿಸ್ ಶಾಲೆಯ ಪೂರ್ವಿಕಗೆ 625 ಅಂಕ
ಇಲ್ಲಿಯವರೆಗೆ ಕೆ.ಜಿ.ಎಫ್-2 ಚಿತ್ರವು ಕನ್ನಡ ಚಿತ್ರರಂಗಕ್ಕೆ ಎಷ್ಟೆಲ್ಲಾ ಕಿರೀಟಗಳನ್ನು ತೊಡಿಸುತ್ತಿದೆ ಎಂಬುದನ್ನು ನೋಡಿದೆವು. ಈಗ ಒಟ್ಟಾರೆ ಚಿತ್ರರಂಗದ ಗುಣಮಟ್ಟವನ್ನು ಹೇಗೆ ಎತ್ತರಕ್ಕೇರಿಸುತ್ತಿದೆ ಎಂಬುದನ್ನು ತಿಳಿಯೋಣ. ಈ ಸಿನಿಮಾ ಕಥೆಯಲ್ಲಿನ ಹೀರೋ ಹೊರ ಜಗತ್ತಿಗೆ ದೊಡ್ಡ ಕ್ರಿಮಿನಲ್ ಆಗಿಯೇ ಕಂಡರೂ ಅಶಕ್ತರನ್ನು ಶಕ್ತರನ್ನಾಗಿ ಮಾರ್ಪಡಿಸಿ ನಿರ್ಮಿಸಿದ ತನ್ನ ಸಾಮ್ರಾಜ್ಯದಲ್ಲಿ ಅವರಿಗೆಲ್ಲಾ ಹೇಗೆ ದೈವಸದೃಶನಾಗುತ್ತಾನೆ ಎಂಬ ಕಥಾವಸ್ತುವೇ ರೋಮಾಂಚನಕರವಾದುದು.
ನೂರಾರು ವರ್ಷ ಗುಲಾಮರಂತೆ ಬದುಕುವುದಕ್ಕಿಂತ ಒಂದೇ ಒಂದು ದಿನ ಸಿಂಹದಂತೆ ಬದುಕಬೇಕು ಎಂಬ ಮಹೋನ್ನತ ಆದರ್ಶದಿಂದ ತನ್ನ ಮಗನನ್ನು ಧೈರ್ಯವಂತ, ಶೌರ್ಯವಂತ, ಸಾಹಸವಂತನನ್ನಾಗಿ ಬೆಳೆಸಿ ಈ ಪ್ರಪಂಚ ಸ್ವಾರ್ಥ, ಅನ್ಯಾಯಗಳಿಂದ ತುಂಬುತ್ತಿರಲು ಕಾರಣೀಭೂತರಾದವರಿಗೆ ದಂಡನೆ ಕೊಡಿಸುವ, ತುಳಿತಕ್ಕೊಳಗಾದವರ ಧ್ವನಿಯಾಗಿ ಅವರೆಲ್ಲರಿಗೂ ಶಕ್ತಿ ತುಂಬುವ ಧ್ಯೇಯ ಪಾಠವನ್ನು ಭೋದಿಸುವ ಸ್ವಾಭಿಮಾನಿ, ಣಛಲವಾದಿ ತಾಯಿಯ ಪಾತ್ರವು ಮಹತ್ವದ ಭೂಮಿಕೆಯನ್ನು ಪಡೆದುಕೊಂಡಿದೆ. ನೆಪೊಟಿಸಂ, ಸ್ವಂತ ಪರಿಶ್ರಮ, ಶೌರ್ಯ, ಕ್ಷಾತ್ರ, ಎದೆಗಾರಿಕೆ, ಸಿಂಹ ಸಾಹಸಿಕತೆಗಳ ಬಗೆಗೆ ಚಿತ್ರದಲ್ಲಿ ಮೂಡಿ ಬಂದಿರುವ ಸಂಭಾಷಣೆಗಳು ಬೆಂಕಿಯಂತಿವೆ! ಅವ್ಯಾಹತ ಆಕ್ರಮಣಗಳನ್ನೆದುರಿಸಿಯೂ ಇಂದಿಗೂ ಬಲಿಷ್ಠವಾಗಿರುವ ಏಕೈಕ ರಾಷ್ಟ್ರ ಭಾರತದಲ್ಲಿ ಇದರ ಪರಿಣಾಮ ಸತ್ವಯುತವಾಗಿದ್ದ ಜನರ ವ್ಯಕ್ತಿತ್ವಕ್ಕೆ ತಮಸ್ಸು ಬಂದು ಸೇರಿಕೊಂಡಿದೆ. ಅದರ ಜಾಡ್ಯವನ್ನು ಹೊಡೆದೋಡಿಸಲು ಮೊದಲು ರಜಸ್ಸಿನ ಪ್ರಹಾರವೇ ಆಗಬೇಕು. ಆದ್ದರಿಂದ ಇಂತಹ ಕ್ಷಾತ್ರಭರಿತ ಸಿನಿಮಾಗಳು ಅತಿವೇಗದ ರಜಸ್ಸಿನ ಪ್ರಹಾರವನ್ನೇ ಮಾಡುವುದರ ಮೂಲಕ ಜಾಡ್ಯವನ್ನು ಹೊಡೆದೋಡಿಸುತ್ತಿದೆ ಎನ್ನಬಹುದು, ರಜಸ್ಸಿನ ಮೂಲಕ ಜಾಡ್ಯವನ್ನು ಕಳೆದರೆ ಮಾತ್ರ ಸತ್ವಯುತ ವ್ಯಕ್ತಿತ್ವವನ್ನು ಗಳಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಈ ಕೆಳಗಿನ ಹೇಳಿಕೆಯೇ ಇದಕ್ಕೆ ಪುಷ್ಟಿ: “ಶಕ್ತಿಶಾಲಿಯಾದವನು ತಪ್ಪಿತಸ್ಥನಾಗಿದ್ದರೂ ಅವನನ್ನು ಗೌರವಿಸುವೆ ಆದರೆ ಎಂದಿಗೂ ಹೇಡಿಯನ್ನು ಗೌರವಿಸುವುದಿಲ್ಲ”.
ಸಿನಿಮಾದ ಹಾಡುಗಳಂತೂ ದೃಶ್ಯಗಳ ಜೊತೆ ಜೊತೆಗೆ ಸ್ವಾಭಾವಿಕವಾಗಿ ಮೂಡಿ ಬಂದಂತಿವೆ, ಈ ಹಾಡುಗಳು ನೇರವಾಗಿ ಪ್ರೇಕ್ಷಕರ ಹೃದಯಗಳಿಗೆ ಸಿಡಿಮದ್ದಿನಂತೆ ಲಗ್ಗೆಯಿಡುತ್ತವೆ. ನಾಯಕನ ಅಜೇಯವಾದ ಪವರ್ ಫುಲ್ ಆಟಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುವ ವಿಲನ್ ಗಳಲ್ಲಿ ರವೀನಾ ಟಂಡನ್ ಅವರ ಅಭಿನಯ ವೀರಾಂಗನೆಯ ಪಾತ್ರದಂತೆ ಅದ್ಭುತವಾಗಿ ಮೂಡಿ ಬಂದಿದೆ, ಆದರೆ ಸಂಜಯ್ ದತ್ ಅವರು ತೆರೆಯಲ್ಲಿ ಮಿಂಚ ಬೇಕೆಂದು ಸಿನಿ ತಂಡವು ಮಾಡಿರುವ ಪ್ರಯತ್ನಗಳು ಅವರ ಅಶಕ್ತ ದೈಹಿಕ ಸ್ಥಿತಿಯ ಮುಂದೆ ಸಫಲವಾಗಿಲ್ಲ ಹಾಗೆಯೇ ನಾಯಕನ ಶಕ್ತಿ ತಾಕತ್ ಗಳಿಗನುಸಾರ ಸರಿಸಾಟಿಯಾಗಿಲ್ಲ ಎಂದೇ ಹೇಳಬಹುದು.
ಕೆ.ಜಿ.ಎಫ್-1 ಮತ್ತು ಕೆ.ಜಿ.ಎಫ್-2 ಈ ಎರಡು ಸಿನಿಮಾಗಳನ್ನು ಮಾಡಲು ಒಟ್ಟು 8 ವರ್ಷಗಳ ಅಮೂಲ್ಯ ಸಮಯವನ್ನು ಮೀಸಲಿಡಬೇಕಾಯಿತು. ಪ್ರಶಾಂತ್ ನೀಲ್ ಅವರ ಕೈ ಚಳಕದಲ್ಲಿ ನಿರ್ಮಾಣದಲ್ಲಿ ನಿರ್ಮಾಣಗೊಂಡ ಯಶ್, ಶ್ರೀನಿಧಿ ಮುಂತಾದ ಕಲಾವಿದರ ಸಾಧನೆಗೆ ನಾವೆಲ್ಲರೂ ಹೆಮ್ಮೆ ಪಡಬೇಕು. ಅದರ ಜೊತೆಗೆ ಯಶ್ ಅವರಂತಹ ಸೂಪರ್ ಸ್ಟಾರ್ ಅನ್ನು ಒಳಗೊಂಡಂತೆ ಯಾವೆಲ್ಲಾ ಕಲಾವಿದರು ತಮ್ಮ ಅಮೂಲ್ಯವಾದ 8 ವರ್ಷಗಳನ್ನು ನಿರ್ದಿಷ್ಟವಾಗಿ ಕೆ.ಜಿ.ಎಫ್ ಎಂಬ ಸಿನಿಮಾ ಆದರ್ಶಕ್ಕಾಗಿಯೇ ವಿನಿಯೋಗಿಸಿದರೊ ಅಂತಹವರ ತ್ಯಾಗ, ಸಮರ್ಪಣೆಗೆ ಅಭಿಮಾನಿಗಳಾದ ನಾವೆಲ್ಲಾ ಒಂದು ದೊಡ್ಡ ಸಲಾಂ ಅನ್ನು ಮಾಡಲೇಬೇಕು. ಸಲಾಂ ರಾಕಿ ಭಾಯ್ ಆಂಡ್ ಟೀಂ.
ಇಂತಹ ತ್ಯಾಗ, ಸಮರ್ಪಣೆಗಳ ಮೂಲಕ ಮೂಡಿ ಬರುವ ಒಂದೇ ಒಂದು ಸಿನಿಮಾವಾದರೂ ಸರಿ ಅದರ ಮೌಲ್ಯ ನೂರಾರು ಸಿನಿಮಾಗಳಿಗೆ ಸಮನಾಗಿರುತ್ತದೆ. ಈ ಒಂದು ಯುಕ್ತಿಗೆ ಬಾಹುಬಲಿ-1,2ನ್ನು ಉದಾಹರಿಸಬಹುದು. ಇದಕ್ಕಿಂತಲೂ ಮುಖ್ಯವಾಗಿ ಈ ಪವಿತ್ರ ಭೂಮಿಯ ಆರಾಧ್ಯದೈವ ಶ್ರೀರಾಮನ, ಮಹಾದೇವನ ಪಾತ್ರವನ್ನು ನಿರ್ವಹಿಸಲು ತಮ್ಮ ವೃತ್ತಿಕ್ಷೇತ್ರದ ಭವಿಷ್ಯದ ಪಯಣವನ್ನು ಕೊನೆಗೊಳಿಸಬೇಕಾದ ಸಂದರ್ಭ ಒದಗಿ ಬರಬಹುದೆಂಬ ಅರಿವಿದ್ದರೂ ಆ ಗರಿಷ್ಠ ಹಂತವನ್ನು ತ್ಯಾಗ, ಸಮರ್ಪಣೆಗಳನ್ನು ಮಾಡಿದ ಅರುಣ್ ಗೋವಿಲ್ ಹಾಗೂ ಮೋಹಿತ್ ರೈನಾರಂತಹ ನಟರೂ ಸಹ ಈ ಆದರ್ಶಕ್ಕೆ ಬಹುಮುಖ್ಯ ಉದಾಹರಣೆ. ಇದರಂತೆಯೇ ಕನ್ನಡನಾಡಿನ ಏಕೈಕ ರಾಜಕುಮಾರ ಆಗಿರುವ ಡಾ.ರಾಜ್ ಕುಮಾರ್ ಅವರು ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿರಲು ಪ್ರಮುಖ ಕಾರಣ ಅವರು ತಮ್ಮ ಅಗಾಧ ಕನ್ನಡ ಪ್ರೇಮಕ್ಕಾಗಿ ಅನ್ಯ ಭಾಷಾ ಸಿನಿಮಾಗಳ ತ್ಯಾಗ ಮಾಡಿದ್ದು ಎಂಬುದು ಈ ತ್ಯಾಗ, ಸಮರ್ಪಣೆ ಆದರ್ಶದ ಚಿತ್ರರಂಗಕ್ಕೆ ಮತ್ತೊಂದು ಉದಾಹರಣೆ. ಹಾಗಾದರೆ ಕ್ಲೈಮ್ಯಾಕ್ಸ್ ನಲ್ಲಿ ಹಲವು ಸಂಶಯಗಳನ್ನು ಹುಟ್ಟು ಹಾಕಿ ಕುತೂಹಲವನ್ನು ಕೆರಳಿಸಿರುವ ಕೆ.ಜಿ.ಎಫ್ ತಂಡವು ಇದೇ ಆದರ್ಶವನ್ನು ಮುಂದುವರಿಸಿ ಕೆ.ಜಿ.ಎಫ್-3 ಅನ್ನು ನಿರ್ಮಾಣ ಮಾಡುತ್ತಾ? ಇದಕ್ಕೆ ಕಾಲವೇ ಉತ್ತರಿಸಲಿದೆ. ಆದರೆ ಒಂದಂತೂ ಸತ್ಯ, ಇಂತಹ ಅದ್ಭುತ ಕಥಾವಸ್ತುವಿನ ಸರಣಿ ಚಿತ್ರಗಳು ನಿರ್ಮಾಣವಾಗುತ್ತಾ ಹೋದರೆ ಈ ಸಿನಿಮಾವು ಐತಿಹಾಸಿಕ ಚರಿತ್ರೆಯನ್ನು ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post