ಕಲ್ಪ ಮೀಡಿಯಾ ಹೌಸ್
ಗಣೇಶ ಹಬ್ಬ ಬಂದರೆ ಎಲ್ಲರೂ ಹೆಚ್ಚು ಸಂಭ್ರಮದಿಂದ ಸಿದ್ಧತೆಯನ್ನು ಮಾಡಿಕೊಳ್ಳುವುದಕ್ಕೆ ಆರಂಭಿಸುತ್ತಾರೆ. ನಗರದಲ್ಲಿ ಎಲ್ಲಿ ನೋಡಿದರಲ್ಲಿ ಗಣೇಶನ ವಿಗ್ರಹಗಳು ರಾರಾಜಿಸುತ್ತಿರುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಆಕರ್ಷಕವಾಗಿ ಕಾಣುತ್ತಿರುತ್ತದೆ. ಸಾರ್ವಜನಿಕರು ಆ ಮೂರ್ತಿಗಳನ್ನು ಕೊಂಡುಕೊಳ್ಳುವುದಕ್ಕೆ ಹೆಚ್ಚು ಉತ್ಸಾಹದಿಂದ ಮುಂದುವರೆಯುತ್ತಾರೆ.
ಗಣೇಶ ಹಬ್ಬವನ್ನು ಅನೇಕ ಹೆಸರುಗಳಿಂದ ಕರೆಯಬಹುದಾಗಿದೆ. ಗಣೇಶ ಚತುರ್ಥಿ, ವಿನಾಯಕ ಚತುರ್ಥಿ ಅಥಾವ ಚೌತಿ ಎಂದೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.
ಪ್ರಥಮ ಪೂಜಿತನ ಆಗಮನವನ್ನು ನಾಡಿನಾದ್ಯಂತ ಜನರು ಮಣ್ಣಿನ ಗಣೇಶ ವಿಗ್ರಹಗಳನ್ನು ಮನೆಗಳಲ್ಲಿ ಖಾಸಗಿಯಾಗಿ/ಸಾರ್ವಜನಿಕವಾಗಿ ವಿಸ್ತಾರವಾದ ಪೆಂಡಲ್‍ಗಳಲ್ಲಿ ಸ್ಥಾಪಿಸುವುದರೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.
ನಮ್ಮ ನಾಡಿನ ಹೆಣ್ಣು ಮಕ್ಕಳ ಅತೀ ಸಡಗರದ ಹಬ್ಬ ಗೌರಿ ಹಬ್ಬ ಹಾಗೆಯೇ ಎಲ್ಲ ಹುಡುಗರ ಸಂಭ್ರಮದ ಹಬ್ಬ ಗಣೇಶ ಹಬ್ಬವಾಗಿದೆ. ಗೌರಿ ಮತ್ತು ಗಣೇಶ ಮೂರ್ತಿಗಳನ್ನು ಯಾಕೆ ಮಣ್ಣಿನಲ್ಲಿಯೇ ಮಾಡಿಸಬೇಕು ಎಂದು ಪ್ರಶ್ನೆ ಮೂಡುವುದು ಸಹಜ. ಗೌರಿಯ ಮೂರ್ತಿಯು ಸಹ ಮಣ್ಣಿನಿಂದ ಮಾಡಲಾಗುತ್ತದೆ. ಯಾಕೆಂದರೆ ಭೂಮಿಯ ಒಡತಿ ಸಮಗ್ರ ಬ್ರಹ್ಮಾಂಡದಲ್ಲಿ ಅವಳು ವ್ಯಾಪಿಸಿರುವ ಕಾರಣಕ್ಕೆ ಅವಳು ಪೃಥಿಯೇ ಎಂದು ಕರೆಸಿಕೊಳ್ಳುತ್ತಾಳೆ. ಆ ತಾಯಿ ಪಾರ್ವತಿ, ತನ್ನವರ ಮೇಲೆ ಅನುಗ್ರಹ ಮಾಡಲು ಕೈಲಾಸದಿಂದ ಕೆಳಗಿಳಿದು ಬರುತ್ತಾಳೆ.
ಮಳೆಗಾಲದ ಈ ಸಮಯದಲ್ಲಿ ಮಳೆಯ ಮುಂಖಾತರ ಧರೆಗಿಳಿದು ಮಣ್ಣಿನ ಕಣಕಣದಲ್ಲಿಯೂ ಅವಳು ವ್ಯಾಪಿಸಿರುತ್ತಾಳೆ. ಹೀಗಾಗಿ ಕುಂಬಾರರು ಮಾಡಿದ ಮಣ್ಣಿನ ಪ್ರತಿಮೆಯಲ್ಲಿಯೇ ದೇವರ ಸನ್ನಿಧಾನ. ಮಣ್ಣಿಗೆ ನೀರು ಸೇರಿಸಿ ಪ್ರತಿಮೆ ಮಾಡಿದಾಗ ರೂಪಸಹಿತಳಾಗಿ ಪಾರ್ವತಿ ಸನ್ನಿಹಿತಳಾಗುತ್ತಾಳೆ. ಕುಂಬಾರರ ಮನೆಯಿಂದ ಆ ಪ್ರತಿಭೆಯನ್ನು ವಾದ್ಯಗಳ ಸಮೇತವಾಗಿ ತರುವಾಗ ಗಾಳಿಯಲ್ಲಿರುವ ಪಾರ್ವತಿ ದೇವಿ ಪ್ರತಿಭೆಯಲ್ಲಿ ಸೇರುತ್ತಾಳೆ. ನಾವು ಅದನ್ನು ಆರತಿಯತ್ತಿ ಮನೆಯೊಳಗೆ ತಂದಿಟ್ಟು ಪ್ರತಿಭೆಯ ಮುಂದೆ ದೀಪ ಹಚ್ಚಿದಾಗ ಅದರಲ್ಲಿನ ವ್ಯಾಪ್ತಿ ರೂಪದಿಂದ ತಾಯಿ ಪ್ರತಿಮೆಯನ್ನು ಸೇರುತ್ತಾಳೆ ಎಂಬ ನಂಬಿಕೆ ಇದೆ.
ಗಣಪತಿಯೂ ಸಹ ಇದೇ ರೀತಿಯಲ್ಲಿ ಪಂಚಭೂತಾತ್ಮನಾಗಿ ನಮ್ಮ ಮನೆ ಸೇರುತ್ತಾನೆ. ಮತ್ತೆ ನೀರಿನಲ್ಲಿ ವಿಸರ್ಜಿಸಿದಾಗ ಆ ಸಮಗ್ರ ದೈವ ಶಕ್ತಿ ಜಗತ್ತಿನಲ್ಲಿ ವ್ಯಾಪಿಸಿ ನಿಲ್ಲುತ್ತದೆ. ಅಂದರೆ ಪಂಚಭೂತಗಳಲ್ಲಿನ ದೇವತಾಶಕ್ತಿಯನ್ನು ಒಂದೆಡೆ ಸೇರಿಸಿ, ಆ ಶಕ್ತಿ ಸ್ವರೂಪಣಿಯನ್ನು ವಿಘ್ನನಿವಾರಕ ನನ್ನು ಭಕ್ತಿಯಿಂದ ಪೂಜಿಸಿ ಆ ನಂತರ ಆ ಶಕ್ತಿಯನ್ನು ಮತ್ತೆ ಪಂಚಭೂತಗಳಲ್ಲಿ ಸೇರಿಸುತ್ತೇವೆ. ಮಣ್ಣಿನ ಮೂರ್ತಿಗಳಲ್ಲಿ ದೈವ ಶಕ್ತಿಯ ವೈಷ್ಟ್ಯತೆ ಇರುವ ಕಾರಣಕ್ಕೆ ಜೇಡಿ ಮಣ್ಣಿನಿಂದ ಮಾಡಿದ ವಿಗ್ರಹಳನ್ನು ಬಳಕೆ ಮಾಡುವುದರಿಂದ ಪರಿಸರದ ಸಂರಕ್ಷಣೆ ಮಾಡಬಹುದಾಗಿದೆ.
ಗಣೇಶ ಹಬ್ಬ ಅಂಗವಾಗಿ ಪಿಒಪಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬದಲು ಮಣ್ಣಿನ ಪರಿಸರ ಸ್ನೇಹಿ ಮೂರ್ತಿ ಬಳಸಬೇಕು. ಬಾಹ್ಯ ರೂಪಕ್ಕೆ ಮಾರು ಹೋಗುತ್ತಿರುವ ಯುವ ಜನತೆಯು ಪಿಒಪಿಯಿಂದ ತಯಾರಿಸಿದ ವಸ್ತುಗಳಿಗೆ ಒತ್ತು ನೀಡುವ ಕಾರ್ಯ ಹೀಗೆಯೇ ಮುಂದುವರೆದಲ್ಲಿ ಪರಿಸರ ನಾಶವಾಗಿ ಮಾನವ ಕುಲಕ್ಕೆ ಗಂಡಾಂತರ ಬರುವುದರಲ್ಲಿ ಸಂದೇಹವಿಲ್ಲ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳಿಂದ ಮಾಡಿರುವ ಗಣೇಶನ ವಿಗ್ರಹಗಳನ್ನು ಬಳಕೆ ಮಾಡುವುದರಿಂದ ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಗಣೇಶ ಹಬ್ಬ ಬಂತೆಂದರೆ ಮುಂಬೈ, ಬೆಂಗಳೂರು, ಹೈದರಾಬಾದ್ ಹಾಗೂ ದೇಶದ ಹಲವಾರು ನಗರಗಳಲ್ಲಿ ಪರಿಸರ ಪ್ರೇಮಿ ಗಣೇಶ ಕೂರಿಸಿ ಎಂಬ ಕೂಗು ಕೇಳಿಬರುತ್ತದೆ.
ಪಿಒಪಿ ಮತ್ತು ರಾಸಾಯನಿಕ ಬಣ್ಣ ಬಳಸಿ ತಯಾರಿಸಿದ ಗಣಪತಿ ಮೂರ್ತಿಗಳನ್ನು ಹಬ್ಬದ ನಂತರ ಕೆರೆ ಹಾಗೂ ಬಾವಿಗಳಲ್ಲಿ ಹಾಕುವುದರಿಂದ ಪರಿಸರದ ಮೇಲೆ ದುಪ್ಟರಿಣಾಮ ಉಂಟಾಗುತ್ತದೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಗಣೇಶೋತ್ಸವವನ್ನು ಹೇಗೆ ಆಚರಿಸಬಹುದು ಎಂದು ಯೋಚಿಸಿದಾಗ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಮಾಡುವುದರಿಂದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಾಡುವುದರಿಂದ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ.
ಹಬ್ಬದ ದಿನದಂದು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜೆ ಸಲ್ಲಿಸಿದ ನಂತರ ಗಣಪನ ವಿಸರ್ಜನೆಯ ಸಂದರ್ಭದಲ್ಲಿ ಗಣೇಶನ ಮೂರ್ತಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ನೀರು ತುಂಬಿಸಿ ಗಣೇಶನ ವಿಗ್ರಹದ ಜೊತೆಗೆ ಆರ್ಕಷಕವಾಗಿ ಬೆಳೆಯುವಂತಹ ತುಳಸಿ ಬೀಜ, ದನಿಯಾ ಬೀಜ, ಹೂವಿನ ಬೀಜ, ಹೀಗೆ ಹಲವಾರು ಬೀಜಗಳನ್ನು ಹಾಕಿದರೆ ಅಲ್ಲೆ ಕರಗಿ ಬೀಜ ಮೊಳಕೆಯೊಡೆಯಲು ಆರಂಭಿಸುತ್ತದೆ. ನಂತರ ಜೇಡಿ ಮಣ್ಣು ನೀರಿನಲಿ ಕರಗಿ ಗಣೇಶನಲ್ಲಿದ್ದ ಗಿಡ ಶಾಶ್ವತವಾಗಿ ಭೂಮಿಯಲ್ಲಿ ನೆಲೆ ನಿಲ್ಲುತ್ತದೆ.
ಪರಿಸರಕ್ಕೆ ಹಾನಿಕಾರಕವಲ್ಲದ ಜೇಡಿಮಣ್ಣಿನ ನೈಸರ್ಗಿಕ ಗಣಪತಿ ಪೂಜಿಸುವ ಮೂಲಕ ಪರಿಸರ ಕಾಳಜಿ ವ್ಯಕ್ತಪಡಿಸೋಣ. ಆ ಮೂಲಕ ಜಲ ಮೂಲಗಳ ಉಳಿವಿಗೆ ನಾವು ಪ್ರಯತ್ನ ಪಡೋಣ. ವಿಷಕಾರಿ, ರಾಸಾಯನಿಕಕಾರಿ, ಲೋಹದ ಲೇಪಿತದ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಗಣೇಶನ ಮೂರ್ತಿ ಬಳಸದೆ ಸಾದಾ ಜೇಡಿ ಮಣ್ಣಿನ ಗಣೇಶ ವಿಗ್ರಹಗಳನ್ನು ಪ್ರತಿಪ್ಠಾಪನೆ ಮಾಡಿ ಪೂಜಿಸಿ ಯಾಕೆಂದರೆ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post