ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಹತ್ತು ಹಲವು ಔಷಧೀಯ ಗುಣಗಳೊಂದಿಗೆ ಗಾಂಧಾರಿ ಮೆಣಸಿನಕಾಯಿ #Gandhari Chilly ಎಂದೇ ನಾಟಿ ಔಷಧಿಯ ಪದ್ಧತಿಯಲ್ಲಿ ಹೆಸರು ಪಡೆದಿರುವುದು ನಮ್ಮ ಈ ಜೀರಿಗೆ ಮೆಣಸಿನ ಕಾಯಿ.
ಬಡವರ ಬಂಧು ಎಂದೇ ಕರೆಸಿಕೊಳ್ಳುತ್ತಿದ್ದ ಹಾಗೂ ತಾವು ವಾಸಿಸುವ ಪರಿಸರದಲ್ಲಿ ಉಚಿತವಾಗಿ ನೈಸರ್ಗಿಕವಾದ ಉಡುಗೊರೆಯಂತೆ ದೊರೆಯುತ್ತಿದ್ದ ಹಲಸಿನ ಹಣ್ಣು. ಕೆಸುವಿನ ಸೊಪ್ಪು. ಹರಬೇ ಸೊಪ್ಪು. ಅಣಬೆ. ಹಾರು ಮೀನು. ಗದ್ದೆ ಏಡಿ. ಹೇಳ್ಳಿಕಾಯಿ. ಕಂಚಿ ಕಾಯಿ. ಚಕೋತ. ಕಿತ್ತಲೆ ಹಣ್ಣು . ನಾಟಿ ಮಾವಿನ ಹಣ್ಣು. ಜೋಪಲು ಹಣ್ಣು. ಕವಳಿ ಹಣ್ಣು. ಚೊಟ್ಟೆಹಣ್ಣು. ಕುಂಬಳಕಾಯಿ. ಚೇಣಿ ಕಾಯಿ. ಚಪ್ಪರದ ಅವರೆಕಾಯಿ. ಸೌತೆಕಾಯಿ. ಪುದಿನ. ಬಸಳೆ ಸೊಪ್ಪು. ಆಲೆ ಹಣ್ಣು ಹೀಗೆ ಒಂದೇ ಎರಡೇ ನೈಸರ್ಗಿಕವಾಗಿ ಮಲೆನಾಡಿನ ಪ್ರತಿ ಮನೆಯ ಹಿತ್ತಲುಗಳಲ್ಲಿ, ಅಲ್ಲಿನ ಗದ್ದೆ ತೋಟ ಕಾಡುಗಳಲ್ಲಿ ಎಲ್ಲೆಂದರಲ್ಲಿ ಹಕ್ಕಿಪಕ್ಷಿ ಮಂಗ ಇತರೆ ಜೀವಸಂಕುಲಗಳು ತಿಂದು ಹಾಕಿದ ಇಕ್ಕೇಯಿಂದ ಪಸರಿಸುತ್ತಿದ್ದ ಬೀಜಗಳು ಸಹಜವಾದ ನಿಸರ್ಗದತ್ತವಾಗಿ ಎಲ್ಲೆಂದರಲ್ಲಿ ಸೋಜಿಗದಂತೆ ಬೆಳೆದು ನಿಂತು ಋತುಮಾನಕ್ಕೆ ತಕ್ಕಂತೆ ಫಲ ನೀಡುತ್ತಿದ್ದವು.
ಕೆಲವೊಂದು ಬೀಜಗಳನ್ನು ನಮ್ಮ ಹಳ್ಳಿಗರು ಸಂರಕ್ಷಣೆ ಮಾಡಿ ಇಟ್ಟುಕೊಂಡು ಮುಂಗಾರು ಮಳೆಯ ಆರಂಭಕ್ಕೆ ಮುಂಚೆ ಬಿಸಿ ಮಣ್ಣಿಗೆ ಬಿತ್ತನೆ ಮಾಡುತ್ತಿದ್ದರು.
ಅಡುಗೆ ಮನೆಯ ಔಷಧಿಯಂತಿದ್ದ, ಮಲೆನಾಡಿನ ಮನೆಗಳ ಹಿತ್ತಲಿನ ಮದ್ದಿನಂತಿದ್ದ ಈ ಎಲ್ಲವು ಆಧುನಿಕ ಕೃಷಿ ಪದ್ಧತಿಯ ಭರಾಟೆಯಲ್ಲಿ ದಿನಕಳದಂತೆ ಒಂದೊಂದೇ ನಾಶವಾಗುತ್ತಾ ಹೋಗುತ್ತಿದ್ದಾವೆ.
ನಮ್ಮ ಹಿಂದಿನ ತಲೆಮಾರಿನ ಕೆಲವರು ಲೀಟರ್ ಗಟ್ಟಲೆ ಶರಾಯಿ, ಬಟ್ಟಿ ಮತ್ತು ಕಟ್ಟುಗಟ್ಟಲೆ ಬೀಡಿಗಳನ್ನು ಸೇದಿ ಸೇದಿ ಬಿಸಾಡುತ್ತಿದ್ದರು ಕೂಡ, ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದದ್ದು ಬಹಳ ಕಡಿಮೆ ಮತ್ತು ಬಹುತೇಕ ಇವರೆಲ್ಲ ಶತಮಾನದಂಚಿಗೆ ಬಂದು, ಶತಮಾನವನ್ನು ದಾಟಿ , ಬಹುತೇಕ ಹೆಚ್ಚಿನ ರೀತಿಯಲ್ಲಿ ಆಸ್ಪತ್ರೆಯ ಮೆಟ್ಟಿಲನ್ನು ಹತ್ತದೇ ಬಾಳಿ ಬದುಕಿದವರು.
ಇಂತಹ ಆರೋಗ್ಯಕ್ಕೆ ಬಹು ಮುಖ್ಯವಾದ ಕಾರಣ, ಅಂದು ಋತುಮಾನಗಳಿಗೆ ತಕ್ಕಂತೆ ನೈಸರ್ಗಿಕವಾಗಿ ದೊರೆಯುತ್ತಿದ್ದ ಮನೆಯ ಮದ್ದಿನಂತಿದ್ದ , ಊಟವೇ ಔಷಧಿಯಂತಿದ್ದ ಆಹಾರ ಪದ್ಧತಿ ಮತ್ತು ಮೈ ಬೆವರಿಳಿಸಿ ದುಡಿಯುತ್ತಿದ್ದ ಜೀವನ ಪದ್ಧತಿ ಎನ್ನಬಹುದು.
ಇಂದು ನಾವು ಬಿಸಿಲಿಗೆ ಹೋಗಿರುವುದಿಲ್ಲ ನೆರಳನ್ನು ಬಯಸುತ್ತೇವೆ, ದುಡಿದು ಬೆವರಿಳಿಸಿರುವುದಿಲ್ಲ, ವಿಶ್ರಾಂತಿ ಬೇಕು ಎಂದು ಹಂಬಲಿಸುತ್ತೇವೆ. ಈ ರೀತಿ ಸುಖಕ್ಕೆ ಜೋತುಬಿದ್ದು ಒಂದು ಸಂತೋಷವನ್ನು ಕಳೆದುಕೊಳ್ಳುತ್ತಿದ್ದೇವೆ. ಇಲ್ಲಿ ನಾವುಗಳು “ಸುಖವೇ ಬೇರೆ ಸಂತೋಷವೇ” ಬೇರೆ ಎಂಬುದನ್ನುಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ.
ಇಂದು ನಾನು ಮಾತನಾಡಲು ಹೊರಟಿರುವುದು ಮಲೆನಾಡಿನ ತೋಟದ ತುಂಬೆಲ್ಲ ತನಗೆ ತಾನೇ ಎಲ್ಲೆಂದರಲ್ಲಿ, ಕೆಲವೇಡೆ ಕಲ್ಲಿನ ಬಂಡೆಕಲ್ಲಿನ ಮೇಲೂ ಕೂಡ ಬೆಳೆದು ನಿಂತು ಬಡವರ ಬಂಧು ಎನಿಸಿಕೊಂಡಿದ್ದ ಸೋಜಿಗದ ಸೂಜಿ ಮೆಣಸು ಅಥವಾ ಜೀರಿಗೆ ಮೆಣಸು. ಇದನ್ನು ನಾನು ಈಗಾಗಲೇ ಹೇಳಿದಂತೆ ಗಾಂಧಾರಿ ಮೆಣಸಿನ ಗಿಡ ಎಂದು ಕರೆಯುವುದು ಉಂಟು.
ಈ ಜೀರಿಗೆ ಮೆಣಸಿನ ಗಿಡವನ್ನು ನಾವು ನೆಡಬೇಕೆಂದಿಲ್ಲ. ಪಕ್ಷಿಗಳ ಹಿಕ್ಕೆಯಿಂದ ತೋಟದ ತುಂಬಾ ಬೆಳೆಯುತ್ತವೆ. ನಾವು ಕಳೆ ತೆಗೆಯುವಾಗ ಜಾಗ್ರತೆವಹಿಸಬೇಕಷ್ಟೇ. ಯಾವುದೇ ನಿರ್ವಹಣೆ ಬೇಕಿಲ್ಲ.
ಈ ಜೀರಿಗೆ ಮೆಣಸಿನ ಗಿಡದ ವಿಶೇಷತೆ ಎಂದರೆ, ಇತರೆ ಮೆಣಸಿನಕಾಯಿಗಳು ನೆಲ ನೋಡುತ್ತಾ ಬೆಳೆದರೆ ಇದು ಆಕಾಶ ನೋಡುತ್ತಾ ಬೆಳೆಯುತ್ತದೆ. ಅಂದರೆ ಗಿಡದಲ್ಲೂ ನೆಟ್ಟಗೆ ನಿಂತಿರುತ್ತದೆ ಈ ಮೆಣಸಿನಕಾಯಿ,ಪರಿಶುದ್ಧ ನೈಸರ್ಗಿಕ ಗಿಡವಾದ ಇದನ್ನು ನೆಟ್ಟು ಬೆಳೆಸಿದರೆ ಅಷ್ಟೊಂದು ಚಂದವಾಗಿ ಬೆಳೆಯುವುದಿಲ್ಲ ಅನ್ನುತ್ತಾರೆ,
ನವಿಲು ಮತ್ತು ಕಾಗೆಗಳಿಗೆ ಅತೀ ಹೆಚ್ಚು ಪ್ರಿಯವಾದ ಈ ಜೀರಿಗೆ ಮೆಣಸಿನ ಕಾಯಿಯನ್ನು, ನವಿಲು ಕಾಗಿಲೆಗಳು ಅದರ ಹಣ್ಣನ್ನು ತಿಂದು ತಾವು ಹಾಕುವ ಇಕ್ಕೆಗಳ ಮೂಲಕ ಇದರ ಬೀಜ ಪ್ರಸರಣವನ್ನು ಮಾಡುತ್ತವೆ.
ಚಿತ್ರದಲ್ಲಿರುವ ಗಿಡ ಸುಮಾರು ನಾಲ್ಕು ವರ್ಷಗಳಿಂದ ಸತತವಾಗಿ ಕಾಯಿ ಬಿಡುತ್ತಿದೆ. ಈ ರೀತಿ ಒಂದೆರಡು ಗಾಂಧಾರಿ ಅಥವ ಮುಗಿಲು ಮೆಣಸಿನ ಕಾಯಿ ಗಿಡವಿದ್ದರೆ ಹಸಿಮೆಣಸಿನಕಾಯಿ ಖರೀದಿಸುವ ಪ್ರಮೇಯವೇ ಬರುವುದಿಲ್ಲ.
ಬೇಸಿಗೆ ದಿನಗಳಲ್ಲಿ ಈ ಗಾಂಧಾರಿ ಮೆಣಸಿನ ಕಾಯಿಯ ಹಣ್ಣನ್ನು ಬಿಡಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು, ಉಪ್ಪಿನಕಾಯಿಗೆ ಬೆರೆಸಿ ಹಾಕಿದರೆ ಮಳೆಗಾಲದಲ್ಲಿ ಆ ಉಪ್ಪಿನಕಾಯಿ ಕೆಡುವುದಿಲ್ಲ, ಕಪ್ಪಾಗುವುದಿಲ್ಲ, ಬೂಸ್ಟ್ ಕೂಡ ಬರುವುದಿಲ್ಲ. ಹಾಗೂ ಇದರ ಸೇವನೆಯಿಂದ ಅಸಿಡಿಟಿ ಕೂಡ ಆಗುವುದಿಲ್ಲ.
ಮಲೆನಾಡಿನಲ್ಲಿ ಸಿಗುವ ಕೆಸುವಿನ ಸೊಪ್ಪು, ಅಮಟೆಕಾಯಿ, ಕಳಲೆ ಪಲ್ಯ, ಏಡಿ ಹುಳಿ , ಹಪ್ಪಳ ಸೆಂಡಿಗೆಗೆ ಹಾಕಿ ಉಪಯೋಗಿಸಿದರೆ ಅದರ ಸ್ವಾದವೆ ಬೇರೆ ಎನ್ನುತ್ತಾರೆ ನಮ್ಮ ಹಳ್ಳಿಯ ಹಿರಿಕರು.
ಹಿತ್ತಲ ಗಿಡ ಮದ್ದಲ್ಲ, ದೂರದ ಬೆಟ್ಟ ನುಣ್ಣಗೆ ಎನ್ನುವ ನಮ್ಮ ಮನೋಭಾವನೆಯಿಂದ, ಈ ಜೀರಿಗೆ ಮೆಣಸಿನ ಕಾಯಿಯ ಮಹತ್ವ ಮತ್ತು ಮೌಲ್ಯ ಅರಿಯದೆ, ಕಾಫಿ ತೋಟಗಳಿಗೆ ಕಳೆನಾಶಕ ಸಿಂಪಡಿಸುತ್ತಾ ಹಾಗೂ ವೀಡ್ ಕಟರ್ ನಲ್ಲಿ ಕಳೆ ಹೊಡೆಯುತ್ತಿರುವ ಪರಿಣಾಮ ಈ ಗಿಡದ ತಳಿಯೇ ಕಣ್ಣರೆಯಾಗುತ್ತಾ ಹೋಗುತ್ತಿದೆ.
ಅಂದಹಾಗೆ ಇಂದು ಬಹಳಷ್ಟು ಜನರನ್ನು ಯೌವನದ ದಿನಗಳಲ್ಲಿಯೇ ನಿತ್ಯ ಬಾಧಿಸುತ್ತಿರುವ ಕೊಲಸ್ಟ್ರಾಲ್, ರಕ್ತದೊತ್ತಡ, ಗ್ಯಾಸ್ಟ್ರಿಕ್ ಮುಂತಾದ ರೋಗಗಳಿಗೆ ರಾಮಬಾಣದಂತಿರುವ ಈ ಜೀರಿಗೆ ಮೆಣಸಿನ ಕಾಯಿಗೆ ಅಂಗಡಿಗಳಲ್ಲಿ ಒಂದು ಕೆಜಿ ಗೆ ರೂಪಾಯಿ 1200 ರಿಂದ 2,000 ದವರೆಗೂ ಬೆಲೆ ಇದೆ. ಒಂದು ಗಿಡ ವರ್ಷಕ್ಕೆ ಸರಾಸರಿ 5 ಕೆ.ಜಿ ಹಣ್ಣು ಕೊಡುತ್ತದೆ ಎಂಬ ಅಂದಾಜಿದೆ.
ತೇಜಸ್ವಿಯವರ ಕರ್ವಾಲೊ ಕಾದಂಬರಿಯಲ್ಲಿ ಬರುವ ಹಾವಾಡಿಗ ವೆಂಕಟನು, ಹಾವಿನಿಂದ ಕಡೆಸಿಕೊಂಡವರಿಗೆ ಈ ಜೀರಿಗೆ ಮೆಣಸಿನ ಕಾಯಿಯನ್ನು ತಿನ್ನಲು ಕೊಡುತ್ತಿದ್ದದದ್ದು ನನಗೆ ಇನ್ನೂ ನೆನಪಿದೆ.
ಅನೇಕ ಔಷಧೀಯ ಗುಣಗಳು ಇರುವುದರಿಂದ, ಈ ಗಾಂಧರಿಯನ್ನು ಒಣಗಿಸಿ,ಕೇರಳದಿಂದ ದುಬೈಗೆ ಎಕ್ಸ್ಪೋರ್ಟ್ ಮಾಡುತ್ತಿದ್ದು , ವಿದೇಶಗಳಲ್ಲಿ ಬಹಳ ಬೇಡಿಕೆ ಈ ಜೀರಿಗೆ ಮೆಣಸಿನ ಕಾಯಿಗೆ ಇದೆ.
ಮಲೆನಾಡಿನ ಪರಿಸರದೊಳಗೆ ಸಂಪ್ರದಾಯ ಮತ್ತು ಪರಂಪರೆಯ ಭಾಗವಾಗಿ, ಆಹಾರ ಪದ್ಧತಿಯಲ್ಲಿ ನಿತ್ಯ ಬಳಕೆಯಾಗುತ್ತಿದ್ದ ಈ ಜೀರಿಗೆ ಮೆಣಸಿನ ಕಾಯಿಯ ಬಳಕೆ ಮತ್ತು ಬೆಳೆಯುವಿಕೆ ಬಗ್ಗೆ ಮಹತ್ವ ಕೊಡುವುದು ಪರಿಸರ ಹಾಗೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂಬುದು ನ್ಯೂಸ್ ಕಿಂಗ್ ಅಭಿಪ್ರಾಯ.
ಆರೋಗ್ಯವೇ ಭಾಗ್ಯ ಎಂಬುದು ಗೊತ್ತಾಗುವುದು ನಮ್ಮ ನಮ್ಮ ಆರೋಗ್ಯ ಕಳೆದು ಹೋದಾಗ ಮಾತ್ರ. ಅಲ್ಲಿಯವರೆಗೆ ಆರೋಗ್ಯದ ಮಹತ್ವ ನಮಗೆ ತಿಳಿಯುವುದಿಲ್ಲ. ಒಂದು ಒಳ್ಳೆಯ ಆರೋಗ್ಯ ಜೀವನಕ್ಕಾಗಿ ಜೀರಿಗೆ ಮೆಣಸಿನ ಕಾಯಿಯನ್ನು ಸೇವಿಸೋಣ, ಆ ಸಂತತಿಯನ್ನು ಕಾಪಾಡುವ ಮೂಲಕ ಹಿತ್ತಲ ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ.
ಲೇಖನ: ಡಿ.ಎಂ. ಮಂಜುನಾಥಸ್ವಾಮಿ, ಚಿಕ್ಕಮಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post