ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅದೃಷ್ಟ ಮತ್ತು ಅವಕಾಶಗಳು ಕೆಲವೊಮ್ಮೆ ನಮ್ಮನ್ನರಸಿ ಬರುತ್ತವೆಯಂತೆ. ಆ ಸಮಯದಲ್ಲಿ ಎಚ್ಚೆತ್ತುಕೊಂಡರೆ ಸೌಭಾಗ್ಯ ನಮ್ಮದಾಗುತ್ತದೆ. ಇಲ್ಲವಾದರೆ ಎಂದಿನಂತೆ ನಾವೇ ಸೃಷ್ಟಿಸಿಕೊಂಡ ನಮ್ಮ ಸಮಸ್ಯೆಗಳಿಗೆ ಇತರರನ್ನು ದೂಷಿಸುತ್ತಾ ಜೀವನವನ್ನೇ ಕಳೆಯುತ್ತೇವೆ. ಅಂತಹ ಅಪರೂಪದ ಒಂದು ಸದಾವಕಾಶವು ನಮಗೆ ಕಳೆದ ಹನ್ನೆರಡು ದಿನಗಳಿಂದ ದೊರೆಯುತ್ತಿದ್ದು ಇನ್ನು ಕೇವಲ ಹದಿನೆಂಟು ದಿನಗಳು ಮಾತ್ರ ದೊರೆಯಲಿದೆ.
ಹೌದು ಅಧಿಕ ಶ್ರಾವಣ ಪ್ರಯುಕ್ತ ಶ್ರೀ ಶನೈಶ್ಚರ ದೇವಾಲಯ ಸಮಿತಿಯು ಭಾರತೀಯ ವೈದ್ಯಕೀಯ ಸಂಘ ಹಾಗೂ ಭಜನಾ ಪರಿಷತ್ ಸಹಯೋಗದಲ್ಲಿ ಕೈಗೊಂಡಿರುವ ‘ಅಧಿಕಸ್ಯ ಅಧಿಕ ಫಲಂ’ ಕಾರ್ಯಕ್ರಮದಡಿ ಶಿಬಿರಾರ್ಥಿಗಳಿಗೆ ನಿತ್ಯ ಬೆಳಿಗ್ಗೆ ಆರು ಗಂಟೆಯಿಂದ ಯೋಗ ಧ್ಯಾನ ಹಾಗೂ ಪ್ರಾಣಾಯಾಮಗಳ ಅಭ್ಯಾಸ, ನಂತರ ಪ್ರತಿನಿತ್ಯ ಒಬ್ಬರು ಪರಿಣಿತ ವೈದ್ಯರಿಂದ ಉಪಾನ್ಯಾಸ ಮಾಲಿಕೆಯು ಅದ್ಭುತವಾಗಿ ಮೂಡಿಬರುತ್ತಿದೆ. ಉತ್ತಮ ಜೀವನಕ್ಕೆ ಹಾಗೂ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಕ್ರಮ, ಉತ್ತಮ ಜೀವನ ಶೈಲಿ ಮತ್ತು ಅಗತ್ಯ ದೈಹಿಕ ವ್ಯಾಯಾಮದೊಂದಿಗೆ ಕಾಲ ಕಾಲಕ್ಕೆ ಕೈಗೊಳ್ಳಬೇಕಾದ ತಪಾಸಣೆಗಳ ಕುರಿತು ಅಗತ್ಯ ಪ್ರಾತ್ಯಕ್ಷಿಕೆಗಳೊಂದಿಗೆ ನುರಿತ ವೈದ್ಯರುಗಳು ನೀಡುತ್ತಿರುವ ಅಮೂಲ್ಯ ಜ್ಞಾನವನ್ನು ಬೇರೆಡೆ ಪಡೆಯಲು ಎಷ್ಟು ಹಣ ಖರ್ಚು ಮಾಡಿದರೂ ಸಾಧ್ಯವಾಗದು. ಸಣ್ಣಪುಟ್ಟ ಖಾಯಿಲೆಗಳಿಗೂ ಆಸ್ಪತ್ರೆಗಳ ಬಳಿ ತೆರಳುವ ನಾವುಗಳು ಸ್ವತ: ವೈದ್ಯರುಗಳೇ ನಮ್ಮ ಬಳಿ ಬಂದು ನೀಡುತ್ತಿರುವ ಉಪಾನ್ಯಾಸಗಳು ನಿಜಕ್ಕೂ ಅಮೃತ ಸಮಾನವಾಗಿವೆ. ಭಾರತೀಯ ವೈದ್ಯಕೀಯ ಸಂಘದ ಹಾಲಿ ಅಧ್ಯಕ್ಷರಾಗಿರುವ ಡಾ.ಅರುಣ್ ಹಾಗೂ ಕಾರ್ಯದರ್ಶಿ ಡಾ.ರಕ್ಷಾ ರಾವ್ ಈ ಅತ್ಯುತ್ಕೃಷ್ಟ ಕಾರ್ಯಕ್ಕಾಗಿ ನಿಜಕ್ಕೂ ಅಭಿನಂದನಾರ್ಹರು.
ಇನ್ನು ಪ್ರತಿನಿತ್ಯ ಸಂಜೆ ಆರು ಗಂಟೆಯಿಂದ ಆಧ್ಯಾತ್ಮಿಕ ಪ್ರವಚನಗಳು, ಹರಿಕಥೆಗಳು, ಭಜನಾಮೃತಗಳು ಆಂತರಿಕ ಮನೋಬಲದ ವೃದ್ದಿಗೆ ಬಹಳಷ್ಟು ಸಹಕಾರಿಯಾಗಿದ್ದು ಮೊದಲ ವಾರದಲ್ಲಿ ಕಗ್ಗ ಖ್ಯಾತಿಯ ವಿದ್ವಾನ್ ಜಿ.ಎಸ್.ನಟೇಶ್ ರವರಿಂದ ಮಂಕುತಿಮ್ಮನ ಕಗ್ಗ ಉಪಾನ್ಯಾಸವು ಮನಮುಟ್ಟುವಂತೆ ಮೂಡಿಬಂದಿದೆ. ಎರಡನೇಯ ವಾರದಲ್ಲಿ ತುಮಕೂರಿನ ಖ್ಯಾತ ಹರಿದಾಸರಾದ ವಿದ್ವಾನ್ ಮೋಹನ್ ಕುಮಾರ್ ರವರಿಂದ ಹರಿಕಥೆ ಆಯೋಜನೆಗೊಂಡಿತ್ತು.
Also read: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ರೋಗಿಗಳ ಆರೋಗ್ಯ ವಿಚಾರಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ
ಪ್ರಸ್ತುತ ಭಾನುವಾರದಿಂದ ನಗರದ ಖ್ಯಾತ ವಿದ್ವಾನ್ ಹಂದಲಸು ವಾಸುದೇವ ಭಟ್ಟರಿಂದ ‘ಧರ್ಮದ ಹತ್ತು ಲಕ್ಷಣಗಳು ಮತ್ತು ನವ ವಿಧ ಭಕ್ತಿ’ ಉಪಾನ್ಯಾಸ ಮೂಡಿಬರಲಿದೆ. ಕೊನೆಯವಾರದಲ್ಲಿ ಡಾ.ವೀಣಾ ಬನ್ನಂಜೆಯವರ ‘ಭಾಗವತ ಸಪ್ತಾಹ’ ವು ಬಹಳ ಜನರನ್ನು ಕಾತರದಿಂದ ಕಾಯುವಂತೆ ಮಾಡಿದೆ. ಪ್ರಥಮ ಬಾರಿಗೆ ವೀಣಕ್ಕ ಎಂದೇ ಜನರ ಪ್ರೀತಿಗೆ ಪಾತ್ರರಾಗಿರುವ ಡಾ.ವೀಣಾ ಬನ್ನಂಜೆಯವನ ಉಪಾನ್ಯಾಸ ಮಾಲಿಕೆಯು ಆಗಸ್ಟ್ ಹದಿನಾರರವರೆಗೆ ಮೂಡಿಬರಲಿದ್ದು ಒಟ್ಟಾರೆ ಇನ್ನೂ ಹದಿನೆಂಟು ದಿನಗಳು ಈ ರಸದೌತಣದ ಸವಿಯನ್ನು ಸವಿಯಲು ಅವಕಾಶವಿದ್ದು ಅದೃಷ್ಟವಿದ್ದವರಿಗೆ ಮಾತ್ರ ಈ ಸದಾವಕಾಶವೆನ್ನಬಹುದು.
ನಿತ್ಯ ಇಬ್ಬರು ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ನಗರದ ಸಮಸ್ತ ಭಜನಾ ಮಂಡಳಿಗಳ ಒಕ್ಕೂಟವಾಗಿರುವ ಭಜನಾ ಪರಿಷತ್, ಅರ್ಚಕ ವೃಂದಗಳ ಪರವಾಗಿ ಸಂಪೂರ್ಣ ಕಾರ್ಯಯೋಜನೆಯ ಹೊಣೆ ಹೊತ್ತ ಶಬರೀಶ್ ಕಣ್ಣನ್ ಮತ್ತ ಅವರ ತಂಡಕ್ಕೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳನ್ನು ಹೇಳಲೇಬೇಕು.
ನಾಗರಾಜ ಶೆಟ್ಟರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post