ಕಾಪು: ಕರ್ನಾಟಕ, ಕೇರಳ ಸೇರಿದಂತೆ ಭಾರತದ ಹಲವು ಭಾಗಗಳಲ್ಲಿ ಪ್ರಕೃತಿ ಮುನಿಸಿಕೊಂಡಿದ್ದು, ಪರಿಣಾಮ ವರುಣ ದೇವನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿಹೋಗಿದೆ.
ಪ್ರಮುಖವಾಗಿ ರಾಜ್ಯದ ಮಟ್ಟಿಗೆ ನೋಡುವುದಾದರೆ, ಕರಾವಳಿ, ಮಲೆನಾಡು, ಮಡಿಕೇರಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣ ಆರ್ಭಟಕ್ಕೆ ಜನಜೀವನ ಅಕ್ಷರಶಃ ನರಕ ಸದೃಶ್ಯವಾಗಿದೆ. ಹೀಗಾಗಿ, ಪ್ರಕೃತಿ ಶಾಂತವಾಗಲಿ ಎಂದು ಪ್ರಾರ್ಥನೆ ಮಾಡುವ ಒಂದು ಮಾರ್ಗ ಬಿಟ್ಟರೆ ಈಗ ನಮ್ಮ ಮುಂದೆ ಬೇರೇನೂ ಇಲ್ಲ.
ಹೀಗಾಗಿ, ಪ್ರಕೃತಿ ಮಾತೆ ಶಾಂತವಾಗಿ, ಜನ ಜೀವನ ಸಹಜ ಸ್ಥಿತಿಗೆ ಬರಲಿ ಎಂದು ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶ್ರಾವಣ ಮಾಸದ ಮೊದಲ ಶುಕ್ರವಾರವಾದ ಇಂದು ಪವಿತ್ರವಾದ ದಿನ. ಹೀಗಾಗಿ, ಇಂದು ಸಂಜೆ ವಿಶೇಷ ದೀಪ ನಮಸ್ಕಾರ ಮಾಡುವ ಮೂಲಕ ಪ್ರಾರ್ಥಿಸಿದ್ದಾರೆ. ದೀಪ ನಮಸ್ಕಾರ ಪೂಜೆ ಮಾಡಿ, ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿಯನ್ನು ಪಂಚ ದೀಪಗಳಲ್ಲಿ ಆರಾಧಿಸಿ ಪ್ರಕೃತಿ ವಿಕೋಪ ಶಾಂತಗೊಳಿಸಲು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಏನಿದರ ವಿಶೇಷತೆ?
ತಮ್ಮ ಸಾಮಾಜಿಕ ಕಳಕಳಿಯಿಂದ ಸ್ವಯಂಪ್ರೇರಣೆಯಿಂದ ಈ ವಿಶೇಷ ಪೂಜೆ ಸಲ್ಲಿಸಿರುವ ಅಮ್ಮಣ್ಣಾಯ ಅವರ ಬಳಿ ಇದರ ವಿಶೇಷತೆ ಕುರಿತು ಕೇಳಲಾಯಿತು. ಇದಕ್ಕೆ ಅಮ್ಮಣ್ಣಾಯ ವಿವರಿಸಿದ್ದು ಹೀಗೆ:
ಪಂಚಭೂತಗಳ ಸಮ್ಮಿಲನವೇ ಪ್ರಕೃತಿ ಮಾತೆ ದುರ್ಗಾದೇವಿ. ಐದು ಮುಖದಲ್ಲಿ ಐದು ದೀಪಗಳನ್ನು ಪಂಚ ದುರ್ಗಾ ಮಂತ್ರದಿಂದ(ಜಾತವೇದಸೇ ಅದಿ ಐದು ದುರ್ಗಾ ಮಂತ್ರಗಳಲ್ಲಿ ಅಗ್ನಿ, ಪೃಥ್ವಿ, ಆಕಾಶ, ಜಲ, ವಾಯು ತತ್ವಗಳಲ್ಲಿ ಇರುತ್ತದೆ.
ಶಿಖಿಭೂಖಪಯೋಮರುತ್-ಗಳೇ ಪಂಚ ಭೂತಗಳು) ಪ್ರಜ್ವಲನೆ ಮಾಡಿ ಶೋಡಶೋಪಚಾರ ಮೂಲಕ, ಸಪ್ತಶತಿ ಪಾರಾಯಣಗಳ ಮೂಲಕ, ಮಹಾದೇವಿಯ ಸೂಕ್ತಾದಿಗಳ ಮೂಲಕ ಪೂಜಿಸಿ ಮಹಾಮಂಗಳಾರತಿ ಮಾಡಿ 108 ದೀಪ ನಮಸ್ಕಾರ ಮಾಡಬೇಕು.
ಇಡೀ ಪ್ರಕೃತಿಯು ಮುನಿದರೆ ಅದನ್ನು ಶಮನ ಮಾಡುವ ಸಾಮರ್ಥ್ಯ ನಮ್ಮಲ್ಲಿಲ್ಲ. ಕೊನೆಗೆ ಅವಳಿಗೇ ಶರಣಾಗಿ ಬಿಡುವುದೊಂದೇ ದಾರಿ. ಮಹಾಭಾರತದಲ್ಲಿ ಹಿಂದುಮುಂದು ನೋಡದೆ ಅಶ್ವತ್ಥಾಮನು ನಾರಾಯಣಾಸ್ತ್ರ ಪ್ರಯೋಗಿಸಿದ. ಪರಿಣಾಮ ವಿಕೋಪಕ್ಕೆ ತೆರಳುತ್ತದೆ. ಪಾಂಡವರು ತಮ್ಮ ತಮ್ಮ ಅಸ್ತ್ರಗಳ ಮೂಲಕ ಅದನ್ನು ತಡೆಯಲು ಹೊರಟಾಗ, ಶ್ರೀ ಕೃಷ್ಣನು ನಗುತ್ತಾ, ಹೇ ಪಾಂಡು ಪುತ್ರರೇ, ನಾರಾಯಣಾಸ್ತ್ರವು ನಾನೆ. ಇದಕ್ಕೆ ಶರಣಾಗದ ಹೊರತು ಶಮನವಿಲ್ಲ. ನಿಶಸ್ತ್ರರಾಗಿ ಶರಣಾ’ ಎನ್ನುತ್ತಾನೆ.
ಕ್ಷಣದಲ್ಲೇ ಶ್ರೀಕೃಷ್ಣನ ಆದೇಶವನ್ನು ಪಾಂಡವರು ಮತ್ತು ಎಲ್ಲಾ ಸೈನಿಕರು ಪಾಲಿಸುತ್ತಾರೆ. ಅಸ್ತ್ರವು ಶ್ರೀಕೃಷ್ಣನ ಚರಣದಲ್ಲಿ ಲೀನವಾಗುತ್ತದೆ. ಹಾಗೆಯೇ ತಾಯಿಯ ಕೋಪಕ್ಕೆ ಇರುವ ದಾರಿ ಒಂದೆ. ಶರಣಾಗಿ ಬಿಡುವುದು.
Discussion about this post