ಕಲ್ಪ ಮೀಡಿಯಾ ಹೌಸ್
ಸಿನಿಪ್ರಿಯರಲ್ಲಿ ಹೊಸ ಸಂಚಲನ ಉಂಟು ಮಾಡಿದ್ದ ಜನಪ್ರಿಯ ಚಲನಚಿತ್ರ ಕೆಜಿಎಫ್ ಅಧ್ಯಾಯ 2ನ್ನು ಎರಡು ದಿನಗಳಲ್ಲಿ ಮೂರು ಬಾರಿ ವೀಕ್ಷಿಸಿದ 15 ವರ್ಷದ ಹುಡುಗನೊಬ್ಬ ಮುಖ್ಯ ಪಾತ್ರ ರಾಕಿ ಭಾಯ್‌ನಿಂದ ಸ್ಫೂರ್ತಿ ಪಡೆದು, ಪೂರ್ಣ ಪ್ಯಾಕ್ ಸಿಗರೇಟ್ ಸೇದಿ ತೀವ್ರ ಗಂಟಲು ನೋವು ಹಾಗೂ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ತೀವ್ರ ಅಸ್ವಸ್ಥನಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಹೈದರಾಬಾದ್‌ನಲ್ಲಿ ಇಂತಹದೊಂದು ಪ್ರಸಂಗ ನಡೆದಿದ್ದು, ಇಲ್ಲಿನ ಸೆಂಚುರಿ ಆಸ್ಪತ್ರೆಯ ವೈದ್ಯರು ಕೌನ್ಸೆಲಿಂಗ್ ಮಾಡುವುದರ ಜೊತೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಶ್ವಾಸಕೋಶ ತಜ್ಞ ಡಾ. ರೋಹಿತ್ ರೆಡ್ಡಿ ಪಥೂರಿ, “ಹದಿಹರೆಯದವರು ರಾಕಿ ಭಾಯಿಯಂತಹ ಪಾತ್ರಗಳಿಂದ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಈ ಚಿಕ್ಕ ಹುಡುಗ ಒಂದು ಪ್ಯಾಕ್ ಸಿಗರೇಟ್ ಸೇದಿ ತೀವ್ರ ಅಸ್ವಸ್ಥನಾಗಿದ್ದನು. ಚಲನಚಿತ್ರಗಳು ನಮ್ಮ ಸಮಾಜದಲ್ಲಿ ಹೆಚ್ಚು ಪ್ರಭಾವ ಬೀರುವ ಅಂಶವಾಗಿದೆ. ಸಿಗರೇಟ್ ಸೇದುವುದು, ತಂಬಾಕು ಜಗಿಯುವುದು ಹಾಗೂ ಮದ್ಯಪಾನ ಮಾಡುವಂತಹ ದೃಶ್ಯಗಳನ್ನು ವೈಭವೀಕರಣ ಮಾಡದಿರುವ ನೈತಿಕ ಜವಾಬ್ದಾರಿಯನ್ನು ಚಲನಚಿತ್ರ ನಿರ್ಮಾಪಕರು ಮತ್ತು ನಟರು ಹೊಂದಿರಬೇಕು. ‘ರಾಕಿ ಭಾಯ್’ ನಂತಹ ಪಾತ್ರಗಳನ್ನು ಅನುಸರಣೆ ಮಾಡುವ ಜೊತೆಗೆ ಅದರಿಂದ ಯುವ ಮನಸ್ಸುಗಳು ಪ್ರಭಾವಿತವಾಗುತ್ತವೆ ಎಂದು ಹೇಳಿದ್ದಾರೆ.
ಹದಿಹರೆಯದವರ ಪಾಲಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಮತ್ತು ಅವರ ಮಗುವಿನ ನಡವಳಿಕೆಗಳ ಮೇಲೆ ಯಾವ ಅಂಶಗಳು ಪ್ರಭಾವ ಬೀರುತ್ತವೆ ಎಂಬುದರ ಮೇಲೆ ನಿಗಾ ಇಡಬೇಕು. ಘಟನೆ ನಡೆದ ನಂತರ ವಿಷಾದಿಸುವ ಬದಲು, ಧೂಮಪಾನದಂತಹ ಕೃತ್ಯಗಳ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಡಾ. ರೋಹಿತ್ ರೆಡ್ಡಿ ಸಲಹೆ ನೀಡಿದ್ದಾರೆ.
Also read: ಮೈನ್ ಮಿಡ್ಲ್ ಸ್ಕೂಲ್ ಆವರಣಕ್ಕೆ ಭದ್ರತೆ ಒದಗಿಸಿ: ಅಣ್ಣಾ ಹಜಾರೆ ಹೋರಾಟ ಸಮಿತಿ ಆಗ್ರಹ
ತಂಬಾಕು, ಆಲ್ಕೋಹಾಲ್ ಸೇವನೆ ಮತ್ತು ಧೂಮಪಾನವು ಯುವಜನರಲ್ಲಿ ಗಮನಾರ್ಹವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು, ಉಸಿರಾಟದ ತೊಂದರೆ, ದೈಹಿಕ ಸಾಮರ್ಥ್ಯ ಕಡಿಮೆಯಾಗುವುದು, ಶ್ವಾಸಕೋಶದ ಬೆಳವಣಿಗೆ ಮತ್ತು ಕಾರ್ಯಚಟುವಟಿಕೆಗಳ ಮೇಲೆ ಸಂಭಾವ್ಯ ಪರಿಣಾಮಬೀರುತ್ತದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post