ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರಾವಣ ಶುಕ್ಲ ಪೂರ್ಣಿಮೆ ದಿನಕ್ಕೆ ಅತಿ ಸನಿಹ ಇರುವ ಶುಕ್ರವಾರದ (ಎರಡನೇ ಶುಕ್ರವಾರ) ಶುಭ ದಿನವೇ ಶ್ರೀ ವರಮಹಾಲಕ್ಷ್ಮಿ ಆರಾಧನೆಗೆ ಸೂಕ್ತವಾದ ಕಾಲ ಎಂದಿವೆ ಪುರಾಣಗಳು. ಸಕಲ ಸಂಪತ್ತನ್ನೂ ವರವಾಗಿ ನೀಡುವ ಸಿರಿ ಲಕ್ಷ್ಮಿದೇವಿಯನ್ನು ಎಲ್ಲರೂ ಅದರಲ್ಲೂ ಬಹು ವಿಶೇಷವಾಗಿ ಸುಮಂಗಲಿಯರು ಭಕ್ತಿ-ಶ್ರದ್ಧೆಗಳಿಂದ ಪೂಜಿಸುವ ಪರಮ ಮಂಗಳ ದಿನವಿದು. ವರಮಹಾಲಕ್ಷ್ಮಿ ಪದಕ್ಕೆ ಪೌರಾಣಿಕ ಅರ್ಥವೂ ಇದೆ. ಕ್ಷೀರ ಸಮುದ್ರದಲ್ಲಿ ಅವತರಿಸಿದ ಈಕೆ ವಿಶ್ವದಲ್ಲೇ ಶ್ರೇಷ್ಠ ಮತ್ತು ವಿಶಿಷ್ಟವಾದ ನಾರಯಣನೆಂಬ ವರನಿಂದ ವರಿಸಲ್ಪಟ್ಟವಳು. ಹೀಗಾಗಿ ವರಮಹಾಲಕ್ಷ್ಮಿ ತ್ರೆûಲೋಕ್ಯ ಕುಟುಂಬಿನಿ. ಸರ್ವ ಮಂಗಳೆ. ಸರ್ವಾರ್ಥ ಸಾಧಿಕೆ. ಧರಿಸಿದ ವಸ್ತ್ರ, ತೊಟ್ಟ ಆಭರಣ-ಎಲ್ಲಕ್ಕೂ ಸಾಂಕೇತಿಕ ಅರ್ಥ ವ್ಯಾಖ್ಯಾನಗಳಿವೆ. ಲಕ್ಷ್ಮಿ ಸ್ವರೂಪವಾದ ಸಕಲ ಸಂಪತ್ತೂ ಮನೆಯಲ್ಲಿ ಮೈದಳೆದು ನಿಲ್ಲಲೆಂಬುದೇ ಹಬ್ಬದ ಆಶಯ.
ಆಷಾಢದ ಮೋಡ ಸರಿದು ಶ್ರಾವಣದ ಮಳೆ ಹನಿಗಳಲ್ಲಿ ಮಿಂದೆದ್ದ ಭುರಮೆ ತನಗೆ ತಾನೇ ಅಲಂಕಾರಗೊಂಡಿದೆ.ಸಿಂಗರಿಸಿದಷ್ಟು ಹೊತ್ತು ಸಮಾಧಾನ ಇಲ್ಲ ಎನ್ನುವಂತೆ. ಅಂಗಳದಲ್ಲೆಲ್ಲೋ ಪ್ರೀತಿಯ ಹೂವರಳಿ, ಬಳೆಗಾರ ಬಾಗಿಲಿಗೆ ಬಂದಿರಲು ಬರಿಯ ಸಂಭ್ರಮ. ಹೊಳೆಯುವ ಬಳಿ ತೊಟ್ಟು, ಕೆಂಪು ತಿಲಕವಿಟ್ಟು ಮದುಮಗಳೆನೋ ಎಂಬಂತೆ ಹರಿಯುವ ನೀರಿನಲ್ಲಿ ಬಗ್ಗಿ ಒಮ್ಮೆ ತನ್ನ ಬಿಂಬವನ್ನು ನೋಡಿಕೊಂಡು ಭೂಮಿ ಹಿಂದೆಂದಿಗಿಂತಲೂ ಮೈತುಂಬಿಕೊಂಡಿದ್ದಾಳೆ. ಮನಸ್ಸು ಮೂರಗಲ ಅರಳಿ ನಿಂತಿದೆ.ತುಂಬು ಹರೆಯದೊಂದಿಗೆ ಪ್ರಕೃತಿ ಕಣ್ಣರಳಿಸಿ ನೋಡುತ್ತಿದ್ದಾಳೆ. ಇಂಥದ್ದೊಂದು ಸಂಭ್ರಮದ ಕಾರಣ ಶ್ರಾವಣ.
ಶ್ರಾವಣ ಅಂದರೆ ಹಬ್ಬಗಳ ಸಾಲು. ಹಬ್ಬ ಅಂದ್ರೆ ಸಂತಸ ಉಕ್ಕಿಸುವ ಕಾಲ. ಆಷಾಢದ ಮೋಡ ಸರಿಸಿ ಶ್ರಾವಣ ಹೇಗೆ ಬೆಳ್ಳಗೆ ಬೆಳಗುತ್ತದೆಯೋ ಹಾಗೆ ಗೊಂದಲ, ಒತ್ತಡಗಳನ್ನು ಬದಿಗಿಟ್ಟು ನಿರಾಳ ಭಾವ ಅನುಭವಿಸಲಿಕ್ಕಾಗಿಯೇ ಇರಬೇಕು, ಶ್ರಾವಣ ಮನೆ ಬಾಗಿಲಿಗೆ ಹಬ್ಬಗಳ ನೆಪದಲ್ಲಿ ಬಂದು ನಿಲ್ಲುತ್ತದೆ. ಶ್ರಾವಣ ಹೆಜ್ಜೆಯಿಟ್ಟಲೆಲ್ಲ ಹಬ್ಬದ ವಾತಾವರಣ. ಸೋಮವಾರ, ಶುಕ್ರವಾರ, ಶನಿವಾರ ಯಾವುದೇ ವಾರವಾದರೂ ಸರಿಯೇ ಶ್ರಾವಣ ಮನೆಮನಗಳಲ್ಲಿ ಸಂತಸ ಮೂಡಿಸುತ್ತದೆ. ಇದೀಗ ಹೆಣ್ಣುಮಕ್ಕಳ ಹಬ್ಬವೆಂದೇ ಖ್ಯಾತಿ ಪಡೆದಿರುವ ವರಮಹಾಲಕ್ಷ್ಮೀ ಮೊದಲನೆದಾಗಿ ಬಂದಿದೆ. ರಂಗೋಲಿ, ಅಲಂಕಾರ, ವಿಶಿಷ್ಟ ಬಗೆಯ ಭೊಜನ ಅಂತೆಲ್ಲ ಮನೆಮಂದಿಯನ್ನೆಲ್ಲ ಒಂದಾಗಿಸುವ ವರ ಮಹಾಲಕ್ಷ್ಮೀ ಹಬ್ಬ ಅಂದರೆ ಹಾಗೆ, ಅದೊಂದು ರೀತಿಯ ಸಂಭ್ರಮ. ಭಕ್ತಿ ನಂಬಿಕೆಗಿಂತಲೂ ಅಲ್ಲೊಂದು ಸಡಗರ ಎದ್ದು ಕಾಣುತ್ತದೆಯಲ್ಲ, ಅದೇ ಒಂದಿಡೀ ವರುಷದ ಕಾಯುವಿಕೆಯ ನೋವನ್ನು ಮರೆಸುತ್ತದೆ. ಹೊಸತನ ಅನ್ನುವುದಕ್ಕೆ ನಾಂದಿ ಆಗುತ್ತದೆ.
ಸಂಪ್ರದಾಯವನ್ನು ಮೀರಿ ನಿಂತಿರುವ ವರಮಹಾಲಕ್ಷ್ಮೀ ಹಬ್ಬ ಅಂದರೆ ಪುಟ್ಟ ಹುಡುಗಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಮನೆ ತುಂಬ ಓಡಾಡುತ್ತಾಳೆ. ಹರೆಯದ ಜೀನ್ಸ್ ಹುಡುಗಿಯೂ ಲಂಗ ದಾವಣಿ ಸುತ್ತಿಕೊಂಡು ಕನ್ನಡಿಯ ಹಿಂದೆಮುಂದೆ ಸುತ್ತುತ್ತಾಳೆ.ಅಮ್ಮಂಗೆ ಹಬ್ಬದ ನೆಪದಲ್ಲಿ ಹೊಸ ರುಚಿ ಮಾಡುವ ಸಂಭ್ರಮ.ಅಜ್ಜಿಗೆ ಪೂಜೆಯ ವಿಧಾನದಲ್ಲಿ ಕಿಂಚಿತ್ತೂ ದೋಷವಾಗದಂತೆ ಕಾಯುವ ಜವಾಬ್ದಾರಿ. ಹೀಗೆ ಹಬ್ಬ ಅಂದರೆ ಇಡೀ ಮನೆ ಪುರುಷರಲ್ಲಿ ಹೊಸ ಉತ್ಸಾಹ ಗರಿಗೆದರುತ್ತದೆ.
ಸಮಯವಿಲ್ಲದಿದ್ದರೂ ಸಂಭ್ರಮ
ಇದೀಗ ಮುಂಚಿನಂತೆ ಹಬ್ಬ ಮಾಡಲಿಕ್ಕೆ ಯಾರಿಗೂ ಸಮಯವಿಲ್ಲ. ಹಬ್ಬದ ಅಡುಗೆಯೂ, ಪೂಜೆಯೂ ಇನ್ ಸ್ಟಂಟ್ ಆಗಿದೆ.ಅದರೇನಂತೆ, ಹಬ್ಬ ಅಂದಾಗ ಒಂದು ಬಗೆಯ ಸಂಭ್ರಮ ಚಿಗುರೊಡೆಯುತ್ತದೆಯಲ್ಲ. ಅಂಥದ್ದೊಂದು ಪುಟ್ಟ ಚಿಗುರಿಗಾಗಿಯೇ ನಡುವೆಯೂ ವರಮಹಾಲಕ್ಷ್ಮೀಯಂಥ ಹಬ್ಬ ವರುಷವರುಷವೂ ನವನವೀನವಾಗಿಯೇ ಕಾಣಿಸುತ್ತದೆ.
ಬೆಳ್ಳಂಬೆಳಗ್ಗೆ ಎದ್ದು ಶ್ರಾವಣ ಸಾಲುಸಾಲು ಹಬ್ಬಗಳನ್ನು ಬರಮಾಡಿಕೊಳ್ಳಲು ಈಗಾಗಲೇ ಸಿದ್ಧತೆ ನಡೆದಿದೆ.ವರಮಹಾಲಕ್ಷ್ಮೀ ಹಬ್ಬದಲ್ಲಂತೂ ದೇವಿಯ ಅಲಂಕಾರ ಅಂದರೆ ಸ್ವತಃ ತಮ್ಮದೇ ಅಲಂಕಾರ ಅನ್ನುವಷ್ಟು ಸಂಭ್ರಮಿಸುವ ಮಹಿಳೆಯರಿದ್ದಾರೆ.ಅದಕ್ಕೆ ಅಂತಾನೇ ಅದೆಷ್ಟೋ ದಿನಗಳಿಂದ ತಯಾರಿ ನಡೆಸುತ್ತಾರೆ.ಆದರೆ ಮುಂಚಿನಂತೆ ಮನೆಯಲ್ಲೇ ದೇವಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸುವಷ್ಟು ಸಮಯವಿಲ್ಲ. ತಾಳ್ಮೆಯನ್ನು ಬದಿಗಿಟ್ಟು ಮಾರುಕಟೆಯಲ್ಲಿ ಸಿಗುವ ಅಲಂಕಾರಿಕ ವಸ್ತುಗಳಾಗಿ ಹುಡುಕಾಟ ಆರಂಭಿಸಿದ್ದಾರೆ.ಆದರೆ ಸಂಭ್ರಮವಂತೂ ಕಿಂಚಿತ್ತೂ ಕಡಿಮೆಯಾಗಿಲ್ಲ.
ಈಗ ಶ್ರಾವಣ ವರಮಹಾಲಕ್ಷ್ಮೀ ರೂಪದಲ್ಲಿ ಎಲ್ಲರ ಮನೆ-ಮನ ಬೆಳಗಲು ಹೊರಟು ನಿಂತಿದೆ.ವರಮಹಾಲಕ್ಷ್ಮೀ ಹಬ್ಬ ಅಂದರೆ ಭಕ್ತಿ.ಆದರೆ ಈ ನೆಪದಲ್ಲಿ ಹೊರಹೊಮ್ಮುವ ಖುಷಿ, ಹೆಚ್ಚುವ ಭಾಂದವ್ಯ, ಸಹಭೋಜನ ಇವೆಲ್ಲವೂ ಮಧುರಾನೂಭೂತಿ ನೀಡುತ್ತವೆ. ಒತ್ತಡದ ಬದುಕಿನಲ್ಲೊಂದು ಸಿಹಿ ಗಾಳಿಯಂತೆ ಬೀಸಿ ಹೋಗುವ ಶ್ರಾವಣದ ಒಂದೊಂದು ದಿನವನ್ನೂ ಮನಸಾರೆ ಸವಿದು ಬಿಡಬೇಕು.
ಹಬ್ಬಗಳಿಗೂ ಕಲಶಕ್ಕೂ ಅವಿನಾಭಾವ ಸಂಬಂಧ. ಅದಿಲ್ಲದೆ ಯಾವುದೇ ಪೂಜೆ, ಶುಭ ಸಮಾರಂಭವೂ ಸಂಪನ್ನಗೊಳ್ಳುವುದಿಲ್ಲ. ಕಲಶದಲ್ಲಿ ದೇವರು ನೆಲೆಸಿರುವುದರಿಂದ ನಮ್ಮ ಸಂಸ್ಕೃತಿಯಲ್ಲಿ ಅದಕ್ಕೆ ವಿಶೇಷ ಸ್ಥಾನಮಾನವಿದೆ.ಈ ಸಾಂಪ್ರದಾಯಿಕ ಕಲಶವೂ ಈಗ ನವ ನವೀನ ಸಿಂಗಾರಗಳಲ್ಲಿ ಬರುತ್ತಿರುವುದು ವಿಶೇಷ.
ಇದು ಪೂಜಾ ಸಮಯ
ವರಮಹಾಲಕ್ಷ್ಮೀ ವ್ರತ ಮಾಡುವವರು ಸಮರ್ಪಕ ವಿಧಾನವನ್ನು ಅನುಸರಿಸಬೇಕು. ಕಳಶ ಕೂರಿಸುವುದರಿಂದ ಹಿಡಿದು ವಿಸರ್ಜನೆಯವರೆಗೂ ಸೂಕ್ತ ವಿಧಾನದಲ್ಲೇ ನಡೆಯಬೇಕು.
ವರಮಹಾಲಕ್ಷ್ಮೀ ಹಬ್ಬದ ತಯಾರಿ ಮನೆಯನ್ನು ಶುದ್ಧಗೊಳಿಸಿ ರಂಗೋಲಿ ಹಾಕುವುದರಿಂದ ಶುರುವಾಗುತ್ತದೆ.ಎರಡು ಬೆಳ್ಳಿಯ ಅಥವ ತಾಮ್ರದ ಶುಭ್ರವಾದ ಬಿಂದಿಗೆಗಳಿಗೆ ಸುಣ್ಣ ಹಚ್ಚಿ ಕುಂಕುಮ ಇಡಬೇಕು.ಎರಡು ಅರಿಶಿನದ ದಾರದೆಳೆಯಿಂದ ದಾರ ಮಾಡಿಕೊಂಡು ದಾರದ ಮದ್ಯ ಹೂವಿಟ್ಟು 1 ಗಂಟು ಹಾಕಿ. ಮಿಕ್ಕ 11 ಗಂಟುಗಳನ್ನು ಆಕಡೆ ಈಕಡೆ ಐದು ಆರು ಹೀಗೆ ಹಾಕಿಡಿ. ಇದನ್ನು ಕಲಶಕ್ಕೆ ಕಟ್ಟಬೇಕು.ಕೈ ದಾರಕ್ಕೆ ಹನ್ನೆರಡು ಎಳೆ ಹಸಿ ದಾರಕ್ಕೆ ಮೇಲೆ ತಿಳಿಸಿದಂತೆ ಹೂವಿನ ಜೊತೆ 1 ಗಂಟು ಮಿಕ್ಕಿದ 11 ಬರೇ ಗಂಟುಗಳನ್ನು ಹಾಕಿಡಿ.ಒಬ್ಬ ಮುತ್ತೈದೆಗೆ ಒಂದು ದಾರ, ದೇವರಿಗೆ ಬಡಿಸಲು ಒಂದು ದಾರ.ಕಟ್ಟಿದ ದಾರಗಳನ್ನು ಎಲೆಅಡಿಕೆ ಜೊತೆ ದೇವರ ಬಲಗಡೆ ಇರಬೇಕು.ಕಳಶದ ಒಂದು ಬಿಂದಿಗೆಗೆ ಐದು ಉದ್ದರಣೆ ಅಕ್ಕಿ, ಐದು ಅರಿಶಿನದ ಕೊನೆ, ಐದು ಅಡಿಕೆ ಐದು ವೀಳ್ಯದೆಲೆ, ಬಳೆ, ಬಿಚ್ಚೋಲೆ, ಕರಿಮಣಿ, ಎರಡು ಕುಂಕುಮದ ಪೊಟ್ಟಣ, ಒಂದು ಬಾದಾಮಿ, ಒಣ ಖರ್ಜೂರ, ಕಲ್ಲುಸಕ್ಕರೆ, ಐದು ಥರದ ಹಣ್ಣು ಹಾಕಬೇಕು. ಇನ್ನೊಂದು ಬಿಂದಿಗೆಗೆ ನೀರು ತುಂಬಿ ಪಚ್ಚಕರ್ಪೂರ, ಕೇಸರಿ, ಏಲಕ್ಕಿ ಪುಡಿ, ಒಂದು ರೂ.25 ಪೈಸೆ ದಕ್ಷಿಣೆ ಹಾಕಬೇಕು.ಬಿಂದಿಗೆಯ ಮೇಲೆ ಅರಿಶಿನ ಹಚ್ಚಿದ ತೆಂಗಿನಕಾಯಿ ಇಟ್ಟು ತೆಂಗಿನಕಾಯಿಯ ಮುಂಭಾಗ ಲಕ್ಷ್ಮಿಯ ಬೆಳ್ಳಿ ಅಥವಾ ಅರಿಶಿನ ಬಣ್ಣದ ಮುಖವಾಡ (ಮಾರ್ಕೆಟ್ ನಲ್ಲಿ ಸಿಗುತ್ತದೆ).ಇಟ್ಟು ಹಿಂದೆ ಲಕ್ಷ್ಮಿ ಪೋಟೋ ಇಟ್ಟು ಸಹಸ್ರನಾಮ ಓದಿ.ಅರಿಶಿನ ಕುಂಕುಮ ಬೇರೆ ಬೇರೆ ತಟ್ಟೆಗಳಿಗೆ ಪೂಜೆಮಾಡಬೇಕು. ಬಂದ ಮುತ್ತೈದೆಯರಿಗೆ ಇದೇ ಅರಿಶಿನ ಕುಂಕುಮ ಕೊಡಬೇಕು. ಹನ್ನೆರಡು ಎಳೆಯ ಗೆಜ್ಜೆ ವಸ್ತ್ರ ಇಡಬೇಕು. ನೈವೇದ್ಯಕ್ಕೆ ಇಡ್ಲಿ ಕಾಯಿಹಾಲು, ಕರಿಗಡುಬು (ಕರಂಜಿಕಾಯಿ), ಚಿರೋಟಿ, ಪೊಂಗಲ್, ಮತ್ತು ಎಲ್ಲ ತರಹದ ಹಣ್ಣುಗಳು, ತೆಂಗಿನಕಾಯಿ, ನೆನೆಸಿದ ಹೆಸರುಬೇಳೆ, ಪಾನಕ, ವೀಳ್ಯದೆಲೆ, ಅಡಿಗೆ, ಸೌತೆಕಾಯಿ ಇಡಬೇಕು.ಕಳಶ ಸ್ಥಾಪನೆ ಮಾಡುವಾಗ ಕಳಶದ ಕೆಳಗೆ ಎರಡು ದುಂಡನೆಯ ಊಟದ ಎಲೆ ಅಥವಾ ಕುಡಿ ಬಾಳೆ ಎಲೆಯನ್ನು ಎಡಕ್ಕೆ ಕುಡಿ ಮಾಡಿ ಇಟ್ಟು ಅದರ ಮೇಲೆ ಸ್ವಲ್ಪ ಅಕ್ಕಿ ಹಾಕಬೇಕು.ನೀರಿನ ಕಲಶ ಬಲಗಡೆ ಇಡಬೇಕು.ಕಲಶದ ಕೆಳಗೆ ರಂಗೋಲಿಯಿಂದ ಪದ್ಮ ಬಿಡುವುದು ರೂಢಿಯಲ್ಲಿದೆ.ಒಳ್ಳೆಯ ಕಣ ಹಾಕಿ ಕಲಶ ಇಡಬೇಕು.ಪೂಜೆಗೆ ತಾಳೆಹೂವು, ತಾವರೆ ಹೂವು, ಬಳೆ, ಬಿಚ್ಚೋಲೆ, ಚಂದ್ರ, ಗಂದೂರಿ, ಕಾಡಿಗೆಯನ್ನು ಇಟ್ಟುಕೊಳ್ಳಬೇಕು.ಕಲಶ ಕೂರಿಸಿದ ಪೀಠದ ಅಕ್ಕ ಪಕ್ಕ ಬಾಳೆ ಕಂಬ ಇಟ್ಟು ಎರಡರ ಮಧ್ಯೆ ಮಾವಿನ ಎಲೆ ತೋರಣ ಕಟ್ಟಿ ಸೇವಂತಿಗೆ ಹೂವಿನ ಹಾರ ಕಟ್ಟಿರಿ.ಕರಗಿಸಿದ ತುಪ್ಪದಲ್ಲಿ ಹೂಬತ್ತಿಗಳನ್ನು ನೆನೆಸಿಡಿ ಪೂಜೆ ಸಾಮಾನುಗಳನ್ನೆಲ್ಲಾ ತಟ್ಟೆಯಲ್ಲಿ ಜೋಡಿಸಿಕೊಳ್ಳಿ. ಮರುದಿನ ಬೇಗ ಎದ್ದು ರಾಹುಕಾಲಕ್ಕೆ ಮುನ್ನ ಪೂಜೆ ಮಾಡಿ.
ಸಿದ್ಧ ಸಾಮಗ್ರಿ
ಹಲವು ಮಹಿಳೆಯರಿಗೆ ಅದೂ ಕೆಲಸಕ್ಕೆ ಹೋಗುವವರಿಗೆ ಸಮಯಾವಕಾಶ ಇರುವುದಿಲ್ಲ. ಆದ್ದರಿಂದ ಪೇಟೆಯಲ್ಲಿ ಸಿಗುವ ಸುಂದರವಾದ ಅಚ್ಚುಕಟ್ಟಾದ ಪೂಜಾ ಸಾಮಗ್ರಿಗಳು ಗ್ರಂಥಿಗೆ ಅಂಗಡಿಯಿಂದ ಒಂದು ವಾರದ ಮುಂಚೆಯೇ ತಂದಿಟ್ಟುಕೊಂಡರೆ ಹೆಚ್ಚು ಕಷ್ಟವಾಗಲಾರದು.ಬಾಳೆ ಕಂಬಗಳು ಸಹ ಪ್ಲಾಸ್ಟಿಕ್ ನಿಂದ ಮಾಡಿದ್ದು ಸಿಗುತ್ತವೆ. ಹಬ್ಬಗಳಲ್ಲಿ ಉಪಯೋಗಿಸಿ ಮತ್ತೆ ಸ್ವಚ್ಛಮಾಡಿಟ್ಟರೆ ಸಾಕು.ಈ ಕಂಬ ಸಿಕ್ಕಿಸಲು ಚೂಪಾದ ರಾಡ್ ಇರುವ ಸ್ಟಾಂಡ್‌ಗಳೂ ಸಹ ಸಿಗುತ್ತವೆ. ವಿವಿಧ ತರಹದ ಹೂಗಳಿಂದ ಹೂವಿನ ಹಾರಗಳಿಂದ ದೇವಿಯನ್ನು ಅಲಂಕರಿಸಬಹುದು.ಆದರೆ ಹಬ್ಬದ ಸಮಯದಲ್ಲಿ ಹೂವಿನ ಬೆಲೆ ಗಗನಕ್ಕೇರಿರುತ್ತದೆ, ಆದ್ದರಿಂದ ನಾಲ್ಕು ದಿನ ಮೊದಲೇ ತಾಜಾ ಹೂವುಗಳನ್ನು ತಂದು ಫ್ರಿಜ್‌ನಲ್ಲಿ ಇಟ್ಟುಕೊಳ್ಳಬಹುದು.ದೇವಿಗೆ ಕೆಲವರು ಪ್ರತಿವರ್ಷ ಹೊಸ ಸೀರೆಯನ್ನು ತಂದು ಉಡಿಸುತ್ತಾರೆ. ಹೂವಿನ ಹಾರದ ಜತೆಗೆ ಹತ್ತಿಯಿಂದ ಮಾಡಿದ ಸುಂದರವಾದ ವಿವಿಧ ಆಕೃತಿಯ ಹೂವುಗಳಿಂದ ಮಾಡಿದ ಹಾರ, ಗೆಜ್ಜೆವಸ್ತ್ರ ಸಿಗುತ್ತದೆ. ಅದನ್ನು ಮೊದಲೇ ತಂದಿಟ್ಟುಕೊಂಡು ಹಬ್ಬದ ದಿನ ಅಲಂಕರಿಸಬಹುದು.
ಪೂಜೆ ಮಾಡಿಸಲು ಪುರೋಹಿತರು ಬಂದಿದ್ದರೆ ಅವರಿಗೆ ಒಂದು ಪಾವು ಅಕ್ಕಿ, ಒಂದು ತೆಂಗಿನಕಾಯಿ, ಒಂದು ಅಚ್ಚು ಬೆಲ್ಲ, ಅಡಿಕೆ ವೀಳ್ಯದೆಲೆ, ಬಾಳೆಹಣ್ಣು, ಒಂದು ತಟ್ಟೆಯಲ್ಲಿ ಎರಡು ಮುತ್ತುಗದ ಎಲೆಗಳ ಮೇಲೆ ಮೇಲಿನ ಮಾನುಗಳನ್ನುಟ್ಟು ಮುಚ್ಚಿ ಕೊಡಬೇಕು.ಪೂರ್ಣಫಲಕ್ಕೆ ಹನ್ನೆರಡು ವೀಳ್ಯದೆಲೆ ಹನ್ನೆರಡು ಬಟ್ಟಲು ಅಡಿಕೆ, ಹನ್ನೆರಡು ಬಾಳೆಹಣ್ಣು ಎಲ್ಲಾ ತರಹದ ಹಣ್ಣುಗಳು ಒಂದು ತೆಂಗಿನಕಾಯಿ, ಕೊಬ್ಬರಿ ಸಕ್ಕರೆ, ಉತ್ತುತ್ತೆ ಬಾದಾಮಿಯನ್ನಿಡಬೇಕು.ಕೆಲವರ ಮನೆಯಲ್ಲಿ ಎರಡು ಬಾಗಿನ ಮಾಡಿ ಒಂದು ದೇವಿಗೆ ಮತ್ತೊಂದು ಬಾಗಿನವನ್ನು ಮುತ್ತೈದೆಗೆ ಕೊಡುತ್ತಾರೆ.ಒಂದು ತಟ್ಟೆ ಅಥವಾ ಒಳ್ಳೆಯ ಪ್ಲಾಸ್ಟಿಕ್ ಅಥವಾ ಸ್ಟೀಲ್ ಡಬ್ಬದಲ್ಲಿ ಮಂಗಳ ದ್ರವ್ಯಗಳು ಹಣ್ಣುಕಾಯಿ ಬ್ಲೌಸ್ ಪೀಸ್, ಅರಿಶಿನ ಕುಂಕುಮ, ಬಳೆ ಐದು ಕರಂಜಿಯ ಇತ್ಯಾದಿಗಳನ್ನು ಕೊಡುತ್ತಾರೆ.ಬಾಗಿನ ಆದಷ್ಟು ಪೂಜೆ ಮಾಡಿದ ತಕ್ಷಣ ಕೊಟ್ಟರೆ ಒಳ್ಳೆಯದು.ಬಾಗಿನ ಕೊಡುವ ಮುತ್ತೈದೆಗೂ ಕೈದಾರ ಕಟ್ಟಬೇಕು.ಪೂಜೆ ಮಾಡಿದಾಗ ನಾವೂ ಕಟ್ಟಿಕೊಳ್ಳಬೇಕು.ಈ ದಾರ ಸ್ವರ್ಣಗೌರಿ ಹಬ್ಬ ಮಾಡಿದಾಗ ಕಟ್ಟಿಕೊಳ್ಳುವ ದಾರದ ಜೊತೆಗೇ ವಿಸರ್ಜಿಸುವವರಿದ್ದಾರೆ.
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುವ ಲಕ್ಷ್ಮೀ
ನಾವು ಮಾಡಲಿ ಬಿಡಲಿ, ಶ್ರಾವಣ ಮಾಸ ಬಂದಿತೆಂದರೆ ಹಬ್ಬಗಳ ಸಾಲು ಸಾಲು ಬಂದೇ ಬಿಡುತ್ತದೆ. ಪ್ರಕೃತಿ ಹಸಿರು -ಹಳದಿಗಳಿಂದ ಸಂಭ್ರಮಿಸುವ ಕಾಲ.ನವದಂಪತಿಗಳಿಗೆ ಆಷಾಡದ ವಿರಹ ಕಳೆದು ಮತ್ತೆ ಒಂದುಗೂಡುವ ಸಂತಸದ ಸಮಯ. ಕವಿ ಹೃದಯಕ್ಕಂತೂ ಶ್ರಾವಣ ಬಗೆಬಗೆಯಾಗಿ ತೋರುತ್ತದೆ.
ಶ್ರಾವಣದ ಹುಣ್ಣಿಮೆಯ ಶುಕ್ರವಾರದ ಈ ವ್ರತ ದಕ್ಷಿಣ ಭಾರತದ ಎಲ್ಲೆಡೆ ಆಚರಿಸಲ್ಪಡುತ್ತದೆ. ಮಹಾಲಕ್ಷ್ಮೀ, ದೇವಿಯ ಮೂರು ಸ್ವರೂಪಗಳಲ್ಲಿ ಒಬ್ಬಳು. ಮಹಾಕಾಳಿ, ಮಹಾಸರಸ್ವತಿಯರ ಜೊತೆ ಸೃಷ್ಟಿ-ಸ್ಥಿತಿ-ಲಯಗಳನ್ನು ಕಾಪಾಡುವಲ್ಲಿ ಅವಳು ಸದಾನಿರತಳು. ಎಲ್ಲ ರೀತಿಯ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯನ್ನು ವರಮಹಾಲಕ್ಷ್ಮೀ ವ್ರತದಿಂದ ಪೂಜಿಸಲಾಗುತ್ತದೆ.
ಭಕ್ತಿಯ ಪ್ರತೀಕವಾದ ಹಬ್ಬ
ಸಾಮಾನ್ಯವಾಗಿ ಯಾವುದೇ ವ್ರತ ಎಂದಾಕ್ಷಣ ನಮ್ಮ ಕಣ್ಣ ಮುಂದೆ ನಿಲ್ಲುವುದು ಮಹಿಳೆಯೊಬ್ಬಳು ಉಪವಾಸದಿಂದಿರುವ, ನಂತರ ಭಕ್ತಿಯಿಂದ ಪೂಜಿಸುತ್ತಿರುವ ಚಿತ್ರಣ, ನಮ್ಮ ಮಹಿಳೆಯರಲ್ಲಿಯೂ ಅಷ್ಟೇ ಸಾಮಾನ್ಯವಾಗಿ ಮೂರು ವಿಧಗಳು.ಮೊದಲನೆಯದು ತಲೆಮಾರು ಹಿಂದಿನಿಂದ ಬಂದದ್ದನ್ನು ಹಠ ಬಿಡದೆ, ತಮ್ಮ ಆರೋಗ್ಯ ಕೆಟ್ಟರೂ ಕೇಳದೆ ವ್ರತ ನಡೆಸಿ ಮಹಾಲಕ್ಷ್ಮೀಯನ್ನು ಮೆಚ್ಚಿಸುವವರು. ಎರಡನೆಯ ವರ್ಗ ತಮ್ಮ ಅತ್ತೆಯ / ತಾಯಿಯ/ ವ್ರತ ತಪ್ಪಿದರೆ ಎರಗಬಹುದಾದ ಅಪಾಯದ ಭಯದಿಂದ ವರಮಹಾಲಕ್ಷ್ಮೀಯನ್ನು ಪೂಜಿಸುವವರು, ಮೂರನೆಯ ವರ್ಗ (ಇವರಲ್ಲಿ ಹೆಚ್ಚಿನವರು ಈ ತಲೆಮಾರಿನ ಲಕ್ಷ್ಮೀಯರೇ!) ಒಂದೋ ತಮ್ಮ ಇಂದಿನ ಜ್ಞಾನವನ್ನು, ಧರ್ಮವನ್ನು ಪ್ರತ್ಯೇಕಿಸಿ ಹಬ್ಬದ ಪಾಡಿಗೇ ಹಬ್ಬ ಎಂದು ಮುಗಿಸುವವರು ಅಥವಾ ತಮ್ಮ ಆಧುನಿಕತೆಗೆ ಹಬ್ಬ ಪೂಜಗಳೇ ಒಂದು ಸವಾಲು ಎಂದು ಪರಿಗಣಿಸಿ ಹಬ್ಬಗಳನ್ನು ಹಠದಿಂದ ಮಾಡದಿರುವವರು. ಪುರುಷರಂತೂ ಪೂಜೆಯ ಸಾಮಾನು ಒದಗಿಸುವ ಕೆಲಸ – ಓಡಾಡಿ ಬಾಳೆಕಂಬ ಕಟ್ಟುವ ಕೆಲಸಗಳನ್ನು ಮಾಡುವುದು ಬಿಟ್ಟರೆ, ಮನೆಯಲ್ಲಿ ಕಷ್ಟಪಡುವ ತಮ್ಮ ಗೃಹಲಕ್ಷ್ಮಿಯ ಬಗೆಗಾಗಲೀ, ದೇವಿ ಲಕ್ಷ್ಮಿಯ ಬಗೆಗಾಗಲಿ, ಚಾರುಮತಿಯ ಕಥೆಯ ಕುರಿತಾಗಲಿ, ಚಾರುಮತಿಯ ಕಥೆಯ ಕುರಿತಾಗಲಿ ತಲೆಕೆಡಿಸಿಕೊಳ್ಳುವುದು ಕಡಿಮೆ.
ವರಮಹಾಲಕ್ಷ್ಮಿಯ ವ್ರತಕ್ಕಾಗಿ ಆಕೆಯ ಚಿತ್ರವನ್ನಿಡುವ ಒಮ್ಮೆ ಸರಿಯಾಗಿ ಗಮನಿಸಿ, ಆಕೆಗೆ ನಾಲ್ಕು ಕೈಗಳಿವೆ ತಾನೆ? ಅವು ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಸಂಕೇತಿಸುತ್ತವೆ. ಕುಳಿತಿರುವಾಗಲೀ, ನಿಂತಿರುವಾಗಲೀ, ತೋರಿಸಲ್ಪಡುತ್ತಿದೆ. ಕಮಲ ಆತ್ಮಜ್ಞಾನವನ್ನು ನಾನು ಎಂಬ ಅರಿವನ್ನು ಸೂಚಿಸುತ್ತದೆ. ಕೆಸರಿನಲ್ಲಿ ಅರಳುವ ಕಮಲ ಜ್ಞಾನ-ಶ್ರಮಗಳು ಎಲ್ಲಿಯೂ ಹುಟ್ಟಬಹುದೆಂಬುದನ್ನು ಧ್ವನಿಸುತ್ತದೆ. ಲಕ್ಷ್ಮಿಯ ಎರಡೂ ಪಕ್ಕಗಳಲ್ಲಿರುವ ಆನೆಗಳು ಬಲವನ್ನೂ, ವಟುವಟಿಕೆಯನ್ನೂ, ಶ್ರಮವನ್ನೂ ಸೂಚಿಸುತ್ತವೆ. ಮಹಾಲಕ್ಷ್ಮಿಯ ಈ ಚಿತ್ರವನ್ನು ನೋಡಿದಾಗ, ನನಗೆ ಮಾನಸಿಕವಾಗಿ ಸಬಲರಾದ, ಆರ್ಥಿಕ ಸ್ವಾವಲಂಬಿಗಳಾದ, ಆರೋಗ್ಯವಂತ ಮಹಿಳೆಯರಾಗಬೇಕು ಎಂಬುದು ಇದರಿಂದ ನಾವು ಪಡೆಯಬೇಕಿರುವ ಸಂದೇಶ ಎನಿಸುತ್ತದೆ. ಮಹಿಳೆಯರು ಯಾವ ತಲೆಮಾರಿನವರೇ ಆಗಲಿ ಈ ಅರಿವಿನಿಂದ ವ್ರತ ಮಾಡುವುದು ಅದರ ಸಾರ್ಥಕತೆಯನ್ನು ಹೆಚ್ಚಿಸುತ್ತದೆ.
ಇಂದಿನ ದಿನಗಳಲ್ಲಿ ವರಮಹಾಲಕ್ಷ್ಮಿ ವ್ರತದ ಸಂಭ್ರಮವನ್ನು ಎಲ್ಲೆಡೆ ನೋಡುತ್ತಿದ್ದೇವೆ. ಮಹಾಲಕ್ಷ್ಮಿಯ ಹೆಸರಿನಲ್ಲಿ ಸೀರೆ ಸೇಲ್‌ಗಳು, ಬಂಗಾರದ ಅಂಗಡಿಗಳ ಆಫರ್‌ಗಳು, ಹ್ಯಾಪಿ ವರಮಹಾಲಕ್ಷ್ಮಿ ಎಂಬ ಲಕ್ಷ್ಮಿಯ ಚಿತ್ರದ ಸಂದೇಶಗಳೂ, ವಾಟ್ಸ್ಯಾಪ್ ಮೆಸೇಜುಗಳೂ ಎಲ್ಲೆಡೆ ಕಾಣುತ್ತಿವೆ. ಆದರೆ ವರಮಹಾಲಕ್ಷ್ಮಿ ವ್ರತದ ಬಗೆಗೆ ಒಂದು ದಿನ ಸಂಭ್ರಮಿಸಿ ಆ ಮೇಲೆ ದೇವಿಯನ್ನು ಮರೆತು, ಆಕೆಯ ಕೈಯಲ್ಲಿರುವ ದುಡ್ಡನ್ನು ನಾವು ಹೇಗಾದರೂ ಗಳಿಸುವುದರ ಬಗೆಗಷ್ಟೇ ಗಮನ ಹರಿಸಿದರೆ ಸಾಕೆ?
ಇದೇ ಸಂದರ್ಭದಲ್ಲಿ ಆದಿಶಂಕರರ ಕನಕಧಾರಾ ಸ್ತೋತ್ರದ ಬಗ್ಗೆ ನನಗೆ ನೆನಪಾಗುತ್ತಿದೆ. ಬಾಲಶಂಕರ 5 ವರ್ಷದ ಎಳವೆಯಲ್ಲಿ ಭಿಕ್ಷಾಟನೆಗಾಗಿ ಹೋಗುತ್ತಾನೆ. ಬಡ ಮಹಿಳೆಯೊಬ್ಬಳ ಮನೆಯ ಮುಂದೆ ನಿಂತು ಭಿಕ್ಷೆ ಕೇಳುತ್ತಾನೆ. ಪಾಪ, ಆ ಬಡವಿ ಇಡೀ ಮನೆ ಹುಡುಕಿದರೂ ಏನೂ ಸಿಕ್ಕುವುದಿಲ್ಲ. ಕೊನೆಗೆ ಮಡಕೆಯೊಂದರ ತಳದಲ್ಲಿದ್ದ ಒಣಗಿದ ಪುಟ್ಟ ನೆಲ್ಲಿಕಾಯಿಯೊಂದನ್ನು ನಾಚಿಕೆ- ಅಪಮಾನಗಳಿಂದ ಬಾಲಶಂಕರನಿಗೆ ನೀಡುತ್ತಾಳೆ. ಬಡತನದ, ದೀನ-ದರಿದ್ರರ ದುಃಖಕ್ಕೆ ಸ್ಪಂದಿಸುವ ಹೃದಯ ಶ್ರೀಮಂತಿಕೆಯಿದ್ದ ಬಾಲಶಂಕರರ ಮುಗ್ಧ ಮನಸ್ಸಿನಿಂದ ಈ ಸಂದರ್ಭದಲ್ಲಿ ಪಠಿಸಿದ್ದು ಕನಕಧಾರಾ ಸ್ತೋತ್ರ. ಮಹಾಲಕ್ಷ್ಮಿಯ ಬಗೆಗಿನ ಆತನ ಆರ್ದ್ರಭಕ್ತಿಯಿಂದ ಏನಾಗುತ್ತದೆ ಗೊತ್ತೆ? ಬಡವಿಯ ಮನೆಯ ಮುಂದೆ ಚಿನ್ನದ ನೆಲ್ಲಿಕಾಯಿಯ ಸುರಿಮಳೆಯಾಗುತ್ತದೆ. ಇತರರ ದುಃಖ-ದಾರಿದ್ರ್ಯವನ್ನು ನೋಡಿ ಕರಗುವ ಹೃದಯ ಮಹಾಲಕ್ಷ್ಮಿಯನ್ನು ಪ್ರಸನ್ನಗೊಳಿಸುತ್ತದೆ ಎಂಬ ಅರ್ಥ ಈ ಘಟನೆಯಲ್ಲಿದೆ ಎಂದು ನನಗನ್ನಿಸುತ್ತದೆ.
ನಿಯಮಗಳನ್ನು ಗಾಳಿಗೆ ತೂರುವ, ಸಾಮಾಜಿಕ ಮಾಧ್ಯಮಗಳಲ್ಲಿ ಮನಬಂದಂತೆ ಬರೆಯುವ, ಟ್ವೀಟ್ ಮಾಡುವ, ಫಾರ್ವರ್ಡ್-ಕಾಮೆಂಟುಗಳನ್ನು ತಳ್ಳುವ ಸ್ವಚ್ಛಂದ ಪ್ರವೃತ್ತಿ ಇಂದು ಬಲವಾಗಿದೆ. ಇಂತಹ ಸಂದರ್ಭದಲ್ಲಿ ವರಹಾಲಕ್ಷ್ಮಿ ವ್ರತ ವ್ರತವೊಂದರ ನೇಮ-ನಿಷ್ಠೆಗಳನ್ನು ನಮಗಿರುವ ಸ್ವಾತಂತ್ರ್ಯಕ್ಕೆ ಕಡಿವಾಣ ತೊಡಿಸಬೇಕಾದ ಪ್ರಕ್ರಿಯೆಯಾಗಬೇಕು. ವ್ರತಕ್ಕಾಗಿ ಲಕ್ಷ್ಮಿಯನ್ನು, ಕಲಶವನ್ನು ಸುಂದರವಾಗಿ ಅಲಂಕರಿಸುವ, ಮಹಿಳೆಗೆ ಸ್ವತಃ ಅಲಂಕರಿಸಿಕೊಳ್ಳುವ ತನ್ನ ಮನಸ್ಸಿನ ಸ್ವಚ್ಛತೆಯ ಬಗೆಗೂ ಅರಿವು ಮೂಡಿಸಬೇಕು.
ಸ್ವಚ್ಛಂದ ಹಸಿರು, ಸಮೃದ್ಧ ಪ್ರಕೃತಿಯ ಕುರುಹು. ನೇಮ-ನಿಷ್ಠೆಗಳ ಚೌಕಟ್ಟಿನಲ್ಲಿ ಸ್ವಚ್ಛಂದವಲ್ಲದ ಸ್ವತಂತ್ರ ಮನಸ್ಸಿನಿಂದ ಪೂಜಿಸಿದರೆ, ವರಮಹಾಲಕ್ಷ್ಮಿಯ ಕೃಪೆಯಾಗುತ್ತದೆ. ವೈಜ್ಞಾನಿಕ ಒಳನೋಟದಿಂದ ಸಾಂಪ್ರದಾಯಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ವರಮಹಾಲಕ್ಷ್ಮಿ ಕೃಪೆಯಿಂದ ನಿಜ ಸೌಂದರ್ಯ-ಸಂಪತ್ತುಗಳನ್ನು ನಮ್ಮದಾಗಿಸುತ್ತದೆ.
ಆರಾಧಿಸುವ ಪರಿ
ದೇವ ದಾನವರು ಕ್ಷೀರಸಾಗರ ಮಥನ ಮಾಡಿದ ಸಂದರ್ಭ ಲಕ್ಷ್ಮಿದೇವಿ ಅವತರಿಸಿದಳು. ಈಕೆಯೊಂದಿಗೆ ಚಂದ್ರ. ಪಾರಿಜಾತವಲ್ಲದೇ ಉಚ್ಛೈಶ್ರವಸ್ ಮತ್ತು ಚೇತಕ ಎಂಬ ಎರಡು ಕುದುರೆ, ಕಾರ್ಕೋಟಕಗಳೂ ಉದಿಸಿದವು. ವರ್ತಮಾನದಲ್ಲಿ ನಾವು ಲಕ್ಷ್ಮಿಜತೆಗೆ ಬಂದವೆಲ್ಲವನ್ನೂ ಇಷ್ಟಪಟ್ಟು ಧರಿಸುತ್ತೇವೆ. ಚಂದ್ರನಲ್ಲಿರುವ ಕಲೆ, ಕಾರ್ಕೋಟಕದಲ್ಲಿರುವ ವಿಷ, ಕುದುರೆಗಳಂತೆ ಹುಚ್ಚೆದ್ದು ಓಡುವ ಮನಸ್ಸು ಇತ್ಯಾದಿ ಮೈಗೂಡಿವೆ. ಇದನ್ನು ಬಿಟ್ಟು ಸಾಕ್ಷಾತ್ ಲಕ್ಷ್ಮಿಯೇ ನಮಗೆ ಬೇಕು ಎಂಬ ಏಕಾಗ್ರ ಮನದಿಂದ ಆರಾಧಿಸಬೇಕು ಎಂಬ ಸಂದೇಶ ವರಮಹಾ ಲಕ್ಷ್ಮಿಪೂಜೆಯಲ್ಲಿ ಅಡಗಿದೆ.
ಏನು ಪ್ರಾಪ್ತಿಯಾಗುತ್ತದೆ?
ಶಾಸ್ತ್ರೋಕ್ತವಾಗಿ ದೇವಿಯ ಪೂಜೆ ಮಾಡಿದ ಮೇಲೆ ವರಮಹಾಲಕ್ಷ್ಮಿ ವ್ರತ ಕಥೆ ಓದುವ ಮತ್ತು ಕೇಳುವ ಪದ್ಧತಿ ಇದೆ. ಇದರಿಂದ ಸಂಕಷ್ಟ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ.
ಅನುಸಂಧಾನದ ಮಹತ್ವ
ಲಕ್ಷ್ಮಿಗೆ ಸರಸ್ವತಿಯು (ಸೊಸೆ) ಹಾರ ನೀಡಿದಳು. ಇದು ಅತ್ತೆ-ಸೊಸೆ ಬಾಂಧವ್ಯ ಸೂಚಕ. ತಂದೆ ಸಮುದ್ರರಾಜ ಮಂಗಳಸೂತ್ರ ಪ್ರದಾನ ಮಾಡಿದ. ಹೆಣ್ಣಿಗೆ ಸೌಮಂಗಲ್ಯ ತವರಿನಿಂದಲೇ ಬರುವುದು ಎಂಬುದರ ಪ್ರಾತಿನಿಧ್ಯವಿದು. ಮೊಮ್ಮಗನ ಪತ್ನಿ ಗೌರಿ (ಪಾರ್ವತಿದೇವಿ) ಕಸ್ತೂರಿ ತಿಲಕ ಕೊಟ್ಟಳು. ಇದು ಸೌಭಾಗ್ಯದ ಲಕ್ಷಣ. ಹೀಗಾಗಿ ವಿವಾಹ ಸಂದರ್ಭ ವಧು ಮೊದಲು ಗೌರಿ ಪೂಜೆ ಮಾಡಬೇಕು ಎಂಬ ಸಂಪ್ರದಾಯವಿದೆ. ಮರಿಮೊಮ್ಮಗ ಚಂದ್ರ ಮುತ್ತಿನ ಓಲೆ ನೀಡಿದ. ಶ್ವೇತವರ್ಣದ ಮುತ್ತು ಶಾಂತಿಯ ಪ್ರತೀಕ. ಪಾಪ ಪರಿಹಾರದ ದ್ಯೋತಕ. ನವರತ್ನಭರಿತ ಕಿರೀಟ ನವವಿಧ ಭಕುತಿಯ ಸಂಕೇತ. ಯಾರು ಭಕ್ತಿಯಿಂದ ಆರಾಧಿಸುವರೋ ಅವರನ್ನು ನಾನು ತಲೆಯ ಮೇಲಿಟ್ಟುಕೊಂಡು ಮೆರೆಸುತ್ತೇನೆ ಎಂಬ ಭರವಸೆ. ಲಕುಮಿ ವಸ್ತ್ರಪ್ರಿಯೆ. ಉಟ್ಟ ಮತ್ತು ಹೊದ್ದ (ಎರಡು) ಸೀರೆ ಪತಿವ್ರತಾ ಸ್ತ್ರೀಯರಿಗೆ ನಿಜವಾದ ಭೂಷಣ. ವರಮಹಾಲಕ್ಷ್ಮಿ ಪೂಜೆಗೆ ಮುನ್ನ ಆಭರಣಗಳನ್ನು ದೇವಿಗೆ ತೊಡಿಸಿ ಅಲಂಕರಿಸುವಾಗ ಈ ಅನುಸಂಧಾನವಿರಬೇಕು. ಆಗ ಪೂಜಾದಿಗಳು ಸಾರ್ಥಕ ಎಂಬ ಸಂದೇಶ ಸೋಂದಾ ಶ್ರೀ ವಾದಿರಾಜ ತೀರ್ಥ ವಿರಚಿತ ಲಕ್ಷ್ಮಿ ಶೋಭಾನೆ ಸರಳ ಕನ್ನಡ ಪದ್ಯದಲ್ಲಿ ಢಾಳಾಗಿ ಉಲ್ಲೇಖಿತವಾಗಿವೆ.
ಸದ್ಭಕ್ತಿಯ ಸಂಕೇತಗಳು
ವರಮಹಾಲಕ್ಷ್ಮಿಯು ಸರ್ವಾಲಂಕಾರ ಭೂಷಿಣಿ. ಆಕೆ ಏನೆಲ್ಲ ಧರಿಸಿ ಬಂದಳೋ ಅವೆಲ್ಲವೂ ಸಾಂಕೇತಿಕವಾಗಿವೆ. ಚತುರ್ಭುಜೆಯಾದ ಆಲೆಯ ಎರಡು ಕೈಗಳು ಅಭಯ ಮತ್ತು ವರದ ಹಸ್ತವಾಗಿವೆ. ಧೈರ್ಯ ನೀಡುವೆ ಮತ್ತು ನಿಮ್ಮ ಸಂಪತ್ತನ್ನು ರಕ್ಷಿಸುವೆ ಎಂಬ ಸಂಕೇತವಿದೆ.
ನಿಮ್ಮ ಸಂಪತ್ತನ್ನು ಭಗವಂತನ ಪಾದ ಸೇವೆಗೆ ಚೆಲ್ಲಿ. ಆಗ ನಿಮಗೆ ಅಭಯ ನೀಡಿ ಮೇಲೆತ್ತುವೆ ಎಂಬ ಸಂದೇಶವೂ ಇದೆ. ಇನ್ನೆರಡು ಕೈಗಳಲ್ಲಿ ಕಮಲವಿದೆ. ಇದು ಆಕೆಯ ಪುತ್ರರಾದ ಬ್ರಹ್ಮ ಮತ್ತು ವಾಯು. ಸಂಪತ್ತಿನ ಗರ್ವವನ್ನು ಕೆಳಗೆ ಬಿಟ್ಟರೆ ನಿಮ್ಮ ಸಂತಾನವನ್ನು ಮೇಲೆತ್ತಿ ಹಿಡಿಯುವೆ ಎಂಬ ಅನ್ವರ್ಥವಿದು. ಇವುಗಳನ್ನು ಅರ್ಥೈಸಿಕೊಂಡು ಪೂಜಿಸಿದರೆ ಅದು ಸಾರ್ಥಕ ಆರಾಧನೆಯಾಗುತ್ತದೆ.
ಸೌಭಾಗ್ಯ ಸಂಪತ್ತು ಹೆಚ್ಚಳ
ಲಕ್ಷ್ಮೀ ಎಂದರೆ ಸಂಪತ್ತು – ಸೌಭಾಗ್ಯ. ಸಂಭ್ರಮಗಳನ್ನು ಬದುಕಿನ ಎಲ್ಲ ಸ್ತರದಲ್ಲೂ ಕಾಣುವಂತಾಗಲಿ ಎಂದು ಪ್ರಾರ್ಥಿಸುವ ಹಬ್ಬವಿದು. ನಮ್ಮ ಬದುಕನ್ನು ಸುಗಮಗೊಳಿಸುವ ಎಲ್ಲ ರೀತಿಯ ಐಶ್ವರ್ಯಗಳಿಗೆ, ಅದಕ್ಕೆ ಪೂರಕ ಮಾರ್ಗಗಳಿಗೆ ಕೃತಜ್ಞತೆ ಸಲ್ಲಿಸುವ ಆಚರಣೆ, ಪ್ರಾದೇಶಿಕವಾಗಿ ಒಂದಿಷ್ಟು ವ್ಯತ್ಯಾಸ ಅಲ್ಲಲ್ಲಿ ಕಂಡು ಬಂದರೂ ದೇಶಾದ್ಯಂತ ಈ ಮುಖಗಳ ನಡುವೆ ಸಮಾನ ಬಂಧುತ್ವವಿದೆ. ಬೇಡಿದ್ದನ್ನು ನೀಡುವ ಕಾಮಧೇನು, ಶ್ರಮದಿಂದ ಬರುವ ಸಂಪಾದನೆ, ಅಂಗಡಿಯ ಗಲ್ಲಾ ಪೆಟ್ಟಿಗೆ, ಧಾನ್ಯ ರಾಶಿ-ಹೀಗೆ ಎಲ್ಲದರಲ್ಲಿ ಸಂಭ್ರಮ- ಸೊಗಸು- ಸಂತಸವಿರುತ್ತದೆ. ಅದನ್ನು ಕಾಣುವ ಭವ್ಯ ದೃಷ್ಟಿಯನ್ನು ನೀಡುವವಳೇ ಲಕ್ಷ್ಮೀ. ಪುಟ್ಟ ಹಣತೆ ದೊಡ್ಡ ಬೆಳಕಿಗೆ ನಾಂದಿಯಾಗುವಂತೆ ಆರ್ಥಿಕ ಹರಿವು ಚಿಕ್ಕದಿದರೂ ಅದು ನೀಡುವ ಆನಂದ ಅಕ್ಷಯವಾಗಲಿ ಎಂಬುದೇ ಹಬ್ಬದಾಚರಣೆಯ ನಿಜವಾದ ಅರ್ಥ.
ಒಳನೋಟದ ದರ್ಶನ ಭಾಗ್ಯ
ಈ ಹಬ್ಬದಲ್ಲಿ ವಿಜೃಂಭಣೆಯೇ ಗಮನಾರ್ಹ ಅಂಶ. ಇದು ಕೇವಲ ಹೊರನೋಟದ ಹಬ್ಬ ಮಾತ್ರವಲ್ಲ, ಒಳಗಣ್ಣನ್ನೂ ಸಚೇತನಗೊಳಸುವ ವಿಶಿಷ್ಟ ಪ್ರಕ್ರಿಯೆಯ ಪರ್ವ. ಇದನ್ನು ಅರಿತರೆ ವ್ಯಕ್ತಿಯ ಬದುಕಿನಲ್ಲಿ ಸಂಪತ್ತು ಸಾಗರರೂಪವಾಗಿ ಬರುತ್ತದೆ. ಹೊಸ ದರ್ಶನಕ್ಕೆ ಒಳಗಿನ ಕಣ್ಣು ತಾನಾಗಿ ತೆರೆಯುತ್ತದೆ. ಆಗ ಗೃಹಿಣಿ ಮನೆಯ ಶಕ್ತಿಯಾಗುತ್ತಾಳೆ. ವಂಶದ ಸರ್ವತೋಮುಖ ಅಭಿವೃದ್ಧಿಗೆ ಚೇತನವಾಗುತ್ತಾಳೆ. ಆಕೆ ಮಾಡುವ ಕೆಲಸಗಳೂ ಮಹೋನ್ನತವಾಗುತ್ತದೆ. ಲಕ್ಷ್ಮೀ ಸ್ವರೂಪವಾದ ಸಕಲ ಸಂಪತ್ತೂ ಕುಟುಂಬವನ್ನು ಹಿಂಬಾಲಿಸುತ್ತದೆ. ಮನೆಯ ಪ್ರತಿಯೊಬ್ಬರ ಸಾಧನಾ ಮೈಲಿಗಲ್ಲುಗಳು ಮೈದಳೆದು ನಿಲ್ಲುತ್ತವೆ. ವಂಶ ಹಿರಣ್ಯ ವರ್ಣದಂತೆ ತೇಜೋಮಯವಾಗಿ ಬೆಳಗುತ್ತದೆ. ಸಮಸ್ತ ಸಮಾಜಕ್ಕೆ ಅದು ಮಾದರಿ ಎನಿಸುವಷ್ಟು ಎತ್ತರಕ್ಕೆ ಬೆಳೆದು ಬೆಳಕಾಗುತ್ತದೆ. ಈ ಫಲ ಪ್ರಾಪ್ತಿಗೆ ಭೌತಿಕ, ಪಾರಮಾರ್ಥಿಕ ಸಂಪತ್ತಿನ ಅಧಿದೇವತೆ, ಸಾಕ್ಷಾತ್ ಮಹಾವಿಷ್ಣುವಿನ ಅಂತರಂಗದರಸಿ ಸಿರಿ ಲಕ್ಷ್ಮೀದೇವಿಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಬೇಕು ಎಂಬುದು ಶಾಸ್ತ್ರಕಾರರ ವ್ಯಾಖ್ಯಾನ. ಶ್ರದ್ಧೆ ಮಾತ್ರ ಆಗಬೇಕು ಸ್ಫೂರ್ತಿ, ಆಗ ಸಂದೀತು ಕೀರ್ತಿ.
ಶುಭ ದಿನದ ಸಂತಸ
ವರಮಹಾಲಕ್ಷ್ಮೀ ಹಬ್ಬ ಎಂದರೆ ಹೆಂಗಳೆಯರು ಮಂಗಳ ಸ್ನಾನ ಮಾಡಿ, ರೇಷ್ಮೆ ಸೀರೆ ಉಟ್ಟು, ಸಕಲಾಭರಣಗಳಿಂದ ತಾವೂ ಅಲಂಕರಿಸಿ, ತಳಿರು ತೋರಣ, ಊಟಕ್ಕೆ ವಿವಿಧ ಭಕ್ಷ್ಯ ಮಾಡಿ ಶುಭದಿನವನ್ನು ತಮ್ಮದಾಗಿಸಿಕೊಳ್ಳುವ ಘಟ್ಟ. ಎಲ್ಲ ಆಭರಣ, ಹಣಕಾಸು ಮತ್ತು ದೇವಿಯ ಕಥೆ ನಿರೂಪಿಸುವ ಕೃತಿಗಳನ್ನು ಅಂದವಾಗಿ ಪೂಜಾಸ್ಥಳದಲ್ಲಿ ಇಟ್ಟು ದೀಪಾರಾಧನೆ ಮಾಡುವ ಸಕಾಲ.
ಪ್ರತಿಷ್ಠಾಪನೆ ಹೇಗೆ?
ಮಹಾಲಕುಮಿ ಸಂಪತ್ತು ಮಾತ್ರವಲ್ಲ, ಶುದ್ಧತೆಯ ಸಾಕ್ಷಾತ್ ಪ್ರತಿರೂಪವೂ ಹೌದು. ಹೀಗಾಗಿ ಈಕೆಯನ್ನು ಪ್ರತಿಮೆ, ಕಲಶರೂಪದಲ್ಲಿ ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದು ವಾಡಿಕೆ. ಹಸಿದು ಸೀರೆ, ಪರಿಮಳಭರಿತ ಕೆಂಪು ಮತ್ತು ಹಳದಿ ಪುಷ್ಪಗಳಿಂದ ಅಲಂಕರಿಸುವುದು ಪದ್ಧತಿ. ಸಂಪತ್ತಿನ ಅಧಿದೇವತೆಯನ್ನು ಯಥೇಚ್ಛ ಧೂಪ-ದೀಪಗಳ ಬೆಳಕಿನ ನಡುವೆ ಗೋಧೂಳಿ ಲಗ್ನದಲ್ಲಿ ಪೂಜಿಸುವುದು ಎಂದರೆ ಶ್ರಾವಣ ಸಂಭ್ರಮಕ್ಕೆ ಅದು ಜೀವಕಳೆ. ತನು, ಮನ, ಮನೆಯಲ್ಲಿ ಸಂತೋಷದ ನೆಲೆ. ಕುಟುಂಬದ ಚೈತನ್ಯಕ್ಕೆ ಸ್ಫೂರ್ತಿ ಸೆಲೆ.
ಆಚರಣೆಯ ಹಿಂದಿನ ವೈಶಿಷ್ಟ್ಯ
ಮಹಾಲಕ್ಷ್ಮೀ ವ್ರತವನ್ನು ಆಚರಿಸುವ ಹಿಂದೆ ಒಂದು ಐಹಿತ್ಯವೇ ಇದೆ. ಒಂದಾನೊಂದು ಕಾಲದಲ್ಲಿ ಹರ್ಷಯುಕ್ತನಾಗಿ ದೇವಾನುದೇವನಾದ ಪರಮೇಶ್ವರನು ಪಾರ್ವತಿಯೊಡನೆ ಸಂತೋಷದಿಂದ ಕುಳಿತಿರುವಾಗ ಲೋಕಾನುಗ್ರಹಾರ್ಥವಾಗಿ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ಮಹಾದೇವನೇ… ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನುಂಟು ಮಾಡುವ ವ್ರತ ಯಾವುದಾದರೂ ಇದೇಯಾ? ಅದನ್ನು ನನಗೆ ಹೇಳಿ ಎಂದಾಗ, ಪರಮೇಶ್ವರನು ಎಲ್ಲರಿಗೂ ಸನ್ಮಂಗಳ ಹಾಗೂ ಸಮೃದ್ಧಿಯನ್ನೊದಗಿಸುವ ವರಮಹಾಲಕ್ಷ್ಮೀ ವ್ರತವೊಂದಿದೆ. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಳೆಯರಾಗಲಿ, ಪುರುಷರಾಗಲಿ, ಮಕ್ಕಳಾಗಲಿ ಯಾರೂ ಬೇಕಾದರೂ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡುವುದರಿಂದ ಭಕ್ತರ ಕೋರಿಕೆಗಳೆಲ್ಲವೂ ಕೈಗೂಡಿ ಕಷ್ಟ ಕಾರ್ಪಣ್ಯಗಳು ನಾಶವಾಗುವವು ಎಂದು ಹೇಳಿದನಂತೆ. ಅಂದಿನಿಂದ ಈ ವ್ರತವು ಆರಂಭವಾಯಿತು ಎನ್ನಲಾಗಿದೆ. ಅಲ್ಲದೇ ಇನ್ನೊಂದು ದಂತಕಥೆಯ ಪ್ರಕಾರ ಹಿಂದೆ ಮಹಾಲಕ್ಷ್ಮೀಯು ತನ್ನ ಒಬ್ಬ ಬಡ ಭಕ್ತಳಾದ ಚಾರುಮತಿ ಎಂಬ ಮಹಿಳೆಗೆ ಕನಸ್ಸಿನಲ್ಲಿ ಕಾಣಿಸಿಕೊಂಡು ಆಕೆಯ ಅಪೇಕ್ಷೆಗಳು ಸಾಕಾರಗೊಳ್ಳಲು ಈ ವ್ರತವನ್ನು ಆಚರಿಸುವಂತೆ ಉಪದೇಶಿಸಿದಳಂತೆ. ಆಗ ಚಾರುಮತಿ ಈ ವ್ರತವನ್ನು ತನ್ನ ಗ್ರಾಮದ ಇತರ ಮಹಿಳೆಯರ ಜೊತೆಗೆ ಅತ್ಯಂತ ಭಕ್ತಿಯಿಂದ ಆಚರಿಸಿದಳು. ಅವರು ದೇವಿಗೆ ಭಕ್ಷ್ಯ ಭೋಜ್ಯಗಳನ್ನು ಸಮರ್ಪಿಸಿದರು. ವ್ರತ ಸಂಪೂರ್ಣಗೊಂಡಾಗ ತಮ್ಮ ಶರೀರವು ದುಬಾರಿ ಬೆಲೆಯ ಆಭರಣಗಳಿಂದ ತುಂಬಿ ಹೋಗಿದ್ದುದನ್ನು ಕಂಡು ಅವರೆಲ್ಲ ವಿಸ್ಮತಗೊಂಡರು ಮತ್ತು ಅವರ ಮನೆಗಳೂ ಕೂಡ ಅತುಳೈಶ್ವರ್ಯದಿಂದ ತುಂಬಿ ತುಳುಕುತ್ತಿದ್ದವು. ಇದನ್ನೆಲ್ಲಾ ಕಂಡು ಅವರು ಅತ್ಯಂತ ಭಕ್ತಿ-ಭಾವದಿಂದ ಪ್ರತಿವರ್ಷ ತಮ್ಮ ಕುಟುಂಬಗಳಲ್ಲಿ ಸಮೃದ್ಧಿಯನ್ನುಂಟು ಮಾಡುವಂತೆ ಕೋರಿ ಈ ವ್ರತವನ್ನು ಆಚರಿಸಲು ಪ್ರಾರಂಭಿಸಿದರು ಎಂಬ ನಂಬಿಕೆಯೂ ಇದೆ.
ಪುರಾಣದ ಪ್ರಕಾರ, ಲಕ್ಷ್ಮೀಯು ಕ್ಷೀರಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿದ್ದಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸಿದವಳೇ ಲಕ್ಷ್ಮೀ. ಹಾಗಾಗಿ ಈ ವರಮಹಾಲಕ್ಷ್ಮೀ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ.
(ವಿವಿಧ ಮೂಲಗಳಿಂದ)
Get In Touch With Us info@kalpa.news Whatsapp: 9481252093
Discussion about this post