ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತಾವು ಒಬ್ಬರೇ ಸಾಧನ ಪಂಥವನ್ನು ಹಿಡಿಯದೇ..ಹೆಂಡತಿ, ಮಕ್ಕಳು, ತಮ್ಮಂದಿರು, ತನುಸಂಬಂಧಿಗಳು, ಮನಸಂಬಂಧಿಗಳು, ನೆರೆಹೊರೆಯವರು, ಅಷ್ಟೇ ಅಲ್ಲದೇ…. ಇಡೀ ಮಾನವ ಜನಾಂಗವನ್ನೆ ತಮ್ಮ ಸತ್ಸಾಧನೆಯ ಪಂಥಕ್ಕೇ ಕರೆದೊಯ್ಯವ & ಕೇವಲ ಸ್ಮರಣೆಮಾತ್ರದಿಂದಲೇ ಸಂಸಾರ ಭಯವನ್ನೂ ಸರ್ವಾಭಿಷ್ಠಗಳನ್ನು ದಯಪಾಲಿಸಿ… ತಮ್ಮ ಮಂತ್ರತುಲ್ಯವಾದ ಅಧ್ಭುತ ಕೃತಿಗಳ ಮೂಲಕ ಮಾರ್ಗದರ್ಶನವನ್ನು ಮಾಡುವುದರ ಮೂಲಕ ಶ್ರೀಪುರಂದರಗುರುಂ ವಂದೇ ದಾಸಶ್ರೇಷ್ಠ ದಯಾನಿಧಿಂ…. ಎಂಬ ಅನ್ವರ್ಥಕ್ಕೇ ಆದರ್ಶಪ್ರಾಯರಾಗಿ ಅಂದು-ಇಂದು-ಎಂದೆಂದೂ…. ಜನಮನದಲ್ಲಿ ಜ್ಞಾನ ಭಕ್ತಿ ವೈರಾಗ್ಯ ಮೂರ್ತಿಯಾಗಿ ನಿತ್ಯ ನಿರಂತರವಾಗಿ ಕಂಗೊಳಿಸುತ್ತಿದ್ದಾರೇ.. ಇಂಥವರ ಸ್ಮರಣೆಯೇ ಪಾಪಪರಿಹಾರಿಕವಾಗಿದೆ.
ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಮ್|
ಪುರಂದರಗುರಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್||
ಶ್ರೀಲಕುಮಿದೇವಿ ಆದಿಯಾಗಿ …ಸಮಸ್ತ ಜೀವರು ಶ್ರೀಹರಿಯ ಅನುಗ್ರಹ ಪ್ರಾಪ್ತಿಗಾಗಿ… ದಾಸತ್ವದ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವ ನಿಟ್ಟಿನಲ್ಲಿ… ಸಂಸ್ಕೃತಿ-ಸಂಗೀತ-ಸಾಹಿತ್ಯ -ಸತ್ಪಂಥದ ಸುಪಥದಲ್ಲಿ ಸಾಗುತ್ತಾ.. ಮುಮುಕ್ಷುಗಳು ಸಾಧನೆಯ ಮಾರ್ಗವನ್ನು ಕ್ರಮಿಸುವುದು ಒಂದು ಉತ್ತಮ ಸಾಧನವಾಗಿದೆ. ಈ ದಿಸೆಯಲ್ಲಿ… ಶ್ರೀಮದಾನಂದ ತೀರ್ಥರಿಂದ ಸ್ಪೂರ್ತಿ ಹೊಂದಿ ಅವರ ನಂತರ ಬಂದ ಜ್ಞಾನಿವರೇಣ್ಯರು, ಯತಿವರೇಣ್ಯರು. ದಾಸಶ್ರೇಷ್ಟರು. ಮುಂತಾದ ಮಹನೀಯರುಗಳು ತೋರಿದ ಮಾರ್ಗ ಮಾಡಿದ ಕೃಷಿ, ಸಾಹಿತ್ಯಸರಸ್ವತಿಗೆ ಉಪಮೆ, ರೂಪಕ, ಯಮಕ, ಮುಂತಾದ ಕಾವ್ಯ ಕೃತಿಗಳು, ದೈವದತ್ತವಾದ ಸಹಜ ಪ್ರತಿಭೆಯುಳ್ಳ ಕವಿತಾಶಕ್ತಿ ಮೈಗೂಡಿಸಿಕೊಂಡು ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿ ಸಕಲ ಸಜ್ಜನರನ್ನು ಆ ನಿಟ್ಟಿನಲ್ಲಿ ಕರೆದೊಯ್ಯಲು ಭುವಿಗೆ ಬಂದ ಮಹನೀಯರುಗಳೇ ಹರಿದಾಸವರೇಣ್ಯರುಗಳಲ್ಲಿ ಪ್ರಮುಖರಾದಾವರು ಶ್ರೀಪುರಂದರ ದಾಸವರೇಣ್ಯರು.
ದಾಸಸಾಹಿತ್ಯದ ಕೇಂದ್ರಬಿಂದುವಾಗಿ ಧೃವತಾರೆಯಂತೆ ಮಿನುಗುತ್ತಿರುವ ಭೂತಾರೆ..”ಶ್ರೀಪುರಂದರದಾಸರು”
ಸಂಸ್ಕೃತ ಭಾಷಾ ಜ್ಞಾನವಿಲ್ಲದ ಲಕ್ಷಾವಧಿ ಜನರಿಗೆ ವೇದ, ಉಪನಿಷತ್, ಪುರಾಣಗಳ, ಇತಿಹಾಸದ, ಅರ್ಥವನ್ನು ಸಲಭವಾದ ಸರಳಕನ್ನಡ ಪದದಲ್ಲಿ ರಚಿಸಿ, ಮಾನವಧರ್ಮ & ಮಧ್ವಮತ ಪ್ರಚಾರವೇ ತಮ್ಮ ಕರ್ತವ್ಯವನ್ನಾಗಿಸಿ, ಲಕ್ಷಗಟ್ಟಲೆ ಕೃತಿಗಳನ್ನು ರಚಿಸಿ ನೀಡುವುದರ ಮೂಲಕ ಸಕಲಸಜ್ಜನರ ಆಧ್ಯಾತ್ಮಿಕ ಸಾಧನೆಗೆ ಹಾದಿ ತೋರಿದ ಲೋಕೋಪಕಾರವನ್ನು ಮಾಡಿದ ಶ್ರೀಪುರಂದರ ದಾಸರ ಕೃತಿಗಳನ್ನು ಗುರುಗಳಾದ ಶ್ರೀವ್ಯಾಸರಾಜರು “ಪುರಂದರೋಪನಿಷತ್” ಎಂದು ಘೋಷಿಸಿ ಮಾನ್ಯಮಾಡಿದ್ದಾರೆ. ಅಬಾಲವೃದ್ಧರಿಗೂ ಅರ್ಥವಾಗುವಂತೆ ಸದಾಚಾರ ಸಂಪತ್ತನ್ನು ಆಚಾರ್ಯ ಮಧ್ವರ ಸಿದ್ಧಾಂತವನ್ನು ಪ್ರಮೇಯಗಳನ್ನು, ವೇದಾಂತ ವಿಚಾರಗಳನ್ನೂ ತಮ್ಮ ಕೃತಿಯಲ್ಲಿ ಸೆರೆಹಿಡಿದು ಸುಂದರವಾಗಿ ವರ್ಣಿಸಿ ಲೋಕೋಪಕಾರ ಮಾಡಿದ್ದಾರೆ.
ನಾರದರೇ…ಪುರಂದರದಾಸರು……..
ದೇವರ್ಷಿ ನಾರದರಿಗೂ ಸಾಮವೇದ ಸಂಗೀತಗಳಿಗೂ ನಿಕಟ ಸಂಬಂಧವುಂಟು.ಸಂಗೀತ ಮಕರಂದ ಎಂಬ ಸಂಗೀತಶಾಸ್ತ್ರವನ್ನು ರಚಿಸಿದವರು ಅವರೇ ವೀಣಾಶಾಸ್ತ್ರ ಕೋವಿದರೂ.. ಸಾಮಗಾನವಿಲೋನನ್ನು ಸಾನುರಾಗದಿಂದ ವಲಿಸಿ ,ನಲಿಸಿ, ಕುಣಿಸಿದ ಮಹನೀಯರು ನಾರದರು.! ತ್ರಿಲೋಕಸಂಚಾರಿಗಳಾಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ…ಧರ್ಮಪ್ರಜ್ಞೆಯನ್ನು ಭಗವಂತನ ತತ್ವವನ್ನು ಮಹಿಮೆಯನ್ನು ಸಾರಿ, ಸಮಯಾನುಸಾರ ಕೆಲಜನರನ್ನು ತಿದ್ದಿ ಸರಿದಾರಿಗೆ ತರಲು ತಂಟೆಗಳನ್ನು ತಂದೊಡ್ಡಿ. ಜಗತ್ ಕಲ್ಯಾಣವನ್ನು ಸಾಧಿಸಿದ ಮಹನೀಯರು.! ವಾಲ್ಮೀಕಿರಾಮಾಯಣ ರಚಿಸಲು & ವ್ಯಾಸರಿಗೆ ಭಾಗವತ ರಚಿಸಲು, ಸ್ಪೂರ್ತಿ ನೀಡಿದ ಮಹಾನುಭಾವರು.! ಪ್ರಹ್ಲಾದರಾಜರಿಗೆ ತಾಯ ಗರ್ಭದಲ್ಲಿರುವಾಗಲೇ ಭಾಗವತ ಧರ್ಮವನ್ನು ಉಪದೇಶಿಸಿದವರು ಇವರೇ..!. ಇಂಥಹ ಮಹಾತ್ಮರನ್ನು ಸ್ವಯಂ ಶ್ರೀಕೃಷ್ಣನೇ ಹೃತ್ಪೂರ್ವಕವಾಗಿ ಹೊಗಳಿದ್ದಾನೆ.(ಮಹಾಭಾರತ ಶಾಂತಿಪರ್ವ-ಅ-೨೩೦).
ಸ್ವಪ್ರಯತ್ನ & ಭಗವದನುಗ್ರಹದ ಮೂಲಕ ಅತಿ ಉತ್ಕೃಷ್ಟ ಸ್ಥಾನವನ್ನು ಪಡೆದ ದೇವರ್ಷಿಯಾದ ನಾರದರ ಶುದ್ಧಚಿತ್ತದೊಂದಿಗೆ ವೇದಮಂತ್ರಗಳು, ಉಪದೇಶಿಸಿದಂತ ತತ್ವಗಳಿಗನುಸಾರವಾಗಿ ಜೀವನ ನೆಡೆಸಿದವರು. ಭಗವನ್ನಾಮದ ಭಗವದ್ಭಕ್ತಿಯ ಪ್ರಚಾರಕ್ಕಾಗಿ ತ್ರಿಲೋಕಸಂಚಾರಿಗಳಾಗಿ ಭಕ್ತಿಗೇ ಸೂತ್ರಗಳನ್ನು ಹೆಣೆದವರೂ.. ….
ನಾರದರ ಭಕ್ತಿಸೂತ್ರಗಳು, ನಾರದಸ್ಮೃತಿ, ನಾರದೀಯ ಶಿಕ್ಷಾ,ನಾರದಪರಿವ್ರಾಜಕೋಪನಿಷತ್, ನಾರದೀಯ ಪುರಾಣ & ನಾರದರ ಪಂಚರಾತ್ರಾಗಮ ಮುಂತಾದವು ನಾರದರ ಹೆಸರಿನಲ್ಲಿ..ಪ್ರಸಿದ್ಧವಾಗಿರುವ ಅನೇಕ ಗ್ರಂಥಗಳಲ್ಲಿ ಜನರನ್ನು ಧರ್ಮ & ಭಕ್ತಿ ಮಾರ್ಗಕ್ಕೇ ತರುವಲ್ಲಿ ಕಾರಣಕರ್ತರಾಗಿ ಇಂದಿನ ಕಲಿಯುಗದಲ್ಲಿಯೂ ಆ ನಾರದರೇ…. ಭಗವಂತನಾಜ್ಞೆಯನುಸಾರ… ಪುರಂದರ ದಾಸರಾಗಿ … ಅವತರಿಸಿ …ಅವೆಲ್ಲವನ್ನು ಕಲಿಯುಗದ ಕಲಿಭಾಧೆಗೊಳಗಾದ ಜನರಿಗೆ… ಭಕ್ತಿ ಜ್ಞಾನ ವೈರಾಗ್ಯದ ಹಾದಿಯನ್ನು ತೋರಿಸಿ… ಸಾಧನಾ ಫಥದೆಡೆಗೆ ಒಯ್ಯುವ ಮಹತ್ತರವಾದ ಕಾರ್ಯವನ್ನು ಇಲ್ಲಿಯೂ ಮುಂದುವರಿಸಿ ಜಗತ್ತಿಗೆ ಮಹದುಪಕಾರವನ್ನು ಮಾಡಿದ ಮಹನೀಯರು..! ಅಂದು-ಇಂದು-ಎಂದೆಂದೂ… ಸಕಲ ಸಜ್ಞನರಿಗೆ ಗುರುತರವಾದ ಗುರಿಯನ್ನು ಹೊತ್ತ ಗುರುಗಳೇ ಎನಿಸಿದ್ದಾರೆ!
ಭಗವಂತನ ಸಾಕ್ಷಾತ್ಕಾರವೇ ಮಾನವ ಜೀವನದ ಗುರಿ. ಆ ಭಗವಂತನು ನಮ್ಮೆಲ್ಲರ ಹೃದಯದಲ್ಲಿ ನಮಗೆ ಅತ್ಯಂತ ಸಮೀಪನಾಗಿ, ನಮ್ಮ ಅಂತರ್ಯಾಮಿಯಾಗಿ, ಬಿಂಬರೂಪಾತ್ಮಕನಾಗಿದ್ದಾನೆ. ಅವನಿಗೆ ಅಭಿಮಾನ ಅಹಂಕಾರ ಸೇರದು ತನ್ನ ಭಕ್ತರಲ್ಲಿ ದೈನ್ಯವನ್ನು ಬಯಸುತ್ತಾನೆ .ಅವನನ್ನೇ ಭಗವಂತ ಎಂದು ಕರೆಯುತ್ತಾರೆ. ಭಕ್ತರು ಅವನ ಗುಣಗಳ ಶ್ರವಣವನ್ನು, ಕೀರ್ತನೆಗಳನ್ನು, ಭಜನೆಯನ್ನೂ ಮಾಡಿದರೆ ಅವನದನ್ನು ಸ್ವೀಕರಿಸಿ ಭಕ್ತರನ್ನು ಅನುಗ್ರಹಿಸುತ್ತಾನೆ. ಏಕೆಂದರೆ ಆವನು ಕೃಪಾಮಯಿ. ಅವನು ಪ್ರತ್ಯಕ್ಷನಾದರೆ ಎಲ್ಲವೂ ಆದಂತೆ ನಾರದರ ಮೂಲಕ ಬಂದಿರುವ ಈ ಉಪದೇಶವೂ ಸಹ ಆ ಭಗವಂತನಿಂದಲೇ ಬಂದಿದ್ದು. ಇವೇ ತತ್ವಗಳನ್ನು ಭಕ್ತಿ, ಪರಾಭಕ್ತಿ, ಅಪರಾಭಕ್ತಿ, ಗೌಣೀಭಕ್ತಿ, ಮುಖ್ಯಭಕ್ತಿ, ಭಕ್ತಿಸಾಧನೆ, ಮುಕ್ತ ಭಕ್ತನ ಲಕ್ಷಣಗಳು…. ಮುಂತಾದ ವಿಚಾರ ತತ್ವಗಳನ್ನು ನಾರಾದಾವತಾರಿಗಳಾದ ಪುರಂದರರು ತಮ್ಮ ನಾಲ್ಕುಲಕ್ಷದ ಎಪ್ಪತ್ತಚೈದು ಸಾವಿರ ಕೃತಿಗಳಲ್ಲಿ ವಿಸ್ತಾರವಾಗಿ ಹಂಚುವುದರ ಮೂಲಕ ವೇದ, ಪುರಾಣ, ಉಪನಿಷತ್ಗಳ ಸಾರದ ಸವಿಯನ್ನು ಸಮಸ್ತ ಮಾನವ ಜನಾಂಗಕ್ಕೆ ಉಣಬಡಿಸಿದ್ದಾರೆ. ಹೀಗೆ ಮಂತ್ರತುಲ್ಯವಾದ ಅವರ ಕೃತಿಗಳ ಅವಲೋಕನ, ಚಿಂತನ, ಕೀರ್ತನಾ, ಗಾಯನಾ, ಭಜನಾ…ನರ್ತನ…. ಸೇವಾದಿಗಳೆಲ್ಲವು ಭಗವಂತನ ತತ್ವವನ್ನು ತಿಳಿಯುವ & ಭಗವಂತನನ್ನೇ ತೋರುವ & ಭಗವಂತನ ಸಾನ್ನಿಧ್ಯವನ್ನು ಹೊಂದವ ದೀವಟಿಗೆಗಳಾಗಿವೆ.
ಮನ್ಮನೋಭೀಷ್ಟವರದಂ”…..
“ಹಣ್ಣುಬಂದಿದೆ ಕೊಳ್ಳಿರೋ…”ಎಂದು ಸಜ್ಜನರ ಮನೆಮನಗಳಿಗೆ ಭಾಗವತದ ಶುಕ ಮುನಿಗಳು ಕಚ್ಚಿದ ಭಕ್ತಿಯ ನವರಸಭರಿತ ಹಣ್ಣನ್ನು. ತಲುಪಿಸುವರಾದ್ದರಿಂದ ಇವರು ಸರ್ವಾಭೀಷ್ಟಫಲಪ್ರದರು. ತಾರತಮ್ಯೋಪೇತ ಉಪಾಸನೆಯನ್ನು… ಜಗತ್ಸತ್ಯತ್ವವನ್ನು.. ಪಂಚಭೇಧತ್ವವನ್ನು ಶ್ರೀಹರಿಯ ಸರ್ವೋತ್ತಮತ್ವವನ್ನು ಸತ್ಯಜಗತಿದು ಪಂಚಭೇಧವು ನಿತ್ಯ ಶ್ರೀಗೋವಿಂದನ ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ… ಎಂದು ಸಾರುವುದರ ಮೂಲಕ. ಈಶ-ದಾಸತ್ವದ ಭಾವವನ್ನು.. ದಾಸನ್ನ ಮಾಡಿಕೋ ಎನ್ನಾ…. ಸ್ವಾಮಿ ಸಾಸಿರ ನಾಮದ ವೇಂಕಟರಮಣ…. ಎಂಬುದರ ಮೂಲಕ ಜಗತ್ತಿಗೇಭಕತರು ಭಗವಂತನನ್ನು ಬೇಡುವ ಕ್ರಮವನ್ನು ಅರುಹಿ ಸಾಧನಾ ಸುಫಥಕ್ಕೆ.ಹಚ್ಚಿ… ಸಾಧನೆಗೈಯಿಸುವುದರ ಮೂಲಕ ಸಂಸಾರದ ಜನ್ಮಾಂತರದ ಭವಬಂಧನಗಳನ್ನು ದಾಟಿಸುವ ತಮ್ಮ ಉಪದೇಶಗಂತಿರುವ ಕೃತಿಗಳಿಂದ ಪುಣ್ಯಫಲವನ್ನು ತಂದುಕೊಡವವರಾದ್ದರಿಂದ ಸರ್ವಾಭೀಷ್ಟಫಲಪ್ರದರಾಗಿದ್ದಾರೆ.
ದಾಸಶ್ರೇಷ್ಠಂ ದಯಾನಿಧಿಂ…
ದಾಸಸಾಹಿತ್ಯ ಯಾರೂ ಹುಟ್ಟು ಹಾಕಿದುದಲ್ಲಾ. ಭಗವಂತನ ಹರಿಸರ್ವೋತ್ತಮತ್ವದೊಂದಿಗೇ. ಹುಟ್ಟಿ ಬಂದಿದ್ದಾಗಿದೆ. ತಾರತಮ್ಯವಿಲ್ಲದಿದ್ದರೇ ಶ್ರೇಷ್ಠತ್ವ & ಸರ್ವೋತ್ತಮತ್ವ ಪ್ರಕಾಶಕ್ಕೆ ಬರುವಂತೆಯೇ ಇಲ್ಲಾ. ಶ್ರೀಲಕ್ಷ್ಮೀದೇವಿ ಆದಿಯಾಗಿ ಶ್ರೀಮದಾಚಾರ್ಯರ ಮೂರು ಅವತಾರಗಳೂ ದಾಸತ್ವದ ಶ್ರೇಷ್ಠತೆಯ ಪ್ರತಿಪಾದಕವೇ ಆಗಿವೆ. ಅದರಲ್ಲೂ ಯತಿಗಳಾಗಿ ವ್ಯಾಸರ ಸೇವೆ ಮಾಡಿ ದಾಸತ್ವದ ಅರ್ಥವನ್ನು ತಿಳಿಸಲೋಸುಗವೋ ಎಂಬಂತೇ….. ಆಚಾರ್ಯ ಮಧ್ವರ ಅವತಾರವೂ ಪೂರಕವಾಗಿದೆ.
ದಾಸಸಾಹಿತ್ಯದ ಮೂಲ ತಿಳಿಯುತ್ತದೆ.”ದಾಸಸಾಹಿತ್ಯ” ಈ ಪಂಚಾಕ್ಷರಿಯ ಮೊದಲೆರಡು ವರ್ಣಗಳಿಂದ ದಾಸ ಶಬ್ದವು ಅಂಕೆಗಳಲ್ಲಿ..೩೭..ನ್ನು ಸೂಚಿಸುವ ಪದವಾಗಿದೆ.ತ, ಥ, ದ…(೩)ಯ, ರ, ಲ, ವ, ಶ ಷ,ಸ,(೭)ಇದನ್ನು ಸೂಚಿಸುವುದರ ಮೂಲಕ ಶ್ರೀಮದಾಚಾರ್ಯರ ಸರ್ವಮೂಲಮೂವತ್ತೇಳು ಗ್ರಂಥಗಳ ಅಮೃತಸಾರವೇ ಎಂಬುದು ಗಮನಾರ್ಹ! ಇವುಗಳನ್ನು ಲೋಕ ಜನತೆಗೆ ಸಾರಲು ಹೊರಟ ಮಹನೀಯರೇ… ಪೂತಾತ್ಮ ಶ್ರೀಪುರಂದರದಾಸರು.. ನಮ್ಮ ಕಥಾನಾಯಕರು.!.
ಪ್ರತಿನಿತ್ಯವೂ ದಾಸರದು ಯಾಯವಾರದ ಜೀವನ.. ಮಧುಕರ ವೃತ್ತಿ ಎನ್ನದೂ…….ಎಂಬಂತೆ…ಕಡು ಭಕ್ತಿವೈರಾಗ್ಯದ ಗಣಿಯಾಗಿದ್ದರಿಂದಲೇ.. ಅವರ ಗುರುಗಳಿಂದಲೇ… ಪ್ರಶಂಸಿಸಿಕೊಂಡ ಮಹಾದಾಸಶ್ರೇಷ್ಠರು!!
ನೀತಿಯೆಲ್ಲವನರಿತು ನಿಗಮ ವೇದ್ಯನ ನಿತ್ಯ ವಾತಸುತನಲ್ಲಿಹನ ವರ್ಣಿಸುತಲೀ…ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ “ಪೂತಾತ್ಮ” ಪುರಂದರದಾಸರಿವರಯ್ಯಾ…. ಎಂಬ ಶ್ರೀವ್ಯಾಸರಾಜರಿಂದ ಮಾತು ಇವರ ದಾಸಶ್ರೇಷ್ಠತ್ವವನ್ನು ಅರಿಯಬಹುದು.
ದಯಾನಿಧಿಂ…
ಶ್ರೀಪುರಂದರದಾಸರ ಶಿಷ್ಯಾಗ್ರೇಸರರಾದ ಶ್ರೀವಿಜಯದಾಸರು ಒಂದು ಉದಯರಾಗದಲ್ಲಿ ಇವರ ಸಂಪೂರ್ಣಚರಿತ್ರೆಯನ್ನು ಒಂಬತ್ತು ನುಡಿಗಳಲ್ಲಿ ಸೆರೆ ಹಿಡಿದಿದ್ದಾರೆ. ಬಂದದುರಿತವಿನಾಶನಾ……. ಇದರ ಪ್ರಕಾರ ಶ್ರೀರಮಣನ ಸಭೆಯಲ್ಲಿ ಭಗವಂತ ಇವರ ಗಾಯನಕ್ಕೆ ಮೆಚ್ಚಿ ವರವಧಿಕ ಬೇಡೆನಲು.. ಕಲಿ ಹೆಚ್ಚಿದ ಯುಗದಲ್ಲಿ ಸೊಲ್ಲಿಸುವೆ ಕೀರ್ತಿಗಳ ಬಿಚ್ಚಿ ತೋರಿಸುವೆನೆಂದ . ಇಂಥ ದಯಾಳುಗಳು ಶ್ರೀಪುರಂದರದಾಸರು. ಕಲಿಯುಗದ ದೋಷಕ್ಕೊಳಗಾದ ಸುಜನ ರಕ್ಷಿಸಿ ಅವರ ಉದ್ಧಾರಕ್ಕಾಗಿ ಭಗವದಾಜ್ಞೆಯಿಂದ ಅವತರಿಸಿದ ನಾರದಮಹಾಮುನಿಗಳು ತಾವು ರಚಿಸಿದ ಭಕ್ತಿಸೂತ್ರಗಳನ್ನು (ನಾರದ ಭಕ್ತಿಸೂತ್ರ) ಆಚರಣೆಗೆ ತರಲು ಪುರಂದರದಾಸರಾಗಿ ಜನ್ಮತಳೆದವರು ಶ್ರೀಪುರಂದರದಾಸರು. ಅವರ ಅಧ್ಭುತವಾದ ಸರ್ವಕಾಲಿಕ ಸತ್ಯವಾದ ಸರ್ವ ಜನಜನಿತವಾದ ಗುರುವಿನ ಮಹತ್ವವನ್ನು ಸಾರುವ ಒಂದು ಕೃತಿಯ ಯಥಾಮತಿ ಚಿಂತನದ ಪ್ರಯತ್ನವನ್ನು ಮಾಡೋಣ.
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ||ಪ||
ಶ್ರೀಮಧ್ವಸಂಪ್ರದಾಯದಲ್ಲಿ ಶ್ರೀಹಂಸನಾಮಕ ಭಗವಂತನಾದಶ್ರೀನಾರಾಯಣನೇ ಮೂಲಗುರು!
ನಾರಾಯಣಂ ಸುರಗುರಂ ಜಗದೇಕನಾಥಂ ಭಕ್ತಪ್ರಿಯಂ ಸಕಲ ಲೋಕ ನಮಸ್ಕೃತಂಚ…
ಶ್ರೀಹರಿ ಬ್ರಹ್ಮದೇವರಿಗೆ ತತ್ವೋಪದೇಶಮಾಡಿ ಮೊದಲ ಗುರುವಾದ. ರುದ್ರದೇವರಿಗೆ ಪರಮಗುರುವಾದರು, ಇತರ ದೇವಾದಿದೇವತೆಗಳಿಗೆ ಆದಿಗುರುವಾದರೇ. ಮಾನುಷೋತ್ತಮರಿಗೆ ಮೂಲಗುರುವಾದನು. ಸಕಲ ಜೀವರಾಶಿಗಳ ಅಂತರ್ಯಾಮಿಯಾಗಿ ಮೂಲೇಶಾತ್ಮಕ ಬಿಂಬ ರೂಪಿ ಪರಮಾತ್ಮನೇ ಸ್ವರೂಪೋದ್ಧಾರಕನಾಗಿರುವ ಮೂಲಗುರು!
ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ||ಅ.ಪ||
ಆರು ಶಾಸ್ತ್ರವನೋದಿದರಿಲ್ಲ ಮುರಾರು ಪುರಾಣವ ಮುಗಿಸಿದರಿಲ್ಲಾ|
ಸಾರಿಸಜ್ಜನ ಸಂಗವ ಮಾಡದೇ ಧೀರನಾಗಿ ತಾ ಮೆರೆದರೆ ಇಲ್ಲಾ||೧||
ಅನುಪಲ್ಲವಿಯಲ್ಲಿನ ವಿಚಾರವನ್ನು ವಿಸ್ತರಿಸುತ್ತಾ ಜೊತೆಗೆ ಗುರುವಿನ ಕಿಂಚಿತ್ ಸುಳಿವನ್ನು ಸಂಗಸಹವಾಸದ ಮಹತ್ವದ ಪಾತ್ರವನ್ನು ಅದರೊಂದಿಗೆ ಅಧ್ಯಯನ ಮಾಡಿ ತಿಳಿಯಬೇಕಾದ ಪುಟ್ಟ ಗ್ರಂಥಾಲಯದಂತೆ ಅವುಗಳ ಪಟ್ಟಿಯನ್ನೇ ಆರು & ಮೂರಾರು ಎಂಬ ಪುಟ್ಟ ಪದಗಳಲ್ಲಿ ಸೆರೆಹಿಡಿದು ಲೋಕಕ್ಕೆ ಗುರುವಿನ ಮಹತ್ತನ್ನು ತಿಳಿಸುತ್ತಿರುವ ದಾಸಾರ್ಯರ ಕೃತಿ ಕೌಶಲವು ಅಮೋಘ ಅದ್ವಿತೀಯವಾದದ್ದು.
ಆರುಶಾಸ್ತ್ರಗಳು: ಅಂದರೆ ಷಡ್ಡರ್ಶನಗಳು, ಸಾಂಖ್ಯ, ಯೋಗ, ವೈಶೇಷಿಕ, ಮೀಮಾಂಸೆ & ವೇದಾಂತ. ಇವುಗಳ ಜೊತೆಗೆ ಮೂರಾರು(೩×೬=೧೮) ಪುರಾಣಗಳು ಬ್ರಾಹ್ಮ, ಪಾದ್ಮ, ವೈಷ್ಣವ, ಶೈವ, ಲಿಂಗ, ಗರುಡ, ನಾರದೀಯ, ಭಾಗವತ, ಆಗ್ನೇಯ, ಸ್ಕಾಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮತ್ಸ್ಯ, ಕೂರ್ಮ, & ಬ್ರಹ್ಮಾಂಡ.
ಇವಿಷ್ಟನ್ನೂ ನಾವು *ಸಾರಿ ಸಜ್ಜನ ಸಂಗ ಮಾಡಿ ಮೂಲಗುರುವನ್ನರಿತೂ… ದಾಸಾನೆನಿಸೋ ಎನ್ನಾ…. ಶ್ರೀನಿವಾಸಾ ಕ್ಷಮಿಸೋ…ಎನ್ನಾ…. ಎಂಬ ದಾಸವಾಣಿಯಂತೇ… ಸಂಗವಾಗಲೀ ಸಾಧು ಸಂಗವಾಗಲೀ ಸಂಗದಿಂದ ಲಿಂಗದೇಹ ಭಂಗವಾಗಲೀ….
ಈಶ-ದಾಸ ಎಂಬ ಸಧ್ಭಾವನೆಯಿಂದ ಭಗವಂತನ ದಾಸನಾದಾಗ ಮಾತ್ರ ಈ ಮೇಲಿನ ಎಲ್ಲಾ ಕಾರ್ಯಗಳಿಗೂ ಭಗವಂತ ಪೂರ್ಣಫಲ ನೀಡುತ್ತಾನೆ. ಗುರುವಾಗಿ ಸದಾ ಅನುಗ್ರಹಿಸುತ್ತಾನೆ ಎಂಬ ಧನಾತ್ಮಕವಾದ ಚಿಂತನೆಯನ್ನು ಮೈಗೂಡಿಕೊಂಡು ಸಾಧನಾಪರರಾಗಲು ಅತೀ ಸೂಕ್ಷ್ಮವಾಗಭಗವಂತನ ರಹಸ್ಯ ಅಮೋಘ ತತ್ವವನ್ನು ಈ ಕೃತಿಯ ಒಳನೋಟದಲ್ಲಿ ಶ್ರೀಪುರಂದರದಾಸಾರ್ಯರು ಹುದುಗಿಸಿಟ್ಟಿದ್ದಾರೆ! ಭಕ್ತಿ ಸೂತ್ರಗಳನ್ನು ಹಾಕಿಕೊಟ್ಟ ನಾರಾದಾಂಶರಲ್ಲವೇ …!? ಅವನ್ನೇ ತಮ್ಮ ಕೃತಿಗಳಲ್ಲಿ ಹಾಸುಹೊಕ್ಕಾಗಿಸಿ… ನಮಗೆಲ್ಲಾ ಭಗವಂತನಲ್ಲಿ ಮಾಡಬೇಕಾದ ಭಕ್ತಿಯ ಪರಿಯನ್ನು ಪರಿಚಯಿಸಿ… ಪ್ರಕ್ರಿಯೆಗೊಳಿಸಲೋಸುಗ ಭುವಿಯಲ್ಲಿ ಅವತರಿಸಿದ ಪೂತಾತ್ಮಗುರುವರ್ಯರು ಶ್ರೀಪುರಂದರದಾಸರು….
ನಾರಿಯ ಭೋಗ ಅಳಿಸಿದರಿಲ್ಲ|
ಶರೀರಕೆ ಸುಖವ ಬಿಡಿಸಿದರಿಲ್ಲ|
ನಾರದ ವರದ ಪುರಂದರವಿಠಲನ ಮರೆಯದೆ ಮನದೊಳು ಬೆರೆಯುವ ತನಕ||೩||
ತಾನಲ್ಲಾ… ತನ್ನದಲ್ಲಾ ಆಸೆ ತರವಲ್ಲಾ.. ಮುಂದೆ ಬಾಹೋದಲ್ಲಾ…..ದಾಸನಾಗೋ ವಿಶೇಷನಾಗೋ…… ಎಂಬ ದಾಸಾರ್ಯರ ಎಚ್ಚರಿಕೆ ಗಂಟೆಗೆ ಕಿಗೊಡಬೇಕೂ.. ಈ ಸಾಧನ ಶರೀರಕೊಟ್ಟ ಭಗವಂತನ ಅಪಾರ ಕಾರುಣ್ಯ ಸ್ಮರಣೆಗೆ ತಂದುಕೊಳ್ಳಬೇಕೂ.. ನಮ್ಮ ಅಸ್ವಾಂತ್ರ್ಯ ಅಸಹಾಯಕತೆ… ಪರಾಧೀನತೆ ಅರಿತೂ ಭಗವಂತನ ಸರ್ವೋತ್ತಮತ್ವ ಕ್ಷಣಕನಂತ ಅಪರಾಧ ಮಾಡುವ ನಮ್ಮಲ್ಲಿ ಭಿನ್ನಹಕೆ ಬಾಯಿಲ್ಲವಯ್ಯಾ… ಅನಂತ ಅಫರಾಧ ಎನ್ನಲ್ಲಿ ಇರಲಾಗಿ…..ಎಂಬ ಮನೋಭಾವ ಹೊಂದಿ.. ಜೀವಿಯ ಜೀವನದ ವಾಸ್ತವತೆಯನ್ನ ಅಲ್ಲಿದೇ ನಮ್ಮನೇ ಇಲ್ಲಿ ಬಂದೆ ಸುಮ್ಮನೆ…ಎಂಬಂತೇ..ಅರಿತೂ ಅರಿಷಡ್ವರ್ಗಗಳ ಧಾಳಿಗೆ ಬಲಿಯಾಗದೇ ಶಾಶ್ವತ ಸುಖ ಮೋಕ್ಷದೆಡೆಗೆ ತನುಮನವನ್ನು ಸಿದ್ಧಗೊಳಿಸಿಕೊಂಡು ಪ್ರಾಣಪತಿ ಹೃದಯಾಬ್ಜ ಮಂಟಪ ಧ್ಯಾನಗೋಚರನಾಗಿ ಕಣ್ಣಿಗೇ ಕಾಣಿಸುವೇ ಶ್ರೀರಂಗವಿಠಲ…ಎಂಬ ಶ್ರಿಪಾದರಾಜರ ವಾಣಿಯಂತೆ …ಹರಿವಾಯುಗುರುಗಳ ಪ್ರೇರಣಾನುಸಾರವಾಗಿ ಸತ್ಪಥದಲ್ಲಿ ಸಾಗಿ…. ದಾಸ ದಾಸರ ದಾಸಾನುದಾಸರಾಗಿ…ಭಗವಂತನೆಂಬ ಮೂಲಗುರುವಿಗೆ ಗುಲಾಮರಾಗುವ ಮೂಲಕ ಆ ಭಗವಂತನ ಪರಂಧಾಮವನ್ನು ಹೊಂದುವ ಸೌಭಾಗ್ಯವನ್ನು ಹೊಂದುವಂತಾಗಲಿ.
ದೇವತಾ ಪುರುಷರು & ನಾರದಾವತಾರಿಗಳಾದ ದಾಸರು ಆಡಿದ ಮಾತೆಲ್ಲವೂ ಮಂತ್ರತುಲ್ಯ! ಕಳೆದ ಕ್ಷಣಗಳೆಲ್ಲವೂ ಪಾವನ! ಜೀವನವನ್ನೆ ಭಗವಂತನ ಸೇವೆ… ತತ್ವಪ್ರಚಾರಕ್ಕಾಗಿ.. ಮುಡುಪಿಟ್ಟ ದಿವ್ಯ ಚೇತನಕ್ಕೆ ಅಸಾಧ್ಯವೆಂಬ ಅನಿಸಿಕೆಯೇ ಕೂಡದು! ಅವರ ಕೃತಿಗಳ ಭಗವತ್ತತ್ವದ ಸತ್ವ, ಸಕಲಾಮಗಳ ಸಾರತ್ವ, ಲೋಕನೀತಿತ್ವ.. ಸಾರಾಸಾರ ವಿಚಾರಧಾರೆಗಳ ವೈಖರಿ ಮಾನ ಜನ್ಮದ ಸಾರ್ಥ್ಯಕ್ಯತೇ.. ಪುರಾಣೋಪನಿಷತ್ಗಳ ಸಾರಸವಿಯನ್ನರಿತ ಶ್ರೀವ್ಯಾಸರಾಜರೇ ಅವರ ಕೃತಿನ್ನು ಮಂತ್ರತುಲ್ಲವೇಂದು ಗೌರವಿಸಿ, ಪುರಂದರೋಪನಿಷತ್ ಎಂದು ಸಾರಿರುವಾಗ ಅವರ ವಾಙ್ಮಯ ವೈಶಿಷ್ಟ್ಯವನ್ನು ಅಲ್ಪರಾದ ಮಂದಮತಿಗಳಾದ ನಾವುಗಳು ಹೇಳುವುದೇನು.?.
ಶ್ರೀಪುರಂದರ ದಾಸರ ಕೃತಿಗಳನ್ನು ಉಪನಿಷತ್ಗೆ ಸರಿಹೋಲುವ ಔಚಿತ್ಯವನ್ನು ಯೋಚಿಸಿದಾಗ ವೇದಗಳು ಕ್ಷೀರದಂತಿದ್ದರೇ. ಅದರಲ್ಲೆ ಇರುವ ಉಪನಿಷತ್ಗಳುಕ್ಷೀರದ ಕೆನೆಯಿದ್ದಂತೆ.. ಎಂಬುದು ಜ್ಞಾನಿಗಳ ಮಾತು.ಶ್ರೀವ್ಯಾಸರಾಜರೇ ದಾಸರ ಕೃತಿಗಳನ್ನು ಸರ್ವಮೂಲಗಳ ಜೊತೆ ಇರಿಸಿದ್ದರೆಂದರೇ ಇದರ ಮಹತ್ವದ ಜೊತೆಗೆ ರಾಜರ ಔದಾರ್ಯವೂ ಕಂಡುಬರುವುದನ್ನು ಗಮನಿಸಬಹುದು. ಇದರ ಇನ್ನೊಂದು ವೈಶಿಷ್ಟ್ಯವನ್ನು ತಿಳಿಸುವುದಾದರೇ.
ಇನ್ನು ಉಪನಿಷತ್ತಿನ ಗುಣವೆಂದರೇ. ವೇದರಾಶಿಯಲ್ಲಿ ಬರುವ ಗಹನವಾದ ಪ್ರಮೇಯಗಳನ್ನು, ವಿಷಯಗಳನ್ನು ಸರಳವಾಗಿ ನಿರೂಪಿಸುವುದು. ಹೆಚ್ಚಾಗಿ ಪದ್ಯರೂಪದಲ್ಲಿ ಮತ್ತು ಸುಲಭದಿ ತಿಳಿಯುವಂತೆ ರಚಿತಗೊಂಡಿವೆ. ಇದೇ ಜಾಡಲ್ಲಿ ರಚಿತವಾದವುಗಳು ಪುರಂದರದಾಸರ ಪದ-ಪದ್ಯಗಳು! ಉಪನಿಷತ್ಗಳು ಶ್ರೇಷ್ಠ ಹಾಗೂ ತತ್ವಚಿಂತನೆಗೆ ಉಪಯುಕ್ತವಾದಂತೇ ದಾಸರ ಕೀರ್ತನೆಗಳು ಎಲ್ಲರೂ ಎಲ್ಲಾ ವರ್ಗದವರೂ ಪಠಿಸಬಹುದಾದ ಅಧ್ಭುತವಾದ ತತ್ವರಾಶಿಗಳೇ ಆಗಿದ್ದೂ ಸರ್ವರ ಜನ್ಮೋದ್ಯಾರದ ಗುರುಪದೇಶಾನ್ವಿತವಾದ ಮಂತ್ರತುಲ್ಯಗಳಾಗಿವೆ.
ದಾಸರ ಸಾಹಿತ್ಯ ವಾಙ್ಮಯದ ಆಳ & ವಿಸ್ತಾರವನ್ನು ಗಮನಿಸಿದರೇ. ಎಂಥವರಿಗೂ ಆಶ್ಚರ್ಯವುಂಟಾಗದೇ ಇರಲಾರದು. ಇವರ ಸಾಹಿತ್ಯ ಭಂಡಾರವನ್ನು ಶ್ರೀವಿಜಯದಾಸರೂ ತಮ್ಮ ಕೃತಿಗಳಲ್ಲಿ ತಿಳಿಸಿದ್ದಾರೆ. ಅಲ್ಲದೇ ಸ್ವತಃ ಶ್ರೀಪುರಂದರದಾಸರೇ ತಮ್ಮ ಒಂದು ಕೃತಿಯಾದ ವಾಸುದೇವನ ನಾಮಾವಳಿಯ ಕ್ಲಿಪ್ತಿಯನು ವ್ಯಾಸರಾಯರ ದಯದಿಂದ ಬಣ್ಣಿಪೆನು ಎಂಬ ೭ ನುಡಿಯ ಅಧ್ಭುತವಾದ ಒಂದು ಕೃತಿಯಲ್ಲಿ ಹೇಳಿದ್ದಾರೆ. ಅದರ ಪ್ರಕಾರ ನಾವು ನೋಡುವುದಾದರೇ…
೧. ಕೇದಾರದಿಂದ ರಾಮೇಶ್ವರ ಪರಿಯಂತರ ಎಲ್ಲಾ ತೀರ್ಥಕ್ಷೇತ್ರಗಳ ಮಹಿಮೆಗಳ ಸ್ಥಳ ಪುರಾಣ ಸಹಿತ ……..೧,೨೫,೦೦೦
೨. ಮಧ್ವಾಚಾರ್ಯರ ಮಹಿಮೆ, ಗುರುಪರಂಪರೆಯಲ್ಲಿ ವ್ಯಾಸರಾಯರವರೆಗೆ ಎಲ್ಲರ ಮಹಿಮೆ, ತಂತ್ರಸಾರ ದೇವತಾ ತಾರತಮ್ಯ——-೫,೦೦೦
೩. ಬ್ರಹ್ಮಲೋಕ, ಕೈಲಾಸ ಲೋಕ, ದಿಕ್ಪಾಲಕರ ಲೋಕವರ್ಣನೆಗಳು——-೯೦,೦೦೦
೪. ಪುರಾಣಕಥೆಗಳ ಸಾರ—— ೯೦,೦೦೦
೫. ದೇವತೆಗಳ ಮೂರ್ತಿಧ್ಯಾನ ಅವರವರ ಕೀರ್ತಿಮಾನ, ಗಂಡಕೀ ಮಹಾತ್ಮೆ, ಕಲ್ಯಾಣಚರಿತ್ರೆಗಳು——–೬೦,೦೦೦
೬. ಅಹ್ನೀಕಪದ್ದತಿ, ಏಕಾದಶಿ ನಿರ್ಣಯ, ಜಯಂತಿ ನಿರ್ಣಯ, ಶ್ರುತಿಸ್ಮೃತಿಗಳ ಸಹಿತವಾಗಿ——-೧೬,೦೦೦
೭. ಸುಳಾದಿಗಳು——೬೪,೦೦೦
೮. ದೇವರನಾಮಗಳು—-೨೫,೦೦೦
ಒಟ್ಟು ಮೊತ್ತ= ೪, ೭೫,೦೦೦
ಮಾನವ ಪ್ರಪಂಚದ ಇತಿಹಾಸದಲ್ಲಿ ಬಹುಲಕ್ಷಗ್ರಂಥಗಳನ್ನು ಬರೆದರೆಂಬ ಕೀರ್ತಿ ವೇದವ್ಯಾಸರಿಗೊಬ್ಬರಿಗಿದೆ. ಪುರಂದರದಾಸರ ಈ ಗ್ರಂಥರಚನೆಯ ಸಂಖ್ಯೆಯನ್ನು ನೋಡಿದರೆವ್ಯಾಸರ ನಂತರ ದಾಸರೇ. ಎಂಬ ನಾಣ್ನುಡಿಯನ್ನು ಜ್ಞಾಪಿಸಿಕೊಳ್ಳಬೇಕಾಗುತ್ತದೆ. ದಾಸರ ಕೃತಿಗಳಲ್ಲಿ ಏನಿದೇ..? ಎಂದು ಕೇಳುವ ಬದಲೂ.. ಏನಿಲ್ಲಾ? ಎಂದು ಕೇಳವುದೂ ಸೂಕ್ತವೆನಿಸುತ್ತದೇ. ದಾಸರು ತಿಳಿಸದ ವಿಚಾರಗಳೇ ಇಲ್ಲಾ. ಎಲ್ಲಾವೂ ಎಲ್ಲಾ ಕಾಲಕ್ಕೂ ಅನ್ವಯ ವಾಗುವಂತ ಮಹತ್ವದ ಸರಳ, ಗೂಢ, ರಹಸ್ಯ ತತ್ವಗಳೂ ಇವರ ಕೃತಿಗಳಲ್ಲಿ ಅಡಗಿವೆ. ಆದರೇ ಅವುಗಳನ್ನು ಉಳಿಸಿ, ಬೆಳೆಸಿಕೊಂಡೂ ಹೋಗುವ ಸೌಭಾಗ್ಯ ನಮ್ಮದಾಗಬೇಕಿದೆ ಅಷ್ಟೆ.
ಕೀರ್ತನ ಗಾಯನ ನರ್ತನಗಳ ಪಾರಂಗತರಾದ ಸಾಕ್ಷಾತ್ ನಾರಾವತಾರಿಗಳೇ ಆದ ಶ್ರೀಪುರಂದರದಾಸರೂ. ಕಲಿಯುಗದಲ್ಲಿಯೂ.. ಕರ್ನಾಟಕದ ಸಂಗೀತ ಪಿತಾಮಹ ರೆನಿಸಿದರೂ. ಪುರಂದರರ ದಾಸಸಾಹಿತ್ಯದುದ್ದಕ್ಕೂ ಎದ್ದು ಕಾಣುವ ಸರಳ ಭಾಷೆ, ಸರಳ ಶೈಲಿ, ನಿರೂಪಣೆ, ಅವರ ಸರಳ ಜೀವನದಂತಿದೆ. ದಾಸರು ಹೇಳದ ಮಾತಿಲ್ಲ! ತಿಳಿಸದ ವಿಚಾರವಿಲ್ಲ! ರಚಿಸದ ಕೃತಿಯಿಲ್ಲ! ಭಕ್ತಿಪ್ರಧಾನವಾಗಿ ಜೊತೆಜೊತೆಗೆ ಸಿದ್ಧಾಂತ, ಧರ್ಮ, ನೀತಿ, ವೃತ್ತಿ, ಪ್ರವೃತ್ತಿ ಸಾಮಾಜಿಕ ಜೀವನದ ಬಾಳುವೆಯ ರೀತಿ, ತಿಳಿಸುವುದರೊಂದಿಗೆ ಸಮಸ್ತರ ಜೀವನಕ್ಕೆ ಹತ್ತಿರವಾದ ತಮ್ಮ ಕೃತಿಗಳ ಮೂಲಕ ಇಹ-ಪರ ಸಾಧನೆಗೆ ಸೋಪಾನವಾಯಿತು. ಇವರು ಕಟ್ಟಿದ ದಾಸಕೂಟ ಮುಂದಿನ ಪರಂಪರೆಗೆ ನಾಂದಿಯಾಯಿತು.
ಮಧುಕರ ವೃತ್ತಿ ಎನ್ನದೂ..ಇದು ಬಲು ಚೆನ್ನದು… ಎನ್ನುತ್ತಾ…ತಂಬೂರಿ ಮೀಟಿದವ ಭವಾಭ್ಧಿ ದಾಟಿದವ……ಎಂಬ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು ಸಿದ್ಧಾಂತದ ಪ್ರಚಾರದ ಜೊತೆಗೆ.. ಸಮಾಜದ ಅಂಕು -ಡೊಂಕುಗಳನ್ನು ತಿದ್ದಿ. ಸಂಸಾರವೆಂಬಂಥ ಸೌಭಾಗ್ಯವಿರಲೀ…,, ಹಾಗೂ ಇರಬೇಕೂ ಇರದಿರಬೇಕು.
ಸ್ನಾನವ ಮಾಡಿರೋ ಜ್ಞಾನತಿರ್ಥದಲ್ಲಿ ನಾನು ನೀನು ಎಂಬ ಅಹಂಕಾರ ಬಿಟ್ಟು….ಎಂಬದನ್ನು ಸಾರುತ್ತಾ…ತತ್ವಪ್ರಸಾರ, ಕಾವ್ಯಗಾಂಭೀರ್ಯ, ವಸ್ತುನಿಷ್ಟವಾದ ಪ್ರತಿಪಾದನೆ, ದಿನನಿತ್ಯದ ಘಟನೆ, ಬಳಕೆಯ ವಸ್ತುಗಳ ಮುಖಾಂತರ ಮಾನವರ ಮನ ಮುಟ್ಟುವಂತೆ ತಿಳಿಯ ಹೇಳಿ.. ತಮ್ಮ ಅಪಾರ ದಾಸದೀಕ್ಷೆಯ ವೈಖರಿಯಿಂದ ಹರಿಸರ್ವೋತ್ತಮತ್ವವನ್ನು ಸತ್ಯ ಜಗತಿದು ಪಂಚಭೇಧವು ನಿತ್ಯ ಶ್ರೀ ಗೋವಿಂದನಾ…. ಎಂಬುದಾಗಿ ತಾರತಮ್ಯ ಜ್ಞಾನ ಭಕ್ತಿ ವೈರಾಗ್ಯಾದಿಗಳನ್ನು ಅನೇಕ ಪ್ರಮೇಯಗಳಲ್ಲಿ ಸಂಗ್ರಹಿಸಿಕೊಟ್ಟವರು ಶ್ರೀಪುರಂದರದಾಸರು!.
“ದುರ್ಲಭಂ ಮಾನುಷಂ ಜನ್ಮತದಪ್ಯಧ್ರುವಮರ್ಥದಮ್”…. ಎಂಬ ಪ್ರಹ್ಲಾದರಾಜರ ಮಾತನ್ನೇ ಪುರಂದರದಾಸರು “ಮಾನವಜನ್ಮ ದೊಡ್ಡದು-ಹಾನಿಮಾಡಾಕೊಳ್ಳಬೇಡಿ….ಎಂದಿದ್ದಾರೆ. ಇಲ್ಲಿ ಹಾನಿ ಎಂದರೆ ಯಾವುದು..? ಆಚಾರ್ಯರು ಶ್ರೀಕೃಷ್ಣಾಮೃತ ಮಹಾರ್ಣವದಲ್ಲಿ ಹೀಗೆ ಅಪ್ಪಣೆ ಕೊಡಿಸಿದ್ದಾರೆ. *ಸಾ ಹಾನಿಃ ತನ್ಮಹಚ್ಛಿದ್ರಂ ಸಾಚಾಂಧ ಜಡಮೂಕತಾ…..(೪೭ನೇ ಶ್ಲೋಕ)…
ಭಗವಂತನ ಚಿಂತನೆ ಇಲ್ಲದೇ ಕಳೆದ ಒಂದೊಂದು ಕ್ಷಣವೂ, ಮುಹೂರ್ತವೂ ದೊಡ್ಡ ಹಾನಿಯೇ ಸರಿ. ದೊಡ್ಡ ಪಾಪವೂ ಕೂಡ. ಅದೇ ಜೀವನದ ಕುರುಡು, ಜಾಡ್ಯ, ಹಾಗೂ ಮೂಕತೆಯು.. ಹೀಗೆ ಮಾನವ ಜನ್ಮ ಸಾರ್ಥಕವಾಗಬೇಕಾದರೆ ಪರಮಾತ್ಮನ ಸ್ಮರಣೆ ಅತೀ ಅವಶ್ಯ..ಇದನ್ನೆ ದಾಸರು. ಹರಿಸ್ಮರಣೆ ಮಾಡೋ ನಿರಂತರ…. ಎಂದಿದ್ದಾರೆ.
ಒಂದೇ ನಾಮವು ಸಾಲದೇ ಶ್ರೀಹರಿಯೆಂಬೋ ಒಂದೇ ನಾಮವು ಭವಬಂಧನ ಬಿಡಿಸುವುದೆಂದು ವೇದಂಗಳಾನಂದದಿ ಸ್ತುತಿಸುವ……. ಎಂದು ಭೋಧಿಸಿದ್ದಾರೆ. ಕಲಿಕಲ್ಮಷ ಮತ್ಯುಗ್ರಂ ನರಕಾರ್ತಿಪ್ರದಂ ನೃಣಾ!.…. (ಕೃ.ಮ.೫೮). ಎಂಬ ಆಚಾರ್ಯರ ಮಾತಿನಂತೆ, ಈ ಕಲಿಕಾಲದಲ್ಲಿ ಕಲಿಕಲ್ಮಷವು ಅತ್ಯುಗ್ರವಾದುದು.ಅದು ನರಕಾದಿ ಅನರ್ಥಗಳನ್ನು ಕೊಡಬಲ್ಲದು. “ಪುರಪಿ ಜನನಂ ಪುನರಪಿ ಮರಣಂ”.. ಈ ಚಕ್ರದಲ್ಲಿ ಸಿಲುಕಿಸುತ್ತಿರುತ್ತದೆ. ಹಾಗಾಗಿ ನಾವು ಮಾಡಬೇಕಾದ್ದೇನು..?
ಯಾರೂ ಸಂಗಡ ಬಾಹೋರಿಲ್ಲಾ… ನಾರಾಯಣ ನಾಮ ನೆರೆ ಬಾಹೋದಲ್ಲದೇ… ಎಂಬ.. ಈ ಸಂಸಾರದ ಅಸಾರತ್ವವನ್ನು ಹಾಗೂ ದಿನ ವ್ಯರ್ಥವಾಗದೇ ನೆನೆಯಿರೋ…ಮಾಧವನನ್ನು ಸ್ಮರಿಸಿರೋ…..ಎಂಬ ದಾಸರ ಎಚ್ಚರದ ಗಂಟೆಗೆ ಓಗೊಡಬೇಕು.
ಭಗವಂತನ ನಾಮಸ್ಮರಣೆ ಮಾತ್ರ. ನಮ್ಮ ದೋಷಾದಿಗಳನ್ನು ನಾಶಮಾಡಲು ಸಮರ್ಥವಾಗಿದೆ.ಕಾರಣ ಭಗವಂತನ ಸ್ಮರಣೆ ಮಾಡಿ ಈ ಸಂಸಾರ ಸಾಗರದಿಂದ ಮಾನವರು ಪಾರಾಗಬೇಕೂ. Man is an architect of his own life…. ಎಂಬ ಇಂಗ್ಲೀಷ್ ಗಾದೆಯು ಮಾನವನು ತನ್ನ ಜೀವನದ ಶಿಲ್ಪಿಯಾಗಿದ್ದಾನೆ. ಹೀಗಿರುವಾಗ.. ಭಗವಂತನ ಅಪಾರ ಕಾರುಣ್ಯದಿಂದ ಬಂದ ಈ ಸಾಧನ ಶರೀರದ ಸಾರ್ಥಕ್ಯವನ್ನು ಹೊಂದಲು ಮಾನವರು ತಮ್ಮ ಪ್ರತಿಯೊಂದು ಕಾರ್ಯದಲ್ಲಿ, ವೃತ್ತಿ ಪ್ರವೃತ್ತಿಗಳಲ್ಲಿಯೂ. ಭಗವಂತನ ಕತೃತ್ವವನ್ನು ಅನುಸಂಧಾನ ಚಿಂತನೆ, ಸ್ಮರಣೆಗಳನ್ನು ಮಾಡಿ ಭಗವದರ್ಪಣ ಬುದ್ಧಿಯಿಂದ ಸಂಸಾರವನ್ನು ಅರ್ಥಾತ್ ಜೀವನವನ್ನು ಸಾರಭೂತವಾಗಿ… ಭಗವಂತನ ಉಪಾಸನಾರೂಪವಾಗಿ ಅರ್ಪಿಸಬೇಕು.ಇದನ್ನೆ ದಾಸರು.. ಕಣ್ಣು ಕೈಕಾಲ್ ಇರಲಿಕ್ಕೆ ಮಣ್ಣು ಮುಕ್ಕಿ ಮರುಳಾಗುವರೇ..? ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತವನ್ನು ಉಣ್ಣದೇ ಉಪವಾಸವಿರುವರೇ ಖೋಡಿ…. ಎಂದಿದ್ದಾರೆ.
ನಮ್ಮ ವಾಣಿಯು.. ಭಗವಂತನ ಗುಣಸ್ತುತಿಯಲ್ಲಿ, ಕಿವಿಗಳು ಭಗವತ್ ಚರಿತ್ರೆ ಕೇಳುವಲ್ಲಿ, ಕೈಗಳು ಭಗವತ್ ಸೇವೆಯಲ್ಲಿ, ಮನಸ್ಸು ಪಾದಸ್ಮರಣೆಯಲ್ಲಿ, ಶಿರವು ನಮಸ್ಕಾರದಲ್ಲಿ, ದೃಷ್ಠಿಯು ಭಗವಂತನ ಪ್ರತಿಮಾ ದರ್ಶನದಲ್ಲಿ, ಒಟ್ಟಿನಲ್ಲಿ ಪ್ರತಿಯೊಂದು ಅವಯವು ಭಗವಂತನ ಸೇವೆಗೆ ಮೀಸಲಾಗಿರಬೇಕು. ವಾಣೀಗುಣಾನು ಕಥನೇ ಶ್ರವಣೌ ಕಥಾಯಾಂ….(ಭಾಗವತ ೧೦-೧೦-೩೮)
ಹೀಗೆ ಲೌಕಿಕ ಇಹದ ಕ್ಷಣಿಕ ಅಶಾಶ್ವತ ಸುಖದ ಮೋಹದ ಬಲೆಗೆ ಒಳಗಾಗದೇ. ಜೀವನ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟಕ್ಕೆ ಸೀಮಿತಗೊಂದು… “ಕೆಸರಿನಲ್ಲಿರುವ ಕಮಲದಂತೆ”. Tuch me not ಎಂಬಂತೆ.. ಸಂಸಾರದಲ್ಲಿದ್ದೂ… ಅತೀ ವ್ಯಾಮೋಹಕ್ಕೊಳಗಾಗದೇ *ಕಾಲನ ದೂತರು ಕಾಲ್ಪಿಡಿದೆಳೆವಾಗ.. ತಾಳು ತಾಳೆಂದರೆ ತಾಳುವರೇ…. ಖಂಡಿತಾ ಇಲ್ಲಾ…! ಅದಕಾಗಿ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಪುರಂದರವಿಠಲರಾಯನ….. ಎಂದಿದ್ದಾರೆ ದಾಸರು.
ಯದುಪತಿಯ ಒಲುಮೆಯನ್ನು ಪಡೆಯುವ ಉದ್ದೇಶ ಹೊಂದಿ ಅನನ್ಯಭಾವದಿಂದ, ಏಕೋಭಾವದಿಂದ ಭಗವಂತನನ್ನು ಸರ್ವೋತ್ತಮತ್ವೇನ ಭಜಿಸಿದಲ್ಲಿ.. ಅನನ್ಯಾಶ್ಚಿಂತೋ ಮಾಂ ಯೇ ಜನಾಃ ಪರ್ಯುಪಾಸತೇ..|
(ಭಗವದ್ಗೀತೆ..೯-೨೨).ಪ್ರಾಕಾರ ಭಗವಂತನು ಈ ಸಂಸಾರದ ಪುನರಾವೃತ್ತಿ ರಹಿತವಾದ ಮೋಕ್ಷವನ್ನು ಕೊಟ್ಟು ರಕ್ಷಿಸುತ್ತಾನೆ… ಎಂಬ ತತ್ವವನ್ನು ಪುರಂದರದಾಸರು ತಮ್ಮ ಸಾವಿರಾರು ಕೀರ್ತನೆಗಳಲ್ಲಿ ಸಾರಿ ಸಾರಿ ಹೇಳುತ್ತಾ…. ಸಂಸಾರದ ಸಾರಾಸಾರವನ್ನು ಲೋಕಕ್ಕೆಸ್ಪಷ್ಠವಾಗಿ ತಿಳಿಹೇಳಿದ್ದಾರೆ.
(ವಿವಿಧ ಮೂಲಗಳಿಂದ )
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post