ಕಲ್ಪ ಮೀಡಿಯಾ ಹೌಸ್
ಕು೦ದಾಪುರ ಸಮೀಪದ ಹೂವಿನಕೆರೆಯಲ್ಲಿದ್ದ ಶ್ರೀರಾಮಾಚಾರ್ಯ ಮತ್ತು ಶ್ರೀಮತಿ ಸರಸ್ವತಿ ದೇವಿ ದಂಪತಿಗೆ ಅನೇಕ ಕಾಲ ಮಕ್ಕಳಿರಲಿಲ್ಲ. ಇದೇ ವೇಳೆ ಕುಂಬಾಸಿ (ಆನೆಗುಡ್ಡೆ)ಯಲ್ಲಿ ಚಾತುರ್ಮಾಸ ವ್ರತದಲ್ಲಿದ್ದ ಉಡುಪಿಯ ಈಗಿನ ಸೋಂದೆ(ಸ್ವಾದಿ) ಮಠದ ಯತಿ ಶ್ರೀವಾಗೀಶತೀರ್ಥರ ಬಳಿ ತೆರಳಿ ಮನದ ನೋವನ್ನು ನಿವೇದಿಸಿಕೊಂಡರು. ಶ್ರೀಹರಿಯನ್ನು ಪ್ರಾರ್ಥಿಸಿದ ಯತಿಗಳು ನಿಮಗೆ ಸುಪುತ್ರ ಜನಿಸಲಿದ್ದಾನೆ, ಆದರೆ ನೀವು ಆ ಮಗುವನ್ನು ಮಠಕ್ಕೆ ನೀಡುಬೇಕೆಂದು ಸೂಚಿಸಿ ದಂಪತಿಗೆ ಫಲ ಮಂತ್ರಾಕ್ಷತೆ ಅನುಗ್ರಹಿಸಿದರು. ಸಂತಾನವಾಗುವುದೆಂಬ ಸಂತೋಷ ಒಂದೆಡೆಯಾದರೆ, ಮಗುವನ್ನು ಮಠಕ್ಕೆ ನೀಡಬೇಕಲ್ಲಾ ಎಂಬ ದುಗುಡ ಮತ್ತೊಂದೆಡೆ. ಈ ತುಮುಲವನ್ನು ಗಮನಿಸಿದ ಶ್ರೀಗಳು ಮನೆಯೊಳಗೆ ಮಗು ಜನಿಸಿದರೆ ನಿಮಗೆ, ಹೊರಗೆ ಜನಿಸಿದರೆ ಮಠಕ್ಕೆ ಕೊಡಿ ಎಂದು ಸಮಾಧಾನ ಮಾಡಿ ಕಳುಹಿಸಿದರು.
ಶ್ರೀಹರಿಯ ಕರುಣೆಯಿಂದ ಸರಸ್ವತಿದೇವಿ ಗರ್ಭಿಣಿಯಾದಳು. ಮೊದಲೇ ಸಂಧಿಗ್ದ ಪರಿಸ್ಥಿತಿಯಲ್ಲಿದ್ದ ರಾಮಾಚಾರ್ಯರು ಹೆರಿಗೆ ದಿನ ಹತ್ತಿರ ಬರುತ್ತಿದ್ದಂತೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಹೋಗದಂತೆ ಬಹು ಎಚ್ಚರಿಕೆಯಿಂದ ಪತ್ನಿಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ವಿಧಿ ನಿರ್ಣಯವೇ ಅಂತಿಮವಲ್ಲವೇ. ಶಾರ್ವರಿನಾಮ ಸಂವತ್ಸರ ಶುದ್ಧ ದ್ವಾದಶಿಯಂದು (ಕ್ರಿ. ಶ. 1480) ಆಚಾರ್ಯರು ದ್ವಾದಶಿ ಪಾರಣೆಯಲ್ಲಿದ್ದರು. ತುಂಬು ಗರ್ಭಿಣಿ ಸರಸ್ವತಿ ದೇವಿ ಊಟಕ್ಕೆ ಬಡಿಸುತ್ತಿದ್ದರು. ಆ ಸಮಯದಲ್ಲೇ ಮನೆ ಮುಂದಿನ ಗದ್ದೆಯಲ್ಲಿ ದನವೊಂದು ಬೆಳೆದ ಫಸಲನ್ನು ತಿನ್ನುತ್ತಿತ್ತು. ಅದನ್ನು ಓಡಿಸಲೆಂದು ಸರಸ್ವತಿ ದೇವಿ ಗದ್ದೆಗೆ ಇಳಿಯುತ್ತಿದ್ದಂತೆ, ದನವೇನೋ ಓಡಿ ಹೋಯಿತು. ಆದರೆ ಸರಸ್ವತಿ ದೇವಿಗೆ ಕೂಡಲೇ ಹೊಟ್ಟೆ ನೋವು ಕಾಣಿಸಿಕೊಂಡು, ಕ್ಷಣಾರ್ಧದಲ್ಲೇ ಅಲ್ಲಿಯೇ ಹೆರಿಗೆಯಾಯಿತು. ಮಗುವನ್ನು ಮನೆಗೆ ತಂದು ಆರೈಕೆ ಮಾಡಿ, ಮಠಕ್ಕೆ ಕೊಡಬೇಕಲ್ಲವೇ ಎಂಬ ಆತಂಕದಿಂದಲೇ ಜನಿಸಿದ ಸುಪುತ್ರನಿಗೆ ಸೊಂದೆ ಮಠದ ಪಟ್ಟದ ದೇವರಾದ “ಶ್ರೀಭೂವರಾಹ ಸ್ವಾಮಿ”ಯ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿದರು.
ಬಾಲಕನಾಗಿರುವಾಗಲೇ ವಿಶೇಷ ಪ್ರತಿಭೆ ಹೊಂದಿದ್ದ “ಭೂವರಾಹ” ತನ್ನ ಸಹಪಾಠಿಗಳು ಅಚ್ಚರಿ ಪಡುವಂತೆ ವಿದ್ಯೆ ಗಳಿಸಿದ. ರಾಮಾಚಾರ್ಯ ದಂಪತಿಗೆ ಸಂತಾನವಾದ ಸುದ್ದಿ ತಿಳಿದ ಯತಿಗಳು ಖುಷಿಪಟ್ಟರು. ಸುಂದರ ಚಂದಿರನಂತೆ ಬೆಳೆಯುತ್ತಿದ್ದ ಸುಸಂಸ್ಕೃತ ವಟುವನ್ನು ಮಠಕ್ಕೆ ದಾನ ಪಡೆದ ಶ್ರೀವಾಗೀಶ ತೀರ್ಥರು, 8 ನೇ ವಯಸ್ಸಿಗೆ ಮಗುವಿಗೆ ತುರ್ಯಾಶ್ರಮ(ಸನ್ಯಾಸ) ದೀಕ್ಷೆ ನೀಡಿ ದ್ವೈತ ಸಿದ್ಧಾಂತವನ್ನು ಉಪದೇಶಿಸಿ “ಶ್ರೀವಾದಿರಾಜ ತೀರ್ಥ” ಎಂಬ ಅಭಿದಾನ ನೀಡಿ ಹರಸಿದರು. ಶ್ರೀವಾದಿರಾಜರು ಉಡುಪಿಯ ಶ್ರೀ ಮಠದ 20 ನೇ ಯತಿಗಳಾದರು.
ಇವರಲ್ಲಿದ್ದ ಭಕ್ತಿಗೆ ಮೆಚ್ಚಿ ಒಂದು ದಿನ ಬೆಳಗಿನ ಜಾವದಲ್ಲಿ ಶ್ರೀಹಯವದನ ದೇವರು ಕನಸಿನಲ್ಲಿ ದರ್ಶನವಿತ್ತು ಅನುಗ್ರಹಿಸಿದರು. ಪುಳಕಿತರಾಗಿ ಶ್ರೀಹಯವದನನನ್ನು ಸ್ತೋತ್ರ ಮಾಡಿ, ಅಂದಿನಿಂದ ಶ್ರೀ ಹಯವದನನ ಅ೦ಕಿತದಲ್ಲಿ ಕೃತಿಗಳನ್ನು ರಚಿಸಿದರು. ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿ ಕನ್ನಡದಲ್ಲಿ ಸರಳವಾಗಿ ತಿಳಿಸುವ ಯತ್ನ ಮಾಡಿದರು. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇವರ ತರ್ಕಬದ್ಧವಾದ ವಾಗ್ವೈಖರಿಯನ್ನು ಮೆಚ್ಚಿ ವಿಜಯನಗರ ಸಾಮ್ರಾಜ್ಯದರಸ ಶ್ರೀಕೃಷ್ಣದೇವರಾಯ “ಪ್ರಸಂಗಾಭರಣ ತೀರ್ಥ” ಎಂಬ ಬಿರುದು ನೀಡಿ ಗೌರವಿಸಿದ್ದ.
ಉಡುಪಿಯಲ್ಲಿ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ್ದ ಅಷ್ಟಮಠಗಳ ಯತಿಗಳಿಂದ ಶ್ರೀಕೃಷ್ಣನನ್ನು ಪೂಜಿಸುವ ಪರ್ಯಾಯ ಎರಡು ತಿಂಗಳಿಗೊಮ್ಮೆ ನಡೆಯುತ್ತಿತ್ತು. ಮಠಗಳ ದುಃಸ್ಥಿತಿಯನ್ನು ಕಂಡ ಶ್ರೀವಾದಿರಾಜರು ಪರ್ಯಾಯದ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸಿದರು. ಶ್ರೀಕೃಷ್ಣ ಕನಕದಾಸರಿಗೆ ಒಲಿದು ದರ್ಶನವಿತ್ತ ಗೋಡೆಯ ಬಿರುಕನ್ನೇ ‘ಕನಕನ ಕಿಂಡಿ’ ಎಂದು ಕರೆದರಲ್ಲದೇ, ಮೊದಲು ಈ ಕಿಂಡಿಯ ಮೂಲಕವೇ ದೇವರ ‘ಧೂಳಿ ದರ್ಶನ’ ಮಾಡಿ ನಂತರ ಒಳಗಡೆ ತೆರಳಿ ಶ್ರೀಕೃಷ್ಣನನ್ನು ನೊಡಬೇಕು ಎಂಬ ನಿಯಮ ಜಾರಿಗೆ ತಂದ ಮಹಾನುಭಾವರು.
ಶ್ರೀವಾದಿರಾಜರ ಪರ್ಯಾಯ ಕಾಲದಲ್ಲಿ ಭಕ್ತ ಶ್ರೇಷ್ಠರಾದ ಶ್ರೀಕನಕದಾಸರು ಉಡುಪಿಗೆ ದಯ ಮಾಡಿಸಿದ್ದರು. ಶ್ರೀವ್ಯಾಸತೀರ್ಥ (ರಾಯ)ರೊಡನೆ ಕನಕದಾಸರನ್ನು ನೋಡಿದ್ದ ಶ್ರೀವಾದಿರಾಜರು ದಾಸರನ್ನು ಪ್ರೀತಿಯಿಂದ ಸ್ವಾಗತಿಸಿ, ಅವರಿಗೆ ಶ್ರೀ ಕೃಷ್ಣ ಮಠದ ಪಕ್ಕದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಕನಕದಾಸರು ಕೃಷ್ಣ ದೇವರ ಅಂತರಂಗ ಭಕ್ತರೆಂದು ಅರಿತು, ಸದಾ ಅವರಿಗೆ ಶ್ರೀಕೃಷ್ಣನ ದರ್ಶನವಾಗಲೆಂದು ಗೋಡೆಯಲ್ಲಿ ಕಿಟಕಿ ಮಾಡಿಸಿದ್ದರು.
ಶ್ರೀಕನಕದಾಸರು ಭಕ್ತಿಯಿಂದ ಕರಟ(ಮದ್ರಾಸು ತೆಂಗಿನ ಚಿಪ್ಪು)ದಲ್ಲಿ ತುಂಬಿದ ಗಂಜಿಯನ್ನು ಶ್ರೀಕೃಷ್ಣ ದೇವರಿಗೆ ಮಾನಸ ಪೂಜೆಯ ಮೂಲಕ ಸಮರ್ಪಣೆ ಮಾಡುತ್ತಿದ್ದರು. ಭಗವಂತನಲ್ಲಿ ಸಂತರಿಗೆ ಇದ್ದ ಭಕ್ತಿಯ ನೆನಪಿಗಾಗಿ ಕೃಷ್ಣನಿಗೆ ನಿತ್ಯವೂ ಗಂಜಿ ನೈವೇದ್ಯ ಮಾಡುವ ಕ್ರಮವನ್ನು ಜಾರಿಗೆ ತಂದಿದ್ದರು. ಇಂದಿಗೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೇವರಿಗೆ ಗಂಜಿ ನೈವೇದ್ಯ ಮಾಡಲಾಗುತ್ತದೆ.
ನಿತ್ಯ ದೇವರ ಪೂಜೆಯಲ್ಲಿ ವೇದಮಂತ್ರಗಳ ಜತೆ, ಕನ್ನಡದ ಹಾಡುಗಳನ್ನು ಹಾಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಶ್ರೀಕೃಷ್ಣನ ಮುಂದೆ ದಾಸರ ಕೃತಿಗಳನ್ನು ಸ್ವತಃ ತಾವೇ ಹಾಡುತ್ತಾ ದೇವರ ನಿರ್ಮಾಲ್ಯದ ತಟ್ಟೆಯನ್ನು ತಲೆಯ ಮೇಲಿಟ್ಟುಕೊಂಡು ಕುಣಿಯುತ್ತಿದ್ದರು. ಇಂದಿಗೂ ಘಟ್ಟ(ಕರಾವಳಿ)ದ ಕೆಳಗಿನ ಮಠಗಳಲ್ಲಿ ಏಕಾದಶಿಯಂದು ದೇವರ ನಿರ್ಮಾಲ್ಯದ ತಟ್ಟೆಯನ್ನು ತಲೆಯ ಮೇಲಿಟ್ಟುಕೊಂಡು ‘ಢಂಗೂರವಾ ಸಾರಿ ಹರಿಯ” ಎಂಬ ಕೃತಿಯನ್ನು ಹಾಡುತ್ತಾ ಹೆಜ್ಜೆ ಹಾಕಿ ಶ್ರೀಹರಿಯನ್ನು ಸ್ತುತಿಸುವುದನ್ನು ಇಂದಿಗೂ ಕಾಣಬಹುದು. ಉಡುಪಿ ಪೇಜಾವರ ಮಠದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ 89 ನೇ ವಯಸ್ಸಿನಲ್ಲೂ ಅನಾರೋಗ್ಯದ ಮಧ್ಯೆಯೂ ಈ ಪರಿಪಾಟವನ್ನು ನಡೆಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದು.
ಭರತಖಂಡವನ್ನು ನಾಲ್ಕು ಬಾರಿ ಸಂಚಾರ ಮಾಡಿ ತೀರ್ಥ ಕ್ಷೇತ್ರಗಳ ಮಹಿಮೆ ಕುರಿತು “ತೀರ್ಥ ಪ್ರಬಂಧ” ರಚಿಸಿದರು. “ರುಕ್ಮಿಣೀಶ ವಿಜಯ”, “ಲಕ್ಷಾಲಂಕಾರ”( ವಾದಿರಾಜರು ಪ್ರಯಾಗದಲ್ಲಿ ಬ್ರಹ್ಮದೇವರ ಸಂಧ್ಯಾಮಂಟಪದಲ್ಲಿ ಧ್ಯಾನದಲ್ಲಿದ್ದಾಗ ಶ್ರೀವೇದವ್ಯಾಸರು ದರ್ಶನವಿತ್ತು, ಅವರ ತಾಯಿ ಹರಕೆಯನ್ನು ನೆನಪಿಸಿದರು. ಮಹಾಭಾರತದ ಲಕ್ಷ ಶ್ಲೋಕಗಳ ಕಠಿಣ ತಾತ್ಪರ್ಯವನ್ನು ವಿವರಿಸಿ ಬರೆದು ಅರ್ಪಿಸಿದರೆ ಆ ಹರಕೆ ತೀರುತ್ತದೆ ಎಂಬ ಸಲಹೆ ನೀಡಿದರು. ಆಗ ಮಹಾಭಾರತಕ್ಕೆ ಬರೆದ ಟೀಕೆ). ವೈಕುಂಠವರ್ಣನೆ, ಸ್ವಪ್ನಗದ್ಯ, ಲಕ್ಷ್ಮಿ ಶೋಭಾನೆ, ಕೀಚಕವಧೆ, ಕೇಶವನಾಮ ಮತ್ತಿತರ ಮಹೋನ್ನತ ಕೃತಿಗಳನ್ನು ರಚಿಸಿದರು.
ಇವರ ಸಾಮಾಜಿಕ ಸಾಮರಸ್ಯವನ್ನರಿತ ಸ್ವರ್ಣಕಾರರಾದ ವಿಶ್ವಕರ್ಮ ಬ್ರಾಹ್ಮಣರು, ಗೋವೆಯ ದೈವಜ್ಞ ಬ್ರಾಹ್ಮಣರು ರಾಜರ ಶಿಷ್ಯರಾದುದು ವಿಶೇಷ. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ವಿಶೇಷ ತತ್ವಜ್ಞಾನ ಹೊಂದಿದ್ದ ರಾಜರಿಗೆ ಮಹಾರಾಜರೇ ಸೇವೆ ಮಾಡುತ್ತಿದ್ದರು. ಸೋದೆಯ ಅರಸಪ್ಪ ನಾಯಕನಿಗಂತೂ ವಾದಿರಾಜರೇ ಸರ್ವಸ್ವ. ಇವರು ಸೇರಿದಂತೆ ಅನೇಕ ಸಾಮಂತರು “ಷಡ್ದರ್ಶನ ಷಣ್ಮುಖ”, “ಸರ್ವಜ್ಞಕಲ್ಪ”, “ಕವಿಕುಲತಿಲಕ” ಮುಂತಾದ ಬಿರುದು ನೀಡಿ ಗೌರವಿಸಿದ್ದಾರೆ.
“ಕುಡುಮ” ಎಂದು ಕರೆಯುತ್ತಿದ್ದ ಕ್ಷೇತ್ರದಲ್ಲಿ ಶ್ರೀಮಂಜುನಾಥ ಸ್ವಾಮಿಯನ್ನು ಆಗಮೋಕ್ತವಾಗಿ ಪ್ರತಿಷ್ಠಾಪನೆ ಮಾಡಿದರು. ಅಲ್ಲಿನ ಹೆಗ್ಗಡೆಯವರಾದ ಶ್ರೀದೇವರಾಜ ಹೆಗ್ಗಡೆಯವರ ಪ್ರೀತಿಗೆ ಒಲಿದು ಕುಡುಮವನ್ನು ‘ಧರ್ಮಸ್ಥಳ’ ಎಂಬ ಕೀರ್ತಿ ಕ್ಷೇತ್ರ ಮಾಡಿದರು. ಬದರಿಕಾಶ್ರಮದಲ್ಲಿದ್ದ ತ್ರಿವಿಕ್ರಮದೇವರ ಮೂರ್ತಿಯನ್ನು ಭೂತರಾಜರ ಮೂಲಕ ತರಿಸಿ ಪುಣ್ಯಕ್ಷೇತ್ರ ಸೋಂದೆ(ಸ್ವಾದಿ)ಯಲ್ಲಿ ಪ್ರತಿಷ್ಠಾಪಿಸಿದರು.
ಶ್ರೀವಾದಿರಾಜರು ಅವರ ಉಪಾಸ್ಯಮೂರುತಿ ಶ್ರೀಹಯವದನ ದೇವರಿಗೆ ಕಡಲೆ ಬೆಲ್ಲದ ಮಡ್ಡಿಯನ್ನು ನಿವೇದಿಸಿ, ಉಚ್ಛಿಷ್ಟವನ್ನು ಸ್ವೀಕರಿಸುತ್ತಿದ್ದರು. ಇದನ್ನು ಕಂಡ ಕೆಲ ಕಿಡಿಗೇಡಿಗಳು ಪರೀಕ್ಷಿಸಲು ಹಾಗೂ ಅಸೂಯೆಯಿಂದ ಕಡಲೆ ಮಡ್ಡಿಯಲ್ಲಿ ವಿಷ ಬೆರೆಸಿದರು. ಇದನ್ನರಿಯದ ರಾಜರು ಸಮರ್ಪಿಸಿದ ನೈವೇದ್ಯವನ್ನು ದಿವ್ಯವಾದ ಅಶ್ವ(ಕುದುರೆ) ರೂಪದಲ್ಲಿ ಬಂದ ಹಯಗ್ರೀವ ಸಂಪೂರ್ಣವಾಗಿ ತಿಂದುಕೊಂಡ. ಇದನ್ನು ಕಂಡ ರಾಜರು ಸೋಜಿಗದಿಂದ ತಮ್ಮ ಉಪಾಸ್ಯ ಮೂರ್ತಿಯತ್ತ ನೋಡಿದಾಗ ಆ ದಿವ್ಯಾಶ್ವ ಸ್ವರೂಪದ ಹಯಗ್ರೀವ ದೇವರ ಕೊರಳು ನೀಲಿ ಬಣ್ಣಕ್ಕೆ ತಿರುಗಿತ್ತು. ಶ್ರೀಹರಿ ವಾದಿರಾಜರ ಜೀವ ಉಳಿಸಿದ್ದ, ಅಂದಿನಿಂದ ಕಡಲೆ ಮಡ್ಡಿಗೆ “ಹಯಗ್ರೀವ” ಎಂದು ಹೆಸರುಬಂತು. ಹಯಗ್ರೀವ ಇಂದಿಗೂ ಮಾಧ್ವರ ಮನೆಯಲ್ಲಿ ವಿಶೇಷ ರುಚಿಯಿಂದ ಮಾಡಲಾಗುತ್ತದೆ.
ಪೋಷ್ಠೀಶ ವಿಗ್ರಹ ಎಂಬ ಕೃತಿಯನ್ನು ಖರಪುಟ(ಕುದುರೆಹೆಜ್ಜೆ) ಧಾಟಿಯಲ್ಲಿ ರಚಿಸಿದ್ದಾರೆ. ಪಾಲಾಯಾಚ್ಯುತ ಎಂಬ ಕೃತಿಯನ್ನು ಎಲ್ಲ ಮಠಗಳಲ್ಲಿ ಪೂಜೆಯ ವೇಳೆ ಪಠಿಸುವ ವಾಡಿಕೆಯಿದೆ.
ಒಮ್ಮೆ ಮಟ್ಟಿ ಗ್ರಾಮದಲ್ಲಿ ವಾತಾವರಣದಲ್ಲಿ ಏರುಪೇರಾಯಿತು, ಬೆಳೆಗಳು ನಶಿಸುತ್ತಿದ್ದವು. ಅಲ್ಲಿನ ಜನ ಗುರುಗಳನ್ನು ಭೇಟಿಯಾದಾಗ ಗುರುಗಳು ಅಂದಿನ ಕಾಲದಲ್ಲಿ ನಿಷೇಧವೆನಿಸಿದ್ದ ಗುಳ್ಳ(ಗುಂಡು ಬದನೆ)ದ ಬೀಜವನ್ನು ಅವರಿಗೆ ಕೊಟ್ಟರು. ಉತ್ತಮವಾಗಿ ಬೆಳೆದ ಗಿಡಗಳು ನೀಡಿದ ಫಸಲನ್ನು ತಂದ ಗ್ರಾಮಸ್ಥರು ವಾದಿರಾಜರಿಗೆ ಒಪ್ಪಿಸಿದರು. ಆ ಗುಳ್ಳದಿಂದ ರುಚಿಯಾದ ಹುಳಿ ಮಾಡಿಸಿ, ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಂದಿನಿಂದ ಇಂದಿನವರೆಗೂ ಉಡುಪಿ ಮಠದಲ್ಲಿ ಗುಳ್ಳ ಬಳಕೆಯಾಗುತ್ತಲೇ ಇದೆ. ಈಗ ಈ ಮಟ್ಟಿ ಗುಳ್ಳ ವಿಶ್ವವ್ಯಾಪಿ ಹೆಸರುವಾಸಿಯಾಗಿದೆ.
ಇಂತಹ ಅಭೂತಪೂರ್ವ ಸಾಧನೆಗೈದ ಯತಿಗಳು 112 ವರ್ಷ ಸನ್ಯಾಸಿ ಜೀವನ ನಡೆಸಿ, ಉಡುಪಿಯಲ್ಲಿ 4 ಬಾರಿ ಪರ್ಯಾಯವನ್ನು ಪೂರೈಸಿದರು. 5 ನೇ ಪರ್ಯಾಯವನ್ನು ಅವರ ಉತ್ತರಾಧಿಕಾರಿ ವೇದವೇದ್ಯರಿಗೆ ಬಿಟ್ಟುಕೊಟ್ಟರು. ನಂತರ ಸೋದೆಗೆ ತೆರಳಿ ಅಲ್ಲಿಯೇ 5 ನೇ ಪರ್ಯಾಯ ನಡೆಸಿದರು. 120 ವರ್ಷ ತುಂಬು ಜೀವನ ನಡೆಸಿದ ಮಹಾಮಹಿಮರಾದ ಶ್ರೀವಾದಿರಾಜರು ಕ್ರಿ.ಶ. 1600 ನೇ ಶಾರ್ವರಿನಾಮ ಸಂವತ್ಸರ ಫಾಲ್ಗುಣ ಬಹುಳ ತದಿಗೆ ಸಶರೀರರಾಗಿ ಅವರೇ ನಿರ್ಮಾಣ ಮಾಡಿಸಿದ್ದ ಪಂಚ ವೃಂದಾವನವನ್ನು ಸಶರೀರರಾಗಿ ಪ್ರವೇಶಿಸಿದರು. ಇಂತಹ ಮಹಾಮಹಿಮರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸೋಣ. ಅವಕಾಶ, ಅನುಕೂಲ ಇದ್ದವರು ಸೋಂದಾ ಕ್ಷೇತ್ರಕ್ಕೆ ಭೇಟಿ ನೀಡಿ. ಮಳೆಗಾದಲ್ಲಿ ಈ ಕ್ಷೇತ್ರ ಭೂರಮೇ (ಸ್ವರ್ಗ).
ಕಾಮಧೇನು ಯಥಾ ಪೂರ್ವಂ ಸರ್ವಾಭೀಷ್ಟಫಲಪ್ರದಾ |ತಥಾ ಕಲೌ ವಾದಿರಾಜಃಶ್ರೀಪಾದೋ ಅಭೀಷ್ಟದಃ ಸತಾಮ್||
ಪರಾಶರಮುನಿಯ ಪುತ್ರತ್ವೇನ ವೇದವ್ಯಾಸರೂಪದಿಂದ ಪ್ರಕಟಗೊಂಡ ಪರಾತ್ಪರನಿಗೆ ಸಮ್ಮತವಾದಂತಹ ಸಿದ್ಧಾಂತವನ್ನು ಪೃಥ್ವಿಯಲ್ಲಿ ಪ್ರಚುರಪಡಿಸುವ ವ್ಯಾಜದಿಂದ ಪಡುಗಡಲದಡದ ಪುಟ್ಟಹಳ್ಳಿ ಪಾಜಕದಲ್ಲಿ ಪವಮಾನ ಪ್ರಾದುರ್ಭಾವಗೊಂಡ. ಪೂರ್ಣಪ್ರಜ್ಞಾಭಿದಾನದಿಂದ ಪವನದೇವ ಪ್ರಚುರಪಡಿಸಿದ ಪರಮಮಾಂಗಲೀಕವಾದ ಶಾಸ್ತ್ರವನ್ನು ತಮ್ಮ ಟೀಕಾ, ಟಿಪ್ಪಣಿ, ವ್ಯಾಖ್ಯಾನಗಳಿಂದ ಜನರ ಹೃದಯಸ್ಥಗೊಳಿಸಿದ ಪುಣ್ಯಚರಿತರ ಪಂಕ್ತಿಯಲ್ಲಿ ‘ಪ್ರಸಂಗಾಭರಣತೀರ್ಥ’ರೆಂದು ಪ್ರಖ್ಯಾತರಾದ ಶ್ರೀವಾದಿರಾಜ ಶ್ರೀಮಚ್ಚರಣರು ಪ್ರಧಾನವಾಗಿ ಪೂಜನೀಯರಾದ ಪಾವನಾತ್ಮರು. ಮಧ್ವಾನುಜ ಶ್ರೀವಿಷ್ಣುತೀರ್ಥರ ಪರಮಪವಿತ್ರವಾದಂತಹ ಪರಂಪರೆಯಲ್ಲಿ ಬಂದು, ಶ್ರೀವಾಗೀಶತೀರ್ಥರಿಂದ ತುರೀಯಾಶ್ರಮವನ್ನು ಹೊಂದಿ “ವಾದಿ ಮಧ್ವೋ ಯಸ್ಯ ರಾಜಾ ಸೋsಹಂ ತಸ್ಯ ಕೃಪಾಬಲಾತ್, ವಾದಿರಾಜೋ ನ ಸ್ವಶಕ್ತ್ಯಾ ವೀಣೇವ ರಣಯಾಮಿ ತತ್” ಎಂದು ತಾವು ಪೂರ್ಣಪ್ರಮತಿಗಳು ನುಡಿಸುವ ವೀಣೆಯೆಂದು ವಿನಯವನ್ನು ಮೆರೆದು, ಪೂರ್ಣಪ್ರಜ್ಞರು ಬೀಜಾವಾಪನೆಮಾಡಿದ ಶಾಸ್ತ್ರವನ್ನು ಹೆಮ್ಮರವಾಗಿ ಬೆಳೆಸಿದರು. ಓರ್ವ ಮಹಾನ್ ಯತಿಯಾಗಿ, ಮಹಾಕವಿಯಾಗಿ, ಸಮಾಜಸುಧಾರಕರಾಗಿ, ಕ್ರಾಂತದೃಷ್ಟಿಯ ಮಹಾತಪಸ್ವಿಯಾಗಿ ಶ್ರೀವಾದಿರಾಜರು ಮಾಧ್ವ ವಾಙ್ಮಯಕ್ಕೆ, ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನೀಡಿದಂತಹ ಕೊಡುಗೆ ಅನ್ಯಾದೃಶ. ಗಂಗಾಸಲಿಲ ಪ್ರವಾಹದಂತೆ ನಿರರ್ಗಳವಾದ ತಮ್ಮ ವಾಗ್ವೈಖರಿಯಿಂದ ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ಅಸದೃಶ ಸಾಧನೆಯನ್ನು ಮಾಡಿದ ಮಹಾನುಭಾವರು ಶ್ರೀರಾಜರು. ತಮ್ಮ ಯುಕ್ತಿಮಲ್ಲಿಕಾ, ಸರಸಭಾರತೀ ವಿಲಾಸ, ತೀರ್ಥಪ್ರಬಂಧ, ರುಗ್ಮಿಣೀಶವಿಜಯ, ಹರಿಭಕ್ತಿಲತಾ, ಉಪನಿಷದ್ಭಾಷ್ಯ ಟೀಕಾ, ಅಸಂಖ್ಯಾತ ಸ್ತೋತ್ರಗಳು, ವೈಕುಂಠ ವರ್ಣನೆ, ಗುಂಡಕ್ರಿಯೆ, ಲಕ್ಷ್ಮೀ ಶೋಭಾನೆ, ಅವತಾರತ್ರಯ ಸುವ್ವಾಲಿ ಮೊದಲಾದ ಕನ್ನಡದ ದೀರ್ಘಕೃತಿಗಳು, ಕನ್ನಡದಲ್ಲಿ ರಚಿಸಿದ ಅಮೂಲ್ಯ ಕೃತಿಗಳ ಮೂಲಕ ವಾಙ್ಮಯ ಲೋಕದ ಮಹಾತಪಸ್ವಿಗಳೆಸಿಸಿದ ಶ್ರೀವಾದಿರಾಜರು ಭಕ್ತರ ಪಾಲಿನ ಕಾಮಧೇನು. ಮಾಧ್ವ ಯತಿಪರಂಪರೆಯಲ್ಲಿ ‘ಮಹಾಕಾವ್ಯ’ವೊಂದರ ರಚನೆಗೆ ನಾಂದಿ ಹಾಡಿದ ಶ್ರೀವಾದಿರಾಜರು ಪುಣೆಯಲ್ಲಿ ಮಾಘಕವಿಯ ‘ಶಿಶುಪಾಲವಧ’ ವೆಂಬ ವಿದ್ವನ್ಮಾನ್ಯಕಾವ್ಯವನ್ನೂ ಮೀರಿಸುವ, ಸಕಲ ಕಾವ್ಯಲಕ್ಷಣಗಳಿಂದ ಭರಿತವಾದ ‘ರುಗ್ಮಿಣೀಶವಿಜಯ’ವೆಂದಬ ಪರಮಮಾಂಗಲೀಕವಾದಂತಹ ಕೃತಿಯನ್ನು ರಚಿಸಿ ತಮ್ಮ ಪ್ರತಿಭೆಯ ವಿರಾಡ್ರೂಪವನ್ನು ಪ್ರಕಟಗೊಳಿಸಿದರು.
ಅಪೂರ್ವವಾದಂತಹ ಅಧ್ಯಾತ್ಮಿಕ ಪ್ರವಾಸಕಥನ ‘ತೀರ್ಥಪ್ರಬಂಧ’ದ ರಚನೆ, ವಿಶ್ವಗುರುಶ್ರೀ ಮಧ್ವರ ಮಹೋನ್ನತ ಕೃತಿ ‘ಭಾಗವತತಾತ್ಪರ್ಯನಿರ್ಣಯ’ದ ಭಾವವನ್ನು ಪ್ರಕಾಶಗೊಳಿಸುವ ‘ಭಾವ ಪ್ರಕಾಶಿಕಾ’ ಶ್ರೀಟೀಕಾಕೃತ್ಪಾದರ ಆಂತರ್ಯವನ್ನು ಪ್ರಕಟಗೊಳಿಸುವ ‘ನ್ಯಾಯಸುಧಾ ಗುರ್ವರ್ಥದೀಪಿಕಾ’, ‘ತತ್ತ್ವಪ್ರಕಾಶಿಕಾ ಗುರ್ವರ್ಥದೀಪಿಕಾ’ ಕೃತಿಗಳು, ಮಹಾಭಾರತದ ಅತ್ಯಂತ ಕಠಿಣವಾದಂತಹ ಪದಗಳ ಅರ್ಥವಿವರಣೆಗಾಗಿ ‘ಲಕ್ಷಾಲಂಕಾರ’, ಶಾಸ್ತ್ರಪ್ರಮೇಯಗಳನ್ನು ಏಕತ್ರಪೋಣಿಸಿ, ವೇದಾಂತಕ್ಕೆ ಕಾವ್ಯದ ಮೆರುಗನ್ನು ನೀಡಿದ ‘ಯುಕ್ತಿಮಲ್ಲಿಕಾ’, ಮುಖ್ಯಪ್ರಾಣನ ಮಹಿಮೆಯನ್ನು ಸಾರುವ ‘ಸರಸಭಾರತೀವಿಲಾಸ’, ಸಂಸ್ಕೃತಭಾಷೆಯಲ್ಲಿ ಅನೇಕ ಸುಂದರವಾದಂತಹ ಸ್ತ್ರೋತ್ರಗಳ ರಚನೆ, ಕನ್ನಡಭಾಷೆಯಲ್ಲಿ ಭಕ್ತಿ,ಕಾವ್ಯ ಗುಣ ಭರಿತವಾದ ತಮಗೆ ಒಲಿದು ಬಂದ ‘ಹಯವದನ’ಅಂಕಿತದಲ್ಲಿ ಅಸಂಖ್ಯ ದೇವರನಾಮಗಳ ರಚನೆ, ನಿಮ್ನವರ್ಗದವರಲ್ಲಿಯೂ ಭಕ್ತಿಭಾವದ ಜಾಗರಣಕ್ಕಾಗಿ ತುಳುಭಾಷೆಯಲ್ಲಿ ಕೃತಿರಚನೆ, ಉಡುಪಿಯ ಪರ್ಯಾಯದ ಪುನರ್ ವ್ಯವಸ್ಥೆ, ಧರ್ಮಸ್ಥಳದಲ್ಲಿ ಶ್ರೀಮಂಜುನಾಥದ ಪ್ರತಿಷ್ಠಾಪನೆ ಹೀಗೆ ಎಲ್ಲದರಲ್ಲಿಯೂ ಶ್ರೀವಾದಿರಾಜಗುರುಸಾರ್ವಭೌಮರದು ಭೌಮವ್ಯಕ್ತಿತ್ವ. ಪೂರ್ಣಪ್ರಜ್ಞರ ಜನ್ಮಭೂಮಿ ಪಾಜಕದಲ್ಲಿ, ವಿಶ್ವಗುರುಗಳ ಪಾದಚಿಹ್ನೆಗಳಿರುವ ಸ್ಥಳದಲ್ಲಿ ‘ಮಧ್ವ’ ಪ್ರತೀಕದ ಪ್ರತಿಷ್ಠಾಪನೆ, ಉಡುಪಿಯ ಶ್ರೀಕೃಷ್ಣಸಾನ್ನಿಧ್ಯದಲ್ಲಿ ಮುಖ್ಯಪ್ರಾಣ,ಮಧ್ವರ, ಗರುಡ ಪ್ರತಿಷ್ಠಾಪನೆ ಹೀಗೆ ತಮ್ಮ ಪ್ರತಿಯೊಂದು ಕಾರ್ಯವನ್ನೂ ಶ್ರೀಕೃಷ್ಣ,ಮುಖ್ಯಪ್ರಾಣರ ಮಹಿಮಾಪ್ರಸರಣಕ್ಕೆ ಮುಡಿಪಾಗಿರಿಸಿದ ಮಹನೀಯ ವಾದಿರಾಜರಿಗೆ ಒಲಿದು, ಅಕ್ಕಸಾಲಿ ಗಜಮುಖನ ಎರಕವನ್ನು ಹೊಯ್ದರೂ, ಶ್ರೀಹರಿ ಹಯಮುಖನಾಗಿಯೇ ಪ್ರಕಟಗೊಂಡ.
ಅಭೋಜ್ಯವಾಗಿದ್ದ ಬದನೆಕಾಯಿಯನ್ನೂ ಶ್ರೀಹರಿಗೆ ನಿವೇದನ ಮಾಡಿ ತಮ್ಮ ಹೆಸರನ್ನೇ ಅದಕ್ಕೆ ಅನುಗ್ರಹಿಸಿ ವಿಖ್ಯಾತ ‘ವಾದಿರಾಜಗುಳ್ಳ’ವನ್ನಾಗಿ ಮಾಡಿದ ಮಹಾಮುನಿಪುಂಗವ. ಮಟ್ಟಿಯ ಬ್ರಾಹ್ಮಣರಿಗೆ ಸಾಮಾಜಿಕ ಸ್ಥಾನಮಾನವನ್ನು ದಯಪಾಲಿಸಿದ ದಯಾನಿಧಿ. ಭಕ್ಷ್ಯದ ಹೆಸರಿನಲ್ಲಿಯೂ ಭಗವಂತನ ನಾಮಸ್ಮರಣೆಯಾಗಬೇಕೆಂಬ ಮಹದುದ್ದೇಶದಿಂದ ಕಡಲೆ-ಬೆಲ್ಲದ ಹೂರಣಕ್ಕೆ ‘ಹಯಗ್ರೀವ’ವೆಂಬ ಹೆಸರನ್ನು ಇರಿಸಿ, ತಮ್ಮ ಪ್ರತಿಯೊಂದು ಕ್ರಿಯೆಯೂ ಭಗವನ್ಮುಖವೆಂದು ತೋರಿದ ತಪೋನಿಧಿ. ಸೋದೆಯ ಪುಣ್ಯಪರಿಸರದಲ್ಲಿ ಶ್ರೀರಾಮ-ಹನುಮಂತ, ಶ್ರೀಕೃಷ್ಣ-ಭೀಮಸೇನ, ಶ್ರೀವೇದವ್ಯಾಸ-ಮಧ್ವರ ವಿಶೇಷ ಸಾನ್ನಿಧ್ಯವಿರುವ, ಶ್ರೀಹರಿಯು ದಶಾವತಾರಗಳಿಂದ ವಿರಾಜಿಸುವ ಪಂಚವೃಂದಾವನಸ್ಥಿತರಾಗಿ, ತಮ್ಮ ಪ್ರೀತಿಯ ಶಿಷ್ಯಭೂತರಾಜರೊಂದಿಗೆ ತಮ್ಮನ್ನು ಆಶ್ರಯಿಸಿದವರ ದುಗುಡವನ್ನು ಕಳೆಯುತ್ತಾ, ತನ್ಮೂಲಕ ಭಕ್ತರಿಗೆ ಶ್ರೀಹರಿಯ,ಮಧ್ವರ ಪಥದ ಪ್ರದರ್ಶಕರಾಗಿರುವ ಪಾವನ ಚರಿತರು ಶ್ರೀವಾದಿರಾಜಗುರುಸಾರ್ವಭೌಮರು
ಕುದುರೆಯ ವದನನ ಮುದದಿ ಭಜಿಪ
ಮೋದಮುನಿಯ ಮತ ಮಹೋದಧಿಗೆ
ವಿಧುವಿನಂದದಿ ರಾಜಿಪ
ವಾದಿರಾಜ ಗುರುವೆ ಪದದ್ವಂದ್ವಗಳಿಗೆರಗುವೆ
ಖೇದಕಳೆದು ಶ್ರೀದನಂಘ್ರಿ ಧ್ಯಾನವನ್ನು
ಹೃದಯದೊಳಗೆ ಕರುಣಿಸೋII
ಸೋಂದಾ_ಕ್ಷೇತ್ರಕ್ಕೆ ಒಮ್ಮೆ ಬನ್ನಿ
ಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ. ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ಇಲ್ಲಿ ನೆಲೆಸಿದ್ದಾರೆ.
ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ. ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು. ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನ ಸಹ ಉಂಟು.
ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ವರ್ಣಿಸಲು ಪದಗಳು ಸಾಲದು. ಮಳೆಗಾಲದಲ್ಲಿ ವಾರಾಂತ್ಯಗಳು ಬಿಟ್ಟರೆ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ. ಪ್ರಶಾಂತವಾಗಿರುತ್ತದೆ ಸದಾಕಾಲ ಸುರಿಯುತ್ತಿರುವ ಆ ಮಳೆಯನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಒಂದೇ ಒಂದು ತೊಂದರೆ ಎಂದರೆ ಮಳೆಗಾಲದಲ್ಲಿ ತಪೋವನಕ್ಕೆ ಭೇಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ಹಾದಿಯಾದ್ದರಿಂದ ಜಿಗಣೆಗಳ ಕಾಟ ಹೆಚ್ಚಾಗಿ ಇರುತ್ತದೆ. ಇನ್ನು ಈ ಕ್ಷೇತ್ರದ ಊಟದ ರುಚಿಯ ಬಗ್ಗೆಯಂತೂ ಎರಡು ಮಾತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ವಿಶೇಷ ಹಲಸಿನಕಾಯಿ ಹುಳಿ ಮಳೆಗಾಲದಲ್ಲಿ ಮಂಗಳೂರು ಸೌತೆಕಾಯಿ ಹುಳಿ. ಆಹಾ ಆ ರುಚಿಯನ್ನು ಅನುಭವಿಸಿಯೇ ತೀರಬೇಕು.
ಕ್ಷೇತ್ರ ಮಹಿಮೆ
ಇಲ್ಲಿನ ಮುಖ್ಯ ದೇವರು ಶ್ರೀ ರಮಾತ್ರಿವಿಕ್ರಮ ದೇವರು, ಶ್ರೀ ವಾದಿರಾಜರು ಮತ್ತು ಶ್ರೀ ಭೂತರಾಜರು. ಶ್ರೀ ವಾದಿರಾಜರು ಯತಿಗಳು. ಅವರ ಮೂಲ ಬೃಂದಾವನ ಇಲ್ಲಿಯೇ ಇರುವುದು. ಪ್ರತಿನಿತ್ಯ ಪ್ರಾತಹ ಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ. ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರಿಗೆ ಅನ್ನದ ಬಳಿ ಪೂಜೆ. ಬೇಸಿಗೆ ಕಾಲದಲ್ಲಿ ರಮಾತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಇರುವ ವಿಶೇಷ ಪೀಠದಲ್ಲಿ ಈ ಪೂಜೆ ನೆರವೇರಿಸಲಾಗುವುದು. ಮಳೆಗಾಲದಲ್ಲಿ ಅಲ್ಲಿ ನಡೆಸಲು ಆಗದ ಕಾರಣ ಭೂತರಾಜರ ಗುಡಿಯ ಮುಂದೆಯೇ ಮಾಡುತ್ತಾರೆ. ಎರಡು ಅಡಿಯಷ್ಟು ಎತ್ತರಕ್ಕೆ ಅನ್ನದ ರಾಶಿ ಹಾಕಿ ಅದಕ್ಕೆ ಕುಂಕುಮದ ನೀರನ್ನು ಕಲಸಿ ಅನ್ನದ ರಾಶಿಗೆ ಆ ನೀರನ್ನು ಹಾಕಿ ಕೆಂಪನೆ ಬಣ್ಣದ ರಾಶಿ ಮಾಡಿ ಅದಕ್ಕೆ ಒಡೆದ ತೆಂಗಿನ ಕಾಯಿಯನ್ನು ಕಣ್ಣಿನಂತೆ ಇತ್ತು ಅದಕ್ಕೊಂದು ರೂಪ ಕೊಟ್ಟು ಅದರ ಮುಂದೆ ಕುಳಿತು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಒಂದು ಪಂಜನ್ನು ಸಿದ್ಧಮಾಡಿ ಅದರಿಂದಲೇ ಆರತಿ ಮಾಡಿ ನಂತರ ಕಲಸಿದ್ದ ಕುಂಕುಮದ ನೀರನ್ನು ಆ ಪಂಜಿನ ಮೂಲಕ ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ನಂತರ ಅದೇ ನೀರನ್ನು ತೀರ್ಥವನ್ನಾಗಿ ನೀಡುತ್ತಾರೆ. ಪ್ರತಿದಿನವೂ ಈ ಪೂಜೆ ನಡೆದರೂ ಹುಣ್ಣಿಮೆಯಂದು ಬಹಳ ವಿಶೇಷ ಈ ಪೂಜೆಗೆ.
ಶ್ರೀ ಭೂತರಾಜರು
ಒಮ್ಮೆ ವ್ಯಾಸರಾಜರು ಮಠಕ್ಕೆ ಭೇಟಿ ಕೊಟ್ಟರು. ಅಂದು ದ್ವಾದಶಿ. ವಾದಿರಾಜರು ಇನ್ನೇನು ಪೂಜೆಗೆ ಕೂಡಬೇಕು. ಅಷ್ಟರಲ್ಲಿ ಭೋಜನಕ್ಕೆ ಕುಳಿತ ವ್ಯಾಸರಾಜರು ವಾದಿರಾಜರನ್ನು ಕುರಿತು “ರಾಜರು ಬರದೆ ನಾವು ಹೇಗೆ ಭೋಜನ ಸ್ವೀಕರಿಸುವುದು ಅವರು ಬಂದು ಇಲ್ಲೇ ಪಕ್ಕದಲ್ಲೇ ಕುಳಿತುಕೊಳ್ಳಲಿ” ಎಂದರು. ಅದರಂತೆಯೇ ವಾದಿರಾಜರು ಬಂದು ವ್ಯಾಸರಾಜರ ಪಕ್ಕದಲ್ಲಿ ಕುಳಿತು ಭೋಜನ ಮುಗಿಸಿ ನಂತರ ತಮ್ಮ ಶಿಷ್ಯ ವೃಂದಕ್ಕೆ ಹೇಳಿದರು ನೀವೆಲ್ಲ ಇಲ್ಲೇ ಇರಿ ನಾನು ಈಗಲೇ ಬರುತ್ತೇನೆ ಎಂದು ಹೇಳಿ ಹೊರಟರು. ಅವರು ಸೀದಾ ಬಂದು ತಲುಪಿದ್ದು ಶಾಲ್ಮಲಿ ನದಿಯ ಬಳಿಗೆ. ನದಿಯ ಬಳಿಗೆ ಬಂದವರೇ ಒಂದು ದೊಡ್ಡ ಎಲೆಯನ್ನು ತಮ್ಮ ಮುಂದೆ ಇಟ್ಟುಕೊಂಡು ಕುಳಿತರು. ತಾವು ಮಠದಲ್ಲಿ ಮಾಡಿದ ಅಷ್ಟು ಊಟವನ್ನು ಮತ್ತೆ ಎಲೆ ಮೇಲೆ ತಂದರು. ಅದು ಬಡಿಸಿದಾಗ ಹೇಗಿತ್ತೋ ಹಾಗೆಯೇ ಇತ್ತು. ಒಂದು ಚೂರು ಜೀರ್ಣವಾಗಿರಲಿಲ್ಲ. ಇದೆಲ್ಲಾ ಅವರ ಯೋಗಶಕ್ತಿಯಿಂದ ಸಾಧ್ಯವಾಯಿತು. ನಂತರ ಮತ್ತೆ ಸ್ನಾನ ಮಾಡಿ ಪೂಜೆ ಮುಗಿಸಿ ನಂತರ ಬಂದು ಭೋಜನ ಮುಗಿಸಿದರು. ಇದೆಲ್ಲವನ್ನು ಅವರನ್ನೇ ಹಿಂಬಾಲಿಸಿಕೊಂಡು ಬಂದ ಅವರ ಶಿಷ್ಯ ನಾರಾಯಣ ಶರ್ಮ ದೂರದಿಂದ ಮರದ ಮೇಲೊಂದರ ಮೇಲೆ ಹತ್ತಿ ನೋಡುತ್ತಿದ್ದ. ವಾಪಸ್ ಮಠದ ಕಡೆ ಹೊರಟಿದ್ದ ವಾದಿರಾಜರಿಗೆ ಅಡ್ಡ ಬಂದ ನಾರಾಯಣ ಶರ್ಮ ಗುರುಗಳೇ ನೀವು ಮಾಡಿದ್ದೆಲ್ಲವನ್ನೂ ನಾನು ನೋಡಿದೆ ಎಂದಾಗ ಕುಪಿತಗೊಂಡ ವಾದಿರಾಜರು ಅವನನ್ನು ಶಪಿಸಿಬಿಟ್ಟರು. ಕೂಡಲೇ ಅವನು ರಾಕ್ಷಸ ರೂಪಿಯಾಗಿಬಿಟ್ಟ.
ತನ್ನ ತಪ್ಪಿನ ಅರಿವಾದ ನಾರಾಯಣ ಶರ್ಮ ಶಾಪದ ಪರಿಹಾರವೆನೆಂದು ಕೇಳಲು ವಾದಿರಾಜರು ಹೇಳಿದರು ನೀನು ಕಾಡುಗಳಲ್ಲಿ ತಿರುಗುತ್ತ ದಾರಿಹೋಕರಲ್ಲಿ “ಆ ಕಾ ಮಾ ವೈ ಕೋ ನಾ ಸ್ನಾತಹ” ಎಂದು ಕೇಳು ಯಾರು ನಿನಗೆ ಉತ್ತರ ನೀಡುತ್ತಾರೋ ಅಂದು ನಿನಗೆ ಶಾಪ ವಿಮೋಚನೆ ಎಂದು ಹೇಳಿದರು. ಅಂದಿನಿಂದ ನಾರಾಯಣ ಶರ್ಮನು ಕಾಡುಗಳಲ್ಲಿ ಅಲೆಯುತ್ತ ದಾರಿಹೋಕರಲ್ಲಿ ತನ್ನ ಪ್ರಶ್ನೆಯನ್ನು ಕೆಳುತ್ತಿದ್ದನು. ಆದರೆ ಯಾರಿಂದಲೂ ಉತ್ತರ ದೊರಕುತ್ತಿರಲಿಲ್ಲ. ಹಾಗೆಯೇ ತನ್ನ ರಾಕ್ಷಸ ಗುಣದಿಂದಾಗಿ ದಾರಿಹೋಕರನ್ನು ಕೊಂದು ತಿನ್ನುತ್ತಿದ್ದನು. ತನ್ನ ಶಿಷ್ಯನ ಗತಿ ಕೇಳಿ ವಾದಿರಾಜರು ಮರುಗಿ ತಾವೇ ಕಾಡಿಗೆ ಹೊರಟರು. ಆಗ ಆ ನಾರಾಯಣಭೂತ ರಾಜರನ್ನೇ ಆ ಪ್ರಶ್ನೆ ಕೇಳಿದಾಗ “ರಂಡ ಪುತ್ರ ತ್ವಮ ನ ಸ್ನಾತಹ” (ಅಂದರೆ ವ್ಯಭಿಚಾರಿಯ ಮಗನು ಅಥವಾ ನಿನ್ನಂಥ ಬ್ರಹ್ಮರಾಕ್ಷಸನು ಆಶ್ವಯುಜ, ಕಾರ್ತೀಕ, ಮಾಘ, ವೈಶಾಖ ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ) ಎಂದ ಕೂಡಲೇ ಆತನಿಗೆ ಶಾಪ ವಿಮೋಚನೆಯಾಯಿತು. ಈಗ ಅವನು ತನ್ನ ಪೂರ್ವ ಜನ್ಮದ ಪ್ರತಾಪ ರುದ್ರನ ಅವತಾರ ತಾಳಿದ್ದನು. ಶಾಪ ವಿಮೋಚನೆ ಯಿಂದ ಆತನ ದೇಹ ಪ್ರಖರವಾಗಿ ಹೊಳೆಯುತ್ತಿತ್ತು. ಕಣ್ಣುಗಳು ಬೆಂಕಿಯ ಜ್ವಾಲೆಯಂತೆ ಜ್ವಲಿಸುತ್ತಿತ್ತು. ಶಾಪ ವಿಮೋಚನೆ ಮಾಡಿದ ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರತಾಪ ರುದ್ರನು ತಮಗೆ ನಾನು ಶಾಶ್ವತವಾಗಿ ಸೇವೆ ಮಾಡಬೇಕೆಂದು ಹಂಬಲವಾಗಿದೆ ಎಂದು ತಿಳಿಸಿದರು. ವಾದಿರಾಜರು ಅವರನ್ನು ಹರಸುತ್ತ ನೀನು ಭಾವೀರುದ್ರನಾಗಿ ಸೋದೆಯ ಕ್ಷೇತ್ರಪಾಲಕನಾಗಿ ಮುಂದೆ ಭೂತರಾಜರು ಎಂದು ಪ್ರಸಿದ್ಧಿ ಪಡೆಯುತ್ತೀಯ ಎಂದರು. ಅಂದಿನಿಂದ ಭೂತರಾಜರು ವಾದಿರಾಜರಿಗೆ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಒಮ್ಮೆ ವಾದಿರಾಜರು ಭೂತರಾಜರಿಗೆ ಬದರಿಕಾಶ್ರಮದಲ್ಲಿ ಇರುವ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಪೂಜೆಗಾಗಿ ತರಲು ಹೇಳಿದಾಗ ಕೂಡಲೇ ಹೊರಟ ಭೂತರಾಜರು ಬದರಿಕಾಶ್ರಮದಿಂದ ತಮ್ಮ ರಥದಲ್ಲಿ ರಮಾತ್ರಿವಿಕ್ರಮ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಆಕಾಶಮಾರ್ಗದಲ್ಲಿ ಬರುತ್ತಿದ್ದಾಗ ದೈತ್ಯನೊಬ್ಬನು ಎದುರಾದನು. ವಾದಿರಾಜರು ಹೇಳಿದ ಮುಹೂರ್ತದಲ್ಲಿ ಅಲ್ಲಿರಬೇಕೆಂದು ಯೋಚಿಸಿ ಭೂತರಾಜರು ಸಮಯ ವ್ಯರ್ಥ ಮಾಡದೆ ತಮ್ಮ ರಥದ ಒಂದು ಚಕ್ರವನ್ನು ಕಿತ್ತು ಆ ದೈತ್ಯನ ಮೇಲೆ ಎಸೆದಾಗ ಆತ ಕೂಡಲೇ ಅಸುನೀಗಿದ. ವಿಗ್ರಹವನ್ನು ಹೊತ್ತ ಭೂತರಾಜರು ಸೋದೆಯಲ್ಲಿ ಬಂದಿಳಿದಾಗ ವಾದಿರಾಜರು ಆ ವಿಗ್ರಹವನ್ನು ಅಲ್ಲೇ ಸ್ಥಾಪಿಸುತ್ತ ಇದು ಕಲಿಯುಗವಾದ್ದರಿಂದ ಈ ಬಂಗಾರದ ರಥ ಹಾಗೆಯೇ ಈ ಬಂಗಾರದ ವಿಗ್ರಹ ಎರಡೂ ಕಲ್ಲಿನ ರೂಪದಲ್ಲಿ ಇರುತ್ತದೆ ಎಂದರು.ಇಂದಿಗೂ ನೀವು ಸೋದೆಯಲ್ಲಿ ಆ ಒಂದು ಚಕ್ರವಿಲ್ಲದ ರಥವನ್ನು ನೋಡಬಹುದು.
ಆಚರಣೆ ಮತ್ತು ಸೇವಾ ಪದ್ಧತಿ
ಈ ಕ್ಷೇತ್ರದ ಪದ್ಧತಿಯಂತೆ ಇಲ್ಲಿಗೆ ಬಂದ ಕೂಡಲೇ ಮಾಡಬೇಕಾದ ಕೆಲಸವೆಂದರೆ ಭೂತರಾಜರ ಸನ್ನಿಧಿಯಲ್ಲಿ ತೆಂಗಿನ ಕಾಯಿ ಉರುಳಿಸುವುದು. ನೀವು ನಿಮ್ಮ ಸ್ವಂತ ವಾಹನದಲ್ಲಿ ಬಂದಿದ್ದರೆ ಚಕ್ರಕ್ಕೊಂದು ಎಂಬಂತೆ ಕಾಯಿ ಉರುಳಿಸಬೇಕು. ಇನ್ನು ಇಲ್ಲಿನ ವಿಶೇಷ ಸೇವಾ ಪದ್ಧತಿ ಎಂದರೆ ಕಾಯಿ ಕಟ್ಟಿಕೊಂಡು ಸೇವೆ ಮಾಡುವುದು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಇಲ್ಲಿ ಸೇವೆಯನ್ನು ಮಾಡುವರು. ಇಲ್ಲಿ ಸೇವೆ ಮಾಡಿ ನಿಶ್ಚಿತ ಫಲ ಕಂಡವರು ಬಹಳಷ್ಟು ಮಂದಿ ಇದ್ದಾರೆ. ಈಗಲೂ ಕಾಣುತ್ತಿದ್ದರೆ. ಈ ಸೇವೆಯ ರೀತಿ ಹೀಗಿದೆ.ಮೊದಲಿಗೆ ಧವಳಗಂಗೆಯಲ್ಲಿ ಮಿಂದು ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಬಂದು ವಾದಿರಾಜರ ಬೃಂದಾವನದ ಬಳಿ ಬಂದರೆ ಅಲ್ಲಿ ಅರ್ಚಕರು ಬಂದು ಆ ಕಾಯನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿ ತಂದುಕೊಡುತ್ತಾರೆ. ಆ ಸಮಯದಿಂದ ಆ ಕಾಯನ್ನು ನೆಲಕ್ಕೆ ತಾಗಿಸುವಂತಿಲ್ಲ. ಹಾಗೆಯೇ ಆ ಕಾಯನ್ನು ತೆಗೆದುಕೊಂಡು ಹೋಗಿ ಒಂದು ವಸ್ತ್ರದಲ್ಲಿ ಕಟ್ಟಿ ನಿಮ್ಮ ಟೊಂಕಕ್ಕೆ ಕಟ್ಟಿಕೊಳ್ಳಬೇಕು. ನಂತರ ಧವಳಗಂಗೆಯಲ್ಲಿ ಏಳು ಬಾರಿ ಮುಳುಗಿ ಮೇಲಕ್ಕೆ ಬಂದು ಮೈ ಒರೆಸಿಕೊಳ್ಳಬಾರದು. ಹಾಗೆಯೇ ಬಟ್ಟೆಯಿಂದ ನೀರನ್ನು ಮಾತ್ರ ಹಿಂಡಿ ಅದೇ ಒದ್ದೆ ಬಟ್ಟೆಯಲ್ಲಿ ಹೆಂಗಸರು ಹಣೆಗೆ ಕುಂಕುಮ ಇಟ್ಟುಕೊಂಡು, ಗಂಡಸರು ಗೋಪಿಚಂದನವನ್ನು ಹಚ್ಚಿಕೊಂಡು ಮೊದಲಿಗೆ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರಿಗೆ ನಮಸ್ಕಾರ ಹಾಕಿ ಎಡಕ್ಕೆ ತಿರುಗಿದರೆ ತುಳಸಿ ಬೃಂದಾವನ ಇದೆ ಅದಕ್ಕೆ ನಮಸ್ಕಾರ ಹಾಕಿ, ಪ್ರದಕ್ಷಿಣೆ ರೀತಿಯಲ್ಲಿ ಬಂದರೆ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ ಅದಕ್ಕೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಸಂತಾನ ಗೋಪಾಲಕೃಷ್ಣ ದೇವರ ಸನ್ನಿಧಿ ಇದೆ. ಅಲ್ಲೊಂದು ನಮಸ್ಕಾರ ಹಾಕಿ ಮುಂದೆ ಬಂದರೆ ಅರಳಿ ಕಟ್ಟೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೇದ ಮಂದಿರ ಅಲ್ಲೊಂದು ನಮಸ್ಕಾರ ಹಾಕಿ ಹಾಗೆಯೇ ಹೊರಗಿನಿಂದಲೇ ವಾದಿರಾಜರಿಗೆ ನಮಸ್ಕಾರ ಹಾಕಿ ಮುಂದಕ್ಕೆ ಸಾಗಿದರೆ ಅಲ್ಲಿ ಯತಿಗಳ ಬೃಂದಾವನಗಳಿವೆ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ನಾಗಬನ ಅಲ್ಲೊಂದು ನಮಸ್ಕಾರ, ಮುಂದೆ ಪಾಪ ವಿಮೋಚನಾ ತೀರ್ಥ ಅಲ್ಲೊಂದು ನಮಸ್ಕಾರ, ನಂತರ ಹೊರಗಿನಿಂದಲೇ ಭೂತರಾಜರಿಗೆ ನಮಸ್ಕಾರ ಹಾಕಿ ಮುಂದೆ ಬಂದರೆ ಚಂದ್ರಮೌಳೇಶ್ವರ ಸನ್ನಿಧಿ ಅಲ್ಲಿ ಒಂದು ನಮಸ್ಕಾರ ಹಾಕಿ ಮುಂದೆ ಬಂದರೆ ವೀಣೆ ಸಹಿತ ಮುಖ್ಯಪ್ರಾಣ ದೇವರು ಅಲ್ಲಿಗೆ ಒಂದು ನಮಸ್ಕಾರ ಹಾಕಿದರೆ ಒಂದು ಸುತ್ತು ಮುಗಿದಂತೆ. ಇದೆ ಪದ್ಧತಿಯಲ್ಲಿ ಒಟ್ಟು ಏಳು ಸುತ್ತು ಪ್ರದಕ್ಷಿಣೆ ಹಾಕಬೇಕು. ಅಂದರೆ ಒಟ್ಟು 49 ಸಲ ಮುಳುಗಬೇಕು. ಏಳು ಪ್ರದಕ್ಷಿಣೆಯ ನಂತರ ಮೇಲಕ್ಕೆ ಬಂದು ರಮಾತ್ರಿವಿಕ್ರಮ ದೇವರಿಗೆ ತಮ್ಮ ಶಕ್ತ್ಯಾನುಸಾರ ಪ್ರದಕ್ಷಿಣೆ ನಮಸ್ಕಾರ ಹಾಕಬೇಕು. ನಂತರ ಧವಳಗಂಗೆ ಬಲೆ ಬಂದು ಟೊಂಕಕ್ಕೆ ಕಟ್ಟಿದ್ದ ಆ ಕಾಯನ್ನು ವಸ್ತ್ರದ ಸಮೇತ ಹಾಗೆಯೇ ಬಿಚ್ಚಿ ಅಲ್ಲೇ ಪಕ್ಕದಲ್ಲಿ ಇರುವ ಮುಖ್ಯಪ್ರಾಣ ದೇವರ ಗುಡಿಯ ಕಟ್ಟಡಕ್ಕೆ ಇರುವ ಕಂಬಿಗಳಿಗೆ ಕಟ್ಟಬೇಕು. ನಂತರ ಸ್ನಾನ ಮಾಡಿ ಒಣಗಿದ ವಸ್ತ್ರವನ್ನು ಉಟ್ಟಿ ವಾದಿರಾಜರ ಸನ್ನಿಧಿಗೆ ಬಂದು 108 ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು. ಇಲ್ಲೂ ಅಷ್ಟೇ ಶಕ್ತಿ ಇದ್ದರೆ ಒಮ್ಮೆಲೇ 108 ಹಾಕಬಹುದು ಇಲ್ಲದ್ದಿದ್ದರೆ ಊಟವಾದ ನಂತರವೂ ಹಾಕಬಹುದು. ಇಷ್ಟು ಮಾಡಿದರೆ ಒಂದು ದಿನದ ಸೇವೆ ಮುಗಿಯುವುದು. ಈ ರೀತಿ 3,5,7 ಹೀಗೆ ಬೆಸ ಸಂಖ್ಯೆಯಲ್ಲಿ ತಮ್ಮ ಶಕ್ತ್ಯಾನುಸಾರ ದಿನಗಳಷ್ಟು ಸೇವೆ ಮಾಡಬಹುದು. ಸೇವೆ ಮಾಡುವ ಅಷ್ಟು ದಿವಸ ಪಾಲಿಸಬೇಕಾದ ನಿಯಮಗಳೆಂದರೆ ಒಂದೇ ಹೊತ್ತು ಊಟ, ರಾತಿಯ ಹೊತ್ತು ಫಲಾಹಾರ ಸೇವಿಸಬೇಕು, ಮಧ್ಯಾಹ್ನ ಮಲಗಬಾರದು, ಕಾಲಿಗೆ ಚಪ್ಪಲಿ ತೊಡಬಾರದು, ತಲೆಗೆ ಎಣ್ಣೆ ಹಚ್ಹ ಬಾರದು, ಮುಖ್ಯವಾಗಿ ಆ ಸ್ಥಳ ಬಿಟ್ಟು ಹೊರಗೆ ಹೋಗಬಾರದು. ಹೀಗೆ ತಾವು ಅಂದುಕೊಂಡಷ್ಟು ದಿನಗಳ ಕಾಲ ಸೇವೆಯನ್ನು ಮುಗಿಸಿದ ಮೇಲೆ ಅಂದರೆ ಮೂರು ದಿವಸ ಸೇವೆ ಇದ್ದರೆ ನಾಲ್ಕನೇ ದಿವಸ ಬೆಳಿಗ್ಗೆ ಆ ಸ್ನಾನ ಮಾಡಿ ಆ ಕಾಯನ್ನು ಬಿಚ್ಚಿಕೊಂಡು ಮರಳಿ ವಾದಿರಾಜರ ಸನ್ನಿಧಿಗೆ ಬಂದು ಅರ್ಚಕರ ಕೈಗೆ ಕೊಟ್ಟರೆ ಅವರು ಪುನಃ ಬೃಂದಾವನದ ಬಳಿ ಇಟ್ಟು ಪೂಜಿಸಿ ಕೊಡುತ್ತಾರೆ. ನಂತರ ಊರಿಗೆ ಮರಳಿದ ಮೇಲೆ ಆ ಕಾಯಿಂದ ಏನಾದರೂ ಸಿಹಿಯನ್ನು ಮಾಡಿ ಪ್ರಸಾದವಾಗಿ ಸ್ವೀಕರಿಸಬೇಕು.
ಭೂತರಾಜರ ಸ್ತೋತ್ರ –
“ರಕ್ತಂ ವಿಚಿತ್ರವಸನಂ ಮಣಿಕುಂಡಲಾಡ್ಯಂ ಬಂದೂಕಪುಷ್ಪ ಸದ್ರುಶಾಧಾರ ಪಾಣಿಪಾದಂ
ಉದ್ಯದ್ದಿನೇಶ ಕರುಣಾರುಣ ದೇಹಭಾಜಾಂ ನಾರಾಯಣಂ ನಮತಾಂ ಚಾಪಶರಾನ್ ಧಧಾನಂ”
ದಟ್ಟ ಕಾಡಿನ ನಟ್ಟ ನಡುವಿನ ರಮಣೀಯ ‘ತಪೋವನ’
ಶ್ರೀ ಕ್ಷೇತ್ರ ಸೋಂದಾ ವಾದಿರಾಜ ಮಠದಿಂದ ಆರು ಕಿಲೋಮೀಟರ್ ದೂರದಲ್ಲಿನ ಅದ್ಭುತವಾದ ಪವಿತ್ರ ಕ್ಷೇತ್ರ ತಪೋವನ. ಇಡೀ ಭಾರತ ಖಂಡದ ಯತಿಗಳಲ್ಲಿ ಬೃಂದಾವನ ಹೊಂದಿದವರಲ್ಲಿ ಮೊದಲಿಗರಾದ ವಾದಿರಾಜ ಸ್ವಾಮಿಗಳು ತಪಸ್ಸು ಮಾಡಿದ ಪುಣ್ಯ ಪ್ರದೇಶವದು. ದೈವಾಂಶ ಸಂಭೂತರೂ ಮಹಾಪುರುಷರೂ ಆಗಿದ್ದ ವಾದಿರಾಜ ಶ್ರೀಗಳು ನಿತ್ಯ ಪೂಜೆ ಜಪ-ತಪ ಮಾಡುತ್ತಿದ್ದ ಸ್ಥಳವೇ ಈ ತಪೋವನ. ಈ ಪ್ರದೇಶಕ್ಕೆ ಸುಮಾರು ನಾಲ್ಕುನೂರು ವರ್ಷಗಳಷ್ಟು ಇತಿಹಾಸವಿದೆ. ಶಾಲ್ಮಲಾ ನದಿಯ ಪ್ರಶಾಂತ ಪರಿಸರ, ದಟ್ಟ ಕಾಡಿನ ನಡುವಿನ ಈ ಜಾಗ ಕೆಲವರಿಗೆ ಗೊತ್ತು ಹಲವರಿಗೆ ಗೊತ್ತಿಲ್ಲ. ಆದರೆ ಈ ತಪೋವನದ ಬಗ್ಗೆ ಇರುವ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಸುವ ಪ್ರಯತ್ನ ಇದು.
ಸುತ್ತಲೂ ಕಾಡಿನಿಂದ ಆವೃತವಾಗಿರುವುದರಿಂದ ತಪೋವನಕ್ಕೆ ಬರಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಸರಿಯಾದ ನಾಮಫಲಕವಾಗಲಿ, ಸುಗಮವಾದ ರಸ್ತೆಯಾಗಲಿ ಇಲ್ಲ. ಈ ಪ್ರದೇಶಕ್ಕೆ ಬರುವುದಾದರೆ ಕಿಲೋಮೀಟರುಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲಿಯೇ ಸಾಗಬೇಕು. ಸಾಯಂಕಾಲ ಆರು ಘಂಟೆಯ ನಂತರ ತಪೋವನ ಪ್ರದೇಶಕ್ಕೆ ಯಾರೂ ಹೋಗಬಾರದೆನ್ನುವ ಪ್ರತೀತಿ ಇದೆ. ಕಾಡು ಪ್ರಾಣಿಗಳಿಂದ ತೊಂದರೆಯಾಗಬಹುದು ಎನ್ನುವುದು ಒಂದು ಕಾರಣವಾದರೆ, ಇದು ಶಕ್ತಿಶಾಲಿ ಭೂತರಾಜ ಕ್ಷೇತ್ರವಾಗಿರುವುದೂ ಮತ್ತೊಂದು ಕಾರಣ. ತಪೋವನ ಕೇವಲ ಪುಣ್ಯ ಸ್ಥಳ ಮಾತ್ರವೇ ಅಲ್ಲ, ಸೈಸಗರ್ಿಕ ಹಚ್ಚಹಸಿರಿನಿಮದ ಹಾಗೂ ದೈವೀಶಕ್ತಿಯಿಂದ ಕೂಡಿರುವುದರಿಂದ ಮನಸ್ಸಿಗೆ ಮುದ, ಸುಖ, ಶಾಂತಿ, ನೆಮ್ಮದಿ, ಮನೋನಿಗ್ರಹ ಅರಸಿ ಬರುವ ಭಕ್ತರಿಗೆ ಸೂಕ್ತ ಸ್ಥಳವಿದು. ಶಾಲ್ಮಲಾ ನದಿಯಲ್ಲಿ ಪುಣ್ಯ ತೀರ್ಥ ಸ್ನಾನ ಮಾಡಿ ಪುನೀತರಾಗಲು ಮತ್ತು ಶ್ರೀ ವಾದಿರಾಜರ ಅನುಗ್ರಹ ಪಡೆಯಲು ತಪೋವನಕ್ಕೆ ಭೇಟಿ ನೀಡಲೇ ಬೇಕು. ಯಾವುದೇ ತೊಂದರೆಗಳಿದ್ದರೂ ಕೂಡಾ ಸೋಂದಾ ಮಠದಲ್ಲಿನ ಸೇವೆಯಿಂದ ಇಷ್ಟಾರ್ಥಗಳು ನೆರವೇರುತ್ತವೆ. ಮಳೆಗಾಲದಲ್ಲಿ ಇಲ್ಲಿ ಬರುವುದು ಅಸಾಧ್ಯ.
ತಪೋವನದಲ್ಲಿ ವಾದಿರಾಜ ಪೀಠವಿದೆ. ಶ್ರೀ ವಾದಿರಾಜರು ಸತತ ಹನ್ನೆರಡು ವರ್ಷಗಳ ಕಾಲ ಪ್ರತಿದಿನ ಬಂದು ಸ್ನಾನ, ಸಂಧ್ಯಾವಂದನೆ ಮುಗಿಸಿಕೊಂಡು ಧ್ಯಾನಾಸಕ್ತರಾಗುತ್ತಿದ್ದರು. ಪೀಠದ ಪಕ್ಕದ ಬಂಡೆಯಲ್ಲಿ ಒರಳುಕಲ್ಲು ಇದೆ. ಅದು ಆ ಕಾಲದಲ್ಲಿ ಹಯಗ್ರೀವ ಪ್ರಸಾದ ತಯಾರಿಸಲು ರುಬ್ಬಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಯಾಗಿತ್ತು. ವಾದಿರಾಜರ ಇಷ್ಟದೈವ ಹಯಗ್ರೀವ ದೇವರಿಗೆ ಇಲ್ಲಿಯೇ ಹಯಗ್ರೀವ ಮಾಡಿಕೊಂಡು ದೇವರಿಗೆ ಸಮಪರ್ಿಸಿ ಮಠಕ್ಕೆ ಮರಳುತ್ತಿದ್ದರು. ಮತ್ತೊಂದು ಬಂಡೆಯ ಮೇಲೆ ವಾದಿರಾಜರ ಪಾದ, ಹಯಗ್ರೀವ ದೇವರು, ಐದು ಲಿಂಗಗಳು ಹಾಗೂ ಒಂದು ನಂದಿಯ ಕೆತ್ತನೆಯ ಚಿತ್ರಣ ಕಾಣಬಹುದು. ಶ್ರೀ ಮಂಜುನಾಥೇಶ್ವರ, ವಿಶ್ವನಾಥ, ಮಹಾಬಲೇಶ್ವರ, ಅನಂತೇಶ್ವರ, ಚಂದ್ರಮೌಳೀಶ್ವರ ಅಲ್ಲಿರುವ ಐದು ಲಿಂಗಗಳು. ಇಲ್ಲೇ ಸ್ವಲ್ಪ ದೂರದಲ್ಲಿ ಶ್ರೀಗಳು ತಪಸ್ಸು ಮಾಡಿದ ಗುಹೆ, ಹನುಮನ ವಿಗ್ರಹ ಇದೆ. ಮತ್ತೊಂದು ಕಲ್ಲಿನ ಶಿಲಾ ಶಾಸನದ ಮೇಲೆ “ಶುಭಮಸ್ತು ಶಾಲಿವಾಹನ ಶಕ 1551 ಶ್ರೀಮುಖ ಸಂವತ್ಸರದ ವೇದನಿಧಿ ಶ್ರೀ ಪಾದಂಗಳು” ಎಂದು ಬರೆಯಲಾಗಿದೆ. ಅಂದರೆ ವೇದನದಿತೀರ್ಥರು- ಲಿಂಗಗಳು ಹಾಗೂ ನಂದಿಯ ಚಿತ್ರಗಳನ್ನು ಕೆತ್ತಿಸಿದ್ದಾಗಿ ಉಲ್ಲೇಖವಾಗಿರಬಹುದು. ಇನ್ನೊಂದು ಕಡೆಯಲ್ಲಿ ಶ್ರೀ ವಾದಿರಾಜರು ಕಡ್ಲೆ ಬೆಲ್ಲ ಹರಿವಾಣದಲ್ಲಿ ಇಟ್ಟುಕೊಂಡು ಪ್ರಸಾದ ತಯಾರಿಸಿದಾಗ ದೇವರೇ ಅಶ್ವದ ರೂಪದಲ್ಲಿ ಬಂದು ಸ್ವೀಕರಿಸುತ್ತಿದ್ದರು. ಅದರ ಕುರುಹಾಗಿ ಕಲ್ಲು ಬಂಡೆಯ ಮೇಲೆ ಕುದುರೆಯ ಕಾಲಿನ ಅಚ್ಚು ಇದ್ದು ಅದನ್ನು ಈಗಲೂ ಕಾಣಬಹುದಾಗಿದೆ.
ಈ ತಪೋವನದ ಮತ್ತೊಂದು ನಿಸರ್ಗನಿರ್ಮಿತ ಅಚ್ಚರಿಯೆಂದರೆ ಯತಿಗಳು ಸೂರ್ಯನಮಸ್ಕಾರ ಮಾಡುತ್ತಿದ್ದರು ಎನ್ನಲಾಗುವ ಜಾಗ. ಬಂಡೆಕಲ್ಲೊಂದು ಎಷ್ಟೋ ವರ್ಷಗಳಿಂದ ಸ್ವಲ್ಪವೂ ಸವಕಳಿಯಾಗದೇ ಒಬ್ಬರು ಆ ಕಲ್ಲಿನ ಒಳಗೆ ತೂರಿಕೊಂಡು ಹೊರಬರಬಹುದಾದಂತ ಕೆತ್ತನೆಯಲ್ಲಿದ್ದು ಪೂರ್ವಕ್ಕೆ ಸೂರ್ಯನು ಕಾಣುವಂತೆ ನಮಸ್ಕರಿಸಲು ಅನುವಾಗುವಂತೆ ಆಕಾರವನ್ನು ಹೊಂದಿದೆ. ವಾದಿರಾಜ ಸ್ವಾಮಿಗಳು ದಿನಂಪ್ರತಿ 21 ಸೂರ್ಯ ನಮಸ್ಕಾರ ಮಾಡುತ್ತಿದ್ದ ಜಾಗವದು. ಇಂದಿನ ಭಕ್ತರಿಗೆ ಏನಾದರೂ ಹೇಳಿಕೆಗಳಿದ್ದರೆ ನೀರನ್ನು ಪ್ರೋಕ್ಷಣೆ ಮಾಡಿಕೊಂಡು ಮನಸಿನಲ್ಲಿ ಪ್ರಾರ್ಥನೆ ಮಾಡಿ ಇಲ್ಲಿ ಬಂದು ಒಂದು ಸೂರ್ಯನಮಸ್ಕಾರ ಮಾಡಬೇಕು. ಬೇಡಿಕೆ ಈಡೇರಿದರೆ ಮರುವರ್ಷ ಎರಡು ನಮಸ್ಕಾರ ಮಾಡಬೇಕು ಎನ್ನುವ ಪ್ರತೀತಿ ಇದೆ.
ಹಾಗೆಯೇ ಯತಿಗಳು ಅಲ್ಪ ಉಪಹಾರ ಮಾಡಿದ ಜಾಗವಿದೆ. ಅಲ್ಲಿ ಕುಳಿತು ನಾಮಸ್ಮರಣೆ ಮಾಡಬೇಕು. ತಪಸ್ಸು ಮಾಡಿದ ಜಾಗವೂ ಇದೆ. ಆ ಭಾಗಕ್ಕೆ ಮುಖ ಮಾಡಿಕೊಂಡು ಕಣ್ಮುಚ್ಚಿ ಕುಳಿತುಕೊಂಡರೆ ಯಾವುದೇ ಆಲೋಚನೆಗಳಿಲ್ಲದ ಸುಂದರ ಪ್ರದೇಶದಲ್ಲಿ ವಿಹರಿಸುತ್ತಿರುವಂತೆ ಅನಿಸುತ್ತದೆ. ಒಂದು ರೀತಿಯ ಕಂಪನದ ಅನುಭವವಾಗುತ್ತದೆ. ಈ ತಪೋವನಕ್ಕೆ ಎಲ್ಲರಿಗೂ ಬರಲಾಗದು. ಗುರುಗಳು ಕರೆಸಿಕೊಂಡರೆ ಮಾತ್ರ ಸಾಧ್ಯ. ಭೂತರಾಜರ ಮಹಿಮೆಯಿರುವ ಈ ಕ್ಷೇತ್ರದಲ್ಲಿ ಯಾವುದೇ ಅನೈತಿಕ ಕಾರ್ಯಗಳೂ ಆಗುವುದಿಲ್ಲ. ಪ್ರವಾಸಿಗರು ಸುಖವಾಗಿ ಬರುವಂತಹ ಜಾಗ ಇದಲ್ಲ್ಲ, ಬರಬೇಕೆಂದರೆ ಕಷ್ಟ ಪಟ್ಟು ಬರಬೇಕು. ಬೆಂಗಳೂರು, ಹುಬ್ಬಳ್ಳಿ ಭಾಗದ ಜನರೇ ಇಲ್ಲಿ ಜಾಸ್ತಿ ಬರುತ್ತಿರುತ್ತಾರೆ. ಈ ಪ್ರದೇಶದಲ್ಲಿ ಬರುವಾಗ ಶಾಲ್ಮಲಾ ನದಿಯು ಹರಿದು ಬರುವಾಗ ಅನೇಕ ಕಡೆಗಳಲ್ಲಿ ಹರಿದು ತಪೋವನದ ಬಳಿಯ ಒಂದು ಪ್ರದೇಶದಲ್ಲಿ ಮರದ ಬೇರುಗಳ ನಡುವಿನಿಂದ ಹರಿಯುತ್ತಾಳೆ. ಆ ನೈಸರ್ಗಿಕ ನೀರು ಕುಡಿದರೆ ಆಯಾಸವಾಗುವುದಿಲ್ಲ ಎನ್ನುವ ನಂಬಿಕೆ ಭಕ್ತರದ್ದು. ಆ ನೀರಿನಿಂದ ಮುಖವನ್ನು ತೊಳೆದರೆ ಮುಖದಲ್ಲಿನ ಸಣ್ಣಪುಟ್ಟ ಕಲೆಗಳು ತೊಲಗುತ್ತವೆ ಹಾಗೂ ಕಾಂತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಈ ಸ್ಥಳದ ಕುರಿತಂತೆ ಅನೇಕ ನೈಜ ಪವಾಡಗಳ ನಡೆದಿವೆ. ಸ್ವಯಂ ಅನುಭವಿಸಿದ ಭಕ್ತರು ಇಲ್ಲಿ ನಮಗೆ ಸಿಗುತ್ತಾರೆ. ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದಾಗ ನಾಯಿಯೊಂದು ದಾರಿ ತೋರಿಸಿದ ಅನುಭೂತಿ ಬಂದವರು, ಮಗು ಕಳೆದುಕೊಂಡಾಗ ಯತಿಗಳೇ ಮಗುವನ್ನು ಕಾಡಿನಿಂದ ಆಚೆ ಕರೆದುಕೊಂಡು ಬಿಟ್ಟಿದ್ದು ಹೀಗೆ ಹಲವಾರು ಘಟನೆಗಳ ಬಗ್ಗೆ ಅನುಭವಿಸಿದ ಸಾಕ್ಷಿದಾರರು ಕಾಣಸಿಗುತ್ತಾರೆ. ಒಮ್ಮೆ ಬಂದ ಭಕ್ತಾಧಿಗಳು ಮತ್ತೆ ಮತ್ತೆ ಈ ಪ್ರದೇಶಕ್ಕೆ ಬರಲು ಇಷ್ಟಪಡುತ್ತಾರೆ. ಅನೇಕ ಅಚ್ಚರಿಗಳ ಒಳಗೊಂಡಿರುವ, ಸೌಂದರ್ಯದಿಂದ ಕೂಡಿರುವ ಈ ತಪೋವನದ ಕುರಿತಂತೆ ಇರುವ ಸತ್ಯವೊಂದಿದೆ. ಎತ್ತಲೆತ್ತಲಿನಿಂದಲೋ ಬಂದು ಶ್ರೀ ವಾದಿರಾಜರು ತಪಸ್ಸು ಮಾಡಿದ ಜಾಗವೆಂದು ಹುಡುಕಿಕೊಂಡು ನೋಡಿ ಹೋಗುವ ಭಕ್ತರಿಗೆ, ಪ್ರವಾಸಿಗರಿಗೆ ಪರಿಚಿತವಾಗಿರುವ ತಪೋವನ ಸ್ಥಳವು ಶಿರಸಿಯ ಬಹುತೇಕರಿಗೆ ನೋಡಿ ಗೊತ್ತೇ ಇಲ್ಲವೆಂಬುದು ಆಶ್ಚರ್ಯವಾದರೂ ಸತ್ಯ.
“ರಾಮಾಚಾರ್ಯರೇ!! ನಿಮ್ಮ ದಂಪತಿಗಳ ಸೇವೆ ಭಗವಂತನಿಗೆ ಮುಟ್ಟಿದೆ.. ಶ್ರೀ ಭೂವರಾಹನ ಅನುಗ್ರಹದಿಂದ, ನಿಮಗೊಬ್ಬ ಪುತ್ರ ಜನಿಸುತ್ತಾನೆ. ಆದರೆ ಜನಿಸಿದ ಆ ಪುತ್ರ ನಮ್ಮ ಶ್ರೀ ಭೂವರಾಹನ ಸೇವೆಗಾಗಿ ಮತ್ತು ಸಂಸ್ಥಾನ ಆಳುವದಕ್ಕಾಗಿ ಮತ್ತು ಲೋಕದ ಜನರ ಉದ್ಧಾರಕ್ಕಾಗಿ ಅವನ ಅವತಾರ.ಇದು ಭಗವಂತನ ಸಂಕಲ್ಪ. ಮತ್ತು ಬಾಲಕನು ಹುಟ್ಟುವಾಗ ಭೂ ಸ್ಪರ್ಶವಾಗದಂತೆ ತಂದು ನಮಗೆ ಒಪ್ಪಿಸಬೇಕು”.
ಶ್ರೀ ವಾಗೀಶತೀರ್ಥ ಗುರುಗಳ ಬಾಯಿಯಿಂದ ಬಂದ ಮಾತನ್ನು ಕೇಳಿ ದಂಪತಿಗಳಿಗೆ ಮಾತು ಬರದಾಯಿತು. ಪುತ್ರ ಜನನವಾಗಬೇಕೆಂದು ದಂಪತಿಗಳು ಮಾಡದ ವ್ರತಗಳಿಲ್ಲ. ದೇವರಿಗೆ ಲಕ್ಷ ಆಭರಣ ಮಾಡಿಸುವೆ ಎಂದು ಅಂದುಕೊಂಡ ಹರಕೆ. ಇದಕ್ಕಾಗಿಯೇ?!! ಅಯ್ಯೋ!! ವಿಧಿಯೇ!! ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಯಿತಲ್ಲ.ಪುತ್ರ ಜನನವಾಗುತ್ತದೆ ಎಂದು ಸಂತಸ ಪಡಬೇಕೊ ಅಥವಾ ಜನಿಸಿದ ಪುತ್ರನನ್ನು ಮಠಕ್ಕೆ ಒಪ್ಪಿಸಬೇಕಲ್ಲ ಎಂದು ದುಃಖ ಪಡಬೇಕೊ?? ಒಂದು ತಿಳಿಯದೆ ಮನದೊಳಗಡೆ ಈ ರೀತಿ ವಿಚಾರ ಮಾಡುತ್ತಾ ಕುಳಿತರು ಆ ದಂಪತಿಗಳು.
ಜ್ಞಾನಿಗಳಾದ ಶ್ರೀ ವಾಗೀಶ ತೀರ್ಥರು
ರಾಮಾಚಾರ್ಯರೇ!! ಏಕೆ ಅಷ್ಟು ಚಿಂತೆ ಮಾಡುತ್ತೀರಿ. ಒಂದು ಕೆಲಸ ಮಾಡುವ. ನಿಮ್ಮ ಮಗ ನಿಮ್ಮ ಮನೆಯ ಒಳಗಡೆ ಜನಿಸಿದರೆ ನಿಮಗೆ ಸೇರಿದ್ದು .ಮನೆಯ ಹೊರಗಡೆ ಜನಿಸಿದರೆ ನಮಗೆ ಸೇರಿದ್ದು.ನಿಮಗೆ ಒಪ್ಪಿಗೆಯೆ..” ಎಂದಾಗಆ ದಂಪತಿಗಳು ಯೋಚನೆ ಮಾಡಿ: ಎಲ್ಲಿಯಾದರು ಮಗು ಮನೆಯಲ್ಲಿ ಬಿಟ್ಟು ಹೊರಗಡೆ ಜನಿಸುವದೇ! ಹಾಗೇ ಆಗಲಿ ಎಂದು ಮಾತು ಕೊಟ್ಟು ಮನೆಗೆ ಬಂದರು.
ಶ್ರೀ ಹರಿಯ ಸೇವೆ ಮಾಡಿದ ಫಲ ಮತ್ತು ಗುರುಗಳ ವಾಣಿಯಂತೆ ಗೌರಿದೇವಿಯು ಗರ್ಭಿಣಿಯಾದಳು. ಹೆಂಡತಿಗೆ ಮನೆಯ ಹೆಬ್ಬಾಗಿಲು ಸಹ ಆಚಾರ್ಯರು ದಾಟಿಸಲಿಲ್ಲ. ನವ ಮಾಸ ತುಂಬಿತು.
ಅಂದು ಸಾಧನ ದ್ವಾದಶಿ. ಮಾಘಮಾಸದ ಶುಕ್ಲ ದ್ವಾದಶಿಯ ದಿನದಂದು ಬೇಗನೆ ಪೂಜಾದಿಗಳನ್ನು ಮುಗಿಸಿ ನಿಗದಿತ ಸಮಯದೊಳಗೆ ಪಾರಣೆ ಮಾಡಲು ಆಚಾರ್ಯರು ಭೋಜನಕ್ಕೆ ಕುಳಿತರು. ಪತಿಯ ಭೋಜನ ನಂತರ ಪತ್ನಿಯ ಭೋಜನದ ಪದ್ದತಿ ಗೌರಿದೇವಿಯದು. ಹೀಗಿರುವಾಗ ಅವರ ಮನೆಯ ಮುಂದೆ ಬೆಳೆದು ನಿಂತ ಗದ್ದೆಯಲ್ಲಿ ಪೈರನ್ನು ತಿನ್ನಲು ಒಂದು ಆಕಳು ಕರುವಿನ ಸಮೇತ ಬಂದಿದೆ. ಗೌರಿದೇವಿಯು ನೋಡುತ್ತಾ ಪತಿಗೆ ಹೇಳುತ್ತಾರೆ. ಇರುವ ಸ್ವಲ್ಪ ಬೆಳೆಗಳನ್ನು ತಿನ್ನಲು ಗೋವು ಬಂದಿದೆ. ಹೋಗಿ ಓಡಿಸಿ ಬರುತ್ತೇನೆ ಅಂತ. ರಾಮಾಚಾರ್ಯರು ಎಂದು ಗರ್ಭಿಣಿ ಪತ್ನಿಯನ್ನು ಹೊರಗಡೆ ಕಳುಹಿಸಿದವರಲ್ಲ. ದೈವ ಪ್ರೇರಣೆಯಿಂದ ಗೌರಿ! ಒಂದು ಸಣ್ಣ ಕೋಲನ್ನು ತೆಗೆದುಕೊಂಡು ಹೋಗಿ ಓಡಿಸು. ತುಂಬಾ ದೂರ ಹೋಗಬೇಡ. ಬೇಗನೆ ಪಾರಣಿ ಮುಗಿಸಿ ಬರುತ್ತೇನೆ ಅಂತ ಹೇಳುತ್ತಾರೆ.
ಅದರಂತೆ ಸಣ್ಣ ಕೋಲನ್ನು ತೆಗೆದುಕೊಂಡು ಆಕಳನ್ನು ಓಡಿಸಲು ಬಂದಾಗ ಅದು ತಕ್ಷಣ ಮಾಯವಾಗುತ್ತದೆ. ಇದ್ದಕ್ಕಿದ್ದಂತೆ ಪ್ರಸವ ವಾಗುವ ಸೂಚನೆ ಕಾಣುತ್ತವೆ. ಹಾಗೆ ಒಂದು ಕಡೆ ಕುಳಿತಾಗ ಶ್ರೀ ವಾಗೀಶ ಗುರುಗಳ ಆಜ್ಞೆ ಯಂತೆ ಸ್ತ್ರೀಯರು ಪ್ರಸವ ಮಾಡಿಸಲು ಅಲ್ಲಿ ಬಂದಿರುತ್ತಾರೆ. ಗೌರಿದೇವಿಯು ಯಾವುದೇ ಪ್ರಸವ ವೇದನೆ ಇಲ್ಲದೇ ಸುಂದರವಾದ 32 ಲಕ್ಷಣ ಭರಿತವಾದ ಮಗುವೊಂದಕ್ಕೆ ಜನ್ಮವಿತ್ತಳು. ಅಂದು ಮಾಘ ಶುದ್ಧ ದ್ವಾದಶಿ. ಲಾತವ್ಯನಾಮಕ ಋಜುಗಳಾದ ಶ್ರೀ ವಾದಿರಾಜರು ಅವತರಿಸಿದ ಸುದಿನ. ಅವರೇ ನಮ್ಮ ಇಂದಿನ ಕಥಾ ನಾಯಕರು.
ಇದು ಯಾವುದು ರಾಮಾಚಾರ್ಯರು ತಿಳಿಯದು. ಬೇಗನೆ ಬಂದು ನೋಡುತ್ತಾರೆ. ಗೌರಿದೇವಿಯು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಳೆ. ಜನಿಸಿದ ಮಗು ಭೂ ಸ್ಪರ್ಶವಾಗದೆ ಚಿನ್ನದ ಹರಿವಾಣದಲ್ಲಿ ಆ ಸ್ತ್ರೀಯರ ಕೈಯಲ್ಲಿ ಇದೆ. ತಾಯಿ!! ನೀನೆಂತಹ ಪುಣ್ಯವತಿ. ಶ್ರೀ ವಾಗೀಶತೀರ್ಥರು ತಮ್ಮ ದಿವ್ಯ ಜ್ಞಾನದಿಂದ ವಿಷಯವನ್ನು ತಿಳಿದು ನಮಗೆ ಇಲ್ಲಿ ಕಳುಹಿಸಿದರು ಅಂತ ಹೆಣ್ಣುಮಕ್ಕಳು ಹೇಳಿ ಶುದ್ದ ಸ್ನಾನವನ್ನು ಮಗುವಿಗೆ ಮಾಡಿಸಿ, ಪಲ್ಲಕ್ಕಿ ಒಳಗಡೆ ಚಿನ್ನದ ಹರಿವಾಣ ಸಮೇತವಾಗಿ ಕರೆದುಕೊಂಡು ಗುರುಗಳ ಬಳಿ ಬರುತ್ತಾರೆ.
ಇತ್ತ ಇನ್ನೊಂದು ಪಲ್ಲಕ್ಕಿ ಯಲ್ಲಿ ಗೌರಿದೇವಿಯನ್ನು ಮನೆಗೆ ತಲುಪಿಸುವರು. ನಂತರ ಗುರುಗಳು ರಾಮಾಚಾರ್ಯರನ್ನು ಕರೆದು ನೋಡಿದಿರಾ!! ಮಗು ನಿಮಗೆ ಸೇರಬೇಕು ಎಂದು ಗರ್ಭಿಣಿಯಾದ ನಿಮ್ಮ ಪತ್ನಿಯನ್ನು ಹೊರಗಡೆ ಸಹ ಕಳುಹಿಸಿದ ಹಾಗೆ ಪ್ರಯತ್ನ ಮಾಡಿದಿರಿ. ಆದರೂ ಭಗವಂತನ ಸಂಕಲ್ಪ. ಅದರಂತೆ ನಿಮ್ಮ ಪತ್ನಿಗೆ ಗದ್ದೆಯಲ್ಲಿ ಪ್ರಸವವಾಗುವಂತೆ ಆಯಿತು. ಇವನು ನಿಮ್ಮ ಮಗನಲ್ಲ. ಶ್ರೀ ಭೂವರಾಹದೇವರ ಮಗ. ನಮಗೆ ಒಪ್ಪಿಸುವಿರಾ!! ಎಂದು ಕೇಳುತ್ತಾರೆ. ನಂತರ ಪುತ್ರ ವಾತ್ಸಲ್ಯವನ್ನು ತೊರೆದು ಗುರುಗಳಿಗೆ ದಂಪತಿಗಳು ಇಬ್ಬರು ಮಗುವನ್ನು ಸಮರ್ಪಣೆ ಮಾಡಿದರು. ಶ್ರೀ ವಾಗೀಶ ತೀರ್ಥ ಗುರುಗಳು ನಂತರ ಆ ಮಗುವಿಗೆ ಭೂವರಾಹ ಎಂದು ನಾಮಕರಣ ಮಾಡಲು ಹೇಳಿ ಕೆಲದಿನಗಳ ಕಾಲ ಬಾಲಕನ ಲೀಲೆಯಿಂದ ಸುಖವನ್ನು ಹೊಂದಿ, ನಂತರ ಮಗುವಿಗೆ ಮಾಡಬೇಕಾದ ಜಾತ ಕರ್ಮಗಳನ್ನು ಮಾಡಿ ಐದು ವರುಷದ ನಂತರ ನಮಗೆ ಒಪ್ಪಿಸಿ ಎಂದು ಹೇಳಿ ನಿತ್ಯವು ಭೂವರಾಹ ದೇವರಿಗೆ ಅಭಿಷೇಕ ಮಾಡಿದ ಗೋ ಕ್ಷೀರವನ್ನು ಮಗುವಿಗೆ ಕಳುಹಿಸುತ್ತಾ ಇದ್ದರು. ಹೀಗೆ ನಮ್ಮ ಶ್ರೀ ವಾದಿರಾಜ ಗುರುಗಳ ಜನನದ ವೃತ್ತಾಂತವನ್ನು ನನಗೆ ತಿಳಿದಷ್ಟು ಒಪ್ಪಿಸುವ ಪುಟ್ಟ ಪ್ರಯತ್ನ. ಶ್ರೀ ವಾದಿರಾಜರು ಅಂತರ್ಯಾಮಿಯಾದ ಆ ಹಯವದನನು ಪ್ರೀತಿಯಾಗಲಿ.
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು|
ಮುನಿ ವಾದಿರಾಜರ ಸಾಮಾನ್ಯ ರೆಂತೆಂದು| ಎಣಿಸಿದವರನ್ನು ಘನವಾಗಿ ಶಿಕ್ಷಿಪ|
ಇನತನುಜೋದ್ಬವ ಕೋಪದಿಂದ|
ವಾದಿರಾಜರ ಮಹಿಮೆಯನ್ನು ಕೊಂಡಾಡಿ ಅನುದಿನ ಸುಜನರು||
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: WhatsApp: 9481252093 – info@kalpa.news
Discussion about this post