ಪ್ರೋಷ್ಟಪದಿಯ ಇನ್ನೊಂದು ಹೆಸರು ಭಾದ್ರಪದಮಾಸ… ಈ ಭಾದ್ರಪದಮಾಸದಲ್ಲಿಯೇ ಪರೀಕ್ಷಿತರಾಜನು ಭಾಗವತ ಕೇಳಿದ್ದರಿಂದಲೇ ಇದಕ್ಕೆ ಪ್ರೋಷ್ಟಪದಿ ಭಾಗವತ ಅಂತ ಕರೆಯಲಾಗಿದೆ. ಭಾಗವತ ಎಂದರೆ ಶ್ರೀಹರಿಯ ಮಹಿಮೆಯನ್ನು ತಿಳಿಸುವ ಚರಿತ್ರೆ. ಭಾದ್ರಪದ ಮಾಸವನ್ನು ಪ್ರೋಷ್ಠಪದ ಮಾಸ ಅನ್ನುತ್ತಾರೆ. ಭಾದ್ರಪದ ಮಾಸದಲ್ಲಿ ಶ್ರೀಶುಕಾಚಾರ್ಯರು ಪರಿಕ್ಷಿತ್ ಮಹಾರಾಜರಿಗೆ ಭಾಗವತ ಪುರಾಣವನ್ನು ಭೋಧಿಸಿದರು ಎನ್ನಲಾಗುತ್ತದೆ. ಆದ್ದರಿಂದ ಈ ಮಾಸದಲ್ಲಿ ಭಾಗವತ ಪ್ರವಚನಗಳಿಗೆ ವಿಶೇಷ ಮಹತ್ವ ಇದೆ.
ಈ ಹಿನ್ನೆಲೆಯಲ್ಲಿ ಭಾಗವತ ಕುರಿತಾಗಿ ಖ್ಯಾತ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ಬರೆದಿರುವ ಅರ್ಥಪೂರ್ಣ ಲೇಖನವನ್ನು ಇಂದಿನಿಂದ ಐದು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ.
ಭಾಗವತ ಎಂದರೆ ಭಗವಂತನ ಬಗ್ಗೆ ತಿಳಿಸಿಕೊಡುವ ಒಂದು ಮಹಾ ಗ್ರಂಥ. ಇದರಲ್ಲಿ ಕೇವಲ ಭಗವಂತನ ಬಗ್ಗೆ ಮಾತ್ರ ಇಲ್ಲ ಜೊತೆಗೆ ಭಕ್ತ ಮತ್ತು ಸಾಧಕರ ಭಗವಂತನ ಒಲಿಸಿಕೊಳ್ಳುವ ಬಗ್ಗೆಯೂ ಸಂಪೂರ್ಣವಾಗಿ ಇದರಲ್ಲಿ ಮಾಹಿತಿ ದೊರೆಯುತ್ತದೆ. ಅಂತಹ ಸಾಧಕರ ಬದುಕು ನಮಗೆ ಮಾರ್ಗದರ್ಶನ ಆಗಿರುತ್ತದೆ. ಅನೇಕ ಜನ್ಮಗಳ ಸುಕೃತದ ಫಲ ನಮಗೆ ಮಾನವ ಜನ್ಮ ಬಂದಿರುತ್ತದೆ. ನಾವು ಬಂದದ್ದು ಭಗವಂತನಿಂದ ಮತ್ತು ನಾವು ಸೇರಬೇಕಾದದ್ದು ಆ ಭಗವಂತನ ಲೋಕವನ್ನು ಸೇರಬೇಕು. ಅದಕ್ಕಾಗಿ ನಮ್ಮ ಸಾಧನೆ ಸೇವೆ ಎಲ್ಲವೂ ಆ ದಿಕ್ಕಿನಲ್ಲಿ ಸಾಗಬೇಕು. ಇದಕ್ಕೆ ಪ್ರಮುಖವಾದ ರಹದಾರಿ ಎಂದರೆ ಶ್ರೀಮದ್ ಭಾಗವತ.
ಈ ಭಾಗವತ ಪುರಾಣವನ್ನು ಕಲಿಯುಗದ ಪ್ರಾರಂಭದಲ್ಲಿ ಶ್ರೀ ವೇದವ್ಯಾಸ ದೇವರ ಪುತ್ರ ರಾದ ರುದ್ರಾಂಶರಾದ ಶ್ರೀ ಶುಕಮುನಿಗಳು ಗಂಗಾತೀರದಲ್ಲಿ ಹೇಳಲು ಪ್ರಾರಂಭ ಮಾಡಿದ್ದಾರೆ..ಸಮಸ್ತ ಹರಿ ಭಕ್ತರು,ಸಕಲ ಋಷಿಸಮೂಹ ಅಲ್ಲಿ ನೆರೆದಿದೆ.ಆಗ ಇಂದ್ರಾದಿ ದೇವತೆಗಳು ಸಹ ಅಲ್ಲಿಗೆ ಬಂದಿದ್ದಾರೆಬಂದವರು ಶುಕಮುನಿಗಳಿಗೆ ನಮಸ್ಕರಿಸಿ, “ನೀವು ಭಾಗವತವನ್ನು ಪರೀಕ್ಷಿತ ಮಹರಾಜನಿಗೆ ಯಾಕೆ ಹೇಳುತ್ತಾ ಇದ್ದೀರಿ.!!ಯಾಕೆಂದರೆ ಇವನಿಗೆ ಶಾಪ ಬಂದಿದೆ.ಸತ್ತ ಹಾವನ್ನು ಶಮೀಕ ಋಷಿಗಳ ಕೊರಳಿಗೆ ಹಾಕಿದ್ದ ಕಾರಣದಿಂದ ಅವರ ಪುತ್ರನಿಂದ ಶಾಪ ಇದೆ. ಹೇಗೊ ಅವನಿಗೆ ಏಳು ದಿನದಲ್ಲಿ ಮೃತ್ಯು ಬರುತ್ತದೆ..ಅದಕ್ಕೆ ನಾವು ಈ ಅಮೃತ ಕಲಶವನ್ನು ತಂದಿದ್ದೇವೆ.ಇದನ್ನು ಕುಡಿದು ಅವನು ಅಜರಾಮರನಾಗಲಿ…ನೀವು ಇದನ್ನು ಸ್ವೀಕರಿಸಿ ನಮಗೆ ನಿಮ್ಮ ಹತ್ತಿರ ಇರುವ ಭಾಗವತಾಮೃತವನ್ನು ಕೊಡಿ. ಪರಿಕ್ಷೀತ ಮಹರಾಜ ಈ ಅಮೃತವನ್ನು ಪಾನ ಮಾಡಲಿ.ಈ ಭಾಗವತಾಮೃತವನ್ನು ನಮಗೆ ಕೊಡಿ. ನಾವು ಪಾನ ಮಾಡುತ್ತೇವೆ.ಈ ರೀತಿಯಲ್ಲಿ ವಿನಿಮಯವನ್ನು ಮಾಡಿಕೊಳ್ಳೋಣ ಎಂದು ಹೇಳುತ್ತಾರೆ.
ಅವಾಗ್ಗೆ ಶುಕಮುನಿಗಳು ಹೇಳುತ್ತಾರೆ.”ಈ ಭಾಗವತ ಎಲ್ಲಿ?? ನೀವು ತಂದಿರತಕ್ಕಂತಹ ಅಮೃತ ಎಲ್ಲಿ?? ಯಾವುದಾದರು ವಸ್ತು ವಿನಿಮಯ ಮಾಡಿಕೊಳ್ಳುವ ಹಾಗಿದ್ದರೆ ಎರಡು ವಸ್ತುಗಳ ಸಮಾನ ವಾಗಿರಬೇಕು.ಈ ಭಾಗವತಕ್ಕು ಅಮೃತಕ್ಕು ಹೋಲಿಕೆ ಇದೆಯೇ??ಇದನ್ನು ಕುಡಿದರೆ ಮುಪ್ಪು ಬಾರದೆ ಇರಬಹುದು.ಆದರೆ ಈ ಭಾಗವತ ಮುಕ್ತಿ ಲೋಕವನ್ನು ತಂದು ಕೊಡುವಂತಹುದು…
ಪರೀಕ್ಷಿತ ಮಹರಾಜ ತಾನು ಮಾಡಿದ ಪಾಪ ಪರಿಹಾರಕ್ಕಾಗಿ ಇದನ್ನು ಶ್ರವಣ ಮಾಡುತ್ತಾ ಇದ್ದಾನೆ.ಅವನು ಮೃತ್ಯುವಿಗೆ ಹೆದರಿಲ್ಲ.ಅದು ಇಂದಲ್ಲ ನಾಳೆ ಬರುವಂತವುದು…ನಿಮಗೆ ಇದರಲ್ಲಿ ಭಕ್ತಿ ಇಲ್ಲ. ಮುಕ್ತಿ ಲೋಕವನ್ನು ತಂದು ಕೊಡುವಂತಹ ಈ ಭಾಗವತವನ್ನು ಹಣ, ಮುಂತಾದ ದ್ರವ್ಯಗಳಿಂದ ಕೊಂಡು ಕೊಳ್ಳುವ ವಸ್ತು ಅಲ್ಲ.ನೀವಿನ್ನು ಹೋಗಬಹುದು ಅಂತ ಹೇಳುತ್ತಾರೆ.ಅವಾಗ ಇಂದ್ರಾದಿ ದೇವತೆಗಳು ಅವರಲ್ಲಿ ಕ್ಷಮೆ ಯಾಚಿಸಿ ಏಳುದಿನಗಳ ಕಾಲ ಭಾಗವತ ಶ್ರವಣವನ್ನು ಮಾಡುತ್ತಾರೆ. ಏಳುದಿನವಾದ ಮೇಲೆ ಪರಿಕ್ಷೀತರಾಜನಿಗೆ ತಕ್ಷಕ ಸರ್ಪ ಕಚ್ಚಿ ಗರುಡವಾಹನ ನಾದ ಶ್ರೀ ಲಕ್ಷ್ಮೀ ನಾರಾಯಣನ ಪಾದವನ್ನು ಸೇರಿದ್ದಾನೆ..ಲಿಂಗ ದೇಹ ಸಹಿತ ನಾಗಿ ಭಗವಂತನ ಪಾದ ಮೂಲ ಸೇರಿದ್ದಾನೆ…ಈ ಭಾಗ್ಯ ಅಮೃತ ಕುಡಿದರೆ ಬರುತಿತ್ತೋ??ಈ ಭಾಗವತ ಕಾಲಾಂತರದಲ್ಲಿ ಮುಕ್ತಿ ಯನ್ನು ಕೊಡುವಂತಹುದು…
ಭಾಗವತ ಧರ್ಮ ಎಂದರೇನು?
ಮತ ಪಂಥಗಳು ಅಥವಾ ಜಾತಿಗಳು ಮಾನವ-ಕೃತ ನಿಯಮಗಳಾಗಿವೆ. ಭಾಗವತ ಮತ್ತು ವೇದಗಳು ಯಾವ ಹಂತದಲ್ಲಿಯೂ ಮತಪಂಥಗಳ ವೈಭವೀಕರಣ ಮಾಡುವುದಿಲ್ಲ. ಅವು ಕೇವಲ ಜೀವನ ಧರ್ಮಗಳನ್ನು ಪ್ರಕೃತಿ ಧರ್ಮಗಳನ್ನು ಮಾನವನ ಜೀವನದಲ್ಲಿ ಪ್ರತಿ ಸ್ಥಾಪಿಸಲು ಬಯಸುತ್ತವೆ. ಹಾಗಾಗಿ ಮಾನವ ಮತ್ತು ಮಾನವೀಯತೆಯ ಸ್ಪಂದನೆ ಯುಳ್ಳ ಮತಪಂಥಗಳ ಆಗಲಿ ಅಥವಾ ಮಾನವ ರಾಗಲಿ ಯಾವಾಗಲೂ ಸತ್ಯದ ಹಾಗೂ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿಕೊಳ್ಳುವ ಮಾಡುವ ಪ್ರಯತ್ನ ನಾವು ಇಲ್ಲಿ ಕಾಣಬಹುದು. ಇಂತಹ ವಿಚಾರಗಳು ಭಾಗವತ ಮತ್ತು ವೇದಗಳ ಅಸ್ತಿತ್ವಕ್ಕೆ ಸುಭದ್ರ ನೆಲೆಯನ್ನು ಒದಗಿಸಿಕೊಟ್ಟಿವೆ.
ಮತಪಂಥಗಳು ಎಂದು ಧರ್ಮ ಆಗಲಾರದು. ಅವು ಕೇವಲ ಸಂಪ್ರದಾಯಗಳನ್ನು ಬೆಳೆಸಿ ಪೋಷಿಸುತ್ತವೆ. ಹಾಗಾಗಿ ಅವರನ್ನು ನಾವು ದೇವರನ್ನು ಒಲಿಸಿಕೊಳ್ಳುವ ಸಾಧನವಾಗಿ ಉಪಯೋಗಿಸಿಕೊಳ್ಳಬೇಕು. ಹಾಗೆ ನಾವು ಆ ಸಂಪ್ರದಾಯಗಳನ್ನು ಪಾಲಿಸುವಾಗ ಇನ್ನೊಬ್ಬರ ಸಂಪ್ರದಾಯ ರೀತಿ ರಿವಾಜುಗಳಿಗೆ ಧಕ್ಕೆಯಾಗದಂತೆ ನಮ್ಮ ಸಾಧನೆ ಇದ್ದರೆ ಖಂಡಿತ ನಮ್ಮ ಸಂಪ್ರದಾಯ ಮತ್ತು ಮತ ಸಾತ್ವಿಕತೆಯಿಂದ ಕೂಡಿರುತ್ತದೆ. ಅದನ್ನು ತಪ್ಪಾಗಿ ಮತಾಂಧತೆಯ ಬಳಸಿದರೆ ಅದರಿಂದ ಸಮಾಜಕ್ಕೆ ದುಷ್ಪರಿಣಾಮ ಉಂಟಾಗುತ್ತದೆ. ಹಾಗಾಗಿ ನಮ್ಮ ಮತ ಪಂಥ ನಮಗೆ ಹೇಗೆ ಶ್ರೇಷ್ಠವೋ ಹಾಗೆ ನಾವು ಇನ್ನೊಬ್ಬರ ಭಾವನೆಗಳಿಗೂ ಬೆಲೆ ಕೊಡಲೇ ಬೇಕು ಆಗ ಆಗ ಪ್ರತಿ ವ್ಯಕ್ತಿಯಲ್ಲೂ ಪ್ರತಿ ಮತ ಪಂಥಗಳಲ್ಲಿ ಯೂ ಸೌಹಾರ್ದತೆ ಮೂಡುತ್ತದೆ.
ಧರ್ಮ ಎನ್ನುವುದು ಮತ ಪಂಥಗಳಿಗೆ ಬೇರೆ ಬೇರೆ ಎನ್ನುವುದು ಆಗುವುದಿಲ್ಲ. ಜಾತಿಗೆ ವರ್ಣಕ್ಕೆ ಧರ್ಮ ಇರುವುದಿಲ್ಲ. ಹಾಗೆ ಇದ್ದರೆ ಅದಕ್ಕೆ ಧರ್ಮ ಎನ್ನಲು ಆಗುವುದಿಲ್ಲ. ಧರ್ಮ ಎಂದರೆ ಸೂಕ್ಷ್ಮವಾಗಿ ಹೇಳುವುದಾದರೆ ನ್ಯಾಯಬದ್ಧವಾಗಿ ಸಮಾಜ ಮತ್ತು ನಂಬಿಕೆಗಳಿಗೆ ಧಕ್ಕೆಯಾಗದಂತೆ ನೀತಿಯುಕ್ತ ಬದುಕಿಗೆ ಧರ್ಮ ಎನ್ನಬಹುದು. ಎಲ್ಲರನ್ನು ಎಲ್ಲವನ್ನು ಪೋಷಣೆ ಮಾಡಿ ಎಲ್ಲರ ಆಧ್ಯಾತ್ಮಿಕ ಉನ್ನತಿಗೆ ಧರ್ಮ ಎನ್ನಬಹುದು.
ಇದನ್ನು ನಾವು ರಾಮಾಯಣದಲ್ಲಿ ಬರುವ ಸೀತಾ ಮಾತೆ ಮಾತಿನಿಂದ ಧರ್ಮದ ಅರ್ಥ ತಿಳಿಯಬಹುದು. ಸೀತೆಯನ್ನು ಅಪಹರಿಸಿದ ರಾವಣ ತನ್ನನ್ನು ಬಲಾತ್ಕಾರದಿಂದ ಮದುವೆಯಾಗುವಂತೆ ಆಕೆಯನ್ನು ಒತ್ತಾಯ ಮಾಡುತ್ತಾನೆ. ಹೆಂಗಸರನ್ನು ಹೊತ್ತು ಕೊಂಡು ಬರುವುದು ರಾಕ್ಷಸ ಧರ್ಮವೇ ಆಗಿದೆ ಎಂದು ತಾನು ಮಾಡಿದ ಕೃತ್ಯಕ್ಕೆ ಧರ್ಮದ ಮುಖವಾಡ ತೊಡಿಸುತ್ತಾನೆ.
ಆಗ ಸೀತಾಮಾತೆಯ ಧರ್ಮ ಎನ್ನುವುದು ಎಲ್ಲರಿಗೂ ಒಂದೇ ಆಗಿದೆ. ರಾಕ್ಷಸರಿಗೆ ಮಾನವರಿಗೆ ಮತ್ತು ದೇವತೆಗಳಿಗೆ ಬೇರೆ ಬೇರೆ ಧರ್ಮಗಳು ಇರುವುದಿಲ್ಲ. ಎಲ್ಲರಿಗೂ ಒಂದೇ ಧರ್ಮ ಇರುತ್ತದೆ. ಎಲ್ಲರಿಗೂ ನ್ಯಾಯ ನೀತಿ ಬಾಳಿನ ರೀತಿಗಳು ಒಂದೇ ಆಗಿವೆ. ಯಾರೊಬ್ಬರೂ ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ತಿರುಚುವಂತೆ ಆಗುವುದಿಲ್ಲ ಎಂದು ನೇರವಾಗಿ ಆತನಿಗೆ ಹೇಳುತ್ತಾಳೆ. ಇದು ಭಾಗವತದ ಧರ್ಮ ಆಗಿದೆ.
ಇಂತಹ ಭಾಗವತ ಧರ್ಮ ಮತ್ತು ಭಗವಂತನ ಬಗ್ಗೆ ತಿಳಿಸಿ ಕೊಡಲು ಸಾಕ್ಷಾತ್ ಭಗವಂತನ ವೇದವ್ಯಾಸರ ರೂಪದಲ್ಲಿ ಅವತರಿಸಿ ಬರುತ್ತಾರೆ. ಇಡೀ ಮಾನವ ಸಮಾಜಕ್ಕೆ ಭಗವಂತನ ಬಗ್ಗೆ ತಿಳಿಯಲು ವೇದಗಳನ್ನು ಬ್ರಹ್ಮಸೂತ್ರ ಮತ್ತು ಉಪನಿಷತ್ತುಗಳನ್ನು ಜೊತೆಗೆ 17 ಪುರಾಣಗಳನ್ನು ಬರೆಯುತ್ತಾರೆ. ವೇದವ್ಯಾಸರಿಗೆ ಇನ್ನೂ ಭಗವಂತನ ಬಗ್ಗೆ ಸರಿಯಾಗಿ ಹೇಳಿಲ್ಲ ಎಂದು ಅನಿಸುತ್ತದೆ. ಹೀಗೆ ಯೋಚಿಸುತ್ತಿರಬೇಕಾದರೆ ನಾರದಮುನಿಗಳು ಅಲ್ಲಿಗೆ ಬಂದು ವೇದವ್ಯಾಸರನ್ನು ಭಗವಂತನ ಬಗ್ಗೆ ತಿಳಿಸಿ ಸಂಪೂರ್ಣವಾಗಿ ತಿಳಿಸಲು ಶ್ರೀಮದ್ಭಾಗವತ ಗ್ರಂಥವನ್ನು ರಚಿಸಲು ಕೇಳಿಕೊಳ್ಳುತ್ತಾರೆ. ಅವರ ಕೋರಿಕೆಯಂತೆ ಶ್ರೀಮದ್ಭಾಗವತ ಗ್ರಂಥವನ್ನು ವೇದವ್ಯಾಸರು ರಚಿಸುತ್ತಾರೆ. ಶ್ರೀಮದ್ ಭಾಗವತ ಗ್ರಂಥವು 12 ಸ್ಕಂದ ಗಳಿಂದ ಕೂಡಿದೆ. ಭಗವಂತನ ಬಗ್ಗೆ ಜ್ಞಾನವನ್ನು ಮತ್ತು ಸಕಲ ವೇದ ಉಪನಿಷತ್ತುಗಳ ಸಾರವನ್ನು ನಮಗೆ ತಿಳಿಸಿಕೊಡುತ್ತದೆ. ಈ ಭಾಗವತ ಪಾಠವನ್ನು ತಮ್ಮ ಮಗ ಶುಕ ಮುನಿಗಳಿಗೆ ವೇದವ್ಯಾಸರು ಹೇಳುತ್ತಾರೆ. ಶುಕಮುನಿಗಳು ತಾವು ತಿಳಿದುಕೊಂಡು ಭಾಗವತವನ್ನು ಮಹಾಭಾರತದ ಪಾಂಡವರ ಒಬ್ಬನೇ ಮಗ ಪರೀಕ್ಷಿತ ರಾಜನ ಮುಕ್ತಿಗಾಗಿ ಭಾಗವತ ಕಥೆಯನ್ನು ಹೇಳುತ್ತಾರೆ. ಇದೇ ಕಥೆ ಇಂದಿಗೂ ಭಕ್ತರ ಮನೆ ಮನೆಗಳಲ್ಲಿ ಪಾರಾಯಣ ರೂಪದಲ್ಲಿ ಈ ದೇಶದಲ್ಲಿ ಭಾಗವತ ಸಂಪ್ರದಾಯ ರೂಪದಲ್ಲಿ ನಡೆದುಕೊಂಡು ಬಂದಿದೆ.
Discussion about this post