ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರ್ನಾಟಕದ ಮಧ್ಯಕಾಲೀನ ಸಂಸ್ಕೃತಿಗೆ ದಾಸರ ಕೊಡುಗೆ ಅಪಾರ. ದಾಸಸಾಹಿತ್ಯ ಮತ್ತು ಸಂಗೀತದ ಸಮನ್ವಯ ಜನರ ಮೇಲೆ ವಿಶೇಷವಾದ ಪ್ರಭಾವ ಬೀರಿತು. ಪರಿಶುದ್ಧ ಭಕ್ತಿಯಿಂದ ಶುಭ್ರಮನಸ್ಸಿನಿಂದ ಭಗವಂತನನ್ನು ಭಜಿಸಬೇಕೆಂದು ಸಾಧಿಸಿ ತೋರಿಸಿದವರು ಶ್ರೀಪಾದರಾಜರು.
ಧ್ಯಾನವು ಕೃತಯುಗದಿ ಯಜನ ಯಜ್ಞವು ತ್ರೇತಾಯುಗದಿ ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ ಆ ಮಾನವರಿಗೆಷ್ಟು ಫಲವೋ ಅಷ್ಟು ಫಲವು ಕಲಿಯುಗದಿ ಗಾನದಲಿ ಕೇಶವನೆನಲು ಕೈಗೊಡುವನು ರಂಗವಿಠಲ ಭಕ್ತಿ ಬೇಕು ವಿರಕ್ತಿ ಬೇಕು ಸರ್ವಶಕ್ತಿ ಬೇಕು ಮುಕ್ತಿ ಬಯಸುವವರಿಗೆ ಎಂದು ಹಾಡಿ ಶ್ರೀಪಾದರಾಜರು ಭಕ್ತ ನಾಗುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ನೆಲದ ಭಾಷೆಯನ್ನು ಮೈಲಿಗೆ ಎಂದು ಭಾವಿಸುತ್ತಿದ್ದ ಕಾಲದಲ್ಲಿ ಮಠಾಧಿಪತಿಯಾಗಿ ಕನ್ನಡದಲ್ಲಿ ದೇವರ ನಾಮಗಳನ್ನು ಹಾಡಿ ಅಂದಿನ ಜನಸಾಮಾನ್ಯರಿಗೆ ರೋಮಾಂಚನ ಉಂಟು ಮಾಡಿದವರು ಶ್ರೀಪಾದರಾಜರು.
ದಾಸ ಪರಂಪರೆಗೆ ಅಂಕಿತ ಹಾಗೂ ವಿಠಲನ ಪರಿಕಲ್ಪನೆ ನೆಲೆಗೊಂಡಿದ್ದು ಶ್ರೀಪಾದರಾಜರಿಂದಾಗಿಯೇ ಹರಿದಾಸ ಸಾಹಿತ್ಯದ ಅರುಣೋದಯವಾಗಿ ಅನೇಕ ದಾಸಶ್ರೇಷ್ಠರನ್ನು ತಯಾರಿಸಲು ಕಾರಣರಾದ ಶ್ರೀಪಾದರಾಜರು ಭಕ್ತಿಯ ಬೆಳಕಿನಲ್ಲಿ ಹೊಸ ದಾರಿ ತೋರಿದರು. ಬಾಲಕ ಲಕ್ಷ್ಮೀನಾರಾಯಣ ಹಿರಿಯ ಯತಿಗಳ ಮುಂದೆ ತನ್ನೆಲ್ಲಾ ಬುದ್ಧಿಮತ್ತೆಯನ್ನು ಪ್ರದರ್ಶಿಸಿ ಶ್ರೀಪಾದರಾಜರಾದುದು ಸಣ್ಣ ಸಾಧನೆಯಲ್ಲ.
ಆ ಕಾಲಕ್ಕೆ ತಮಿಳುನಾಡು ಮತ್ತು ಕರ್ನಾಟಕದಲ್ಲಿ ದೇಶ್ಯ ಭಾಷೆಯಲ್ಲಿ ಶೈವ ಸಾಹಿತ್ಯವು ಗಂಭೀರವಾಗಿ ಬೆಳೆದು ಬಂದಿತ್ತು. ಅಲ್ಲದೆ ಅವರು ಸಂನ್ಯಾಸ ಸ್ವೀಕರಿಸಿ ಶ್ರೀರಂಗಂನಲ್ಲಿದ್ದಾಗ ಅಲ್ಲಿ ಆಳ್ವಾರರ ತಮಿಳು ದ್ರಾವಿಡ ಪ್ರಬಂಧಂನಂತಹ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಅಲ್ಲದೆ ಅವರ ಸರಿ ಸುಮಾರಿನವರೇ ಆದಂತಹ ಅನ್ನಮಾಚಾರ್ಯರು ತೆಲುಗಿನಲ್ಲಿ ಕೀರ್ತನೆಗಳನ್ನು ಬರೆದು ಪ್ರಖ್ಯಾತರಾಗಿದ್ದು ಇಲ್ಲಿ ಗಮನಾರ್ಹ, ಹೀಗೆ ದಕ್ಷಿಣ ಭಾರತದ ಎರಡು ರಾಜ್ಯಗಳಲ್ಲಿ ಆ ಕಾಲಕ್ಕೆ ಸಂಸ್ಕೃತವನ್ನು ಬಿಟ್ಟು ತಂತಮ್ಮ ದೇಶಿಯ ಭಾಷೆಗಳಲ್ಲಿ ಬರೆದಿದ್ದು ಸಾಂಸ್ಕೃತಿಕವಾಗಿ ಬಹಳ ಗಂಭೀರವಾದ ಸಂಗತಿ. ಶ್ರೀಪಾದರಾಜರು ಕೂಡ ಈ ಪರ್ಯಾವರಣವನ್ನು ಸ್ವೀಕರಿಸಿ ಕನ್ನಡದಲ್ಲಿ ಅನೇಕ ಗೇಯ ಪ್ರಕಾರದಲ್ಲಿ ಸ್ತುತಿಗೀತೆ ಅಥವಾ ಸಾಹಿತ್ಯವನ್ನು ರಚಿಸಿ ಕನ್ನಡ ಸಾಂಸ್ಕೃತಿಕತೆಗೆ ಅಡಿಪಾಯ ರೂಪಿಸಿದರು.
ದಂಡಕಮಂಡಲದ ಸನ್ಯಾಸಿಗಳಾಗಿ ಮಾತ್ರವೇ ಉಳಿಯದೆ ದಂಡಕ, ವೃತ್ತನಾಮ, ಉಗಾಭೋಗ, ಸುಳಾದಿ, ಕೀರ್ತನೆಗಳ ಮೂಲಕ ದಾಸ ಸಾಹಿತ್ಯಕ್ಕೆ ಪ್ರಾರಂಭ ಹಾಗು ವೈವಿಧ್ಯತೆಯನ್ನು ತಂದುಕೊಟ್ಟರು.
ಶ್ರೀಪಾದರಾಜರು ಆಡಿದ ಮಾತುಗಳೆಲ್ಲವೂ ಆತ್ಮಾನುಭವದ ಕಲ್ಲುಸಕ್ಕರೆ. ಸಹೃದಯ ಸಮೂಹಕ್ಕೆ ರಸದೌತಣ. ಅವರ ಕೃತಿಗಳಲ್ಲಿ ಮರಳು ಮಾಡುವ ಮೋಹಕತೆಯಿದೆ. ಮೈಮರೆಸುವ ರಂಜಕತ್ವವೂ ಇದೆ. ಹರಿನಾಮ ಸಂಕೀರ್ತನೆಯ ಮೂಲಕ ಒಳತು-ಕೆಡಕುಗಳ ಅರಿವು ಮೂಡಿಸುವ ಸಂತ, ದಾರ್ಶನಿಕ, ಉದಾರಚರಿತ, ಪರಮ ಭಾಗವತ ಮತ್ತು ಕನ್ನಡ ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕ, ಇಲ್ಲಕ್ಕಿಂತ ಮಿಗಿಲಾಗಿ ಸಾರ್ವಕಾಲಿಕ ಜೀವನ ದರ್ಶನವನ್ನು ಬೆಳಕಿಗೆ ತಂದವರು. ನಾಡಿನ ದಾಸರು ಮತ್ತು ತಾಯಂದಿರು ಇದನ್ನು ಜನಪ್ರಿಯಗೊಳಿಸಿದ್ದು ಮೆಚ್ಚಬೇಕಾದ ಸಂಗತಿ.
ನಾಲಿಗೆಗೆ ನಾರಾಯಣ ನಾಮ ಭೂಷಣ, ಕಾಲಿಗೆ ಹರಿಯಾತ್ರೆ, ಮನೆಗೆ ತುಲಸಿ ಬೃಂದಾವನ…..ರಂಗವಿಠಲ ನಿನ್ನ ನಾಮ ಅತಿ ಭೂಷಣ ಎನ್ನುವ ಶ್ರೀಪಾದರಾಜರು ಮಾನವರಿಗೆ ಮಾನವೇ ಭೂಷಣ ಎಂಬ ಲೋಕ ನೀತಿಯನ್ನು ಹೇಳಿ ಸಾರ್ವತ್ರಿಕ ಎಚ್ಚರಿಕೆ ಕೊಟ್ಟಿದ್ದಾರೆ.
ಮಾತು ಮತ್ತು ಧಾತುಗಳೆರಡರ ಒಟ್ಟು ಸಂಗಮವಾಗಿರುವ ಶ್ರೀಪಾದರಾಜರ ರಚನೆಗಳು ಮುಂದೆ ದಾಸವಾಣಿಯು ಗೇಯತೆಯಿಂದ ಕೂಡಿ ಉಜ್ವಲವಾಗಿ ಕೇಳಿಸುವುದಕ್ಕೆ ಹೊಸ ಪ್ರೇರಣೆ ಹಾಗು ಆಯಾಮವನ್ನು ಒದಗಿಸಿತು, ಹಾಗೆಯೇ ಮುಂದೆ ವ್ಯಾಸರಾಜರು, ಪುರಂದರದಾಸರು ಹಾಗೂ ಕನಕದಾಸರಂತಹ ಶ್ರೇಷ್ಠ ಸಾಂಸ್ಕೃತಿಕ ಧೃವತಾರೆಗಳನ್ನು ಬೆಳೆಸಿದರು ಎಂಬುದನ್ನು ಗಮನಿಸಿದರೆ ಅವರ ಸಾಂಸ್ಕೃತಿಕ ದೃಷ್ಠಿಧೋರಣೆಗಳು ಎಷ್ಟು ಉಜ್ವಲವಾದವು ಎಂದು ಮನದಟ್ಟಾಗುತ್ತದೆ.
ಸಂಸ್ಕೃತದ ಘಟ-ಪಟಗಳ ನಡುವೆ ಒದ್ದಾಡುತ್ತಿದ್ದ ದೇವರನ್ನು, ಧರ್ಮದ ತಿರುಳನ್ನು ಮನೆ ಮಾತುಗಳಲ್ಲಿ ಹೇಳುತ್ತ ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಎಂಬುದಾಗಿ ಪಂಡಿತ ಪಾಮರರಿಬ್ಬರಿಗೂ ಮನಮುಟ್ಟುವಂತೆ ತಿಳಿ ಹೇಳಿದರು.
ಸೂಕ್ಷ್ಮ ಭಾವನೆಗಳನ್ನು ಹೊತ್ತು ಸಂವೇದನೆಗಳನ್ನು ಅಭಿವ್ಯಕ್ತಗೊಳಿಸಲು ಸಂಗೀತವೇ ಸಮರ್ಥವಾದ ಮಾಧ್ಯಮವೆಂದು ಅರಿತ ಈ ತಪಸ್ವಿಗಳು ಪಲ್ಲವಿ, ಅನುಪಲ್ಲವಿ ಚರಣಗಳನ್ನು ಹೊಂದಿದ ಕೀರ್ತನೆಗಳನ್ನು ಪ್ರಥಮ ಬಾರಿಗೆ ಭಜನೆಯ ಸಲುವಾಗಿ ರಚಿಸಿ ಹೊಸ ಪದ್ದತಿಯೊಂದನ್ನು ಆವಿಷ್ಕರಿಸಿದರು.
ಕೈಯಲ್ಲಿ ತಂಬೂರಿ, ಚಿಟಕಿ, ಕಾಲಲ್ಲಿ ಗೆಜ್ಜೆ-ಶ್ರೀಪಾದರಾಜರ ಕಾಲಕ್ಕೆ ಹರಿದಾಸರ ವೇಷಭೂಷಣ ಎನ್ನುವುದು ಗಮನಾರ್ಹ. ಒಟ್ಟಿನಲ್ಲಿ ರಾಜರು ಬಳಕೆಗೆ ತಂದ ಉದಯರಾಗ, ಲಾಲಿಪದ, ಸುವ್ವಿ, ಮುಂತಾದ ಗೇಯಪ್ರಕಾರಗಳನ್ನು ನೆಲೆಸಿದ ನೆಲದ ಜನಪದ ಲೋಕದಿಂದ ಎತ್ತಿಕೊಂಡು ಅವುಗಳನ್ನು ಸಂಗೀತ ಶಾಸ್ತ್ರ ಮಾರ್ಗದಲ್ಲಿ ಮುನ್ನಡೆಸಿದರು. ಹೀಗೆ ದಾಸ ಸಾಹಿತ್ಯ-ಸಂಸ್ಕೃತಿಯನ್ನು ಹೊಸಹಾದಿಯಲ್ಲಿ ಸಾಗಿಸಿದ ಶ್ರೀಪಾದರು ವೇದ, ಉಪನಿಷತ್ತು, ರಾಮಾಯಣ, ಭಾರತ, ಭಾಗವತ ಇತ್ಯಾದಿಗಳನ್ನು ದಾಸಸಾಹಿತ್ಯದಲ್ಲಿ ದೃಷ್ಟಾಂತಗಳಾಗಿ ಬಳಸಬೇಕೆಂಬುದಕ್ಕೆ ಅವರೇ ಮೂಲ ಮತ್ತು ಮಾದರಿ.
ಪರಮಾತ್ಮನ ಪ್ರೀತಿ ಗಳಿಸಲು ಬಹಳ ಕಷ್ಟ ಪಡಬೇಕಿಲ್ಲ, ಕಲಿಯುಗವನ್ನು ಬಹುಶಃ ಎಲ್ಲರೂ ಹಳಿಯುವುದುಂಟು. ಆದರೆ ಶ್ರೀಪಾದರಾಜರು ಹೊಗಳುತ್ತ ಕಾರಣ ತಿಳಿಸುತ್ತಾರೆ. ಕಲಿಕಾಲಕೆ ಸಮಯುಗವಿಲ್ಲವಯ್ಯ ಕಲುಷಹರಿಸಿ ಕೈವಲ್ಯವೀವುದಯ್ಯ ಸೆಲೆ ನಾಮ ಕೀರ್ತನೆ ಸ್ಮರಣೆ ಸಾಕಯ್ಯ, ಸ್ಮರಿಸಲು ಸಾಯುಜ್ಯಪದವೀಯುದಯ್ಯ ಬಲವಂತ ಶ್ರೀರಂಗವಿಠ್ಠಲನ ನೆನೆದರೆ ಕಲಿಯುಗವೆ ಕೃತಯುಗವಾಗುವುದಯ್ಯ.
ಮೋಡ ಮುಸುಕಿದ ಮಳೆಗಾಲದಲ್ಲಿ ಬೆಳದಿಂಗಳು ಯಾವ ರೀತಿ ಇರಬಹುದು, ಸಂಸಾರವೂ ಹಾಗೆಯೆ ಎನ್ನುತ್ತಾರೆ. ಬಂಧು ಬಾಂಧವರ ಸ್ಥಿತಿಗತಿಗಳನ್ನು ವಿವರಿಸಿ ಮಾರ್ಗದರ್ಶನ ಮಾಡಿಸುತ್ತಾರೆ. ಇಂದ್ರಿಯಗಳ ಶಕ್ತಿ ಕುಂಠಿತಗೊಂಡಾಗ ಧರ್ಮಾಚರಣೆಯ ಬಗ್ಗೆ ಆಸಕ್ತಿ ಹುಟ್ಟಿದರೂ ಕೂಡ ಅದನ್ನು ಮಾಡಲು ಸಾಧ್ಯವಿಲ್ಲ. ಚಂಚಲವಾದ ಮನಸನ್ನು ನಿಯಂತ್ರಿಸಿ ಹರಿಯನ್ನು ಸದಾ ಆರಾಧಿಸುತ್ತ ಶಾಶ್ವತ ಸುಖ ಅರ್ಥಾತ್ ಮೋಕ್ಷವನ್ನು ಸಾಧಿಸಲು ತದೇಕಚಿತ್ತದಿಂದ ಸನ್ನದ್ದರಾಗಬೇಕೆಂಬುದೆ ಶ್ರೀಪಾದರಾಜರ ಅಂತರಂಗದ ಕಳಕಳಿ.
ಒಂದರಘಳಿಗೆಯೂ ಬಿಡದೆ ಶ್ರೀರಂಗವಿಠ್ಠಲನನ್ನು ಭಜಿಸಿ ಅವನೊಂದಿಗೆ ಆಡಿ, ಅರವತ್ತು ಬಗೆಯ ಅಡುಗೆಗಳನ್ನು ಪ್ರತಿ ನಿತ್ಯ ನಿವೇದಿಸುತ್ತಿದ್ದ ಶ್ರೀಪಾದರಾಜರು ರಂಗನನ್ನೆ ಪ್ರಶ್ನಿಸುತ್ತಾರೆ: ನೀನೇ ಬಲ್ಲಿದನೋ ರಂಗ ನಿನ್ನ ದಾಸರು ಬಲ್ಲಿದರೋ? ಭಕ್ತಿ ಮಾರ್ಗ ರಾಜಮಾರ್ಗ ಎಂದು ವಿವರಿಸುವ ಭವಚಿಂತನೆಯ ಸೆಲೆ ಇದು.
ಶ್ರೀಕೃಷ್ಣನು ಗೀತೆಯಲ್ಲಿ ಉಪದೇಶಿಸಿದ ಸ್ಥಿತಪ್ರಜ್ಞನ ಲಕ್ಷಣದ ವಿವರಣ ರೂಪವಾಗಿ ಹೊರಹೊಮ್ಮಿದ ಪ್ರಸಿದ್ಧವಾದ ಕೃತಿಯೇ ಇಟ್ಟಾಂಗೆ ಇರುವನೋ ಹರಿಯೇ ಎಂಬುದು ಇದು ಈಶೋಪನಿಷತ್ತಿನ ತ್ಯಕ್ತೇನ ಭುಂಜೀಥಾಃ ಎಂಬ ಮಾತಿನ ಸಾರವೇ ಆಗಿದೆ.
ಶ್ರೀಪದ್ಮನಾಭತೀರ್ಥರ ಪರಂಪರೆಯ ಮಾಧ್ವ ವಾಙ್ಮಯ ಸಾಮ್ರಾಜ್ಯದ ವೀರ ಸೇನಾನಿಗಳೆನಿಸಿದ ಶ್ರೀವ್ಯಾಸರಾಜರನ್ನು ತಯಾರು ಮಾಡಿದ ಮಹಾಮಲ್ಲರು ಶ್ರೀಪಾದರಾಜರು. ವ್ಯಾಸರಾಜರ ಮಹಿಮೆಯನ್ನು ಸಾಸಿರ ಜಿಹ್ವೆಯುಳ್ಳ ಶೇಷನೇ ಕೊಂಡಾಡಬೇಕು ಎಂಬ ಕೀರ್ತನೆಯಲ್ಲಿ ಹಾಡಿ ಹೃತ್ಪೂರ್ವಕವಾಗಿ ಹರಸಿದ್ದಾರೆ. ಗುಣಶಾಲಿಯಾದ ಶಿಷ್ಯನನ್ನು ಗುಣಗ್ರಾಹಿಯಾದ ಗುರುವು ಈ ರೀತಿಯಾಗಿ ಕೊಂಡಾಡಿರುವುದು ವೈಶಿಷ್ಟಪೂರ್ಣ. (ಮುಂದೆ ಇದೇ ಸಂಸ್ಕೃತಿಯನ್ನು ಮುಂದುವರೆಸಿದ ಶ್ರೀವ್ಯಾಸರಾಜರು ಪುರಂದರದಾಸರನ್ನು ಮೆಚ್ಚಿಕೊಂಡಿರುವುದು ಗಮನಾರ್ಹ).
ಇಂದು ಶ್ರೀಪಾದರಾಜರು ಅವತರಿಸಿ 600ಕ್ಕೂ ಅಧಿಕ ವರ್ಷಗಳೇ ಆಗಿದೆ. ಅವರ ಸಾಹಿತ್ಯವನ್ನು ಹಲವು ಮಗ್ಗಲುಗಳಿಂದ ಅಧ್ಯಯನಿಸಬೇಕಾದ ಅವಶ್ಯಕತೆ ಇದೆ. ನಮ್ಮೆಲ್ಲ ಸಂಕಟ, ಆತಂಕಗಳು ದೂರ ಮಾಡಲು ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಳ್ಳಲು ಶ್ರೀಪಾದರಾಜರ ಕೃತಿಗಳನ್ನು ಅರಿಯು ಪ್ರಯತ್ನ ಮಾಡಬೇಕು. ಅವರ ಸಂದೇಶಗಳನ್ನು ಎಲ್ಲರಿಗೂ ತಿಳಿಸುವ ಪ್ರಯತ್ನದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು.
Get In Touch With Us info@kalpa.news Whatsapp: 9481252093
Discussion about this post