ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರುವಂತೆ ಎಸ್’ಎಸ್’ಎಲ್’ಸಿ ಹಾಗೂ ಪಿಯುಸಿ ಪರೀಕ್ಷೆಗಳ ಉತ್ತೀರ್ಣತಾ ಅಂಕವನ್ನು ಶೇ.35ರಿಂದ ಶೇ.33ಕ್ಕೆ ಇಳಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಕುರಿತಂತೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದ ಎಸ್’ಎಸ್’ಎಲ್’ಸಿ ಹಾಗೂ ಪಿಯುಸಿ ಉತ್ತೀರ್ಣತಾ ಶೇಕಡಾವರು ಅಂಕಗಳನ್ನು ಕಡಿತ ಮಾಡಲು ನಿರ್ಧರಿಸಲಾಗಿದ್ದು, ಈ ಮೂಲಕ ಮಹತ್ವದ ಬದಲಾವಣೆಗೆ ಮುಂದಾಗಿದ್ದೇವೆ ಎಂದರು ತಿಳಿಸಿದ್ದಾರೆ.
ಕಾರಣ ಏನು?
ಉತ್ತೀರ್ಣತೆಯ ಶೇಕಡಾವಾರು ಅಂಕ ಇಳಿಕೆ ಮಾಡುವ ನಿರ್ಧಾರವು ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸುವ ಹಾಗೂ ಸಿಬಿಎಸ್’ಇ ಹಾಗೂ ನೆರೆ ರಾಜ್ಯಗಳ ಏಕರೂಪ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶೇಕಡಾವಾರು ಎಷ್ಟು ಅಂಕ ಪಡೆಯಬೇಕು?
ಎಸ್’ಎಸ್’ಎಲ್’ಸಿ ವಿದ್ಯಾರ್ಥಿಗಳಿಗೆ ಹಾಲಿ ಉತ್ತೀರ್ಣರಾಗಲು 625 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಟ 206 ಅಂಕ (ಶೇ.33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಅಂದರೆ, ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕಾಗುತ್ತದೆ.
ಇನ್ನು, ಪಿಯುಸಿ ವಿದ್ಯಾರ್ಥಿಗಳಿಗೆ ಹಾಲಿ ಉತ್ತೀರ್ಣರಾಗಲು ದ್ವಿತೀಯ ಪಿಯುಸಿ (ಐಐ Pಖಿಇ): 600 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಟ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಪಡೆಯುವುದು ಕಡ್ಡಾಯವಾಗಿರುತ್ತದೆ.
ಇನ್ನು, ಪ್ರಥಮ ಭಾಷೆಯ ಗರಿಷ್ಠ ಅಂಕವನ್ನು 125 ರಿಂದ 100 ಕ್ಕೆ ಇಳಿಸುವ ವಿಚಾರ ಇನ್ನೂ ಅಂತಿಮ ಆಗಿಲ್ಲ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಾಸಿಂಗ್ ಮಾರ್ಕ್ಸ್ ಕಡಿತ ಮಾಡುವ ವಿಚಾರವನ್ನು ಶಾಲಾ ಪರೀಕ್ಷಾ ಮಂಡಳಿ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕ ಡೊಮೈನ್’ಗೆ ಹಾಕಿ ಅಭಿಪ್ರಾಯ ಕೇಳಲಾಗಿತ್ತು. ಶೇ. 33ರಷ್ಟು ಅಂಕದ ಪರವಾಗಿ 701 ಪತ್ರಗಳು ಬಂದಿದ್ವು. ಆದರೆ, ಶೇ. 35 ಅಂಕ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ 2025-26ನೇ ಸಾಲಿನಿಂದ ಶೇ. 33ರಷ್ಟು ಮಾನದಂಡವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಹಾಗೂ ನೂತನ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post