ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಳಲ್ಕೆರೆ: ಇಲ್ಲಿನ ಕುಡಿನೀರು ಕಟ್ಟೆ, ಶ್ರೀ ಸೇವಾಮೃತ ಬಯೋಫರ್ಮ್’ನಲ್ಲಿ ಆಯೋಜಿಸಲಾಗಿದ್ದ 6ನೆಯ ರಾಜ್ಯ ಮಟ್ಟದ ದೇಶಿ ಗೋ ಸಮ್ಮೇಳನ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ದೇಶಿ ಆಕಳುಗಳನ್ನು ಸಾಕುವ ಯೋಜನೆಯನ್ನು ಶ್ರೀಮಠವೂ ಹೊಂದಿದ್ದು ಸದ್ಯವೇ ಇದು ಸಂಪೂರ್ಣಗೊಳ್ಳಲಿದೆ ಎಂದರು.
ಶ್ರೀಮಠದಿಂದ ಬರಗಾಲದಲ್ಲಿ ರೈತರ ಜಾನುವಾರುಗಳ ಸಂಕಷ್ಠಕ್ಕೆ ಸ್ಪಂದಿಸಲು 2 ಕೋಟಿ ರೂಪಾಯಿಗಳ ಯೋಜನೆಯಿದ್ದು, ರೈತರು ಬರಗಾಲದ ಬೇಗೆಯಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಶ್ರೀಮಠಕ್ಕೆ ಅವರ ಜಾನುವಾರುಗಳನ್ನು ಉಚಿತವಾಗಿ ತಂದು ಬರಗಾಲ ಕಳೆದ ನಂತರ ವಾಪಸ್ಸು ಕರೆದುಕೊಂಡು ಹೋಗುವ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಮಾತನಾಡಿ, ರೈತರು ಗೋಸಾಕಣೆಯಲ್ಲಿ ಸ್ವಾವಲಂಭಿಗಳಾಗಬೇಕು ಮತ್ತು ಗೋವಿಗೆ ಘನತೆಯ ಜೀವನ ನೀಡಬೇಕು. ಗೋವು ನಮ್ಮನ್ನು ಸಾಕುತ್ತದೆಯೇ ಹೊರತು ನಾವು ಗೋವನ್ನು ಸಾಕುವುದಿಲ್ಲ ಎಂದರು.
ಶಿವಮೊಗ್ಗದ ಪ್ರಧಾನ ಸಂಶೋಧಕರು ಮತ್ತು ಜಾನುವಾರು ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ. ಎನ್.ಬಿ. ಶ್ರೀಧರ ಮಾತನಾಡಿ, ಗೋವಿಗೆ ಆರತಿ ಪೂಜೆ ಪುನಸ್ಕಾರಗಳಿಂತಲೂ ಅದರ ಹೊಟ್ಟೆಗೆ ಸರಿಯಾಗಿ ನೀಡಿದಲ್ಲಿ ಅದಕ್ಕೆ ತಕ್ಕಂತೆ ಫಲ ನೀಡುವಳು. ಅವುಗಳ ಪೋಷಣೆ ಮತ್ತು ಆಹಾರ ನೀಡುವಿಕೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಿದಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿದು ಉತ್ತಮ ಫಲಿತಾಂಶ ಕಾಣಬಹುದು ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗೇಶ್ ಬೆಂಡೆ ಮಾತನಾಡಿ, ಆಕಳುಗಳ ಆರೋಗ್ಯವನ್ನು ಸರಿಯಾಗಿ ನಿರ್ವಹಿಸಿ ಅವುಗಳಿಗೆ ತಕ್ಕ ಅಹಾರ ನೀಡಿದಲ್ಲಿ ಅವು ಹರಸುತ್ತವೆ ಎಂದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಶುಪೋಷಣಾ ತಜ್ಞ ಡಾ. ಟಿ.ವಿ. ಗಿರೀಶ್ ಅವರು ದೇಶಿ ತಳಿಗಳ ವೈಜ್ಞಾನಿಕ ಪೋಷಣೆಯ ಬಗ್ಗೆ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮವನ್ನು ಡಾ. ಜಯಸಿಂಹ, ಡಾ.ಹರೀಶ್, ಡಾ.ಲೋಕನಾಥ್ ಇವರು ಊರ ಜನರ ಸಹಕಾರದೊಂದಿಗೆ ಆಯೋಜಿಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ 150 ಕೃಷಿಕರು ಪಾಲ್ಗೊಂಡರು.
Get in Touch With Us info@kalpa.news Whatsapp: 9481252093
Discussion about this post