ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮಾರಕ ಕೊರೋನಾ ವೈರಸ್ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಉಕ್ಕಿನ ನಗರಿ ಶೇ.100ರಷ್ಟು ಸ್ತಬ್ದಗೊಂಡಿದೆ.
ಇಂದು ಮುಂಜಾನೆಯಿಂದಲೇ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದ್ದ ವ್ಯಾಪಾರಸ್ತರು ಪ್ರಧಾನಿ ಮಾತಿಗೆ ಬೆಂಬಲ ಸೂಚಿಸಿದ್ದು, ಹಾಲು, ಮೊಸರು ಸೇರಿದಂತೆ ಒಂದೆರಡು ಅಗತ್ಯ ವಸ್ತುಗಳ ವ್ಯಾಪಾರ ಮಾತ್ರ ಬೆಳಗ್ಗೆ ನಡೆದಿದ್ದು, ಆನಂತರ ಸಂಫೂರ್ಣ ಬಂದ್ ಆಗಿವೆ.
ಇನ್ನು, ನಗರದಲ್ಲಿ ಜನ ಹಾಗೂ ವಾಹನ ಸಂಚಾರ ತೀರಾ ವಿರಳವಾಗಿದ್ದು, ಬೆರಳೆಣಿಕೆಯಷ್ಟು ದ್ವಿಚಕ್ರ ಹಾಗೂ ಕಾರುಗಳ ಓಡಾಡವಿತ್ತು.
ಇನ್ನು, ಎಲ್ಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ನಗರದ ರೈಲು ನಿಲ್ದಾಣ ಬಿಕೋ ಎನ್ನುತ್ತಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿ ಹಾಗೂ ಪೊಲೀಸರು ಮಾತ್ರ ಇದ್ದರು.
ರೈಲು ನಿಲ್ದಾಣದ ಮುಂಭಾಗದಲ್ಲಿ ಇಂದು ರೈಲುಗಳ ಸಂಚಾರ ರದ್ದುಗೊಂಡಿರುವ ಫಲಕ ಹಾಕಿದ್ದು, ಕೇವಲ ಮುಂಗಡ ಕಾದಿಸಿದ್ದ ಪ್ರಯಾಣಿಕರ ಟಿಕೇಟ್ ರದ್ದು ಮಾಡಲು ಒಂದು ಕೌಂಟರ್ ಮಾತ್ರ ತೆರೆದಿತ್ತು.
ಬಿಎಚ್ ರಸ್ತೆ, ತರೀಕೆರೆ ರಸ್ತೆ, ಚನ್ನಗಿರಿ ರಸ್ತೆ, ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ಬಸವೇಶ್ವರ ಸರ್ಕಲ್, ಹಾಲಪ್ಪ ಸರ್ಕಲ್, ಅಂಬೇಡ್ಕರ್ ವೃತ್ತ, ಹುತ್ತಾ ಕಾಲೋನಿಗಳು ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಅಲ್ಲದೇ, ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರವೂ ಸ್ಥಗಿತಗೊಂಡಿದ್ದ ಕಾರಣ ಪ್ರಯಾಣಿಕರೂ ಸಹ ಇರಲಿಲ್ಲ.
ಇನ್ನು ಸರ್ಕಾರಿ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವೂ ಸಹ ಬಂದ್ ಆಗಿದ್ದು, ತುರ್ತು ಚಿಕಿತ್ಸಾ ಘಟಕ ಮಾತ್ರ ತೆರೆದಿತ್ತು. ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಒಳಬಿಡಲಾಗುತ್ತಿತ್ತು.
ಬಸ್ ನಿಲ್ದಾಣದಲ್ಲಿ ತಪಾಸಣಾ ತಂಡ
ಆರೋಗ್ಯ ಇಲಾಖೆ ವತಿಯಿಂದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಅಲ್ಲಿಗೆ ಆಗಮಿಸುವವರಿಗೆ ದೇಹ ತಾಪಮಾನ ಪರೀಕ್ಷೆ ಮಾಡುವ ಜೊತೆಯಲ್ಲಿ ಸ್ಯಾನಿಟೈಸರ್ ಸಹ ಸಿಂಪಡಿಸುತ್ತಿದ್ದರು.
ತುರ್ತು ಸೇವೆಗಳು ಲಭ್ಯ
ನಗರ ಸಂಪೂರ್ಣ ಸ್ಥಬ್ದಗೊಂಡಿದ್ದರೂ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗ, ನಗರದ ಮೆಡಿಕಲ್ ಶಾಪ್’ಗಳು, ಅಗ್ನಿ ಶಾಮಕ ದಳ ಕರ್ತವ್ಯದಲ್ಲಿದ್ದವು.
ಪೊಲೀಸರ ಕ್ರಮ ಶ್ಲಾಘನೀಯ
ಪ್ರಮುಖ ವೃತ್ತಗಳಲ್ಲಿದ್ದ ಸಂಚಾರಿ ಪೊಲೀಸರು ವಾಹನಗಳನ್ನು ತಡೆದು, ಕೊರೋನಾ ತಡೆಗೆ ಕೇಂದ್ರ ಸರ್ಕಾರವೇ ಒಂದು ದಿನ ಮನೆಯಿಂದ ಹೊರಬಾರದಂತೆ ಹೇಳಿದೆ. ಆದರೆ, ಏತಕ್ಕಾಗಿ ಹೊರ ಬರುತ್ತೀರಿ. ಒಂದು ದಿನ ಮನೆಯಲ್ಲಿದ್ದರೆ ಏನಾಗುತ್ತದೆ. ಓಡಾಡಬೇಡಿ, ನಿಮ್ಮ ಒಳ್ಳೆಯದಕ್ಕೇ ಹೇಳುತ್ತಿರುವುದು ಅರ್ಥ ಮಾಡಿಕೊಳ್ಳಿ ಎಂದು ಅರ್ಥ ಮಾಡಿಸುವ ಕೆಲಸ ಮಾಡುತ್ತಿದ್ದರು. ಕೇಂದ್ರದ ತುರ್ತು ಕರೆಗೆ ನಗರದ ಪೊಲೀಸರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಕರ್ತವ್ಯದಲ್ಲಿರುವುದು ಮಾತ್ರವಲ್ಲ ಮನೆಯಿಂದ ಹೊರಬಾರದಂತೆ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದುದು ಶ್ಲಾಘನೀಯ ಕಾರ್ಯವಾಗಿದೆ.
ಗ್ರಾಮೀಣ ಭಾಗವೂ ಸಹ ಸ್ತಬ್ದ
ಇನ್ನು, ಭದ್ರಾವತಿ ಗ್ರಾಮೀಣ ಭಾಗದಲ್ಲೂ ಸಹ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಅಲ್ಲದೇ, ಜನರ ಓಡಾಟವೂ ಸಹ ವಿರಳವಾಗಿದೆ.
Get in Touch With Us info@kalpa.news Whatsapp: 9481252093
Discussion about this post