ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದು ಸೇರಿದಂತೆ ಕಾಲೇಜಿನಲ್ಲಿ ಸೌಲಭ್ಯಗಳನ್ನು ಉತ್ತಮಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ತಿಳಿಸಿದರು.
ಅವರು ಸೋಮವಾರ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಮೆಡಿಕಲ್ ಕಾಲೇಜಿನಲ್ಲಿ ಖಾಲಿಯಿರುವ 133 ಸಿ ದರ್ಜೆ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ರೋಸ್ಟರ್ ನಿಯಮಾವಳಿಯನ್ನು ನೇಮಕಾತಿಯಲ್ಲಿ ಪಾಲಿಸಬೇಕು. ಉಳಿದ ಖಾಯಂ ಹುದ್ದೆಗಳ ನೇಮಕಾತಿಗಾಗಿ ಆದಷ್ಟು ಬೇಗನೆ ಇಲಾಖೆಯ ನೇಮಕಾತಿ ಮತ್ತು ವೃಂದ ನಿಯಮಾವಳಿಯನ್ನು ರಚಿಸುವಂತೆ ಅವರು ಸಭೆಯಲ್ಲಿ ಉಪಸ್ಥಿತರಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಜಿ.ಗಿರೀಶ್ ಅವರು ಸೂಚನೆ ನೀಡಿದರು.
ರೇಡಿಯೋಲಜಿ ವಿಭಾಗದ ಎಲ್ಲಾ ಉಪಕರಣಗಳು ಶಿಮ್ಸ್‍ನಲ್ಲಿ ಲಭ್ಯವಿದ್ದು, ತಜ್ಞ ವೈದ್ಯರ ನೇಮಕಾತಿ ಆಗಬೇಕಿದೆ. ಅದುವರೆಗೆ ಲಭ್ಯವಿರುವ ಬಳಕೆದಾರರ ನಿಧಿಯನ್ನು ಉಪಯೋಗಿಸಿಕೊಂಡು ತಜ್ಞ ವೈದ್ಯರ ಸೇವೆಯನ್ನು ಪಡೆಯಲು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಬೇಕು. ಬಳಕೆದಾರರ ನಿಧಿ ಸಂಗ್ರಹವನ್ನು ಹೆಚ್ಚಿಸಲು ಕ್ರಮ ಕೈಗೊಂಡು, ಅದರ ಮೂಲಕ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ತಾಯಂದಿರ ಮತ್ತು ಮಕ್ಕಳ ಪ್ರತ್ಯೇಕ ವಿಭಾಗವನ್ನು ಆರಂಭಿಸಲು 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇತ್ತೀಚೆಗೆ ಬೆಂಕಿ ದುರ್ಘಟನೆ ಸಂಭವಿಸಿರುವ ಮಕ್ಕಳ ವಿಭಾಗದ ದುರಸ್ತಿ ಕಾರ್ಯವನ್ನು ಎರಡು ದಿನಗಳ ಒಳಗಾಗಿ ಪೂರ್ಣಗೊಳಿಸಿ, ಸೇವೆ ಆರಂಭಿಸಲು ಪ್ರಾರಂಭಿಸಬೇಕು. ಕ್ಯಾಥ್‍ಲ್ಯಾಬ್ ಆರಂಭಿಸಲು ಈಗಾಗಲೇ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಂಸದರು ಸೂಚನೆ ನೀಡಿದರು.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬಯೋಮೆಟ್ರಿಕ್ ವ್ಯವಸ್ಥೆಯನ್ನು ಮೆಡಿಕಲ್ ಕಾಲೇಜು ವತಿಯಿಂದ ಸಹ ಅಳವಡಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.
ಶಾಸಕರಾದ ಅರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ, ಶಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ಕೆ.ದಿವಾಕರ ಶೆಟ್ಟಿ, ಡಾ.ಗೌತಮ್, ಡಾ.ವಾಣಿ ಕೋರಿ ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post