ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ 2026–27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಮಾದರಿ ಪ್ರಜಾಪ್ರಭುತ್ವದ ತತ್ವದಡಿ ಶಿಸ್ತಿನಿಂದ ಮತ್ತು ಯಶಸ್ವಿಯಾಗಿ ನಡೆಸಲಾಯಿತು.
ಚುನಾವಣಾ ವೀಕ್ಷಕರಾಗಿ ಭಾಗವಹಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳಾದ ಡಾ.ಜಿ.ಎಸ್. ಶಿವಕುಮಾರ್ ಮಾತನಾಡಿ, “ಭವಿಷ್ಯದ ನಾಯಕತ್ವ ಶಾಲಾ ಹಂತದಲ್ಲೇ ರೂಪುಗೊಳ್ಳುತ್ತದೆ. ವಿಶ್ವದ ಮಹಾನ್ ನಾಯಕರೆಲ್ಲ ತಮ್ಮ ಶಾಲಾ ದಿನಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದವರು. ಈ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಯಕರಾಗಿ ಹೊರಹೊಮ್ಮಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Also Read>> ಪ್ರಿಯಾಂಕ ಖರ್ಗೆಗೆ ಸಂವಿಧಾನದ ಅರಿವಿಲ್ಲ: ಮಾಜಿ ಡಿಸಿಎಂ ಈಶ್ವರಪ್ಪ
ಆಡಳಿತ ಸಂಯೋಜನಾಧಿಕಾರಿಗಳಾದ ಕುಭೇರಪ್ಪ ಕೆ ಮಾತನಾಡಿ, “ಭಾರತವು ವಿಶ್ವಕ್ಕೆ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರ. ಅಂತಹ ನಾಡಿನ ಶ್ರೇಷ್ಠ ನಾಯಕರಾಗಿ ನೀವು ಬೆಳೆದು ಬರಬೇಕು” ಎಂದು ಆಶಿಸಿದರು.
ಶಾಲೆಯ ಪ್ರಾಚಾರ್ಯರು ಹಾಗೂ ಚುನಾವಣಾ ಆಯುಕ್ತರಾದ ಎಚ್.ಡಿ. ಪ್ರಶಾಂತ್ ಅವರು ಚುನಾವಣೆಯ ಮಹತ್ವ, ನಿಯಮಗಳು ಹಾಗೂ ಮತದಾನ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಪ್ರಚಾರ ಮತ್ತು ಇವಿಎಂ (EVM) ಮೂಲಕ ಮತದಾನ ಪ್ರಕ್ರಿಯೆಯನ್ನು ಅನುಸರಿಸಿ ಪ್ರಜಾಪ್ರಭುತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. 5ರಿಂದ 10ನೇ ತರಗತಿಯವರೆಗಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
Also Read>> ದೇಹ – ಮನಸ್ಸನ್ನು ಸದೃಢಗೊಳಿಸಲು ಯೋಗ ಸಹಕಾರಿ | ಸಂಸದ ರಾಘವೇಂದ್ರ ಅಭಿಮತ
ಹೆಡ್ ಬಾಯ್, ಹೆಡ್ ಗರ್ಲ್, ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ನಾಲ್ಕು ಮನೆಗಳ ಕ್ಯಾಪ್ಟನ್ ಹುದ್ದೆಗಳಿಗೆ ಚುನಾವಣೆ ನಡೆಯಿತು.
ಚುನಾವಣಾ ಉಪ ಆಯುಕ್ತರಾಗಿ ಪ್ರಭು ಸರ್ ಕಾರ್ಯನಿರ್ವಹಿಸಿದರು. ಸಮಾಜ ವಿಜ್ಞಾನ ವಿಭಾಗದ ಜಿಯಾವುಲ್ಲಾ, ಭಾಗ್ಯಲಕ್ಷ್ಮಿ, ಚನ್ನೇಶ್ ಹಾಗೂ ಕಾವ್ಯ ಪಾಟೀಲ್ ಅವರು ಚುನಾವಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಿದರು. ಶಾಲೆಯ ಶಿಕ್ಷಕರು ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಸಹಕರಿಸಿ ಚುನಾವಣೆಯನ್ನು ಸುಗಮವಾಗಿ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















