ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಈವರೆಗೂ ಹಲವಾರು ಜಿಲ್ಲಾಧಿಕಾರಿಗಳನ್ನು ಕಂಡಿದೆ. ಆದರೆ, ಈವರೆಗೂ ಕಂಡಿರದ ಅಪರೂಪ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರನ್ನು ಪಡೆದಿದ್ದು ನಿಜಕ್ಕೂ ಭಾಗ್ಯವೇ ಸರಿ. ಇಂತಹ ಮಾತಿಗೆ ಸಾಕ್ಷಿ ಮತದಾನ ಜಾಗೃತಿಗಾಗಿ ಅವರು ಕೈಗೊಂಡಿರುವ ವಿಶೇಷ ಕ್ರಮ.
ಹೌದು… ತಾವು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೂ ಪಾದರಸದಂತೆ ತಮ್ಮ ಕಚೇರಿ ಕುಳಿತು ಕೆಲಸ ಮಾಡುವುದು ಮಾತ್ರವಲ್ಲ, ಜಿಲ್ಲೆಯಾದ್ಯಂತ ಭೇಟಿ ನೀಡುತ್ತಾ, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾ, ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸುತ್ತಾ ಇವರು ಕೈಗೊಳ್ಳುತ್ತಿರುವ ಆಡಳಿತಾತ್ಮಕ ಕ್ರಮಗಳ ಒಂದೇ ಎರಡೇ!
ಇಂತಹ ಜಿಲ್ಲಾಧಿಕಾರಿ ದಯಾನಂದ್ ಅವರು ಈಗ ಮತದಾನ ಜಾಗೃತಿಗಾಗಿ ಸ್ವತಃ ಕಾರ್ಯಾಚರಣೆಗೆ ಇಳಿಯುವ ಮೂಲಕ ವಿಭಿನ್ನ ಪ್ರಯತ್ನವೊಂದಕ್ಕೆ ಜಿಲ್ಲೆ ಸಾಕ್ಷಿಯಾಗುವಂತಹ ಪ್ರಶಂಸನೀಯ ಕಾರ್ಯವೊಂದನ್ನು ಮಾಡುತ್ತಿದ್ದಾರೆ.
ಜಿಲ್ಲೆಯ ಎಲ್ಲಾ ಅರ್ಹ ಮತದಾರರಲ್ಲೂ ಮತದಾನ ಮಹತ್ವದ ಕುರಿತು ಅರಿವು ಮೂಡಿಸಲು ಯುವ ವಿದ್ಯಾರ್ಥಿಗಳನ್ನೊಳಗೊಂಡ ಹಲವು ತಂಡಗಳ ಮೂಲಕ ಪ್ರತಿ ಮತದಾರರ ಮನೆಮನೆ ಭೇಟಿ ಮಾಡುತ್ತಿದ್ದಾರೆ.
ನಗರದ ತಿಲಕ್ ನಗರ, ದುರ್ಗಿಗುಡಿ ಸೇರಿದಂತೆ ಸ್ವತಃ ತಾವೇ ಖುದ್ದಾಗಿ ವಿದ್ಯಾರ್ಥಿಗಳೊಂದಿಗೆ ನಗರದ ಹಲವು ವಾರ್ಡ್‌ಗಳಲ್ಲಿನ ಮನೆ ಮನೆಗೆ ತೆರಳಿ, ಕರಪತ್ರ ವಿತರಿಸಿ ಮತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.
ಈ ಮನೆ ಭೇಟಿಯಿಂದ ಜನರಲ್ಲಿ ಮತದಾನದ ಕುರಿತು ಅರಿವು ಮೂಡುವುದರ ಜೊತೆಗೆ ಜನರಲ್ಲಿ ಚರ್ಚೆಗೆ ಅನುವು ಮಾಡಿಕೊಡಲಿದೆ. ಚುನಾವಣೆಯ ಕುರಿತು ಜನರ ಗಮನಸೆಳೆಯುವ ಹಾಗೂ ಅವರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಜಾಗೃತಿಗೊಳಿಸಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲೆ ಮತದಾನದಲ್ಲಿ ಶೇ.100ರ ಗುರಿಸಾಧಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನ ಮಾಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಜಿಲ್ಲೆಯ ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಶಿವಮೊಗ್ಗ ನಗರದ ಮಟ್ಟಿಗೆ ಒಟ್ಟು ಸುಮಾರು 5,000ಮನೆಗಳನ್ನು ತಲುಪುವ ಉದ್ದೇಶ ಹೊಂದಲಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಅಂದಿನ ಗುಪ್ತ ಪತ್ರಿಕೆಗಳ ಮೂಲಕ ಜನರ ಬಾಯಿಂದ ಬಾಯಿಗೆ ಹರಡಿ ಗ್ರಾಮೀಣ ಪ್ರದೇಶದ ಜನರಲ್ಲಿಗೆ ತಲುಪಿ ಹೋರಾಟದ ರೂಪುರೇಷೆಗಳು ಸಿದ್ದಗೊಳ್ಳುತ್ತಿದ್ದವು. ಅದನ್ನೆ ಮಾದರಿಯಾಗಿಟ್ಟುಕೊಂಡು ಇಂತಹ ಕಾರ್ಯಕ್ರಮ ಯೋಜನೆಗೆ ಚಾಲನೆ ನೀಡಿದ್ದಾರೆ ಡಿಸಿಯವರು.
ಹಲವು ಸಾಧನೆಗಳಿಗಾಗಿ ಮೊದಲ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲೂ ಶೇ.100ರಷ್ಟು ಮತದಾನದಲ್ಲೂ ಅಗ್ರಪಂಕ್ತಿಯಲ್ಲಿದ್ದು, ಹೊಸಭಾಷ್ಯ ಬರೆಯುವಂತಾಗಲಿ. ಅದಕ್ಕಾಗಿ ಅರ್ಹ ಮತದಾರರು ತಮ್ಮ ಜವಾಬ್ದಾರಿಯರಿತು ಮತ ಚಲಾಯಿಸಬೇಕು. ಇತರರಿಗೆ ಮತದಾನಕ್ಕೆ ಪ್ರೇರಣೆಯಾಗಲಿ ಎನ್ನುತ್ತಾರೆ ಜಿಲ್ಲಾಧಿಕಾರಿಗಳು.
(ವರದಿ: ಡಾ.ಸುಧೀಂದ್ರ)
Discussion about this post