ಬೆಂಗಳೂರು: ರಾಜಕೀಯ ವೈರುಧ್ಯದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಅಧಿಕಾರಿಗಳ ಮೂಲಕ ನನ್ನ ಚಲನವಲನಗಳ ಮೇಲೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣಿರಿಸಿದ್ದು, ಈ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ರಾಜ್ಯ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಅವರು, ಕುಮಾರಸ್ವಾಮಿ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ತಮ್ಮ ಪುತ್ರನನ್ನು ಗೆಲ್ಲಿಸಲೇಬೇಕು ಎಂಬ ಕಾರಣದಿಂದ ತಮ್ಮ ವಿರುದ್ಧ ಇಂತಹ ಕೆಲಸಗಳನ್ನು ಸರ್ಕಾರಿ ಆಡಳಿತ ಯಂತ್ರದ ಮೂಲಕ ಮಾಡಿಸುತ್ತಿದ್ದಾರೆ. ಇದಕ್ಕಾಗಿ ನಮ್ಮ ಮನೆ ಸುತ್ತಮುತ್ತಲು ಹಾಗೂ ನಮ್ಮ ಚಲನವಲನಗಳ ಮೇಲೆ ಗುಪ್ತಚರ ಇಲಾಖೆ ಅಧಿಕಾರಿಗಳ ನಿಯೋಜಿಸಿದ್ದಾರೆ ಎಂದು ದೂರಿದ್ದಾರೆ.
ನಾವೇನು ಕ್ರಿಮಿನಲ್’ಗಳಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿಯ ಕೆಲಸಗಳು ಶೋಭೆತರುವುದಿಲ್ಲ. ಅಲ್ಲದೇ, ಇಂತಹ ಘಟನೆಗಳಿಂದ ನಮಗೆ ಭದ್ರತೆಯ ಆತಂಕ ಎದುರಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Discussion about this post