ಶಿಕಾರಿಪುರ: ಒತ್ತಡದ ಬದುಕಿನಲ್ಲಿ ಪೋಷಕರು ಮಕ್ಕಳನ್ನು ಹೆಚ್ಚು ಹಣಗಳಿಸುವ ಉದ್ಯೋಗಕ್ಕಾಗಿ ಬಾಲ್ಯದ ಸುಂದರ ಬದುಕಿನಿಂದ ವಂಚಿತವಾಗಿಸುತ್ತಿದ್ದು ಈ ದಿಸೆಯಲ್ಲಿ ಮಕ್ಕಳಿಗೆ ರಂಗಭೂಮಿಯ ಬಗ್ಗೆ ಪರಿಚಯಿಸುವ ಜತೆಗೆ ಸುಂದರ ಬಾಲ್ಯವನ್ನು ಸದಾಕಾಲ ಭವಿಷ್ಯದಲ್ಲಿ ಜ್ಞಾಪಿಸಿಕೊಳ್ಳುವ ರೀತಿಯಲ್ಲಿ ಬೇಸಿಗೆ ಶಿಬಿರವನ್ನು ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಇದೇ 5 ರಿಂದ 28 ರವರೆಗೆ ಆಯೋಜಿಸಲಾಗಿದೆ ಎಂದು ಕೇಂದ್ರದ ಸಂಸ್ಥಾಪಕ ಹಾಗೂ ರಂಗಕರ್ಮಿ ಇಕ್ಬಾಲ್ ಅಹ್ಮದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಡದ ಬದುಕಿನಲ್ಲಿ ಪೋಷಕರು ಮಕ್ಕಳನ್ನು ಆತುರ ಆತುರದಿಂದ ಬೆಳೆಸಿ ವೈದ್ಯ ಇಂಜಿನಿಯರ್ ಉದ್ಯಮಿಯಾಗಿಸಿ ಹೆಚ್ಚು ಹಣಗಳಿಸುವ ಯಂತ್ರವಾಗಿಸುವ ಬಗ್ಗೆ ಚಿಂತಿಸುತ್ತಿದ್ದು, ಈ ದಿಸೆಯಲ್ಲಿ ಸಿದ್ದವಾಗಿರುವ ಶಿಕ್ಷಣ ಕೇಂದ್ರಗಳು ಅಂತರ್ಜಾಲ ತಾಂತ್ರಿಕ ವ್ಯವಸ್ಥೆಯಿಂದ ಮಕ್ಕಳು ಕೇವಲ ಮನೆ ಶಾಲೆಗೆ ಸೀಮಿತವಾಗಿ ಸುಂದರವಾದ ಬಾಲ್ಯದಿಂದ ವಂಚಿತವಾಗಿ ಕಾವ್ಯಾತ್ಮಕ ಬದುಕನ್ನು ಆಸ್ವಾದಿಸಲು ಸಾದ್ಯವಾಗುತ್ತಿಲ್ಲ ಎಂದು ಬೇಸರಿಸಿದರು.
ಹಣದಿಂದ ಸರ್ವಸ್ವವನ್ನು ಗಳಿಸಲು ಸಾದ್ಯ ಎಂಬ ಪೋಷಕರ ತಪ್ಪುಕಲ್ಪನೆಗೆ ಬಾಲ್ಯದಲ್ಲಿನ ಈಜು, ಮರ, ಗಿಡ, ಆಕಾಶ, ನಕ್ಷತ್ರ, ಚಂದ್ರ, ಪ್ರಾಣಿ ಪಕ್ಷಿ, ನೆಲ, ಜಲ ಎಲ್ಲವನ್ನು ಮರೆತು ಕಾರು ಚಲಿಸುವ ರೀತಿಯಲ್ಲಿ ನೇರವಾಗಿ ಹಣ ದೊರಕುವ ಉದ್ಯೋಗಗಳಿಕೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸಲಾಗುತ್ತಿದೆ. ಅಂತರ್ಜಾಲ, ತಂತ್ರಜ್ಞಾನದ ಇಂದಿನ ಯುಗದಲ್ಲಿ ಜಗತ್ತನ್ನು ಕುಳಿತ ಸ್ಥಳದಲ್ಲಿಯೇ ವೀಕ್ಷಿಸಲು ಸಾಧ್ಯವಿದ್ದು ಆದರೆ ಈ ನೆಲದ ವಾಸ್ತವ ಬದುಕನ್ನು ಮರೆಯುತ್ತಿದ್ದೇವೆ ಎಂದರು.
ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ 22 ದಿನದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಸುಂದರ ಬಾಲ್ಯವನ್ನು ಜ್ಞಾಪಿಸುವ ರೀತಿಯಲ್ಲಿ ಬದುಕಿಗೆ ಅಗತ್ಯವಾದ ಮರಗಿಡ ಔಷಧೀಯ ಗಿಡ, ಸಾವಯವ ಗೊಬ್ಬರದ ಬಳಕೆ, ಮಕ್ಕಳ ಚಲನಚಿತ್ರ ವೀಕ್ಷಣೆ, ಚಿತ್ರಕಲೆ, ಗಾಳಿಪಟ ಹಾರಾಟ, ಆವಿಮಣ್ಣಲ್ಲಿ ಗೊಂಬೆಗಳ ನಿರ್ಮಾಣ, ಆಕಾಶ ವೀಕ್ಷಣೆ, ಗ್ರಹಗಳ ಪರಿಚಯ, ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ, ರಂಗಾಟ, ನೃತ್ಯ, ಚಿತ್ರಕಲೆ, ಕೋಲಾಟ, ಯಕ್ಷಗಾನದ ಹೆಜ್ಜೆ ಪರಿಚಯಿಸಲಾಗುವುದು. ಸುಂದರವಾದ ಆಡಿಟೋರಿಯಂ, ಗಿಡಮರಗಳ ಆಹ್ಲಾದಕರ ವಾತಾವರಣದಲ್ಲಿ ಶಿಬಿರಾರ್ಥಿಗಳಿಗೆ ಬೆಳದಿಂಗಳೂಟದ ಮೂಲಕ ವಿಶಿಷ್ಟ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರದ ಸಂಚಾಲಕ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸಿ ಸಂಸ್ಕೃತಿಯನ್ನು ಪರಿಚಯಿಸಲು ಸತತ 10 ವರ್ಷದಿಂದ ಆಯೋಜಿಸಲಾಗುತ್ತಿರುವ ಬೇಸಿಗೆ ಶಿಬಿರದಲ್ಲಿ ಮಕ್ಕಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶಿಬಿರದ ಸಂಚಾಲಕ ಎನ್. ನಾಗರಾಜಪ್ಪ ಜಕ್ಕಿನಕೊಪ್ಪ ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post