ನವದೆಹಲಿ: ದೇಶ ದೀಪಾವಳಿ ಸನಿಹದಲ್ಲೇ ಇರುವಂತೆ ಪಟಾಕಿ ಮಾರಾಟ ನಿಷೇಧ ವಿವಾದಕ್ಕೆ ತೆರೆ ಎಳೆದಿರುವ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ಆದೇಶ ಹೊರಡಿಸಿದೆ.
ಈ ಕುರಿತಂತೆ ಇಂದು ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಅರ್ಜನ್ ಕುಮಾರ್ ಸಿಕ್ರಿ ಅವರಿದ್ದ ಪೀಠ, ಪಟಾಕಿ ಮಾರಾಟದ ಮೇಲೆ ನಿಷೇಧ ಹೇರಲು ನಿರಾಕರಿಸಿದ್ದು, ಕಡಿಮೆ ಮಾಲಿನ್ಯ ಮತ್ತು ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಿದೆ.
ಡೆಸಿಬೆಲ್ ಧ್ವನಿ ಮಿತಿಯನ್ನು ಹೊಂದಿರುವ ಹಸಿರು ಪಟಾಕಿಗಳನ್ನೂ ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಮತಿಸಲಾಗುವುದು ಎಂದಿದ್ದು, ನಿಗದಿಪಡಿಸಿದ ಪ್ರದೇಶಗಳಲ್ಲಿ ಮಾತ್ರ ಸೀಮಿತ ಸಮಯದಲ್ಲಿ ಪಟಾಕಿ ಹೊಡೆಯಲು ಅನುವು ಮಾಡಿಕೊಟ್ಟಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8 ಗಂಟೆಯಿಂದ 10ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶವಿದ್ದು, ಕ್ರಿಸ್ ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜನರು ಮಧ್ಯರಾತ್ರಿ 11.55 ರಿಂದ 12.30 ವರಗೆ ಪಟಾಕಿ ಸಿಡಿಸಲು ಅನುಮತಿ ನೀಡಿದೆ.
ರಾಜಧಾನಿ ದೆಹಲಿ ಸೇರಿದಂತೆ ದೇಶದಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ, ಸುಪ್ರೀಂಕೋರ್ಟ್ ಕಳೆದ ವರ್ಷ ದೆಹಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಹಾಗೆಯೇ ದೇಶದಾದ್ಯಂತ ಪಟಾಕಿ ನಿಷೇಧಿಸುವಂತೆ ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು.
Discussion about this post