ಸೂರಜ್ ಸನಿಲ್ ಬಹುಶಃ ಇವರು ನಿಮಗೆಲ್ಲರಿಗೂ ಚಿರಪರಿಚಿತರು ಸರಳ ನಡೆ-ನುಡಿ ಮುಗ್ಧ ನಗು ಸೌಮ್ಯ ಸ್ವಭಾವ. ಇವರು ಮಂಗಳೂರಿನ ವೆಲೆನ್ಸಿಯಾ ನೆಹರು ರೋಡ್’ನಲ್ಲಿ ವಾಸವಿರುವ ರಾಜಗೋಪಾಲ್ ಮತ್ತು ಬೇಬಿ ಸನಿಲ್ ಇವರ ಇಬ್ಬರು ಮಕ್ಕಳಲ್ಲಿ ಮೊದಲನೆಯವರು ಗಾಯತ್ರಿ ಸನಿಲ್’ರ ಪ್ರೀತಿಯ ಅಣ್ಣ.ಸಣ್ಣ ವಯಸ್ಸಿನಿಂದಲೇ ಇವರಿಗೆ ನೃತ್ಯ ಎಂದರೆ ಅಚ್ಚುಮೆಚ್ಚು. ನೆರಳನ್ನೇ ನೋಡಿ ನೃತ್ಯ ಅಭ್ಯಾಸ ಮಾಡುತ್ತಿದ್ದ ಇವರು ಇಂದು ಎಷ್ಟೋ ಜನ ಮಕ್ಕಳಿಗೆ ತಾವೇ ನೃತ್ಯ ಗುರುವಾಗಿ ನೃತ್ಯಾಭ್ಯಾಸವನ್ನು ಮಾಡಿಸುತ್ತಿದ್ದಾರೆ.
ಇವರು ಮೂರನೆಯ ತರಗತಿ ಕಲಿಯುತ್ತಿದ್ದಾಗ ಮುಂಜಾನೆದ್ದು ಕುಂಬಾರಣ್ಣ ಅನ್ನೋ ಹಾಡಿಗೆ ನೃತ್ಯ ಮಾಡಿದ್ರಂತೆ ನಂತರ ಒಂದನೆಯ ತರಗತಿ ಹುಡುಗನಿಗೆ ನೃತ್ಯ ಕಲಿಸಿಕೊಟ್ಟು ಬಹುಮಾನ ಪಡೆದಿದ್ದರಂತೆ.
ಆಗ ಇವರ ವಯಸ್ಸು ಕೇವಲ ಎಂಟು ವರ್ಷ. ನಂತರ ಏಳನೆಯ ತರಗತಿ ಓದುತ್ತಿರುವಾಗ ಇವರಿಗೆ ಬೇರೆಯವರಿಗೆ ಕೂಡ ನೃತ್ಯವನ್ನು ಕಲಿಸಿ ಕೊಡಬೇಕೆಂಬ ಹಂಬಲ ಹುಟ್ಟಿಕೊಂಡಿತಂತೆ. ಅಂತೆಯೇ ಸುಮಾರು 600 ಜನರ ಕಾಲಿಗೆ ಗೆಜ್ಜೆಕಟ್ಟಿಸಿಯೇ ಬಿಟ್ಟರು. ನೃತ್ಯದ ಒಲವಿದ್ದವರಿಗೆ ನೃತ್ಯಾಭ್ಯಾಸವನ್ನು ಮಾಡಿಸಿದರು.
ನಂತರ ಎಂಟನೆಯ ತರಗತಿಯಲ್ಲಿ ಕೂಲ್ ಫ್ರೆಂಡ್ಸ್ ಆಫ್ ಡ್ಯಾನ್ಸ್ ಅಕಾಡೆಮಿ ಎಂಬ ನೃತ್ಯ ತರಬೇತಿ ಕೇಂದ್ರ ಆರಂಭಿಸಿ ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ನೃತ್ಯಾಭ್ಯಾಸವನ್ನು ಮಾಡಿಸಿದ್ದಾರೆ. ಇದರಲ್ಲಿ 400 ಮಕ್ಕಳಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರು ಬೆಸೆಂಟ್ ಗರ್ಲ್ಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ.
ಸೂರಜ್ (ಸೂರ್ಯ) ತನ್ನ ಪ್ರಕಾಶತೆಯಿಂದ ಲೋಕವನ್ನು ಹೇಗೆ ಬೆಳಗುತ್ತಾನೆಯೋ ಅಂತೆಯೇ ಈ ಸೂರಜ್ ಕೂಡ ಎಷ್ಟೋ ಜನ ಮಕ್ಕಳಿಗೆ ನೃತ್ಯದ ಬೆಳಕು ಹರಿಸಿದ್ದಾರೆ. ನೃತ್ಯದೊಂದಿಗೆ ನಟನೆಯಲ್ಲೂ ಆಸಕ್ತಿ ಇರುವ ಇವರಿಗೆ ಮಂಗಳೂರಿನಲ್ಲಿ ನಡೆದ ಪೊರ್ಲ ತೆಲಿಕೆ ಬೋಕ ನೋಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿತು. ಇದರ ಬೆನ್ನಲ್ಲೇ ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಾಗ ಪ್ರೀತಿಯಿಂದಲೇ ಮನೆಯವರನ್ನು ಒಪ್ಪಿಸಿದರು. ಮಕ್ಕಳ ಯಶಸ್ಸನ್ನು ಸದಾ ಬಯಸುವ ಪೋಷಕರು ಇವರ ಈ ಮಾತಿಗೆ ಸೈ ಎಂದರು.
ಇದರ ನಡುವಲ್ಲಿ ತೆಲುಗು, ತಮಿಳು, ಕನ್ನಡ ಸುಮಾರು ಹದಿನೈದು ರಿಯಾಲಿಟಿ ಶೋಗಳಲ್ಲಿ ಮಿಂಚಿದರು ನಟನೆಯ ತರಬೇತಿಗಾಗಿ ಬೆಂಗಳೂರಿನ ಎಎಪಿ ಸಂಸ್ಥೆಯಲ್ಲಿ ಉಷಾ ಭಂಡಾರಿ ಇವರಿಂದ ಮೂರು ತಿಂಗಳು ರಂಗಕಲೆಯನ್ನು ಕಲಿತರು.
ಹಾಗೆಯೇ ಅಲ್ಲಿ ಇಡಿಪಸ್ ನೀನು ಬಾ ಪಾತ್ರ ಮಾಡಿ ಹೊಗಳಿಕೆಗೆ ಪಾತ್ರರಾದರು ಇದು ಇವರ ಮೊದಲ ನಟನೆ ಮತ್ತು ಮರೆಯಲಾಗದ ಸಿಹಿನೆನಪು. ಅನಿಲ್ ಮ್ಯಾಥ್ಯೂ ಅವರ ಮೊದಲ ಮಲಯಾಳಂ ಚಿತ್ರ ಸ್ನೇಹ ತಾಳ್ವರಂ ಇದರಲ್ಲಿ ನಟಿಸಿ ಭಾಷೆ ಗೊತ್ತಿಲ್ಲದಿದ್ದರೂ ತನ್ನಲ್ಲಿರುವ ಅಪೂರ್ವ ಅಭಿನಯದಿಂದ ಉತ್ತಮ ನಾಯಕ ನಟ ಪ್ರಶಸ್ತಿ ಪಡೆದರು. ಇದರ ನಂತರ ಕುಡ್ಲದ ಕೆಫೆ ಎಂಬ ಚಿತ್ರದಲ್ಲಿ ಕಬಡ್ಡಿ ಆಟಗಾರನಾಗಿ ನಟಿಸುವ ಪಾತ್ರ ಸಿಕ್ಕಿತು. ನಂತರ ಪುಂಡಿ ಪಣವು ಚಿತ್ರದಲ್ಲಿ ನಾಯಕನಾಗಿ ನಟನೆ ಮಾಡುವ ಅವಕಾಶ ಒದಗಿಬಂತು. ಇದು ಕೂಡ ಒಳ್ಳೆಯ ಹೆಸರನ್ನು ತಂದುಕೊಟ್ಟಿತು.
ಕರಾವಳಿಯ ಹೆಸರಾಂತ ಚಾನೆಲ್ ನಮ್ಮ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಸೀಸನ್ ಒಂದು ಮತ್ತು ಎರಡರಲ್ಲಿ ನೃತ್ಯ ನಿರ್ದೇಶಕರಾಗಿದ್ದ ಇವರು ಮುಂದೆ ಅದೇ ಕಾರ್ಯಕ್ರಮದ ನಿರ್ಣಾಯಕರಾದರು. ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರ 5ನೆಯ ಹಂತದ ಉತ್ತಮ ನಿರ್ದೇಶಕ ಎಂಬ ಹೆಸರನ್ನು ಸಾಹಸಸಿಂಹ ವಿಷ್ಣುವರ್ಧನ್ ಇವರಿಂದ ಪಡೆದುಕೊಂಡರು.
ಡಿ ಡ್ಯಾನ್ಸ್ ತಮಿಳು, ಈಟಿವಿ ತೆಲುಗು ಈಟಿವಿ, ಕನ್ನಡ ಡಿ ಜೂನಿಯರ್ಸ್ ಮಮ್ಮಿ ಡ್ಯಾನ್ಸ್, ಸ್ಪಂದನ ಡ್ಯಾನ್ಸ್ ಕಾ ಸೂಪರ್ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ.
ಇವರ ಪ್ರತಿಭೆಯನ್ನು ಮುಂದುವರಿಸಲು ಸಹಕರಿಸಿದ ತಂದೆ-ತಾಯಿಗೆ, ಮುದ್ದಿನ ತಂಗಿಗೆ ವಂದಿಸುತ್ತಾ ಸದಾ ಜೊತೆಯಲ್ಲಿ ಇದ್ದು ಸಹಕರಿಸುತ್ತಿದ್ದ ಪ್ರೀತಿಯ ಗೆಳೆಯ ಪ್ರದೀಪ್ ಕೋಟ್ಯಾನ್ ರನ್ನು ನೆನೆಯುತ್ತಾರೆ ಸೂರಜ್.
ಇವರಿಗೆ ಒಳ್ಳೆಯ ನಟನಾಗುವ ಹೆಬ್ಬಯಕೆ. ಒಳ್ಳೆಯ ಕಥೆಗಳಿಗಾಗಿ ಕಾಯುತ್ತಿರುವ ಇವರಿಗೆ ಇನ್ನಷ್ಟು ಅವಕಾಶಗಳು ಅರಸಿ ಬರಲಿ. ತಾನೇ ಸ್ವತಹ ನೃತ್ಯ ಕಲಿತು ಇವತ್ತು ಎಷ್ಟೋ ಜನ ವಿದ್ಯಾರ್ಥಿಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ನೃತ್ಯ ಕಲಿಸಿಕೊಟ್ಟು ಗುರುವಿನ ಸ್ಥಾನದಲ್ಲಿರುವ ಇವರು ಮುನ್ನಡೆಯುವ ಹಾದಿಯು ಸುಗಮವಾಗಿರಲಿ ಬಯಸಿದ ಬಯಕೆಗಳು ಬಂಗಾರವಾಗಿ ಫಲ ಕೊಡಲಿ. ದೈವ ದೇವರುಗಳು ಹರಸಲಿ ಇವರ ಹೆಸರು ಇನ್ನಷ್ಟು ಉನ್ನತ ಶಿಖರಕ್ಕೆ ಏರಲಿ ನಾವು ಹಾಗೂ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಂಡ ಹಾರೈಸುತ್ತದೆ.
Discussion about this post