ಶಿವಮೊಗ್ಗ: ದೇಶದಲ್ಲಿಯೇ ಕರ್ನಾಟಕವು ಆತ್ಮಹತ್ಯೆ ಪ್ರಕರಣಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಪ್ರತಿ ನಲವತ್ತು ಸೆಕೆಂಡುಗಳಿಗೆ ಒಂದು ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಜಯಂತ್‌ಕುಮಾರ್ ಎಚ್ಚರಿಸಿದರು.
ನಗರದ ಭಾರತೀಯ ವೈದ್ಯಕೀಯ ಸಂಘ, ಕ್ಷೇಮ ಟ್ರಸ್ಟ್, ಭಾರತೀಯ ಮನೋವೈದ್ಯಕೀಯ ಸಂಘ, ಶಿವಮೊಗ್ಗ ಸೈಕಲ್ ಕ್ಲಬ್, ರೋಟರಿ ಶಿವಮೊಗ್ಗ ರಿವರ್ ಸೈಡ್, ಶಿವಮೊಗ್ಗ ರೋಟರಿ ಮಿಡ್‌ಟೌನ್ ಹಾಗೂ ನರ್ಸಿಂಗ್ ಕಾಲೇಜುಗಳ ಸಹಭಾಗತ್ವದಲ್ಲಿ ಇಂದು ಬೆಳಿಗ್ಗೆ ಆಯೋಜಿಸಲಾಗಿದ್ದ, ಆತ್ಮಹತ್ಯೆ ತಡೆಗಾಗಿ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಅತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಆತ್ಮಹತ್ಯೆ ತಡೆಗೆ ಪ್ರಯತ್ನ ನಡೆಸಬೇಕು ಎಂದು ಕರೆ ನೀಡಿದರು.
ದುರ್ಬಲ ಮನಸ್ಸು ಆತ್ಮಹತ್ಯೆಗೆ ಕಾರಣವಾಗಬಹುದು. ಹೀಗಾಗಿ ಪ್ರತೀ ವ್ಯಕ್ತಿಯಲ್ಲಿ ಮನೋಸ್ಥೈರ್ಯ ಮೂಡಿಸಬೇಕಾದ ಅಗತ್ಯವಿದೆ ಎಂದ ಅವರು, ಹೀಗಾಗಿ ಇಂದು ಆಪ್ತ ಸಮಾಲೋಚನೆ ಎಲ್ಲ ಕೇತ್ರಗಳಲ್ಲಿ ಅಗತ್ಯವಿದೆ ಎಂದರು.
ಆತ್ಮಹತ್ಯೆಯಿಂದ ಸಮಸ್ಯೆಯ ಪರಿಹಾರ ಎಂಬ ಆಲೋಚನೆಯೇ ಆತಂಕಕಾರಿ. ಸಮಸ್ಯೆ ಎಲ್ಲರಿಗೂ ಇದ್ದೇ ಇದೆ. ಆದರೆ, ಅದರ ಪ್ರಮಾಣ ಬೇರೆ ಬೇರೆ ಇರಬಹುದು. ಸಮಸ್ಯೆ ಇದೆ ಎಂದಾಕ್ಷಣ ಆತ್ಮಹತ್ಯೆ ಸರಿಯಲ್ಲ ಎಂದು ಎಚ್ಚರಿಸಿದ ಅವರು, ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಈ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ದಿಗಿಲು ಹುಟ್ಟಿಸುತ್ತದೆ. ಇದು ಅರಿವಿನ ಕೊರತೆಯ ಸಂಕೇತ ಎಂದು ಅರ್ಥೈಸಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಮಾತನಾಡಿ, ಆತ್ಮಹತ್ಯೆಗೆ ಇಂಥಹದ್ದೇ ಕಾರಣ ಎಂದು ನಿಖರವಾಗಿ ಹೇಳಲಾಗದು. ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕಾಗಿ ಇದು ನಡೆಯಬಹುದು. ಹೀಗಾಗಿ, ಇದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜವಾಬ್ದಾರಿ ಮುಖ್ಯ. ಸಮಷ್ಟಿ ಪ್ರಯತ್ನದ ಮೂಲಕ ಅರಿವನ್ನು ಮೂಡಿಸಿ, ಆತ್ಯಹತ್ಯೆಗಳನ್ನು ತಡೆಯುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜ್ ಮಾತನಾಡಿ, ಆತ್ಮಹತ್ಯೆ ತಡೆಯ ಮಹತ್ವವನ್ನು ವಿವರಿಸಿ ಕಾನೂನಾತ್ಮಕವಾದ ಸಮಸ್ಯೆಗಳನ್ನು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಮನೋವೈದ್ಯೆ ಡಾ.ಕೆ.ಎಸ್. ಪವಿತ್ರಾ ಅವರು ಬರೆದಿರುವ ಹದಿಹರೆಯದ ಹದ ಹಾಗೂ ಮನಮಂಜರಿ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಐಎಂಎ ಸಭಾಂಗಣದಲ್ಲಿ ಆರಂಭವಾದ ಈ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳನ್ನು ಹಾದು ನೆಹರೂ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.
ಮನೋವೈದ್ಯರಾದ ಡಾ.ಕೆ.ಆರ್. ಶ್ರೀಧರ, ಡಾ.ಕೆ.ಎಸ್. ಪವಿತ್ರಾ, ಡಾ. ಕೆ.ಎಸ್. ಶುಭ್ರತಾ, ಡಾ. ಹರೀಶ್ ದೆಲಂತಬೆಟ್ಟು, ಡಾ. ರಜನಿ ಪೈ, ಡಾ. ಎನ್.ಎಲ್. ನಾಯಕ್, ನರರೋಗ ತಜ್ಞ ಡಾ.ಎಸ್.ಟಿ. ಅರವಿಂದ್, ರೋಟರಿ ಜಿಲ್ಲಾ ಉಪರಾಜ್ಯಪಾಲ ಜಿ. ವಿಜಯಕುಮಾರ್, ಎಂ. ಮುರಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
Discussion about this post