ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ ಹಬ್ಬದ (Diwali Special Train) ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು (SWR Bengaluru) ಯಶವಂತಪುರ–ಮಡಗಾಂವ್ ಮತ್ತು ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಎರಡೂ ಮಾರ್ಗಗಳಲ್ಲಿ ತಲಾ ಒಂದು ಟ್ರಿಪ್ ವಿಶೇಷ ರೈಲು ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ದೊರೆಯಲಿದೆ.
SWR Bengaluru: ನ.6ರಂದು ಯಶವಂತಪುರದಿಂದ ಮಡಗಾಂವ್ಗೆ ವಿಶೇಷ ರೈಲು
ರೈಲು ಸಂಖ್ಯೆ 06591 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್ಪ್ರೆಸ್ 2026ರ ನವೆಂಬರ್ 6ರ ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಪ್ರಯಾಣ ಆರಂಭಿಸಲಿದೆ. ಮರುದಿನ ಅಂದರೆ ನವೆಂಬರ್ 7ರ ಶನಿವಾರ ಸಂಜೆ 6:10ಕ್ಕೆ ಮಡಗಾಂವ್ ತಲುಪಲಿದೆ.
ನ.8ರಂದು ಮಡಗಾಂವ್ನಿಂದ ಬೆಂಗಳೂರಿಗೆ ವಿಶೇಷ ರೈಲು
ರೈಲು ಸಂಖ್ಯೆ 06592 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್ಪ್ರೆಸ್ ನವೆಂಬರ್ 8ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮಡಗಾಂವ್ನಿಂದ ಹೊರಡಲಿದೆ. ನವೆಂಬರ್ 9ರ ಸೋಮವಾರ ಬೆಳಗ್ಗೆ 5:20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ
ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಮರು ಪ್ರಯಾಣದ ವೇಳೆ ರೈಲು ಸಂಖ್ಯೆ 06592 ಯಶವಂತಪುರ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುವುದಿಲ್ಲ. ಬದಲಾಗಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್ಎಂವಿಟಿ ಬೆಂಗಳೂರು) ನಿಲ್ದಾಣದಲ್ಲಿ ನಿಲುಗಡೆ ಇರಲಿದೆ.
Also Read>> ಶಿವಮೊಗ್ಗದ ಯುವಕರನ್ನು ಸಂಘಟಿಸುವ ಹೊಣೆ ಟಿ.ಡಿ. ಗೀತೇಂದ್ರ ಹೆಗಲಿಗೆ
ಒಟ್ಟು 19 ಬೋಗಿಗಳ ವ್ಯವಸ್ಥೆ
ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ರೈಲಿನಲ್ಲಿ ಒಟ್ಟು 19 ಬೋಗಿಗಳನ್ನು ಅಳವಡಿಸಲಾಗಿದೆ. ಎಸಿ (AC), ಸ್ಲೀಪರ್ ಕ್ಲಾಸ್, ಜನರಲ್ ಕ್ಲಾಸ್ ಬೋಗಿಗಳ ಜತೆಗೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗಚೇತನ ಪ್ರಯಾಣಿಕರಿಗಾಗಿ ಮೀಸಲಾದ ಬೋಗಿಯೂ ಇರಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈ ವಿಶೇಷ ರೈಲು ಸೇವೆಯಿಂದ ದೀಪಾವಳಿ ಸಂದರ್ಭದಲ್ಲಿ ಕರ್ನಾಟಕ ಮತ್ತು ಗೋವಾ ನಡುವೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










