ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತೀಯ ರೈಲ್ವೆಯ ಮೈಸೂರು ವಿಭಾಗದ ರೈಲುಗಳಲ್ಲಿ ಟಿಕೆಟ್ ರಹಿತ ಹಾಗೂ ಅಕ್ರಮ ಪ್ರಯಾಣಗಳಿಗೆ ಈ ನವೆಂಬರ್ ಒಂದು ತಿಂಗಳಿನಲ್ಲಿ ವಿಧಿಸಲಾದ ದಂಡದಿಂದ ಭಾರೀ ಆದಾಯ ಗಳಿಸಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಮೈಸೂರು ವಿಭಾಗವು ತನ್ನ ವ್ಯಾಪ್ತಿಯೊಳಗಿನ ರೈಲುಗಳು ಮತ್ತು ನಿಲ್ದಾಣಗಳಲ್ಲಿ ಟಿಕೆಟ್ ಪರಿಶೀಲನೆ ಹಾಗೂ ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಟಿಕೆಟ್ ಪರಿಶೀಲನಾ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದೆ.
ಈ ನವೆಂಬರ್ ತಿಂಗಳಲ್ಲಿ ಮೈಸೂರು ವಿಭಾಗವು ಟಿಕೆಟ್ ರಹಿತ ಹಾಗೂ ಅಕ್ರಮ ಪ್ರಯಾಣದ 18,095 ಪ್ರಕರಣಗಳನ್ನು ಪತ್ತೆಹಚ್ಚಿ ರೂ. 89.37 ಲಕ್ಷ ಆದಾಯವನ್ನು ಗಳಿಸಿದೆ. ಇದು 2024ರ ನವೆಂಬರ್’ನಲ್ಲಿ ಪತ್ತೆಯಾದ 16,071 ಪ್ರಕರಣಗಳು ಮತ್ತು ರೂ. 71.16 ಲಕ್ಷ ಆದಾಯದೊಂದಿಗೆ ಹೋಲಿಸಿದಾಗ, ಪ್ರಕರಣಗಳಲ್ಲಿ 12% ಮತ್ತು ಆದಾಯದಲ್ಲಿ 21% ಏರಿಕೆಯನ್ನು ತೋರಿಸಿದೆ.
2025ರ ಏಪ್ರಿಲ್ 1 ರಿಂದ ನವೆಂಬರ್ 30ರವರೆಗಿನ (ಆರ್ಥಿಕ ವರ್ಷ 2025-26) ಒಟ್ಟು ಅವಧಿಯಲ್ಲಿ ಮೈಸೂರು ವಿಭಾಗವು 1.48 ಲಕ್ಷ ಟಿಕೆಟ್ ಪರಿಶೀಲನಾ ಪ್ರಕರಣಗಳನ್ನು ದಾಖಲಿಸಿ ರೂ. 7.50 ಕೋಟಿ ಆದಾಯವನ್ನು ಗಳಿಸಿದೆ. ಇದರ ಹೋಲಿಕೆಯಲ್ಲಿ, ಹಿಂದಿನ ಆರ್ಥಿಕ ವರ್ಷದ (2024-25) ಇದೇ ಅವಧಿಯಲ್ಲಿ 1.35 ಲಕ್ಷ ಪ್ರಕರಣಗಳು ಪತ್ತೆಯಾಗಿದ್ದು ರೂ. 6.25 ಕೋಟಿ ಆದಾಯ ಲಭಿಸಿತ್ತು. ಇದು ಪ್ರಕರಣಗಳಲ್ಲಿ 9% ಹಾಗೂ ಆದಾಯದಲ್ಲಿ 17% ಬೆಳವಣಿಗೆಯನ್ನು ಸೂಚಿಸಿದೆ.
ಈ ಸಾಧನೆಗೆ ನಿರಂತರ ಟಿಕೆಟ್ ಪರಿಶೀಲನಾ ಅಭಿಯಾನಗಳು, ವಿಶೇಷ ಜಾಗೃತಿ ಹಾಗೂ ನಿಯಂತ್ರಣ ಕಾರ್ಯಾಚರಣೆಗಳು ಮತ್ತು ನಿಲ್ದಾಣಗಳು ಹಾಗೂ ರೈಲುಗಳಲ್ಲಿನ ಅಚಾನಕ್ ತಪಾಸಣೆಗಳು ಪ್ರಮುಖ ಕಾರಣಗಳಾಗಿವೆ. ಈ ಕ್ರಮಗಳು ಅಕ್ರಮ ಪ್ರಯಾಣವನ್ನು ತಡೆಗಟ್ಟುವ ಜೊತೆಗೆ, ನಿಯಮಾನುಸರಣೆಯನ್ನು ಉತ್ತೇಜಿಸಿ ಪ್ರಯಾಣಿಕರ ಅನುಭವವನ್ನು ಮತ್ತಷ್ಟು ಸುಧಾರಿಸಲು ಸಹಕಾರಿಯಾಗಿವೆ.
ಅಧಿಕೃತ ಟಿಕೇಟ್ ಪಡೆಯುವ ಮೂಲಕ ಮಾತ್ರ ರೈಲಿನಲ್ಲಿ ಪ್ರಯಾಣಿಸಬೇಕು ಎಂದು ಮೈಸೂರು ವಿಭಾಗ ಪ್ರಯಾಣಿಕರಿಗೆ ಮನವಿ ಮಾಡಿದೆ.
ಮುಂದಿನ ಹಬ್ಬದ ಹಾಗೂ ಗರಿಷ್ಠ ಪ್ರಯಾಣ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಎಲ್ಲ ಪ್ರಯಾಣಿಕರಿಗೆ ಸುರಕ್ಷಿತ, ಕ್ರಮಬದ್ಧ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸುವ ಉದ್ದೇಶದಿಂದ ನೈಋತ್ಯ ರೈಲ್ವೆಯು ಟಿಕೆಟ್ ಪರಿಶೀಲನಾ ಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















