ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತೀಯ ಧರ್ಮವನ್ನು ‘ಸನಾತನ ಧರ್ಮ’ ಎಂದು ಕರೆಯುತ್ತಾರೆ. ಸನಾತನ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದ ಎಂದರ್ಥ.
ಸನಾತನ ಧರ್ಮದ ಅದ್ಭುತ ಜ್ಞಾನ ಭಂಡಾರದಲ್ಲಿ ಯೋಗಾಸನ ಸಹ ಒಂದು. ಯೋಗ ಎಂಬ ಶಬ್ದ ಸಂಸ್ಕೃತ ಭಾಷೆಯ ‘ಯಜ್’ ಪದದಿಂದ ನಿಷ್ಪತ್ತಿಗೊಂಡಿದೆ. ಯೋಗವೆಂದರೆ ಜೋಡಿಸು, ಸೇರಿಸು, ಜತೆ ಕೂಡಿಸು ಎಂಬ ಅರ್ಥಗಳಿವೆ. ಪತಂಜಲಿ ಮಹರ್ಷಿಗಳು ಯೋಗವೆಂದರೆ “ಯೋಗಶ್ಚಿತ್ತ ವೃತ್ತಿ ನಿರೋಧ” ಎಂದಿದ್ದಾರೆ.
ಚಿತ್ತ ವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ. ಚಿತ್ತದ ವೃತ್ತಿಗಳನ್ನು, ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಬುದ್ಧಿ, ಮನಸ್ಸು, ದೇಹ ಎಲ್ಲವನ್ನೂ ನಿಯಂತ್ರಿಸಿ ಆರೋಗ್ಯ ಪ್ರದಾನಿಸುವ ಶಕ್ತಿ ಯೋಗದಲ್ಲಿದೆ. ಆಧ್ಯಾತ್ಮಿಕ, ಮಾನಸಿಕ, ದೈಹಿಕ, ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಇದು ಭಾರತವು ವಿಶ್ವಮಾನ್ಯಗೊಳಿಸಿದ ಚಿರಂತನ ವಿದ್ಯೆ. ಯೋಗವು ಭಾರತೀಯ ಸನಾತನ ಪರಂಪರೆಯ ತಾಯಿ ಬೇರಾಗಿದೆ. ಭಾರತವು ಸಮಸ್ತ ವಿಶ್ವಕ್ಕೆ ನೀಡಿದ ಅತಿ ಪ್ರಮುಖ ಕೊಡುಗೆಗಳಲ್ಲಿ ಯೋಗವೂ ಒಂದಾಗಿದೆ. ಪ್ರಾಚೀನ ಕಾಲದ ಸಂತರು, ಋಷಿಗಳು, ಮಹಾತ್ಮರು ಸಂಶೋಧಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದೆ. ಯಾವುದೇ ವಯೋಮಾನದವರು ಕೂಡ ಯೋಗವನ್ನು ಮಾಡಿ ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಬಹುದು. ಯೋಗವು ವ್ಯಕ್ತಿಯೊಬ್ಬನ ಆಂತರಿಕ ಸಾಮರ್ಥ್ಯವನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ಅಭಿವೃದ್ಧಿ ಪಡಿಸಲು ಇರುವ ಒಂದು ಅಪೂರ್ವವಾದ ವಿಧಾನ. ಯೋಗಾಸನಗಳು ನಮ್ಮಲ್ಲಿನ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ.
ಆಧ್ಯಾತ್ಮಿಕ ವ್ಯಾಯಾಮ ಎಂದು ಕರೆಯಲ್ಪಡುವ ಯೋಗವು ಪ್ರಾಚೀನ ವ್ಯಾಯಾಮದ ವಿಧಾನವಾಗಿದೆ. ಕಾಲಿನ ಅಂಗುಷ್ಠದಿಂದ ಶಿರದವರೆಗಿನ ಎಲ್ಲ ಅಂಗಗಳಗನ್ನು ಸರಿಯಾದ ಪ್ರಮಾಣದಲ್ಲಿ ಪ್ರಚೋದಿಸಿ, ನಿಯಂತ್ರಿಸಿ ಶಿಸ್ತುಬದ್ಧ ವ್ಯಾಯಾಮವನ್ನು ಓದಗಿಸುವ ಸಾವಿರಾರು ಭಂಗಿಗಳಿವೆ. ಭಾರತವು ಯೋಗಾಸನದಲ್ಲಿ ವಿಶ್ವಗುರು ಎಂಬ ಖ್ಯಾತಿಯನ್ನು ಪಡೆದರೆ ಶ್ರೀಕೃಷ್ಣನ ನಾಡು ಉಡುಪಿಯ ತನುಶ್ರೀ ಪಿತ್ರೊಡಿ ಎಂಬ ಹನ್ನೆರಡು ವರ್ಷದ ಬಾಲಕಿ ಈಗಾಗಲೇ ಆರು ವಿಶ್ವದಾಖಲೆಗಳನ್ನು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಶ್ರೀಮತಿ ಸಂಧ್ಯಾ ಹಾಗೂ ಉದಯ ಕುಮಾರ್ ಪಿತ್ರೋಡಿ ದಂಪತಿಗಳ ಪ್ರಥಮ ಪುತ್ರಿ ತನುಶ್ರೀ. ಉಡುಪಿಯ ಸೈಂಟ್ ಸಿಸಿಲೀಸ್ ಕನ್ನಡ ಮಾಧ್ಯಮ ಶಾಲೆಯ ಏಳನೆ ತರಗತಿಯಲ್ಲಿರುವ ತನುಶ್ರೀ ಅವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಮುಂದಿದ್ದಾರೆ.
ತನುಶ್ರೀ ಅವರು ತಮ್ಮ ಹನ್ನೆರಡರ ಹರೆಯದೊಳಗೆ ಆರು ವಿಶ್ವದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
(1) ನವೆಂಬರ್ 11, 2017ರಂದು ಉಡುಪಿಯಲ್ಲಿ ನಿರಾಲಂಬ ಚಕ್ರಾಸನ ಎಂಬ ಅತ್ಯಂತ ಕಠಿಣ ಯೋಗಾಸನವನ್ನು ಒಂದು ನಿಮಿಷದಲ್ಲಿ ಹತ್ತೊಂಬತ್ತು ಸಲ ಮಾಡುವ ಮೂಲಕ ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಇದರಲ್ಲಿ ತಮ್ಮ ಪ್ರಥಮ ವಿಶ್ವ ದಾಖಲೆಯನ್ನು ಬರೆದವರು.
(2) ಎಪ್ರಿಲ್ 7, 2018ರಂದು ವೆಂಕಟರಮಣ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ (ರಿ) ಪಿತ್ರೋಡಿ ನಡೆಸಿದ ಕಾರ್ಯಕ್ರಮದಲ್ಲಿ “ವಕ್ಷಸ್ಥಳವನ್ನು ಒಂದೇ ನಿಲುವಿನಲ್ಲಿ ನಿಲ್ಲಿಸಿ ಶರೀರದ ಉಳಿದ ಭಾಗವನ್ನು ಪ್ರದಕ್ಷಿಣಾಕಾರದಲ್ಲಿ ತಿರುಗಿಸುವ (Most full Body revolution maintaining a chest stand position) ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ಗಿನ್ನಿಸ್ ಬುಕ್ ನಲ್ಲಿ ವಿಶ್ವ ದಾಖಲೆ ಬರೆದರು.
(3) ಫೆಬ್ರವರಿ 19, 2019ರಂದು ಉಡುಪಿಯ ಸೈಂಟ್ ಸಿಸಿಲೀಸ್ ಸಮೂಹ ಸಂಸ್ಥೆಗಳ ಕ್ರೀಡಾಂಗಣದಲ್ಲಿ ತನುಶ್ರೀ ಅವರು ಧನುರಾಸನ ಭಂಗಿಯಲ್ಲಿ ತಿರುಗುತ್ತ (Most number of rolls in one minute in Dhanurasana posture) ಒಂದು ನಿಮಿಷದಲ್ಲಿ ಅರುವತ್ತೊಂದು ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ.
(4) ಅದೇ ದಿನ ಅದೇ ಕ್ರೀಡಾಂಗಣ, ಅದೇ ಧನುರಾಸನದ ಭಂಗಿಯಲ್ಲಿ ಅವರು ಒಂದು ನಿಮಿಷ ನಲ್ವತ್ತು ಸೆಕೆಂಡಿನಲ್ಲಿ ತೊಂಬತ್ತೊಂದು ಬಾರಿ ಮಾಡಿ ನಾಲ್ಕನೆ ವಿಶ್ವದಾಖಲೆಯನ್ನು ಬರೆಸಿದ್ದಾರೆ.
(5) ಫೆಬ್ರವರಿ 22, 2020 ರಂದು ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಚಕ್ರಾಸನ ಓಟದಲ್ಲಿ ನೂರು ಮೀಟರ್ ಅಂತರವನ್ನು ಕೇವಲ ಒಂದು ನಿಮಿಷ ಹದಿನಾಲ್ಕು ಸೆಕೆಂಡಿನಲ್ಲಿ ಕ್ರಮಿಸಿ ಐದನೆಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಐದನೆಯ ಜಾಗತಿಕ ದಾಖಲೆಯನ್ನು ದಾಖಲಿಸಿದ್ದಾರೆ.
(6) ಫೆಬ್ರವರಿ 6, 2021ರಂದು ಸಂತ ಸಿಸಿಲೀಸ್ ಕ್ರೀಡಾಂಗಣದಲ್ಲಿ ತಮ್ಮ ಹೆಸರಿಗೆ ಆರನೆಯ ವಿಶ್ವದಾಖಲೆ ಬರೆಸಿಕೊಂಡರು. Most backward body skip in one minute ಎಂಬ ಭಂಗಿಯಲ್ಲಿ ಐವತ್ತೈದು ಬಾರಿ ಉರುಳುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ.
ಜೂನ್ 21, 2018ರಂದು ವಿಶ್ವ ಯೋಗ ದಿನದಂದು ಕನ್ನಡ ವಾರ್ತಾ ವಾಹಿನಿ ಪಬ್ಲಿಕ್ ಟಿ. ವಿ. ಯವರಿಂದ ತನುಶ್ರೀ ಅವರು ‘ಪಬ್ಲಿಕ್ ಹೀರೋ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ನವೆಂಬರ್ 14, 2018ರಂದು ಇಟಲಿಯ ರೂಮಿನಲ್ಲಿ ವಿಶ್ವ ಗಿನ್ನಿಸ್ ದಾಖಲೆಯ ಸಾಧಕರೊಂದಿಗೆ ಯೋಗ ಪ್ರದರ್ಶನ ನೀಡಿದ್ದಾರೆ. ಐದನೆಯ ವಿಶ್ವ ಯೋಗ ದಿನಾಚರಣೆ ಜೂನ್ 21, 2019ರಂದು ನಡೆದಾಗ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ‘ಯೋಗ ರತ್ನ’ ಪ್ರಶಸ್ತಿಯನ್ನು ಪಡೆದಿದ್ದಾರೆ. ತನುಶ್ರೀ ಅವರು ಮುನ್ನೂರಕ್ಕೂ ಅಧಿಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಕಲ್ಹರ್ಸ್ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಮಜಾಟಾಕೀಸಿನ ಎರಡು ಸಂಚಿಕೆಗಳಲ್ಲಿ ಭಾಗವಹಿಸಿ ಯೋಗಾಸನ ಪ್ರದರ್ಶನ ನೀಡಿ ಸೃಜನ್ ಲೋಕೇಶ್, ಅರ್ಜುನ್ ಸರ್ಜಾ, ಇಂದ್ರಜಿತ್ ಲಂಕೇಶ್ ಮೊದಲಾದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತನುಶ್ರೀ ಅವರು ಯೋಗಾಸನದಲ್ಲಿ ಅವಿರತ ಪ್ರಯತ್ನ ಪಡುತ್ತಲೇ ನೃತ್ಯ, ಯಕ್ಷಗಾನ ಮತ್ತು ಭರತನಾಟ್ಯ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತ ನಿರಂತರ ಪ್ರದರ್ಶನಗಳನ್ನು ನೀಡುತ್ತ ಬಂದಿದ್ದಾರೆ. ಮೂರರ ಹರೆಯದಲ್ಲಿ ಉಡುಪಿಯ ಮಾಸ್ಟರ್ ಡ್ಯಾನ್ಸ್ ಗ್ರೂಪ್ ಇವರಲ್ಲಿ ನೃತ್ಯ ತರಬೇತಿಗೆ ಸೇರಿದವರು. ಮುದ್ದು ಕೃಷ್ಣ ಸ್ಪರ್ಧೆ, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿದ್ದಾರೆ. ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಫೈನ್ ಆರ್ಟ್ಸ್ ಉಡುಪಿ ಇಲ್ಲಿಯ ನೃತ್ಯ ಗುರು ಶ್ರೀ ರಾಮಕೃಷ್ಣ ಕೊಡಂಚ ಅವರಿಂದ ಭರತನಾಟ್ಯ, ಯೋಗಗುರು ಶ್ರೀ ಹರಿರಾಜ್ ಕಿನ್ನಿಗೋಳಿ ಅವರಿಂದ ಯೋಗ, ಯಕ್ಷಗುರು ಶ್ರೀ ಆದಿತ್ಯ ಅಂಬಲಪಾಡಿ ಅವರಿಂದ ಯಕ್ಷಗಾನವನ್ನು ಅಭ್ಯಾಸ ಮಾಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಶ್ರೀಕೃಷ್ಣಾಷ್ಟಮಿಯಂದು ಹುಲಿವೇಷ ಹಾಕಿ ಉಡುಪಿಯ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೇವಲ ಹನ್ನೆರಡನೆಯ ಹರೆಯದಲ್ಲಿ ಆರು ವಿಶ್ವದಾಖಲೆಗಳನ್ನು ಬರೆಸಿಕೊಂಡು, ನೂರಾರು ಭರತನಾಟ್ಯ ಹಾಗೂ ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವ ತನುಶ್ರೀ ಅವರು ಅಸಂಖ್ಯಾತ ವೇದಿಕೆಗಳಲ್ಲಿ ಸನ್ಮಾನಿತರಾಗಿದ್ದಾರೆ. ಅವರ ಸಾಧನೆಯನ್ನು ಕಂಡು ಅವರ ಹೆತ್ತವರೊಂದಿಗೆ ನಾಡಿಗೆ ನಾಡೇ ಸಂಭ್ರಮಿಸುತ್ತಿದೆ. ಭವಿತ್ಯದಲ್ಲೂ ಮತ್ತಷ್ಟು ಮಗದಷ್ಟು ಸಾಧನೆಗಳು ತನುಶ್ರೀ ಅವರಿಂದ ನಡೆಯಲಿ, ತನ್ಮೂಲಕ ಉಡುಪಿಗೆ, ರಾಜ್ಯಕ್ಕೆ, ರಾಷ್ಟ್ರಕ್ಕೆ ಗೌರವ ಪ್ರಾಪ್ತಿಯಾಗಲಿ.
(ಮಾಹಿತಿ ಚಿತ್ರಕೃಪೆ ವೀಡಿಯೋ ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post