ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರತಿಭೆಯೆಂದರೆ ಕರೆಯದೇ ಬರುವ ಕಲಿತರೆ ಜೊತೆಗಿದ್ದು ಕೈ ಹಿಡಿಯುವ ಮಹತ್ತರ ಆಸ್ತಿ. ಈ ಆಸ್ತಿಯನ್ನು ಅನೇಕರು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಿದ್ದರೆ, ಇನ್ನು ಕೆಲವರು ಎಲೆಮರೆಯ ಕಾಯಿಯಂತೆ ಎಲ್ಲೋ ಮರೆಯಾಗಿಬಿಡುತ್ತಾರೆ. ಇಂತಹ ಸಹಸ್ರಾರು ಕಲಾವಿದರ ಮಧ್ಯೆ ನಾವಿಂದು ನಿಮಗೆ ಪರಿಚಯಿಸಲು ಹೊರಟಿರುವುದು ನಮ್ಮ ಮೂಡಬಿದಿರೆಯ ಪಟಾಕಿಯ ಬಗ್ಗೆ.
ಹೌದು, ಈ ಅಸಾಮಾನ್ಯ ಪ್ರತಿಭೆ ಇನ್ನಾರು ಅಲ್ಲ, ನಟನೆಯ ಮಾಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಮಂತ್ರಮುಗ್ಧರನ್ನಾಗಿಸಿ, ನಿರೂಪಣೆಯ ಮೂಲಕ ಜನಮನವನ್ನು ಗೆದ್ದು, ಅಶಕ್ತರಿಗೆ ಸೇವೆ ಮಾಡುವ ಮನದಿಂದ ಆರದಿರಲಿ ಬದುಕು ಆರಾಧನಾ ಸಂಸ್ಥೆ ರಚಿಸಿ ಆ ಮೂಲಕ ಸುಮಾರು ಎಪ್ಪತ್ತು ಜನರನ್ನು ಒಟ್ಟುಗೂಡಿಸಿ ಒಂದೂವರೆ ವರ್ಷದಿಂದ ಆರೂವರೆ ಲಕ್ಷ ರೂ.ಗೂ ಮಿಗಿಲಾದ ಹಣ ಸಂಗ್ರಹಿಸಿ, ಅಶಕ್ತರಿಗೆ ಬದುಕು ಕಟ್ಟಿಕೊಟ್ಟು ಪ್ರಸ್ತುತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಆರಾಧನಾ ಭಟ್.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಿರಿದಾದ ಸೇವೆ ಮಾಡೋದು ಸುಲಭದ ಮಾತಲ್ಲ ಆದರೂ ಈ ಕನಸಿಗೆ ಬೆನ್ನೆಲುಬಾಗಿ ನಿಂತು ಸಹಕಾರ ನೀಡುತ್ತಿರುವವರು ಇವರ ತಂದೆ ರಾಜಗಿರಿ ಮೈಸೂರು ಮತ್ತು ತಾಯಿ ಪದ್ಮಶ್ರೀ ಭಟ್.
ತಮ್ಮ ಕಿರಿಯ ವಯಸ್ಸಿನಲ್ಲಿಯೇ ಬಾಲ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಕಥೆ ಹೇಳುವುದು, ಆಶುಭಾಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಲು ಪಣತೊಟ್ಟು ಪರಿಶ್ರಮಿಸಿದವರು. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡವರು. ಪ್ರತಿಭಾ ಕಾರಂಜಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗೆದ್ದವರು.
ಕಲರ್ಸ್ ಕನ್ನಡದ ಪ್ರಸಿದ್ಧ ಶೋ ಆಗಿರುವ ಮಜಾಭಾರತ ಮತ್ತು ಮಜಾಟಾಕೀಸ್’ಗಳಲ್ಲಿ ತಮ್ಮ ಮಾತು, ನಟನೆಯ ಮೂಲಕ ಕರ್ನಾಟಕದಾದ್ಯಂತ ತಲುಪಿ ಪರಿಚಯಗೊಂಡ ಇವರು ಎಂಟು ಕನ್ನಡ ಚಿತ್ರ ಮತ್ತು ಒಂದು ತುಳು ಚಲನಚಿತ್ರದಲ್ಲಿ ನಟಿಸಿದ್ದಾರೆ.
ಡಾ. ಪ್ರಶಾಂತ್ ಮಾರ್ಲ ಇವರ ನಿರ್ಮಾಣದ ಜೀವನ ವಿಲೀನ ಎಂಬ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಆರಾಧನ ಭಟ್ ಇದರಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕರುನಾಡ ಕಂದ, ಪುಟಾಣಿ ಪರ್ವ, ರಾಜಕುಮಾರ, ಕರ್ಣೆ ಎಂಬ ಚಿತ್ರಗಳು ತೆರೆಕಂಡಿದ್ದು, ಪುಟಾಣಿ ಪವರ್ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿದೆ.
ಈ ಅಸಾಮಾನ್ಯ ಸಾಧನೆಗೆ ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ ಅವುಗಳಲ್ಲಿ ಮುಖ್ಯವಾಗಿ ಕರ್ನಾಟಕ ಪ್ರತಿಭಾರತ್ನ 2014, ಜಿಲ್ಲಾ ರಾಜ್ಯೋತ್ಸವ 2017, ಸಮಾಜ ಸೇವೆಗೆ ಸಾಮಾಜಿಕ ಕಳಕಳಿ ಪ್ರಶಸ್ತಿ 2019, ಸಾಧನಾಶ್ರೀ ಪ್ರಶಸ್ತಿ 2019, ವಿವೇಕ್ ಪುರಸ್ಕಾರ 2019, ಸೇವಾರತ್ನ ಪ್ರಶಸ್ತಿ ಹೀಗೆ ಸಂಘ ಸಂಸ್ಥೆಗಳ ಮೂಲಕವೂ ಅನೇಕ ಪ್ರಶಸ್ತಿ ದೊರೆತು 700 ಮಿಕ್ಕಿದ ಪ್ರಶಸ್ತಿಗಳ ಒಡತಿಯಾಗಿದ್ದಾರೆ.
ಈ ಸಾಧನೆಗೆ ಇನ್ನೂ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬರಲಿ, ನಿಮ್ಮ ಸಾಮಾಜಿಕ ಚಿಂತನೆಗಳು ಇನ್ನೂ ದೃಢಗೊಳ್ಳಲಿ, ಶೈಕ್ಷಣಿಕ ಜೀವನಕ್ಕೂ ಯಶಸ್ಸು ದೊರೆತು ನಟನಾ ಕ್ಷೇತ್ರದಲ್ಲೂ ಸ್ಥಾನಮಾನಗಳು ಸಿಗಲಿ. ಎಲ್ಲಾ ಕನಸುಗಳೂ ನನಸಾಗಿ ನಿಮ್ಮ ಬದುಕಿನ ಹಾದಿ ಸುಗಮವಾಗಿರಲಿ. ನಿಮ್ಮ ಸಾಧಿಸುವ ಕಂಗಳಿಗೆ ನಮ್ಮ ಸ್ಪೂರ್ತಿಯ ಪಿಸುಮಾತು… ಶುಭವಾಗಲಿ.
Get in Touch With Us info@kalpa.news Whatsapp: 9481252093
Discussion about this post