ಬೆಂಗಳೂರು: ಕಣಿವೆ ರಾಜ್ಯದ ಪುಲ್ವಾಮಾದಲ್ಲಿ ಗುರುವಾರ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯಲ್ಲಿ ವೀರಸ್ವರ್ಗ ಸೇರಿದ ಮಂಡ್ಯದ ಯೋಧ ಗುರು ಅವರ ಅಂತ್ಯಕ್ರಿಯೆ ಸಾವಿರಾರು ಮಂದಿಯ ಕಣ್ಣೀರಿನ ನಡುವೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ನೆರವೇರಿದೆ.
ನಿಜಕ್ಕೂ ಈ ದೇಶದ ಯೋಧರೊಬ್ಬರಿಗೆ ಮರಣದ ವೇಳೆ ಸಿಗಬೇಕಾದ ಎಲ್ಲ ರೀತಿಯ ಗೌರವ ಹಾಗೂ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪೊಲೀಸ್ ಇಲಾಖೆಯನ್ನು ‘ಕಲ್ಪ ನ್ಯೂಸ್’ ನಮ್ಮ ರಾಜ್ಯದ ಪರವಾಗಿ ಅನಂತ ಅನಂತ ಧನ್ಯವಾದಗಳನ್ನು ಅರ್ಪಿಸುತ್ತದೆ.
ಬೆಂಗಳೂರಿನ ಎಚ್’ಎಎಲ್ ವಿಮಾನ ನಿಲ್ದಾಣಕ್ಕೆ ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಗುರು ಅವರ ಪಾರ್ಥಿವ ಶರೀರವನ್ನು ತರಲಾಯಿತು.
ಆ ಸಂದರ್ಭ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಗೃಹ ಸಚಿವ ಎಂ.ಬಿ. ಪಾಟೀಲ್, ಸಂಸದ ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್.ಕೆ. ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಸೇರಿದಂತೆ ಸೇನಾಪಡೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಅಲ್ಲಿ ಹಾಜರಿದ್ದು ಗೌರವ ನಮನ ಸಲ್ಲಿಸಿದರು.
ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರವನ್ನು ಸೇನಾ ವಾಹನಕ್ಕೆ ತರುವಾಗ ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಪೊಲೀಸರೊಂದಿಗೆ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದು ವಿಶೇಷ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಹೆಚ್. ಗುರು ಅವರ ಸ್ವಗ್ರಾಮ ಗುಡಿಗೆರೆಯಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ಉಪ ಮುಖ್ಯಮಂತ್ರಿ @DrParameshwara, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಉಪಸ್ಥಿತರಿದ್ದರು. #PulwamaAttack pic.twitter.com/ErkZ81NiVw
— CM of Karnataka (@CMofKarnataka) February 16, 2019
ಅತ್ಯಂತ ಪ್ರಮುಖವಾಗಿ ಎಚ್’ಎಎಲ್ ವಿಮಾನ ನಿಲ್ದಾಣದಿಂದ ಮಂಡ್ಯದ ಗುಡಿಗೆರೆಯ ವರೆಗೂ ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ತರಲಾಯಿತು. ಅಂತಿಮ ಯಾತ್ರೆ ಸಾಗುವ ಮಾರ್ಗದ ಉದ್ದಕ್ಕೂ ಎಲ್ಲೂ ಸಂಚಾರ ದಟ್ಟಣ ಉಂಟಾಗಬಾರದು ಎಂಬ ಕಾರಣಕ್ಕಾಗಿ ಎಚ್’ಎಎಲ್ ವಿಮಾನ ನಿಲ್ದಾಣದಿಂದ ಗುಡಿಗೆರೆ ವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ನಗರ ಪ್ರದೇಶದ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಹೀಗಾಗಿ, ಗುರು ಅವರ ಅಂತಿಮ ಯಾತ್ರೆಯಲ್ಲಿ ಯಾವುದೇ ರೀತಿಯ ತೊಂದರೆಗಳಾಗಲಿಲ್ಲ.
ಮಾರ್ಗದುದ್ದಕ್ಕೂ ದೇಶಪ್ರೇಮಿಗಳು, ಅಭಿಮಾನಿಗಳು ಪಾರ್ಥಿವ ಶರೀರದ ವಾಹನವನ್ನು ಅಲ್ಲಲ್ಲೆ ತಡೆದು ಪುಷ್ಪ ನಮನ ಸಲ್ಲಿಸಿದ್ದು ಮಾತ್ರವಲ್ಲ, ಗುರು ಪರವಾಗಿ, ದೇಶದ ಪರವಾಗಿ ಘೋಷಣೆ ಕೂಗುತ್ತಿದ್ದರು.
ಹೆಲಿಕಾಪ್ಟರ್ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ಯದೇ ರಸ್ತೆ ಮಾರ್ಗವಾಗಿ ಕೊಂಡೊಯ್ದಿದ್ದು, ಸಾವಿರಾರು ಮಂದಿಗೆ ಅಂತಿಮ ದರ್ಶನ ಪಡೆಯಲು ಸಹಕಾರಿಯಾಯಿತು.
ಇನ್ನು, ಗುಡಿಗೆರೆಯಲ್ಲೂ ಸಹ ಗುರು ಅವರ ಅಂತ್ಯಸಂಸ್ಥಾರದ ಸಿದ್ದತೆಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾಗಿ ಮಾಡಿತ್ತು. ಸಾವಿರಾರು ಮಂದಿ ಸೇರಿದ್ದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು.
ಸಕಲ ಸೇನಾ ಗೌರವ ಹಾಗೂ ಸರ್ಕಾರಿ ಗೌರವಗಳೊಂದಿಗೆ ಈ ದೇಶದ ವೀರ ಯೋಧನೋರ್ವನಿಗೆ ನಾಡು ಕಣ್ಣೀರಿನ ವಿದಾಯವನ್ನು ಹೇಳಿದ್ದು, ಗುರು ಈಗ ತಾಯಿ ಭಾರತಿಯ ಮಡಿಲನ್ನು ಸೇರಿದ್ದಾರೆ.
ನಿಜಕ್ಕೂ ಈ ದೇಶದ ಯೋಧನೊಬ್ಬನಿಗೆ ವೀರಸ್ವರ್ಗ ಸೇರುವ ಕಾಲದಲ್ಲಿ ದೊರೆಯಬೇಕಾದ್ದ ಎಲ್ಲ ರೀತಿಯ ಗೌರವಗಳನ್ನು ಎಲ್ಲೂ ಲೋಪವಾಗದಂತೆ ವ್ಯವಸ್ಥೆ ಮಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಪೊಲೀಸ್ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತವನ್ನು ರಾಜ್ಯದ ಪರವಾಗಿ ಕಲ್ಪ ನ್ಯೂಸ್ ಮತ್ತೊಮ್ಮೆ ಅಭಿನಂದಿಸುತ್ತದೆ.
Discussion about this post