ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅದು ಮಲೆನಾಡಿನ ಹಸಿರನ್ನು ಹಾಸಿ ಹೊದ್ದುಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ. ಈ ಪ್ರದೇಶ ಕನ್ನಡನಾಡು ಮಾತ್ರವಲ್ಲ ದೇಶಕ್ಕೇ ಅತಿ ಅಪರೂಪದ ಪ್ರತಿಭೆಗಳನ್ನು ನೀಡಿದ ಪವಿತ್ರ ಭೂಮಿ. ಇಂತಹ ನೆಲದಲ್ಲಿ ಜನಸಿ, ಇಡಿಯ ಕರುನಾಡೇ ಹೆಮ್ಮೆ ಪಡುವಂತೆ ಸಾಧನೆಯ ಹಾದಿಯಲ್ಲಿರುವ ಬಿ. ಅನೀಶ್ ಎಂಬ ಬಾಲಕನೇ ನಮ್ಮ ಇಂದಿನ ಲೇಖನದ ಹೂರಣ.
2005ರಲ್ಲಿ ಜನಿಸಿದ ಕೊಪ್ಪದ ಅನೀಶ್ ಬಾಲ್ಯದಿಂದಲೇ ಶಿಕ್ಷಣ ಮಾತ್ರವಲ್ಲ ಸಾಹಿತ್ಯದಲ್ಲೂ ಸಹ ಆಸಕ್ತಿ ಹೊಂದಿದ್ದು, ಇದಕ್ಕೆ ಇವನ ಪೋಷಕರ ಸಹಕಾರವೂ ದೊಡ್ಡದಿದೆ. ಸದ್ಯ ಕೊಪ್ಪದ ಬಿಜಿಎಸ್ ಶ್ರೀ ವೆಂಕಟೇಶ್ವರ ವಿದ್ಯಾಮಂದಿರಲ್ಲಿ 9ನೆಯ ತರಗತಿಯಲ್ಲಿ ಕಲಿಯುತ್ತಿರುವ ಇವನ ಸಾಧನೆಯ ಹಾದಿಯನ್ನು ಒಮ್ಮೆ ಓದಿ…
ಈ ಚಿಕ್ಕ ವಯಸ್ಸಿನಲ್ಲೇ ಹೂರಣ ಎಂಬ ಸ್ವರಚಿತ ಕವನ ಸಂಕಲನವನ್ನು ಸಂಗ್ರಹಿಸಿರುವ ಈತ ಇದನ್ನು ಹಾಸನದಲ್ಲಿ ನಡೆದ ರಾಷ್ಟ್ರ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆ ಮಾಡಿದ್ದಾನೆ.
ಹಾಸನದಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ 2019 ರಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಚುಟುಕು/ ಹನಿಗವನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾನೆ. ವಿಶೇಷ ಎಂದರೆ, ಈ ಸಾಹಿತ್ಯ ಸಮ್ಮೇಳನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರೊಂದಿಗೆ ರಜತ ಸಾರೋಟಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾನೆ.
ದೂರದರ್ಶನ ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಅಲ್ಲದೇ, ಈತ ರಚಿಸಿರುವ ಹೂರಣ ಪುಸ್ತಕವನ್ನು ಬಹುಮಾನವಾಗಿ ಕೊಡಲಾಗುತ್ತದೆ.
ಕರಾವಳಿಯ ಸ್ಥಳೀಯ ವಾಹಿನಿ ಮುಕ್ತ ವಾಹಿನಿಯ ಅನ್ವೇಷಣ್ ಕಾರ್ಯಕ್ರಮದಲ್ಲಿ ಪ್ರತಿಭೆಗಳ ಅನಾವರಣದಲ್ಲಿ ಪರಿಚಯಾತ್ಮಕ ಸಂದರ್ಶನ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗೂ ಸೃಜನ ಟ್ರಸ್ಟ್ ವತಿಯಿಂದ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಬೆಂಗಳೂರಿನ ರಾಜ್ಯ ಯುವ ಬರಹಗಾರರ ಒಕ್ಕೂಟದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಪುರಸ್ಕಾರ ಪಡೆದಿರುವ ಈತ, ವಿಜಯ ಕರ್ನಾಟಕ ಪತ್ರಿಕೆಯ ಮಕ್ಕಳ ದಿನಾಚರಣೆ ರಾಜ್ಯ ಮಟ್ಟದ ಮಕ್ಕಳ ಪುಟ್ಟ ಮರಿ ಪದ್ಯ ಬರಿ ಸ್ಪರ್ಧೆಯಲ್ಲಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಮೆಚ್ಚುಗೆ ಪಡೆದ ಟಾಪ್ 5 ಕವನಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ರಾಷ್ಟ್ರೀಯ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಮೈಸೂರು ವಿಭಾಗ ಮಟ್ಟದಲ್ಲಿ ಪ್ರತಿನಿಧಿಸಿರುವ ಅನೀಶ್, ರಾಜ್ಯ ಮಟ್ಟದ ವಿಜ್ಞಾನ ಮೇಳ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾನೆ.
2018 ಮೇ ತಿಂಗಳಲ್ಲಿ ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ರಚಿಸಿದ ಸ್ವರಚಿತ ಕವನ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿದ್ದ ಈತ, 2020ರ ಆರಂಭದಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ನಡೆಸಿದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆ ಅನೀಶ್ ನಾಯಕತ್ವದಲ್ಲಿ ಸತತ 2 ವರ್ಷ ಪ್ರಥಮ ಸ್ಥಾನ ಪಡೆದಿದ್ದು, ಜಿಲ್ಲಾ ಮಟ್ಟದ ಸ್ವಚ್ಛ ಕ್ವಿಜ್’ನಲ್ಲಿ ದ್ವಿತೀಯ ಸ್ಥಾನ, ಅಣಕು ಸಂಸತ್ ಸ್ಪರ್ಧೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಮಟ್ಟದಲ್ಲಿ ಟಾಪ್ 4 ಗಳಲ್ಲಿ ಆಯ್ಕೆಯಾಗಿದ್ದಾನೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಯುವ ಕವಿ ಗೋಷ್ಠಿಯಲ್ಲಿ ಕಿರಿಯ ವಯಸ್ಸಿನ ಯುವ ಕವಿಯಾಗಿ ಕವನ ವಾಚನ ಮಾಡಿದ್ದು, ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ನಡೆಸಿದ ನೈತಿಕ ಶಿಕ್ಷಣ ಆಧಾರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ರಾಜ್ಯದ ಪ್ರಮುಖ ದಿನ ಪತ್ರಿಕೆಗಳಲ್ಲಿ ಅನೀಶ್ ಬರೆದ ಅನೇಕ ಕವನಗಳು, ಲೇಖನಗಳು, ಚಿತ್ರಗಳು ಪ್ರಕಟಗೊಂಡಿವೆ.
ಇನ್ನು, ಈ ಬಾಲಕನ ಸಾಧನೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ, ಸಮ್ಮಾನಗಳು ಅರಿಸಿಬಂದಿವೆ.
ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ 2019-20ರಲ್ಲಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಮಿತಿಯಿಂದ ಸನ್ಮಾನ, 2018 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಪ್ರತಿಭೆ ಪುರಸ್ಕಾರ, 10,000 ರೂ. ನಗದು ಬಹುಮಾನ ಸಂದಿದೆ.
2017 ರಲ್ಲಿ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನಕ್ಕೆ ಪುರಸ್ಕಾರ ಅರಸಿ ಬಂದಿದ್ದು, 2018 ನವೆಂಬರ್’ನಲ್ಲಿ ವಿಜಯ ಕರ್ನಾಟಕ – ಹಾರ್ಲಿಕ್ಸ್ ಜ್ಯೂನಿಯರ್ ಸಾಧಕರು ಪುರಸ್ಕಾರ ಬಂದಿದೆ.
ಇನ್ನು, ಚಿಕ್ಕಮಗಳೂರು ಜಿಲ್ಲೆಯ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಕಲಾಶ್ರಿ ಪ್ರಶಸ್ತಿ ನೀಡಲಾಗಿದ್ದು, ಬೆಂಗಳೂರಿನ ಕರ್ನಾಟಕ ಕಲಾ ಪೋಷಕ ಸಂಘದ ವತಿಯಿಂದ ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ ಕಲಾಶ್ರೀ ಪ್ರಶಸ್ತಿ ಸಂದಿದೆ. ಜೊತೆಯಲ್ಲಿ, ರಾಯಚೂರು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಕಿರಿಯ ಬರಹಗಾರ ರಾಜ್ಯ ಪ್ರಶಸ್ತಿ ಈತನ ಮುಡಿಗೇರಿದೆ.
ಚಿಕ್ಕ ವಯಸ್ಸಿನಲ್ಲೇ ಇಂತಹ ಸಾಹಿತ್ಯ ಸಾಧನೆ ಮಾಡುತ್ತಾ, ಸರಸ್ವತಿಯ ಸೇವೆ ಮಾಡುತ್ತಿರುವ ಅನೀಶ್ ಸಾಧನೆ ಮುಗಿಲೆತ್ತರಕ್ಕೇರಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಸುತ್ತದೆ.
Get in Touch With Us info@kalpa.news Whatsapp: 9481252093
Discussion about this post