ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತೀಯ ಪರಂಪರೆಯಲ್ಲಿ ಹಬ್ಬಗಳ ಸಂಭ್ರಮಕ್ಕೆ, ವೈವಿಧ್ಯಕ್ಕೆ ಎಣೆಯಿಲ್ಲ. ಹಬ್ಬಗಳೆಂದರೆ ನಮಗೆ ಕೇವಲ ಆಚರಣೆಗಳಷ್ಟೆ ಅಲ್ಲ ಅದನ್ನು ಮೀರಿದ ಹಲವು ಮಜಲುಗಳು ಅದಕ್ಕಿರುತ್ತವೆ. ಇನ್ನು ಗಣೇಶೋತ್ಸವವು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ, ಮೋದಕಪ್ರಿಯನಿಗೆ ಮೊದಲೊಂದಿಪೆ ಎನ್ನುವ ಕ್ಷಣಗಣನೆ ಆರಂಭವಾಗಿದೆ.
ಮತ್ತೊಂದು ಗಣೇಶನ ಹಬ್ಬಕ್ಕೆ ನಗರದೆಲ್ಲಡೆ ವಿಜೃಂಭಣೆಯ ತಯಾರಿ ನಡೆದಿದೆ. ಆಧುನಿಕತೆಯತ್ತ ಬೆಂಗಳೂರು ಹೆಜ್ಜೆ ಹಾಕಿದರೂ, ಗ್ರಾಮೀಣ ಸೊಗಡಿನ ಕಲೆ ನಗರದಲ್ಲಿ ಉಳಿದಿದೆ.
ಬಾಲ್ಯದಿಂದ ಕುಲಕಸುಬಾದ ಕುಂಬಾರಿಕೆ ವೃತ್ತಿಯ ನಾಗರಾಜಪ್ಪ ಮೆತ್ತಗಿನ ಮಣ್ಣಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಕ್ರಮೇಣ ಮೂರ್ತಿ ತಯಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೂ ಕಲಿಸುವ ಸಹೃದಯಿಗಳು ಸಿಗಲಿಲ್ಲ. ಗಣಪತಿ ವಿಸರ್ಜನೆಯ ಮರುದಿನ ಮನೆ ಸಮೀಪವಿರುವ ಕೆರೆಯ ಬಳಿ ಹೋಗಿ ಭಗ್ನವಾದ ಮೂರ್ತಿಗಳನ್ನು ನೋಡಿ ಚಿಂತಿಸಿ ಶತಾಯುಗತಾಯ ಪ್ರಯತ್ನಿಸಿ ಯಶಸ್ವಿ ಕಲಾವಿದರಾದರು. ಹೆಚ್ಚೇನು ಓದಿರದ ಕುಂಬಾರಿಕೆಯನ್ನು ಉದ್ಯೋಗವಾಗಿಸಿಕೊಂಡರೂ ಮೂರ್ತಿ ತಯಾರಿಕೆಗೂ ಅಷ್ಟೇ ಮಹತ್ವ ನೀಡಿದ್ದಾರೆ.
ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಜೊತೆ ಪೂಜಿಸಲು ಗೌರಿ ಗಣಪನ ಮಣ್ಣಿನ ಮೂರ್ತಿಯನ್ನು ಕೊಂಡು ತರಲು ಅಂಗಡಿಗೆ ಹೋದರೆ ಸಾಲುಸಾಲಾಗಿ ಜೋಡಿಸಿಟ್ಟಿರುವ ಗೌರಿಗಣಪನ ವಿಗ್ರಹಗಳು ನಿಮ್ಮನ್ನು ಸ್ವಾಗತಿಸುತ್ತದೆ.
ಜೇಡಿಮಣ್ಣಿನಿಂದ ತಯಾರಾದ ಗಣಪತಿ ವಿಗ್ರಹಗಳು ಪೂಜೆಗೆ ಶ್ರೇಷ್ಟವೆಂಬ ಭಾವನೆ ನಮ್ಮಲ್ಲಿದೆ. ಈ ಕಾರಣ ಕೆರೆಗಳು ಕಾಣದಾಗುತ್ತಿರುವ ದಿನಗಳಲ್ಲೂ, ಕುಂಬಾರಿಕೆ ಕಷ್ಟವೆನಿಸಿರುವ ಈ ಹೊತ್ತಿನಲ್ಲೂ ನಾವು ಮಣ್ಣಿನ ಗೌರಿ ಗಣಪನನ್ನು ಪೂಜಿಸುವುದನ್ನೇನ್ನೂ ಕಡಿಮೆ ಮಾಡಿಲ್ಲ.
ಭಕ್ತರ ಆಶಯಕ್ಕೆ ಪೂರಕವಾಗಿ ಸ್ಪಂದಿಸುವ ಕಲಾವಿದ ಹೆಚ್.ಜಿ.ನಾಗರಾಜಪ್ಪ ಮತ್ತು ಕರಿಬಸಪ್ಪ ಸಹೋದರರು, ಅರ್ಧ ಅಡಿಯಿಂದ ಆಳೆತ್ತರದ ತರಾವರಿ ದೇಶಾವರಿ ಗಣೇಶಗಳನ್ನು ತಯಾರಿಸುತ್ತಾರೆ.
ಮೂರ್ತಿ ತಯಾರಿಕೆ ಅವರ ಕುಲಕಸುಬು ಹೀಗಾಗಿ ಬಾಲ್ಯ ದಿಂದಲೇ ಈ ನಂಟನ್ನು ಬೆಳೆಸಿಕೊಂಡ ಈ ಕಲಾವಿದನ ಕುಟುಂಬ ದವರೆಲ್ಲ ಕಲಾಸೇವೆಯಲ್ಲಿ ತೊಡಗಿದ್ದಾರೆ.
ಕಲ್ಪ ನ್ಯೂಸ್ ನೊಂದಿಗೆ ಲೋಕಾಭಿರಾಮವಾಗಿ ಮಾತಿಗೆ ಸಿಕ್ಕಿದ್ದರು ಕುಂಬಳಗೊಡು, ಬಸವಗಂಗೋತ್ರಿಯ ಕಲಾವಿದ ಹೆಚ್ .ಎಂ. ನಾಗರಾಜಪ್ಪ, ಸುಮಾರು 30 ವರುಷದಿಂದ ಪರಿಸರ ಸ್ನೇಹಿ ಗೌರಿ – ಗಣಪನನ್ನು ಮಾಡಿ ಸಿಲಿಕಾನ್ ಸಿಟಿಯಲ್ಲಿ ಶ್ರೀನಿವಾಸ ನಗರದಲ್ಲಿ ಬಾಡಿಗೆ ಮನೆ ಪಡೆದು ಮೂರು ತಿಂಗಳು ಕ್ಯಾಂಪ್ ಹಾಕಿ ಜೇಡಿ ಮಣ್ಣಿನ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಾರೆ. ಈ ಸಂದರ್ಭದಲ್ಲಿ ಗೌರಿ ತಯಾರು ಮಾಡಲು ಅವರ ಪತ್ನಿ ಶ್ರೀಮತಿ ರೂಪ ನಾಗರಾಜಪ್ಪ ಮತ್ತು ನಾಗರಾಜಪ್ಪ ಅವರ ತಮ್ಮ ಹೆಚ್.ಎಂ. ಕರಿಬಸಪ್ಪ ಅವರ ಜೊತೆ ಕೈ ಜೋಡಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಸಂಪೂರ್ಣ ಕುಟುಂಬ ಸಮೇತ ಭಗವಂತನ ಸೇವೆಗೆ ಬದುಕನ್ನು ಮುಡಿಪು ಆಗಿ ಇಟ್ಟಿದ್ದಾರೆ.
ಅರೆ ಮಲೆನಾಡಿನ ಶಿವಮೊಗ್ಗದ ಎಂ. ಮಲ್ಲಪ್ಪ ಮತ್ತು ಶ್ರೀಮತಿ ಸುಶೀಲಮ್ಮ ರವರ ಸುಪುತ್ರ ಹೆಚ್.ಎಂ. ನಾಗರಾಜಪ್ಪ ಹುಟ್ಟಿದ್ದು 6 ನೇ ಆಗಸ್ಟ್ 1970 ರಲ್ಲಿ, ಓದಿದ್ದು ಎಸ್.ಎಸ್.ಎಲ್.ಸಿ, ವ್ಯಾಸಂಗ ಮಾಡಿದ್ದು ಶ್ರೀ ಸಿದ್ದಗಂಗಾ ಮಠದಲ್ಲಿ. ಸಿಹಿ ಮೊಗ್ಗೆಯನ್ನು ಬಿಟ್ಟಿದ್ದು 7 ನೇ ತರಗತಿ ಓದುವಾಗ ಬದುಕು ಕಟ್ಟಿಕೊಳ್ಳಲು ಅವಲಂಬಿಸಿದ್ದು ವಂಶ ಪಾರಂಪರಿಕವಾಗಿ ಬಂದ ಕುಂಬಾರ ವೃತ್ತಿ ಪರಿಸರ ಸ್ನೇಹಿ ಜೆಡಿ ಮಣ್ಣಿನ ಗೌರಿ ಮತ್ತು ಗಣಪ ಇವರಲ್ಲಿ ಲಭ್ಯ – ವೃತ್ತಿಯ ಆರಂಭದಲ್ಲಿ ಎದುರಾದ ಅವಮಾನ. ಆರ್ಥಿಕ ಸಂಕಷ್ಟಗಳನ್ನು ಇಬ್ಬರೂ ಒಗ್ಗಟ್ಟಿನಿಂದ ಎದುರಿಸಿದ್ದಾರೆ. ಈಗ ನೆಮ್ಮದಿಯಿಂದ ಬದುಕುತ್ತಿರುವ ಅವರ ಧ್ಯಾನ, ಜೀವನ ವಿಧಾನಗಳೆಲ್ಲವನ್ನೂ ನಿರ್ಣಯಿಸುವವನು ಗಣಪನೇ!
ದೊಡ್ಡ ಗಣೇಶ, ಸಣ್ಣಗ ಣೇಶ, ಮರಿಗಣೇಶ, ಕಿರುಗಣೇಶ, ಹಸುವಿನ ಮೇಲೆ ಕುಳಿತ ಗಣೇಶ, ನವಿಲಿನ ಮೇಲೆ ಕುಳಿತ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಮೇಲಿರುವ ಗಣೇಶ.ಪಂಚಮುಖ ಗಣೇಶ, ವಿದ್ಯಾ ಗಣೇಶ, ಇಡಗುಂಜಿ ಗಣೇಶ… ಅಬ್ಬಬ್ಬಾ! ಎಷ್ಟೊಂದು ಗಣಪತಿಗಳು ನೋಡಲು ಕಣ್ಣುಗಳೆರಡು ಸಾಲದು.
ಮೂಲತಃ ಕುಂಬಳಗೋಡಿನ ಕಲಾವಿದ ನಾಗರಾಜಪ್ಪ ಮತ್ತು ಕುಟುಂಬದವರು ಭಕ್ತರ ಆಶಯಕ್ಕೆ ಪೂರಕವಾಗಿ ಸ್ಪಂದಿಸಿ ವೈವಿಧ್ಯಮಯ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
‘ನಮ್ಮ ತಂದೆ ಗಣೇಶನ ಮೂರ್ತಿಗಳನ್ನು ಮಾಡಿ ಮಾರುತ್ತಿದ್ದರು ಅದೇ ಪ್ರೇರಣೆ, ಸ್ವಯಂ ಅನುಭವವೇ ಗುರು ,ಗಣೇಶನನ್ನು ನಿರ್ಮಿಸುವುದು ಪೂಜನೀಯ ಕೆಲಸ, ದೇವರ ಹೆಸರಲ್ಲಿ ಅಕ್ಕರೆಯಿಂದ ಮಾಡುತ್ತಿರುವ ಈ ಕಾಯಕದಲ್ಲಿ ತೃಪ್ತಿಯನ್ನು ಕಾಣುವ ನಾಗರಾಜಪ್ಪ, ಮಳೆಗಾಲದ ಆರಂಭದ ಮೊದಲೇ ನಮ್ಮ ಕೆಲಸ ಶುರು, ಮರಳು ಕಡಿಮೆ ಇರುವ ಜೇಡಿಮಣ್ಣ ಹಾಗು ಕಪ್ಪು ಮಣ್ಣನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ, ಆರೇಳು ತಿಂಗಳು ಪರಿಶ್ರಮ ಪಟ್ಟ ಶ್ರಮಕ್ಕೆ ಬೆಲೆ ಬರುವುದು ಗಣೇಶನ ಹಬ್ಬದಲ್ಲಿ ಒಳ್ಳೆಯ ವ್ಯಾಪಾರವಾದಾಗ ಮಾತ್ರ. ಇದೇ ನಮಗೆ ಜೀವನಾಧಾರವೆನ್ನುತ್ತಾರೆ.
ಹೆಚ್.ಎಂ. ನಾಗರಾಜಪ್ಪ ಮಾತನಾಡುತ್ತಾ , ಜೇಡಿ ಮಣ್ಣಿನ ಗೌರಿ – ಗಣೇಶನ ಮೂರ್ತಿಯನ್ನು ಪ್ರತಿ ವರ್ಷ ಮಾಡುತ್ತಿದ್ದೇವೆ, ಈ ಸಲ ಗೌರಿ – ಗಣೇಶನ ಚಿಕ್ಕ ಮೂರ್ತಿಗಳನ್ನು ಮಾರಲು ಅವಕಾಶವಿದೆ. ನಾವು ಸರ್ಕಾರದ ಆದೇಶ ಪಾಲಿಸುತ್ತಿದ್ದೇವೆ ಎನ್ನುತ್ತಾರೆ.
ಕುಂಬಾರರ ಬದುಕಿಗೆ ಹಾಗೂ ಅವರ ವಂಶ ಪರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುವ ವೃತ್ತಿ ಹಾಗೂ ನಮ್ಮ ಸಂಸ್ಕೃತಿ ಉಳಿಯ ಬೇಕಾದರೆ ಕುಂಬಾರರ ಬದುಕು ಹಸನು ಮಾಡುವ ಪ್ರಕ್ರಿಯೆ ಸರ್ಕಾರ ದಿಂದ ಆಗಬೇಕು ಎಂಬುದು ನನ್ನ ಈ ಲೇಖನದ ಉದ್ದೇಶ!
ಮೂರ್ತಿ ತಯಾರಿಕೆ ಬಗೆ
ಹಿಂದೂ ಧರ್ಮೀಯರಲ್ಲಿ ಗಣೇಶನ ಪೂಜೆಗೆ ಅಗ್ರ ಪ್ರಾಶ್ತಸ್ಯ. ಯಾವುದೇ ಪೂಜೆ – ಪುನಸ್ಕಾರ, ಹೋಮ – ಹವನಗಳಂತಹ ಕಾರ್ಯಕ್ರಮಗಳಿರಲಿ ಮೊದಲ ಪೂಜೆ ಗಣೇಶನಿಗೆ ಸಲ್ಲಬೇಕು. ಇನ್ನು ಭಾದ್ರಪದ ಚೌತಿಯ ದಿನದಂದು ಗಣೇಶನನ್ನು ಕೂರಿಸಿ ಹಬ್ಬವನ್ನು ಆಚರಿಸುವುದು ನಿಮಗೆ ಗೊತ್ತಿರುವ ವಿಷಯ. ಗಣೇಶನನ್ನು ಕೂಡಿಸದೇ ಇರುವವರು ಸಹ ಹಬ್ಬವನ್ನು ಜೋರಾಗಿಯೇ ಆಚರಿಸುತ್ತಾರೆ. ಗೌರಿ ಗಣೇಶ ಹಬ್ಬ ಹಿಂದೂಗಳ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ. ಗಣೇಶ ಚತುರ್ಥಿಯ ವೇಳೆ ಕಲಾಕಾರರು ಮೂರ್ತಿಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದು ಸಹ ವಿಶೇಷವಾದದ್ದು.
ಗಣೇಶನ ಮೂರ್ತಿಗಳನ್ನು ತಯಾರಿಸುವುದರಲ್ಲಿ ಪಳಗಿರುವ ಕಲಾಕಾರರ ಕುಟುಂಬದವರೇ ಅವನ್ನು ಮಾಡುತ್ತಾರೆ. ಮೂರ್ತಿ ತಯಾರಿಕೆಯು ಗಣೇಶ ಚತುರ್ಥಿಗಿಂತ ಒಂದೂವರೆ ತಿಂಗಳ ಮುಂಚೆ ಆರಂಭವಾಗುತ್ತದೆ. ಮಣ್ಣಿನಿಂದ ತಯಾರಿಸುವ ಮೂರ್ತಿಗಳನ್ನೇ ಮುಖ್ಯವಾಗಿ ಕೂರಿಸಲಾಗುತ್ತದೆ.
ಜೇಡಿ ಮಣ್ಣು ಗಣೇಶನ ಮೂರ್ತಿ ತಯಾರಿಕೆಗೆ ಹೆಚ್ಚು ಅನುಕೂಲವಾದದ್ದು. ಇದು ಕೆರೆದಂಡೆಗಳಲ್ಲಿ ಮತ್ತು ಹೊಲಗದ್ದೆಗಳಲ್ಲಿ ಸಿಗುತ್ತದೆ. ಜಿಗುಟುತನ ಮತ್ತು ಗಟ್ಟಿಯಾಗಿರುವುದರಿಂದ ಸೂಕ್ತವೆನಿಸುತ್ತದೆ. ಇದೀಗ ನಗರ ಪ್ರದೇಶಗಳಲ್ಲಿ ಮಣ್ಣಿನ ಮೂರ್ತಿಗಲ ಬದಲಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.
ಸಣ್ಣ ಗಾತ್ರದ ಗಣಪನ ಮೂರ್ತಿಗಳನ್ನು ತಯಾರಿಸಲು ಬ್ಲಾಕ್‍ಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಐದು ಅಡಿಗೂ ಹೆಚ್ಚು ಎತ್ತರದ ಮೂರ್ತಿಗಳನ್ನು ರೂಪಿಸಲು ಬ್ಲಾಕ್‍ಗಳು ಸರಿ ಎನಿಸುವುದಿಲ್ಲ. ಎತ್ತರ, ಗಾತ್ರದ ವಿಗ್ರಹಗಳನ್ನು ಕೈಯಿಂದಲೇ ತಯಾರಿಸಬೇಕು.
ಗಣೇಶನ ಮೂರ್ತಿ ತಯಾರಿಕೆಯಲ್ಲಿ ಮುಖ ಮತ್ತು ತಲೆಯ ಭಾಗ ಮೂರ್ತಿ ಕೆತ್ತುವವರಿಗೆ ಸವಾಲೆನಿಸುತ್ತದೆ. ಏಕಂದರೆ ದೊಡ್ಡ ಗಾತ್ರದ ಮೂರ್ತಿಗಳಲ್ಲಿ ಗ್ರಾಹಕರು ಮತ್ತು ನೋಡುಗರು ಸಣ್ಣ ಪುಟ್ಟ ಲೋಪದೋಷಗಳನ್ನು ಬೇಗನೆ ಗುರುತಿಸಬಲ್ಲರು. ಹಸ್ತ, ಪಾದಗಳ ತೀಡಿ ಬಿಡಿಸುವುದು ಕಲಾಕಾರರ ನೈಪುಣ್ಯವನ್ನು ಎತ್ತಿ ತೋರುತ್ತದೆ.
ಸಾರ್ವಜನಿಕ ಸ್ಥಳಗಳಳ್ಲಿ ಕೂಡಿಸುವ ಗಣೇಶ ಮೂರ್ತಿಗಳನ್ನು ತಯಾರಿಸಲು ಹೆಚ್ಚಿನ ಕಾಲಾವಕಾಶ ಬೇಕು. ಗಣೇಶನನ್ನು ವಿವಿಧ ಪಾತ್ರಗಳಲ್ಲಿ ಸೃಷ್ಟಿಸಬೇಕಾಗಿರುವುದರಿಂದ ಕಲಾವಿದ ಹೆಚ್ಚಿನ ತನ್ಮಯತೆಯನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯ.
ಮೂರ್ತಿ ರಚನೆಯಾದ ಬಳಿಕ ಬಣ್ಣ ಬಳಿಯುತ್ತಾರೆ. ಪೇಂಟಿಂಗ್ ನೋಡಲು ಆಕರ್ಷಕವಾದರೂ ಕಲಾಕಾರರಿಗೆ ಇದು ಸೂಕ್ಷ್ಮ ಕೆಲಸವೆನಿಸಿದೆ. ಇದೀಗ ಬಹುತೇಕ ಕಲಾಕಾರರು ಸ್ಪ್ರೈ ಮೂಲಕ ಬಣ್ಣ ಲೇಪಿಸುತ್ತಾರೆ. ಆದರೆ ಸಂಪ್ರದಾಯವನ್ನು ಬಿಡದವರಿಗೆ ಪೇಂಟಿಂಗ್ ಮೂರ್ತಿಗಳೇ ಬೇಕು.
ಬಣ್ಣದ ವಿಷಯಕ್ಕೆ ಬಂದರೆ ವಾಟರ್ ಕಲರ್ ಬಳಕೆ ಪರಿಸರ ಸ್ನೇಹಿಯಾದದ್ದು. ಸಣ್ಣ ಮತ್ತು ಮಧ್ಯಮ ಗಾತ್ರದ ಗಣೇಶನ ಮೂರ್ತಿಗಳಿಗೆ ರೂ. 500 ರಿಂದ ರೂ. 800 ರಷ್ಟು ಬೆಲೆ ಇರುತ್ತದೆ. ಐದು ಅಡಿಗೂ ಎತ್ತರದ ಮಣ್ಣಿನ ವಿಗ್ರಹಗಳಿಗೆ ರೂ.8000 ರಿಂದ ರೂ. 10,000 ಬೆಲೆ ಇದೆ.
ಇದು ಆಯಾ ಮೂರ್ತಿಯ ಪರಿಕಲ್ಪನೆ, ಗಾತ್ರದ ಮೇಲೆ ಅವಲಂಬಿತವಾಗಿದೆ. ಸಣ್ಣ ಮೂರ್ತಿಗಳು 5-6 ಕೆ.ಜಿಯಷ್ಟು ತೂಕವುಳ್ಳವಾದರೆ, ಐದು ಅಡಿಗೂ ಎತ್ತರದ ಮಣ್ಣಿನ ಮೂರ್ತಿಗಳು 75 ಕೆ.ಜಿ ಯಷ್ಟು ಅಧಿಕ ತೂಕವನ್ನು ಹೊಂದಿರುತ್ತವೆ. ಗಣೇಶನ ಮೂರ್ತಿ ತಯಾರಿಕೆಯ ಕುರಿತು ಕಲಾಕಾರ ಶ್ರೀನಿವಾಸ ನಗರದ ಬ್ರಹ್ಮಚೈತನ್ಯ ಮಂದಿರದ ಸಮೀಪ ವಿರುವ ಹೆಚ್ ಎಂ ನಾಗರಾಜಪ್ಪ ಈ ಮಾಹಿತಿ ನೀಡಿದರು.
ಕೋವಿಡ್ -19 ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಗೌರಿ – ಗಣೇಶನ ಪೂಜೆಗೆ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ .” ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದೆ ಸಮೀಪದ ದೇವಸ್ಥಾನಗಳು ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿ ಸರಳವಾಗಿ ಗೌರಿ – ಗಣೇಶೋತ್ಸವ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
ಗಣಪತಿ ಮೂರ್ತಿಗಳಿಗಾಗಿ ಇವರ ಸಂಪರ್ಕ ಸಂಖ್ಯೆ: 9880787122
Get In Touch With Us info@kalpa.news Whatsapp: 9481252093
Discussion about this post