ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರ್ಫ್ಯೂ…! ಮೊದಲ ದಿನ ನಾನು ದೃಶ್ಯಮಾಧ್ಯಮಗಳನ್ನು ಬಹಳ ಗಂಭೀರವಾಗಿ ವೀಕ್ಷಿಸಿದೆ. ಪೊಲೀಸರು ತಮ್ಮ ಲಾಠಿಗಳನ್ನು ಸಿಕ್ಕ ಸಿಕ್ಕವರ ಕುಂಡೆ ಮೇಲೆ ಬೀಸುತ್ತಿದ್ದರು. ಇದನ್ನು ನೋಡಿ ತುಸು ಬೇಸರಗೊಂಡೆ.
ದೇಶಾದ್ಯಂತ ಇದೇ ದೃಶ್ಯಗಳು ಪ್ರಸಾರವಾಗುತ್ತಿದ್ದವು. ಬಹುಷಃ ಈ ಎಲ್ಲ ದೃಶ್ಯಗಳನ್ನು ವಿರೋಧ ಪಕ್ಷದವರು ವೀಡಿಯೋ ಮಾಡಿ ಮುಂದಿನ ಲೋಕಸಭೆ ಅಥವಾ ವಿಧಾನಸಭೆ ಅಧಿವೇಶನದಲ್ಲಿ ತೋರಿಸಿ ಆಡಳಿತ ಪಕ್ಷಕ್ಕೆ ಇರಿಸು ಮುರಿಸು ಮಾಡುವುದು ನಿಶ್ಚಿತ. ಪೋಲಿಸ್ ಇಲಾಖೆಗೆ ಮುಖ್ಯಮಂತ್ರಿಗಳು ಕ್ಲಾಸ್ ತೆಗೆದುಕೊಳ್ಳುತ್ತಾರೆ ಅಂದುಕೊಂಡೆ.
ಆದರೆ ಯುಗಾದಿ ಕಳೆದ ಎರಡನೆಯ ದಿನವೇ ಅಂಗಡಿಮುಂಗಟ್ಟುಗಳ ಮುಂದೆ ಪೋಲೀಸರು ಎಳೆದ ವೃತ್ತ/ಚೌಕಗಳಲ್ಲಿ ಸ್ವತಃ ಜನರೇ ನಿಂತು ಶಿಸ್ತು ತೋರಿಸಿದ್ದನ್ನು ಕಂಡು ಅಚ್ಚರಿಗೊಂಡೆ. ಬೇರೆಯವರೇಕೆ ಈಗ ಸಮಸ್ತ ಸಾರ್ವಜನಿಕರಲ್ಲಿ ಪೋಲೀಸರೂ ನಮ್ಮವರೇ ಎಂಬ ಭಾವನೆ ಬಂದಿರಲಿಕ್ಕೆ ಸಾಕು.
ಈ ಕರ್ಫ್ಯೂ ಯಾರಿಗಾಗಿ? ಎಂದು ಜನ ಎಚ್ಚೆತ್ತುಕೊಂಡು ಪ್ರಶ್ನೆ ಹಾಕಿಕೊಂಡರೆ ಎಷ್ಟೋ ಪೋಲೀಸರು, ಆರೋಗ್ಯ ಕಾರ್ಯಕರ್ತರು, ಜಿಲ್ಲಾಡಳಿತ ಅಧಿಕಾರಿ, ಸಿಬ್ಬಂದಿಗಳು ನಮ್ಮ ಹಾಗೆಯೇ ಕುಟುಂಬದವರೊಂದಿಗೆ ಕಾಲ ಕಳೆಯಬಹುದು. ಇದು ಸಮಾಜದ ಸ್ವಾಸ್ಥ್ಯಕ್ಕಾಗಿ ಆ ವರ್ಗ ಮಾಡುತ್ತಿರುವ ತ್ಯಾಗ. ಸಂಬಳಕ್ಕಾಗಿ ದುಡಿಯುವುದು ಬೇರೆ. ಆದರೆ ಕುಟುಂಬವನ್ನೇ ಬಿಟ್ಟು ಬೀದಿಬೀದಿ ಅಲೆಯುತ್ತ ನಮ್ಮ ಅಶಿಸ್ತಿಗೆ ತಕ್ಕ ಪಾಠ ಕಲಿಸುವ ಅನಿವಾರ್ಯ ಸಂದರ್ಭಗಳನ್ನು ನಾವೇ ಸೃಷ್ಟಿಸುತ್ತೇವೆ.
ಹಠಾತ್ತನೆ ಉಂಟಾದ ಸನ್ನಿವೇಶ. ಇದನ್ನು ಯಾರೂ ನಿರೀಕ್ಷಿಸಿಲಿಲ್ಲ. ಆದರೆ ಕೊರೋನಾ ಹರಡುವ ತೀವ್ರತೆ ನಮ್ಮಲ್ಲಿ ಇಂತಹ ಬಿಗುವಾದ ಪರಿಸ್ಥಿತಿ ಉಂಟುಮಾಡಿತು. ಬೆಳಿಗ್ಗೆಯಾದರೆ ನೀರು, ಹಾಲು, ತರಕಾರಿ, ಪೇಪರ್, ದಿನಸಿ ಇತ್ಯಾದಿ ನಮಗೆ ಬೇಕೇಬೇಕು. ಆದರೆ ಅವುಗಳ ಬಗ್ಗೆ ಜಿಲ್ಲಾಡಳಿತ ಒಂದು ಹಿಡಿತ ಸಾಧಿಸಿ ಸೂಕ್ತ ಕ್ರಮಗಳನ್ನು ಯೋಜಿಸಿ ಜಾರಿಗೆ ತರಲು ಇಂತಿಷ್ಟು ಸಮಯ ಬೇಕಲ್ಲವೆ? ಅದಕ್ಕೆ ನಾವು ಕಾಯಬೇಕು.
ಈಗ ನೋಡಿದರೆ ಜಿಲ್ಲಾಡಳಿತ ದಿನಪೂರ್ತಿ ಒಂದಲ್ಲ ಒಂದು ಸಭೆ ನಡೆಸುತ್ತಿದೆ. ಸಾರ್ವಜನಿಕರ ದೈನಂದಿನ ಜೀವನದ ಅಗತ್ಯಗಳ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಬ್ಬ ಜಿಲ್ಲಾಧಿಕಾರಿ ನಮ್ಮ ಹಾಗೆಯೇ ಮನುಷ್ಯ. ಇಕ್ಕಟ್ಟಿನ ಸ್ಥಿತಿಯಲ್ಲಿ ಸಾರ್ವಜನಿಕರ ಅವರ ಬೆಂಬಲಕ್ಕೆ ನಿಲ್ಲಬೇಕು.
ಮೊದಲ ಜಾರಿಗೆ ಉಪಕ್ರಮದಲ್ಲಿ ಕೆಲವು ಲೋಪಗಳುಂಟಾಗಬಹುದು. ಆದರೆ ಅದರ ಗುರಿ ಸಾರ್ವಜನಿಕರಿಗೆ ಸಹ್ಯ ಬದುಕು ನೀಡಬೇಕೆಂಬುದೇ ಆಗಿದೆ. ನನಗೆ ತಿಳಿದಂತೆ ಇಂತಹ ದೀರ್ಘಕಾಲೀನ ಕರ್ಫ್ಯೂ ಸ್ವಾತಂತ್ರ್ಯಾ ನಂತರ ಜಾರಿ ಆಗಿಲಿಲ್ಲವೇನೋ?
ತುರ್ತು ಪರಿಸ್ಥಿತಿ ಬಂದಿತ್ತು. ಆದರೆ ಈ ಕರ್ಫ್ಯೂ ಬಂದ ಚೌಕಟ್ಟೇ ಭಿನ್ನವಾದ ಹಿನ್ನೆಲೆ. ಯಾರೂ ಸ್ವಾತಂತ್ರ್ಯ ಹರಣಕ್ಕೂ ಅಲ್ಲ. ಯಾವ ರಾಜಕೀಯ ದುರುದ್ದೇಶವೂ ಇದಕ್ಕಿಲ್ಲ. ಪ್ರಜಾಕೋಟಿಯ ಕ್ಷೇಮಪಾಲನೆ.
ಇಲ್ಲಿ ಆಡಳಿತ, ವಿರೋಧ ಪಕ್ಷಗಳು ಸಮ್ಮಿಳಿತವಾಗಿ ಕೆಲಸ ಮಾಡಬಹುದಾದ ಒಂದು ಸಾಮಾಜಿಕ ಸೇವೆಯ ಸುವರ್ಣಾವಕಾಶ ರೂಪುಗೊಂಡಿದೆ. ನನಗೆ ನೆನಪಿದೆ ಅರವತ್ತರ ದಶಕದಲ್ಲಿ ಅಂತ ಕಾಣುತ್ತೆ. ಬಹಳ ತೀವ್ರತರ ಕ್ಷಾಮ ಬಂತು. ಜನ ಬಿದರಕ್ಕಿ ತಿನ್ನುವ ಪರಿಸ್ಥಿತಿ ಬಂದಿತ್ತು. ಆಗ ಆಹಾರದ ಕೊರತೆ ನಮ್ಮ ದೇಶಕ್ಕಿತ್ತು. ಇಷ್ಟು ಜನಸಂಖ್ಯೆಯಿರಲಿಲ್ಲ.
ಆಗ ಪಿಎಲ್ 480 ಯೋಜನೆ ಗೋಧಿ ಬಂತು. ಈಗಿನ ರೀತಿಯಲ್ಲಿ ನ್ಯಾಯಬೆಲೆ ಅಂಗಡಿ ಅದೊಂದು ಆಘಾತಕಾರಿ ಸನ್ನಿವೇಶವಿತ್ತು. ನಂತರ ಕೃಷಿಯಲ್ಲಿ ಹಸಿರುಕ್ರಾಂತಿ ಆಯಿತು. ಅಧಿಕ ಇಳುವರಿ ತಳಿಗಳನ್ನು ಆಮದು ಮಾಡಿ ಫಸಲು ಇಳುವರಿ ಹೆಚ್ಚಿಸುವ ಕ್ರಮ ಕೈಗೊಳ್ಳಲಾಯಿತು.
ಇರಲಿ. ಈಗಿನ ಪರಿಸ್ಥಿತಿ ಹಿಂದಿನ ಎಲ್ಲದಕ್ಕಿಂತ ಭಿನ್ನ ಮತ್ತು ಧಾರುಣವಾಗಿದೆ. ಪ್ಲೇಗ್, ಕಾಲರಾ, ಎಚ್1ಎನ್1 ಗಿಂತ ಭೀಕರ. ಆಗ ಕೇವಲ ಆರೋಗ್ಯ ಇಲಾಖೆಯ ಕರ್ತವ್ಯ, ಹೊಣೆ ಎಂದು ಮಾತ್ರ ಅಂದುಕೊಳ್ಳಲಾಗಿತ್ತು. ಈಗ ಹಾಗಿಲ್ಲ. ಜಿಲ್ಲಾಡಳಿತ, ಪೋಲೀಸ್, ಸಾರ್ವಜನಿಕರು…ಎಲ್ಲರ ಪರಸ್ಪರ ಪಾಲ್ಗೊಳ್ಳುವಿಕೆ ಅಗತ್ಯ. ಹೀಗಿದೆ. ಇದರಲ್ಲಿ ಪೋಲೀಸ್ ಇಲಾಖೆ ಒಂದು ಮಹತ್ವದ ಅಂಗ.
ನಮ್ಮ ಪೋಲೀಸರ ಬಗ್ಗೆ ನಾವೀಗ ಹೆಮ್ಮೆ ಪಡಬೇಕು. ಏಕೆಂದರೆ ಅವರೀಗ ಲಾಠಿ ಬೀಸುವುದೊಂದೇ ಅಲ್ಲ. ವಿವಿಧ ಬಗೆಯ ಶಿಕ್ಷೆಗಳನ್ನು ಸ್ಥಳದಲ್ಲೇ ನೀಡುವ ಹೊಸ ವರಸೆ ಕಂಡುಕೊಂಡಿದ್ದಾರೆ. ಬಸ್ಕಿ, ಬಗ್ಗಿ ಕಿವಿ ಹಿಡಿಯುವುದು, ಕಪ್ಪೆಯಂತೆ ಕುಪ್ಪಳಿಸಿ ಸಾಗುವುದು. ಎಷ್ಟು ಅಂತ ಲಾಠಿ ಬೀಸುವುದು ಹೇಳಿ.
ಜಿಲ್ಲಾಡಳಿತ ದೈನಂದಿನ ನೀರು, ಹಾಲು ತರಕಾರಿ ಅಲ್ಲದೇ ಔಷಧ ಸರಬರಾಜು ಜೊತೆಗೆ ಹೋಟೆಲ್ ಊಟ ನೆಚ್ಚಿಕೊಂಡಿರುವ ವ್ಯಕ್ತಿಗಳಿಗೆ ಹೋಟೆಲ್’ಗಳಲ್ಲಿ ಪಾರ್ಸಲ್ ಸೇವೆ ವ್ಯವಸ್ಥೆ ಮಾಡಿದೆ.. ಇನ್ನೆಷ್ಟು ಬೇಕು ಹೇಳಿ. ಸಾಮಾನ್ಯ ಜೀವನ ನಡೆಯಲು ಅವಕಾಶ ಕಲ್ಪಿಸಲಾಗಿದೆ. ಇದೆಲ್ಲ ನಮಗಾಗಿ.
ಲಾಕ್ ಡೌನ್ ಆಗಿದೆ-ಮನೆಯಿಂದ ಹೊರಬರಬಾರದು ಅಷ್ಟೆ. ಆದರೂ ನಾವು ಮತ್ತೆ ಕಾನೂನು ಪಾಲಿಸದೇ ಅವರ ಲಾಠಿಗೆ ಕೆಲಸ ಕೊಟ್ಟರೆ ಹೇಗೆ?. ಎಲ್ಲ ಧರ್ಮದವರೂ ಆರೋಗ್ಯ ರಕ್ಷಣೆ ಮಾಡಿಕೊಳ್ಳಲೇಬೇಕು. ಅದಕ್ಕೆ ಹಿರಿಯರು ಹೇಳಿದ್ದು ಶರೀರ ಧರ್ಮಂ ಖಲು ಧರ್ಮ ಸಾಧನಂ.
ಹಳ್ಳಿಗರೇ ಈಗ ಹೊರಗಿನಿಂದ ಬರುವವರನ್ನು ತಮ್ಮೂರಿನೊಳಗೆ ಪ್ರವೇಶಿಸಲು ಬಿಡುತ್ತಿಲ್ಲ. ಅಂತಹ ಪ್ರಜ್ಞೆಯನ್ನು ಅವರೀಗ ಬೆಳೆಸಿಕೊಂಡಿದ್ದಾರೆ. ನಾಗರಿಕರು ಅಂತ ಕರೆಸಿಕೊಳ್ಳುವ ಸಿಟಿಜನ್ ಯಾಕಿನ್ನೂ ಎಚ್ವೆತ್ತುಕೊಂಡಿಲ್ಲ?
Get in Touch With Us info@kalpa.news Whatsapp: 9481252093
Discussion about this post