ಭದ್ರಾವತಿ: ನಗರಸಭೆಯಿಂದ ಆಯೋಜಿಸಿದ್ದ ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದು, ನಿನ್ನೆ ಸಂಪನ್ನಗೊಂಡಿದೆ.
ನಗರದ ಅಪ್ಪರ್ ಹುತ್ತಾದ ತಿರುಮಲ ವೆಂಕಟೇಶ್ವರ ದೇವಾಲಯದ ಮುಂಭಾಗದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ಪ್ರಕಾಶ್ ಹಾಗೂ ಶಾಸಕ ಬಿಕೆ.ಸಂಗಮೇಶ್ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಂದಿ ಧ್ವಜಕ್ಕೆ ನಮಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಲೋಕಸಭೆ ಉಪ ಚುನಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಾಗು ನಗರಸಭೆ ಜವಾಬ್ದಾರಿ ವಹಿಸಿ ನಡೆಸಿದ ಮೆರವಣಿಗೆಯು ಅಧಿಕಾರಿಗಳ ದಸರಾ ರೀತಿ ಕಂಡುಬಂದಿತಾದರೂ ಮೆರವಣಿಗೆಯಲ್ಲಿ ಹಾಗೂ ಬನ್ನಿ ಮಂಟಪದಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದು ಕಂಡುಬಂದಿತು. ಆದರೆ ಪ್ರತಿವರ್ಷದಂತೆ ನಗರದ ಸುತ್ತ ಮುತ್ತಲ ದೇವಾಲಯಗಳ ಉತ್ಸವ ಮೂರ್ತಿಗಳ ವಿಶೇಷ ಅಲಂಕೃತ ದೇವತೆಗಳನ್ನು ಮೆರವಣಿಗೆಯಲ್ಲಿ ತರುತ್ತಿರುವ ಪದ್ದತಿಗೆ ಯಾವುದೇ ಅಡ್ಡಿ ಉಂಟಾಗಿಲ್ಲ.
ನಾಡಹಬ್ಬದ ಉತ್ಸವದಲ್ಲಿ ಮೆರವಣಿಗೆಯಲ್ಲಿ ವಿವಿಧ ಬಗೆಯ ಅಲಂಕಾರದ ಮಂಟಪದಲ್ಲಿ ಆಗಮಿಸಿದ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಗ್ರಾಮದೇವತೆ ಹಳದಮ್ಮ, ಕೆರೆಕೋಡಮ್ಮ, ಕೆಂಚಮ್ಮ, ಅಂತರಗಟ್ಟಮ್ಮ, ಕಾಳಿಕಾಂಬ, ಶ್ರೀರಾಮೇಶ್ವರ, ವಿಶ್ವಸ್ವರೂಪಿಣಿ ಮಾರಿಯಮ್ಮ, ದುರ್ಗದೇವಿ, ಸಂಕಲಮ್ಮ, ಆಂನೇಯಸ್ವಾಮಿ ಸೇರಿದಂತೆ 40 ಕ್ಕೂ ಅಧಿಕ ಸಂಖ್ಯೆಯ ದೇವಾನು ದೇವತೆಗಳು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಮೆವಣಿಗೆಯ ಉದ್ದಕ್ಕೂ ನಾದಸ್ವರ, ಡೊಳ್ಳುಕುಣಿತ, ಡೊಳ್ಳು ಮೆರಗು ನೀಡಿತ್ತು. ನಂತರ ಸಾಗಿದ ಮೆರವಣಿಗೆಯು ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಡಾ.ರಾಜಕುಮಾರ್ ರಸ್ತೆ, ಮಾಧವಾಚಾರ್ ವೃತ್ತ, ರಂಗಪ್ಪ ವೃತ್ತ ರಸ್ತೆಯ ಮೂಲಕ ಸಾಗಿದ ಮೆರವಣಿಗೆ ಕನಕ ಮಂಟಪ ಮೈದಾನದ ಬನ್ನಿ ಮಂಟಪಕ್ಕೆ ಆಗಮಿಸಿದವು.
ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಶ್ರೀರಂಗನಾಥಶರ್ಮ ಮತ್ತು ತಂಡದ ಸದಸ್ಯರು ತಹಸೀಲ್ದಾರ್ ಎಂ.ಆರ್. ನಾಗರಾಜ್ ರವರನ್ನು ಕರೆತಂದು ಮೈದಾನದಲ್ಲಿ ಸಂಗಮಗೊಂಡ ದೇವಾನುದೇವತೆಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿದರು.
ಮೆರವಣಿಗೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಬದರಿನಾರಾಯಣ, ಎಂ. ರಾಜು, ನರಸಿಂಹನ್, ಎಂ.ಎಸ್. ಸುಧಾಮಣಿ, ಭಾಗ್ಯಮ್ಮ, ಅಣ್ಣೋಜಿರಾವ್, ನಗರಸಭಾ ಪೌರಾಯುಕ್ತ ಶ್ರೀಕಂಠಸ್ವಾಮಿ, ಲೆಕ್ಕಾಧಿಕಾರಿ ಅಲಿ, ಸಂಘಟನ ಸಮುದಾಯಾಧಿಕಾರಿ ಈಶ್ವರಪ್ಪ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post