ಶ್ರಾವಣ ಶುಕ್ಲ ಪಂಚಮಿಯನ್ನು ನಾಗರ ಪಂಚಮಿಯಾಗಿ ಆಚರಿಸುವುದು ಸನಾತನ ಧರ್ಮದಲ್ಲಿ ಒಂದು ಶಾಸ್ತ್ರೋಕ್ತ ಪದ್ಧತಿ. ಈ ವೈದಿಕ ವಿಜ್ಞಾನದ ಸಂಶೋಧನೆಯು ಮುಂದೆ ಶಾಸ್ತ್ರ ಸಂಪ್ರದಾಯವಾಗುತ್ತದೆ.
ನಿರ್ಣಯ ಸಿಂಧು, ಧರ್ಮ ಸಿಂಧು ಗ್ರಂಥಗಳಲ್ಲಿ ಉಲ್ಲೇಖಿಸಿದಂತೆ ಪ್ರತಿ ದಿನಕ್ಕೂ ಅದರದ್ದೇ ಆದಂತಹ ಮಹತ್ವ ಇದೆ. ಇದನ್ನು ದಿನ ಕೃತ್ಯ ಎಂದರು. ರವಿಯ ಯುತಿಯಿಂದ ಹೊರಟ ಚಂದ್ರನು ಹದಿನೈದನೆಯ ದಿನಕ್ಕೆ ತಲುಪುವುದನ್ನು ಪಾಡ್ಯಾದಿ ತಿಥಿಗಳ ಮೂಲಕ ಎಣಿಸಲಾಗುತ್ತದೆ. ಅಂದರೆ ಪ್ರತೀ ಹನ್ನೆರಡು ಡಿಗ್ರಿ ಅಂತರದಲ್ಲಿ ಒಂದು ತಿಥಿಯಾಗುತ್ತದೆ. 15×12°= 180°ಗೆ ಪೌರ್ಣಮಿಯೂ, ಮುಂದಿನ 180° ಅಂದರೆ 360° ಗೆ ಅಮಾವಾಸ್ಯೆಯೂ ಆಗುತ್ತದೆ.
ಹೀಗೆಯೇ ಪ್ರತೀ ತಿಂಗಳಿಗೆ ಒಂದೇ ತಿಥಿಯು ಶುಕ್ಲ ಮತ್ತು ಬಹುಳ ತಿಥಿಯಾಗಿ ಎರಡು ಸಲ ಬರುತ್ತದೆ. ರವಿ ಚಂದ್ರರ ಅಂತರದಲ್ಲಿ ವಾತಾವರಣದಲ್ಲಿ ಬದಲಾವಣೆಗಳೂ ಆಗುತ್ತಿರುತ್ತದೆ. ಇದರಲ್ಲಿ ಕೆಲವೊಂದು ಬದಲಾವಣೆಗಳು ಮಾತ್ರ ನಮ್ಮ ಅನುಭವಕ್ಕೆ ಬರಬಹುದಷ್ಟೆ. ಉಳಿದವುಗಳು ಅನುಭವಕ್ಕೆ ಬಾರದೆ ಇದ್ದರೂ, ಪರಿಣಾಮಗಳು ಆಗಿಯೇ ಆಗುತ್ತದೆ. ಇದರ ಸಂಶೋಧನೆ ಮಾಡಿದ ನಮ್ಮ ಋಷಿಮುನಿಗಳು ಇಂತಹ ವಾತಾವರಣಕ್ಕೆ ಹೊಂದಿಕೊಳ್ಳಲು ವ್ರತ ನಿಯಮಗಳನ್ನು ಮಾಡಿ, ಆಯಾಯ ದೇವ ದೇವತೆಗಳ ಆರಾಧನೆಗಳನ್ನು ಮಾಡತೊಡಗಿದರು ಮತ್ತು ಮುಂದಿನ ಪೀಳಿಗೆಗಳಿಗೆ ನಿರ್ದೇಶನವನ್ನೂ ಕೊಟ್ಟರು.
ಈ ಪಂಚಮಿಯ ವಿಶೇಷ ಏನು?
ಶುಕ್ಲ ಪಂಚಮಿಯ ಬಳಿಕ ಚಂದ್ರನಲ್ಲಿ ಬಲಿಷ್ಟಗೊಳ್ಳುವಿಕೆಯೂ, ಬಹುಳ ಪಂಚಮಿಯ ಬಳಿಕ ದುರ್ಬಲವಾಗುವಿಕೆಯೂ ಆಗುತ್ತದೆ. ರವಿ ಚಂದ್ರರ ಯುತಿಯು ಸನ್ನಿಕರ್ಷವೂ(ಅಮವಾಸ್ಯೆ); ಸಮ ಸಪ್ತಕವು ವಿಪ್ರಕರ್ಷವೂ(ಹುಣ್ಣಿಮೆ) ಆಗುತ್ತದೆ.
ಕೃಷ್ಣ ಪಕ್ಷದಲ್ಲಿ ದೇವತೆಗಳು ಚಂದ್ರನ ಬಲವನ್ನು ಪಾನ(ಗ್ರಹಣ absorb) ಮಾಡುವುದರಿಂದ ಚಂದ್ರನು ಕ್ಷೀಣತ್ವಕ್ಕೂ, ಶುಕ್ಲ ಪಕ್ಷದಲ್ಲಿ ದೇವತೆಗಳು ದೇವತೆಗಳು ಚಂದ್ರನ ರಷ್ಮಿಗಳನ್ನು ಹೊರ ಹಾಕಿ ಚಂದ್ರನ ವೃದ್ಧಿಯನ್ನು ಮಾಡುವುವ ಈ ಕ್ರಿಯೆಯನ್ನು ವೃದ್ಧಿ ಕ್ಷೀಣ ಎಂದರು. ಈ ಶುಕ್ಲ ಮತ್ತು ಕೃಷ್ಣ ಪಕ್ಷದ ತಿಥಿಗಳಿಗೆ ಅಭಿಮಾನಿ ದೇವತೆಗಳಿದ್ದಾರೆ. ಇದು ಕ್ರಮವಾಗಿ ಪಾಡ್ಯದಿಂದ ಹುಣ್ಣಿಮೆ, ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ- ಅಗ್ನಿ, ಬ್ರಹ್ಮ, ಗೌರಿ, ಗಣಪತಿ, ಸರ್ಪ, ಗುಹ, ರವಿ, ಶಿವ, ದುರ್ಗಾ, ಯಮ, ವಿಶ್ವೇದೇವತೆಗಳು, ವಿಷ್ಣು, ಕಾಮ, ಈಶ್ವರ, ಚಂದ್ರ ಎಂಬ ಹದಿನೈದು ದೇವತೆಗಳ ಸಾನ್ನಿಧ್ಯ ಸೂಚಕ.. ಇದು ಕೃಷ್ಣ ಬಹುಳ ಎರಡಕ್ಕೂ ಇವರೇ ಅಧಿಪತಿಗಳಾಗಿರುತ್ತಾರೆ.
ಚಂದ್ರನು ಶೀತಕಾರಕ, ಮನಸ್ಸಿನ ಮೇಲೆ ಪರಿಣಾಮವನ್ನು ಬೀರುವ ಗ್ರಹ. ಅಲ್ಲದೆ ಸಾಗರದಲ್ಲಿ ಭರತ ಇಳಿತಗಳಿಗೂ ಇವನೇ ಕಾರಣ. ಅಂತಹ ಚಂದ್ರ ಸ್ಥಿತಿಯ ಪಂಚಮಿ ಮತ್ತು ಷಷ್ಟಿ ತಿಥಿಗಳು ಸರ್ಪ ಮತ್ತು ಗುಹರಿಗೆ ಇಷ್ಟ ತಿಥಿಗಳು. ಎರಡೂ ನಾಗ ಸಂಬಂಧವೇ ಆಗುತ್ತದೆ.
ನಾಗಾರಾಧನೆ ಯಾಕೆ?
ನಾಗನು ಮನುಷ್ಯನೊಳಗಿರುವ ಕಾಮಾದಿ ಷಡ್ಗುಣಗಳನ್ನು ನಿಯಂತ್ರಿಸುವವನು. ಶುಕ್ಲದಲ್ಲಿ ಇದೇ ಗುಣಗಳು ಉದ್ಧೀಪನಗೊಂಡರೆ (existing), ಕೃಷ್ಣ ಪಕ್ಷದಲ್ಲಿ ಇದೇ ಗುಣಗಳಿಗೆ ಮಂಕು(depression) ಕವಿಯುತ್ತದೆ. ಇದರ ಸಮತೋಲನ ಕಾಪಾಡಲೆಂದೇ ಪಂಚಮಿ ಮತ್ತು ಷಷ್ಠೀ ತಿಥಿಗಳ ವ್ರತ ನಿಯಮ ಇರುವುದಾಗಿದೆ.
ಮುಂದೆ ಪ್ರಜಾ ವೃದ್ಧಿಯಾದಂತೆ ಸಂಪತ್ತು ಹೆಚ್ಚುತ್ತದೆ. ಹಾಗೆಯೇ ಕಳ್ಳಕಾಕರ ಭಯವೂ ಹೆಚ್ಚಿತು. ಆಗ ಸಂಪತ್ತುಗಳನ್ನು ಭೂಮಿಯಲ್ಲಿ ಹುಗಿದಿಟ್ಟು ಬನಗಳ ನಿರ್ಮಾಣವೂ ಶುರುವಾಯ್ತು. ಎಲ್ಲಿ ಭೂಮಿಯಲ್ಲಿ ನಿಧಿಗಳಿರುತ್ತದೋ ಅಲ್ಲಿ ಸರ್ಪ ಸಾನ್ನಿಧ್ಯ ಇರುವುದು ಒಂದು ಪ್ರಕೃತಿ ಸಹಜ. ಆಗ ಪ್ರಜೆಗಳು ಈ ಬನದೊಳಗೆ ನಾಗ ಶಿಲೆಯನ್ನಿಟ್ಟು ಪೂಜಿಸತೊಡಗಿದರು. ನಾಗದೇವರಿಗೆ ನಿಧಿರಕ್ಷಕ ಎಂಬ ಹೆಸರೂ ಇದೆ. ಮುಂದೆ ನಾಗಾಲಯಗಳಾದುವು.
ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ ಸರ್ಪವು ಭೂಮಿಗೆ ಮಿತ್ರ. ನಿಧಿ ರಕ್ಷಕನಾಗಿ, ಹೆಚ್ಚು ಪ್ರಾಣವಾಯುವನ್ನು ವಾತಾವರಣಕ್ಕೆ ನೀಡುವವನೂ ಆಗಿರುತ್ತಾನೆ. ಈ ಕಾರಣಕ್ಕಾಗಿ ಸರ್ಪ ಸಂರಕ್ಷಣೆಗಾಗಿ ನಾಗಾರಾಧನೆ ಪ್ರಾರಂಭ ಆಯಿತು. ಪಂಚಮಿಯ ವ್ರತದ ನಾಗಾರಾಧನೆಯು ಮನೋಬಲ ನಿಯಂತ್ರಣಕ್ಕೂ, ಸಂತತಿ ವೃದ್ಧಿಗೂ, ರೋಗ ನಿರೋಧಕ ಶಕ್ತಿಗೂ ಆಗಿರುತ್ತದೆ. ನಾಗಾರಾಧನೆ ಆ ದಿನ ಕೃತ್ಯದ ಅಭಿಮಾನಿ ದೇವರಾದ ನಾಗದೇವರ ಪ್ರೀತ್ಯರ್ಥವಾಗಿ ಮಾಡುವಂತದ್ದಾಗಿದೆ.
ಪ್ರತಿಯೊಬ್ಬರೂ ಈ ದಿನದ ಆಚರಣೆ ಮಾಡುವ ಮುನ್ನ ದಿನದ ಮಹತ್ವವರಿದರೆ ಪೂರ್ಣ ಫಲ ಸಿಗುತ್ತದೆ ಮತ್ತು ಸರ್ಪಗಳ ಮೇಲಿನ ಪ್ರೀತಿ, ಪರಿಸರ ಪ್ರೇಮ ಭಕ್ತಿ ಉಂಟಾಗುವುದರಲ್ಲಿ ಸಂಶಯವಿಲ್ಲ.
ಸ್ವಚ್ಚ ಭಾರತಕ್ಕೆ ನಾಗದೇವರ ಕೊಡುಗೆ ಅಪಾರ.
-ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post