ಕೊಪ್ಪಳ: ಅಚಾನಕ್ ಆಗಿ ವಿದ್ಯುತ್ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ದಾರುಣ ಘಟನೆ ಇಂದು ನಡೆದಿದೆ.
ಕೊಪ್ಪಳ ನಗರದ ಬನ್ನಕಟ್ಟೆ ಪ್ರದೇಶದಲ್ಲಿರುವ ದೇವರಾಜ ಅರಸ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ವತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಹಾಸ್ಟೆಲ್’ನಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಕಂಬವನ್ನು ಬ್ಯಾರಲ್’ನಲ್ಲಿ ಇಡಲಾಗಿತ್ತು. ಈ ಕಂಬ ವಿದ್ಯುತ್ ತಂತಿಗೆ ತಗುಲಿದ್ದು, ಇದನ್ನು ಗಮನಿಸದ ವಿದ್ಯಾರ್ಥಿಗಳು ಕಂಬವನ್ನು ಇಳಿಸಲು ಮುಂದಾದ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
10ನೆ ತರಗತಿ ವಿದ್ಯಾರ್ಥಿಗಳಾದ ಮೆಟಗಲ್ ನಿವಾಸಿ ಮಲ್ಲಿಕಾರ್ಜುನ ಮತ್ತು ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೆ ತರಗತಿ ವಿದ್ಯಾರ್ಥಿಗಳಾದ ಹಲಗೇರಿಯ ದೇವರಾಜ, ಹೈದರ್ ನಗರದ ಕುಮಾರ್, 8ನೆಯ ತರಗತಿಯ ಲಾಚನಕೇರಿ ನಿವಾಸಿ ಗಣೇಶ್ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಕೊಪ್ಪಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಸಿಎಂ ಪರಿಹಾರ ಘೋಷಣೆ:
ಇನ್ನು, ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Discussion about this post