ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾರ್ಕಳ, ಉಡುಪಿ ಜಿಲ್ಲೆಯ ತಾಲೂಕು ಪ್ರದೇಶ. ಈ ತಾಲೂಕು ಪ್ರದೇಶದಲ್ಲಿ ಕಪ್ಪು ಕಲ್ಲು (ಕಪ್ಪು ಶಿಲೆ)ಗಳು ಹೇರಳವಾಗಿ ಇರುವುದರಿಂದ ತುಳುವಿನಲ್ಲಿ ’ಕಾರ್ಲ’ ಎಂಬ ಶಬ್ದವು ಕನ್ನಡದಲ್ಲಿ ’ಕಾರ್ಕಳ’ ಎಂದಾಯಿತು ಎಂಬ ಅಭಿಪ್ರಾಯ ಇದೆ.
ಹಲವು ಇತಿಹಾಸ ಪ್ರಸಿದ್ಧ ತಾಣಗಳು ಕಾರ್ಕಳದಲ್ಲಿವೆ. ತ್ಯಾಗಮೂರ್ತಿ ಬಾಹುಬಲಿಯ ವಿಶ್ವಪ್ರಸಿದ್ಧ ಏಕಶಿಲಾ ಮೂರ್ತಿ, ಚತುರ್ಮುಖ ಬಸದಿ ಸಮೇತ ಹದಿನೆಂಟು ಬಸದಿಗಳು, ಪಡುತಿರುಪತಿ ಎಂದು ಕರೆಯಲ್ಪಡುವ ವೆಂಕಟರಮಣ ದೇವಸ್ಥಾನ, ಅನಂತ ಪದ್ಮನಾಭ ದೇವಸ್ಥಾನ, ರಾಮಸಮುದ್ರ, ಆನೆಕೆರೆ, ಸರ್ವಧರ್ಮಿಯರ ಶ್ರದ್ದಾಕೇಂದ್ರ ಅತ್ತೂರು ಇಗರ್ಜಿ ಮುಂತಾದುವುಗಳು ಮುಖ್ಯವಾಗಿವೆ. ವೀರಪಾಂಡ್ಯ ಬೈರವರಸು ಆಳಿದ್ದರಿಂದ ಪಾಂಡ್ಯನಗರಿ ಎಂದು ಇತಿಹಾಸದಲ್ಲಿ ಕರೆಯಲ್ಪಡುತ್ತಿತ್ತು ಕಾರ್ಕಳ. ’ಕರಿಕೊಳ’ (ಆನೆಕೆರೆ) ಇಲ್ಲಿ ಇರುವುದರಿಂದಲೂ ಕಾರ್ಕಳ ಎಂಬ ಹೆಸರು ನಿಷ್ಪತ್ತಿಗೊಂಡಿದೆ ಎಂಬ ವಾದವೂ ಇದೆ.
ಜೈನಕಾಶಿ ಎಂದು ಹೆಸರಾದ ಕಾರ್ಕಳವು ಕಲಾವಿದರಿಗೆ ಆಶ್ರಯತಾಣವಾಗಿತ್ತು ಎಂದು ತಿಳಿದು ಬರುತ್ತದೆ. ಇತಿಹಾಸದ ಕೊಂಡಿ ಎಂಬಂತೆ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರಂತಹ ಪ್ರಸಿದ್ಧ ಸ್ಥಪತಿಗಳು ಕಾರ್ಕಳದವರು. ನಾಗಮೂರ್ತಿ, ತುಳಸಿಕಟ್ಟೆ, ದೇವರ ವಿಗ್ರಹ ಮುಂತಾದ ಶಿಲಾಮೂರ್ತಿಗಳನ್ನು ಮಾಡುವುದರಲ್ಲಿ ಕಾರ್ಕಳದ ಶಿಲ್ಪಿಗಳು ಸಿದ್ಧಹಸ್ತರು ಮತ್ತು ಪ್ರಸಿದ್ಧರು.
ತುಳುನಾಡಿನಲ್ಲಿ ನಿತ್ಯಸತ್ಯವಾದ ಮಾತೊಂದು ಚಾಲ್ತಿಯಲ್ಲಿದೆ. ವಿಶ್ವಕರ್ಮ ಸಮುದಾಯದ ಗಂಡು ಮಕ್ಕಳು ಅಭಿಯಂತ (ಇಂಜಿನಿಯರ್)ರಾಗಿ ಜನಿಸುತ್ತಾರೆ ಎಂಬುದು. ಈ ಮಾತು ನೂರಕ್ಕೆ ನೂರು ಸತ್ಯವೆನಿಸುವಷ್ಟು ತುಳುನಾಡಿನ ಶಿಲ್ಪಕಲಾ ವೈಭವಗಳು ಸಾಕ್ಷಿ ನುಡಿಯುತ್ತವೆ. ಇವುಗಳನ್ನು ಕಟ್ಟಿದ ಸ್ಥಪತಿಗಳು, ಕುಸುರಿ ಕೆಲಸಗಾರರು, ಬಡಗಿಗಳು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದವರಲ್ಲ. ಅಂತಹ ವಿಶ್ವಕರ್ಮ ಸಮುದಾಯದ ಹೆಮ್ಮೆಯ ಕುವರ ಗಿನ್ನಿಸ್ ದಾಖಲೆಯ ಕಲಾವಿದ ಸುರೇಂದ್ರ ಆಚಾರ್ಯ ಕಾರ್ಕಳ. ಇವರೊಬ್ಬ ಶ್ರೇಷ್ಠ ಮಟ್ಟದ ಮೈಕ್ರೊ ಕಲಾವಿದರು.
ನಮ್ಮ ನೆರೆರಾಷ್ಟ್ರ ಪಾಕಿಸ್ಥಾನದ ಹೆಸರಲ್ಲಿದ್ದ ಗಿನ್ನಿಸ್ ದಾಖಲೆಯೊಂದನ್ನು ಮುರಿದು ತಮ್ಮ ಹೆಸರಿಗೆ ಮಾಡಿಕೊಳ್ಳುವುದರೊಂದಿಗೆ ನಮ್ಮ ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದವರು. ಪೆನ್ಸಿಲ್ ಲೆಡ್’ನಲ್ಲಿ ಐವತ್ತು ಚೈನ್ ಲಿಂಕ್ಸ್ ಮಾಡಿದ್ದ ಸಾಧನೆ ಪಾಕಿಸ್ಥಾನದ ಅಬ್ದುಲ್ ಬಶೀರ್ ಅವರ ಹೆಸರಲ್ಲಿತ್ತು. ಸುರೇಂದ್ರ ಅವರು ಐವತ್ತೆಂಟು ಲಿಂಕ್ಸ್ ಮಾಡುವ ಮೂಲಕ 2019ರಲ್ಲಿ ಆ ಗಿನ್ನಿಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದು ನಮ್ಮ ನಾಡಿನ ಹೆಮ್ಮೆ. ಈ ದಾಖಲೆಯ ಯಶವನ್ನು ತಮಗೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಬಹಳ ವಿಧೇಯತೆಯಿಂದ ಸಮರ್ಪಿಸುತ್ತಾರೆ ಸುರೇಂದ್ರ ಅವರು.
ಬಾಲ್ಯದಿಂದಲೇ ಹಲವು ಕಲಾ ಪ್ರಕಾರಗಳಲ್ಲಿ ಹವ್ಯಾಸವಿದ್ದ ಸುರೇಂದ್ರ. 2011ರ ಕ್ರಿಕೆಟ್ ವಲ್ಡರ್ ಕಪ್ ಅವಧಿಯಲ್ಲಿ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಚಾಕ್-ಪೀಸ್’ನಲ್ಲಿ ರಚಿತಗೊಂಡಿದ್ದ ವಲ್ಡರ್ ಕಪ್ ಲಾಂಛನದ ಕಲಾಕೃತಿಯನ್ನು ನೋಡಿ ಸ್ಪೂರ್ತಿಗೊಂಡು ಇವರು ಪೆನ್ಸಿಲ್ ಲೆಡ್ ನಿಂದ ಅಂಥದೇ ಪ್ರತಿಕೃತಿಯನ್ನು ತಯಾರಿಸಿದರು. ಇಲ್ಲಿಂದ ಆರಂಭವಾಯಿತು ಮೈಕ್ರೊ ಕಲಾಕೃತಿಗಳ ರಚನೆ. ತಾಳ್ಮೆ, ಸಹನೆ, ತದೇಕ ಚಿತ್ತದಿಂದ ಧ್ಯಾನ ಮಾಡುವ ತಪಸ್ವಿಗಳಂತೆ ನಡೆಯುತ್ತದೆ ಈ ಮೈಕ್ರೊ ಕಲಾಕೃತಿಗಳ ರಚನೆ.
ಸುರೇಂದ್ರ ಅವರು 120ಕ್ಕಿಂತ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ. ಕೆಲವೊಮ್ಮೆ ಕೃತಿರಚನೆ ಮುಗಿದು ಅಂತಿಮ ಸ್ಪರ್ಶ (Final Touch) ಕೊಡುವಾಗ ಮುರಿದು ಹೋಗುವ ಸಂಭವವಿರುತ್ತದೆ. ನಂತರ ಮೊದಲಿನಿಂದ ಆರಂಭಿಸಬೇಕಾಗುತ್ತದೆ. ಸಂಗೀತದ ಪರಿಕರಗಳು, ಭರತನಾಟ್ಯದ ಭಂಗಿಗಳು, ಬಸವಣ್ಣ, ನರೇಂದ್ರ ಮೋದಿ, ಜಿನನಾಥ, ಏಸುಸ್ವಾಮಿ, ಮದರ್ ತೆರೆಸಾ, ಕುದುರೆ, ಮಾನವನ ಅಲ್ಲಿ ಪಂಜರ, ಡಾ. ಶಾಂತವೀರ ಸ್ವಾಮಿಜಿ ಮುಂತಾದ ಕಲಾಕೃತಿಗಳು ಇವರ ಕರಗಳಲ್ಲಿ ಜೀವ ತಳೆದಿವೆ. ಆಂಗ್ಲ ಭಾಷೆಯಲ್ಲಿ Pencil Sculpting ಎಂದು ಕರೆಯಲ್ಪಡುವ ಈ ಕಲೆಯು ಜಾಗತಿಕ ಮನ್ನಣೆಗಳಿಸಿದೆ.
ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಸ್ಥಾಯಿಯಾಗಿದ್ದ ತುಮಕೂರಿನ ಡಾ. ಶಿವಕುಮಾರ ಸ್ವಾಮಿಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಡೆ ಮೊದಲಾದವರು ಇವರ ಕಲಾಕೃತಿಗಳನ್ನು ಮೆಚ್ಚಿ ಶ್ಲಾಘಿಸಿದ್ದಾರೆ. ಆಳ್ವಾಸ್ ನುಡಿಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಅಪಾರ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ನೆರೆ ರಾಜ್ಯ ಕೇರಳದಲ್ಲೂ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಕಾರ್ಕಳದ ಹೊಸ್ಮಾರು ನೂರಾಳ್ ಬೆಟ್ಟಿನ ನಿವಾಸಿಯಾಗಿರುವ ಸುರೇಂದ್ರ ಅವರು ಶ್ರೀಮತಿ ಲಲಿತಾ ಆಚಾರ್ಯ ಹಾಗೂ ಶ್ಯಾಮರಾಯ ಆಚಾರ್ಯ ದಂಪತಿಗಳ ಪುತ್ರ. ತಂದೆ ಶ್ಯಾಮರಾಯ ಆಚಾರ್ಯ ಅವರು ಪಾರಂಪರಿಕ ಮರಗೆಲಸದ ನುರಿತ ಕೆಲಸಗಾರರು. ತಾಯಿ ಮನೆವಾರ್ತೆಯೊಂದಿಗೆ ಹೈನುಗಾರಿಕೆ ಮಾಡುತ್ತಿದ್ದಾರೆ. ಸುರೇಂದ್ರ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನೂರಾಳ್ ಬೆಟ್ಟು ಮತ್ತು ಹೊಸ್ಮಾರುಗಳಲ್ಲಿ ಮಾಡಿದ್ದಾರೆ.
ಬಜೆಗೋಳಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಕಾರ್ಕಳದಲ್ಲಿ ಇಲೆಕ್ಟ್ರಿಕಲ್ ಕೋರ್ಸ್ ಮಾಡಿದ್ದಾರೆ. ದೂರ ಶಿಕ್ಷಣ ಕ್ರಮದಲ್ಲಿ ’ಬೆಂಕಿ ಮತ್ತು ರಕ್ಷಣೆ’ ಎಂಬ ವಿಷಯದ ಮೇಲೆ ಡಿಪ್ಲೊಮಾ ಮಾಡಿದ್ದಾರೆ. ಮುದ್ರಣ ಮಾಧ್ಯಮ, ದೂರದರ್ಶನ ಮಾಧ್ಯಮಗಳು ಇವರ ಕಲಾಕೃತಿಗಳನ್ನು ಲೋಕಮುಖಕ್ಕೆ ಪರಿಚಯಿಸಿವೆ. ಸುರೇಂದ್ರ ಆಚಾರ್ಯರು ತಮ್ಮ ಕಲಾಕೃತಿಗಳ ಮೂಲಕ ಪ್ರಚಾರ ಪಡೆದರು. ಗಿನ್ನಿಸ್ ದಾಖಲೆ ಬರೆದರು. ಆದರೆ ಅವರ ಬದುಕಿನ ಬವಣೆಯ ಭಾರ ಹಗುರವಾಗಿಲ್ಲ. ಮೆಸ್ಕಾಂನ ಕಾರ್ಕಳ ವಿಭಾಗದಲ್ಲಿ ಸ್ಟೇಷನ್ ಸಹಾಯಕರಾಗಿ ಹನ್ನೊಂದು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ದುಡಿಯುತ್ತಿದ್ದಾರೆ. ಕರ್ನಾಟಕ ಸರಕಾರ ನಿಗದಿ ಪಡಿಸಿದ ’ಕನಿಷ್ಠ ವೇತನ’ಕ್ಕಿಂತಲೂ ಕಡಿಮೆ ಸಂಬಳಕ್ಕೆ ದುಡಿಯುವ ಇವರು ಉದ್ಯೋಗ ಖಾತರಿಯಿಂದಲೂ ವಂಚಿತರಾಗಿದ್ದಾರೆ. ಜನಬಲ, ಧನಬಲ ಎರಡು ಇಲ್ಲದ ಈ ಬಡ ಕಲಾವಿದರ ಪಾಡು ಕೇಳುವವರಿಲ್ಲದಂತಾಗಿದೆ. ಆದ್ದರಿಂದ ಮನೆಯವರ ಒತ್ತಾಯವಿದ್ದರೂ ಮದುವೆಯನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಉದ್ಯೋಗವೊಂದು ಶಾಶ್ವತವಾದರೆ ಮತ್ತೆ ಸಂಸಾರಿಗನಾಗುವ ಕನಸು ಈ ಗಿನ್ನಿಸ್ ದಾಖಲೆಯ ಕಲಾವಿದನದು. ಆದ್ದರಿಂದ ಮೆಸ್ಕಾಂನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು.
ಪ್ರಚಾರ ದೊರೆತರೂ ಉಪಚಾರವಿಲ್ಲದೆ ಸೊರಗಿದ ಬದುಕು ಅವರದು. ಈಗಿರುವ ಉದ್ಯೋಗ ವ್ಯವಸ್ಥೆಯಲ್ಲಿ ಬದುಕಿನ ಬುತ್ತಿ ತುಂಬುತ್ತಿಲ್ಲ. ಹಾಗಿರುವಾಗ ಭವ್ಯ ಭವಿತವ್ಯದ ಯೋಜನೆಯನ್ನು ಹೇಗೆ ಮಾಡಲಿ ಎಂದು ವಿನಮ್ರವಾಗಿ ಪ್ರಶ್ನಿಸುತ್ತಾರೆ ಕಲಾವಿದ ಸುರೇಂದ್ರ ಆಚಾರ್ಯರು. ರಾಜಪ್ರಭುತ್ವದಂತೆ ಪ್ರಜಾಪ್ರಭುತ್ವದಲ್ಲೂ ಕಲಾವಿದರಿಗೆ ಮನ್ನಣೆ ಸಿಗುತ್ತ ಬಂದಿದೆ. ಆದರೆ ನಾನೇಕೆ ಅಸ್ಪೃಶ್ಯನಾಗಿ ಉಳಿದೆ? ನಾನೇಕೆ ಸರಕಾರದ ಅವಕೃಪೆಗೆ ಪಾತ್ರನಾದೆ? ಎಂಬ ಕೊರಗು ಅವರದು. ಜೀವನ ನಿರ್ವಹಣೆಗೆ ಪಾಡು ಪಡುವಂತಾಗಿದೆ. ಭವಿಷ್ಯದ ಬಾಳಿಗೆ ಉದ್ಯೋಗ ಒಂದು ಶಾಶ್ವತವಾದರೆ ಈ ಕಲಾವಿದರಿಂದ ಇನ್ನಷ್ಟು ಮತ್ತಷ್ಟು ಅಮೋಘವಾದ ಕಲಾಕೃತಿಗಳು ಸುಲಲಿತಲಾಗಿ ಮೂಡಿ ಬರುವುದಂತು ಸತ್ಯ.
ಆ ಮೂಲಕ ನಾಡಿಗೂ ದೇಶಕ್ಕೂ ಕೀರ್ತಿ ಬರುವುದಂತು ಪರಮ ಸತ್ಯ.
Get In Touch With Us info@kalpa.news Whatsapp: 9481252093
Discussion about this post