ಪುತ್ತೂರು: ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣಭಟ್ ಹೇಳಿದರು.
ವಿವೇಕಾನಂದ ಹಾಸ್ಟೆಲ್ಸ್ ನ ನಳಂದ ಹಾಸ್ಟೆಲ್ ನಲ್ಲಿ ಅಂತಿಮ ವರ್ಷದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ. ಈ ಅನುಭವಗಳು ನಮ್ಮ ಜೀವನದ ಪಯಣದಲ್ಲಿ ಸಹಕಾರಿಯಾಗುತ್ತವೆ. ಇಂತಹ ಅನುಭವಗಳಿಂದ ಕಲಿಯುವುದು ಬಹಳಷ್ಟಿದೆ ಎಂದರು.
ನಮ್ಮ ಜೀವನದಲ್ಲಿ ಸಹಕಾರ ಮಾಡಿದ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳಬೇಕು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ನಮ್ಮ ಸುತ್ತಮುತ್ತಲಿನ ಸಮಾಜದ ಸಂವೇದನೆಗೆ ಸ್ಪಂದಿಸಿದರೆ ನಮ್ಮ ಜೀವನ ಸಾರ್ಥಕ ಎಂದರು.
ವಿವೇಕಾನಂದ ಹಾಸ್ಟೆಲ್ಸ್’ನ ಕಾರ್ಯದರ್ಶಿ ತಿರುಮಲೇಶ್ವರ್ ಭಟ್ ಮಾತನಾಡಿ, ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆ ಆಗುತ್ತಿದೆ. ಆ ಕಾರಣದಿಂದ ವ್ಯಕ್ತಿಗಳಲ್ಲಿ ಎಲ್ಲರೊಂದಿಗೆ ಬೆರೆಯುವ ಸ್ವಭಾವವೂ ಕ್ಷೀಣಿಸುತ್ತಿದೆ. ಆದರೆ ಹಾಸ್ಟೆಲ್ ಜೀವನ ಎಲ್ಲರೊಂದಿಗೆ ಬೆರೆಯುವುದರ ಮೂಲಕ ವಿದ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಿದೆ ಎಂದರು.
ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಮುಖ್ಯ ಪಾತ್ರವನ್ನು ವಹಿಸುತ್ತಿದೆ. ವಿದ್ಯಾರ್ಥಿಗಳು ಇತರೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ನಿರ್ದಿಷ್ಟ ಗುರಿಯನ್ನು ತಲುಪಿ, ಸಂಸ್ಥೆಯ ರಾಯಭಾರಿಗಳಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಾಸ್ಟೆಲ್’ನ ಆಡಳಿತ ಅಧಿಕಾರಿ ಹರೇಕೃಷ್ಣ, ಹಾಸ್ಟೆಲ್ ಆಡಳಿತ್ ಮಂಡಳಿಯ ಖಜಾಂಚಿ ಸುಬ್ಬಣ್ಣ ಶಾಸ್ತ್ರಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿ ನಿಲಯದ ನಿಲಯಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಿ.ಎನ್. ಕೌಶಿಕ್ ಮತ್ತು ಅರುಣ್ ಕುಮಾರ್ ಪ್ರಾರ್ಥಿಸಿ, ವಿದ್ಯಾರ್ಥಿ ನಿಲಯದ ನಿಲಯಪಾಲಕ ಭರತ್ ನಾರಾಯಣ ಪೆರ್ಗಡೆ ಕಾರ್ಯಕ್ರಮ ನಿರೂಪಿಸಿದರು.
ವರದಿ: ಅರುಣ್ ಕಿರಿಮಂಜೇಶ್ವರ
ದ್ವಿತೀಯ ಬಿಎ
ವಿವೇಕಾನಂದ ಕಾಲೇಜು, ಪುತ್ತೂರು
Discussion about this post